ಮಾಸ್ಟರ್ ಒಮ್ಮೆ ಊರಿನ ಹಿರಿಯ ಅಧಿಕಾರಿಯ ಮನೆಗೆ ಅತಿಥಿಯಾಗಿ ರಾತ್ರಿಯ ಊಟಕ್ಕೆ ಹೋಗಿದ್ದ. ಮಾತಿನ ನಡುವೆ ಸಂತ, ಅಧಿಕಾರಿಯನ್ನು ಪ್ರಶ್ನೆ ಮಾಡಿದ.
“ರಾತ್ರಿ ನೀನು ಊಟಕ್ಕೆ ಕೂತಾಗ ಅಕಸ್ಮಾತ್ ಒಬ್ಬ ವ್ಯಕ್ತಿ ಓಡುತ್ತ ಬಂದು ಊರಿನ ನಟ್ಟ ನಡುವೆ ಹುಲಿ ಕಾಣಿಸಿಕೊಂಡಿದೆಯೆಂದರೆ ನೀನು ನಂಬುವೆಯಾ?”
“ಕೇವಲ ಒಬ್ಬ ಮನುಷ್ಯನಾ?”
“ಹೌದು, ಕೇವಲ ಒಬ್ಬ ಮನುಷ್ಯ.”
“ಹುಲಿ ಕಾಣಿಸಿಕೊಂಡಿದೆಯೆಂದು ಕೇವಲ ಒಬ್ಬ ಬಂದು ಹೇಳಿದರೆ ನಾನು ನಂಬುವುದಿಲ್ಲ.”
“ಹಾಗಾದರೆ ಇಬ್ಬರು ಬಂದು ಹೇಳಿದರೆ?”
“ಕೇವಲ ಇಬ್ಬರಾ?”
“ಹೌದು, ಕೇವಲ ಇಬ್ಬರು.”
“ಅಧಿಕಾರಿ ಒಂದೆರಡು ನಿಮಿಷ ವಿಚಾರ ಮಾಡಿ ಹೇಳಿದ.”
“ಇಲ್ಲ…. ಇಬ್ಬರು ಬಂದು ಹೇಳಿದರೂ ನಾನು ನಂಬುವುದಿಲ್ಲ”
“ಹಾಗಾದರೆ ಮೂವರು ಬಂದು ಹೇಳಿದರೆ?”
“ಅಧಿಕಾರಿ ಮತ್ತೆ ಯೋಚನೆ ಮಾಡಿದ.”
“ಹೌದು, ಮೂವರು ಬಂದು ಹೇಳಿದರೆ ನಾನು ನಂಬುತ್ತೇನೆ”
“ಕುತೂಹಲಕಾರಿಯಾಗಿದೆ ನಿನ್ನ ಉತ್ತರ” ಮಾಸ್ಟರ್ ಮಾತು ಮುಂದುವರೆಸಿದ,…
“ಏಕೆಂದರೆ ಊರಿಗೆ ಹುಲಿ ಇನ್ನೂ ಬಂದೇ ಇಲ್ಲ!”
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)