ಭಗವಂತನಲ್ಲಿ ಭಕ್ತಿಯು ಪ್ರೇಮಸ್ವರೂಪದ್ದಾಗಿದೆ : ನಾರದ ಭಕ್ತಿಸೂತ್ರ

naradaಬಹುಶಃ ಭಗವಂತನಲ್ಲಿ ಪ್ರೇಮವಿಡಿ ಎಂದು ಬೋಧಿಸದೆ ಧರ್ಮವೇ ಇಲ್ಲ. ಭಗವಂತನಲ್ಲಿ ಭಕ್ತಿಯನ್ನಿಟ್ಟರೂ ಅದು ಪ್ರೇಮರೂಪದ ಭಕ್ತಿಯೇ ಆಗಿರುತ್ತದೆ, ಆಗಿರಬೇಕು ಅನ್ನುತ್ತದೆ ನಾರದರ ಭಕ್ತಿಸೂತ್ರ ~ ಸಾ.ಹಿರಣ್ಮಯಿ

ನಾರದರು ಪರಾಭಕ್ತಿಯ ವಿವಿಧ ಸ್ವರೂಪಗಳನ್ನು ವಿವರಿಸುತ್ತಾ, “ಸಾ ತ್ವಸ್ಮಿನ್ ಪರಮ ಪ್ರೇಮರೂಪಾ” ಎಂದೂ ಹೇಳುತ್ತಾರೆ. ನಾರದರು ಹೇಳುವಂತೆ, “ಭಕ್ತಿಯು ಪರಮಪ್ರೇಮರೂಪವಾದುದು”. ಮೊದಲು ನಾವು ಪ್ರೇಮಕ್ಕೂ ಪರಮ ಪ್ರೇಮಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಪ್ರೇಮವೆನ್ನುವುದು ನಮ್ಮ ಸಾಮಾನ್ಯ ಬಳಕೆಯಲ್ಲಿರುವ ಭಾಷೆ. ವಾಸ್ತವದಲ್ಲಿ ಪ್ರೇಮ ಯಾರ ಅನುಭವಕ್ಕೂ ದಕ್ಕುವುದಿಲ್ಲ. ಅದು ನೇರವಾಗಿ ಹೃದಯಕ್ಕೆ ವೇದ್ಯವಾಗುವಂಥದ್ದು. ಲೌಕಿಕದಲ್ಲಿ ನಮ್ಮ ಪ್ರೇಮವು ಪ್ರತಿಫಾಕಾಂಕ್ಷೆಯನ್ನು ಹೊಂದಿರುತ್ತದೆ. ಯಾರನ್ನು ನಾವು ಪ್ರೀತಿಸುತ್ತೇವೋ ಅವರೂ ಅಷ್ಟೇ ಪ್ರಮಾಣದಲ್ಲಿ ನಮ್ಮನ್ನು ಪ್ರೀತಿಸಬೇಕೆಂಬ ನಿರೀಕ್ಷೆಯೂ ಅಲ್ಲಿರುತ್ತದೆ.

ಆದರೆ, ಪರಮ ಪ್ರೀತಿಯಲ್ಲಿ ನಾವು ಪ್ರೀತಿಗಾಗಿ ಪ್ರೀತಿಸುತ್ತೇವೆ. ಭಗವಂತನಲ್ಲಿ ನಾವು ತೋರುವ ಪ್ರೀತಿ ಇಂಥದ್ದು. ಲೌಕಿಕ ಪ್ರೇಮದಲ್ಲಿ ನಮ್ಮ ವ್ಯವಹಾರ ಕೊಡು – ಕೊಳ್ಳುವಿಕೆಯ ವ್ಯಾಪಾರದಂತೆ ಇರುತ್ತದೆ. ಭಗವಂತನ ಪರಮ ಪ್ರೇಮದಲ್ಲಿ ಅಂಥಹಾ ಭಾವ ಇರುವುದಿಲ್ಲ. ನಾನು ಪೂಜೆ ಸಲ್ಲಿಸುತ್ತೇನೆ, ನೀನು ವರ ಕೊಡು ಎಂದು ಕೇಳಿದರೆ ಅದು ಕೂಡಾ ವ್ಯವಹಾರವೇ ಹೊರತು ಪ್ರೇಮವಾಗುವುದಿಲ್ಲ. ಅಲ್ಲಿ ಪ್ರತಿಫಲಾಕಾಂಕ್ಷೆಯಾಗಲೀ ನಿರೀಕ್ಷೆಗಳಾಗಲೀ ಇರುವುದಿಲ್ಲ.

ಹಾಗೆಯೇ ಪರಮಪ್ರೇಮದಲ್ಲಿ ಅಂಜಿಕೆ ಇಲ್ಲ. ನಮ್ಮ ಪ್ರೇಮಿಯು (ಭಗವಂತನು) ನಮ್ಮನ್ನು ತೊರೆದುಹೋಗುತ್ತಾನೆ ಎಂಬ ಭಯವಿಲ್ಲ. ನಾವು ಸ್ತುತಿಸದೆ ಇದ್ದರೆ, ಅಲಂಕರಿಸದೆ ಇದ್ದರೆ ಮುನಿಯುತ್ತಾನೆ ಅನ್ನುವ ಭಯವೂ ಅಲ್ಲಿಲ್ಲ. ಪರಮಪ್ರೇಮವು ಭಕ್ತ – ಭಗವಂತರ ನಡುವೆ ಸಲಿಗೆಯನ್ನು ಬೆಳೆಸುತ್ತದೆ. ಅಲ್ಲಿ ಅಂಜಿಕೆಗೆ ಕಿಂಚಿತ್ತೂ ಜಾಗವಿಲ್ಲ.

ಹಾಗೂ ಪರಮಪ್ರೇಮದಲ್ಲಿ ಅಸೂಯೆ ಇಲ್ಲ. ಮತ್ತೊಬ್ಬರು ಭಗವಂತನನ್ನು ಪ್ರೇಮಿಸಿದರೆ ನಾವು ಅಸೂಯೆ ಪಡಬೇಕಾದ್ದಿಲ್ಲ. ಎಲ್ಲರೂ ಅವನನ್ನು ಪ್ರೇಮಿಸುತ್ತಾರೆ. ನಾವು ಅವರಲ್ಲೊಬ್ಬರಾಗಿದ್ದೇವೆ.

ಭಗವಂತನೆಡೆಗೆ ನಾವು ತೋರುವ ಪರಮಪ್ರೇಮವನ್ನೇ ಲೌಕಿಕದಲ್ಲೂ ತೋರಲು ಆರಂಭಿಸಿದರೆ, ಬಹುಶಃ ನಾವು ಸ್ವರ್ಗದ ಯೋಚನೆ ಮಾಡುವ ಪ್ರಮೇಯವೇ ನಮಗೆ ಬರುವುದಿಲ್ಲ!

Leave a Reply