ನಿಮ್ಮ ನಿಲುವನು ಅನುಭವ ಸುಖಿ ಬಲ್ಲ : ವಚನ ವಿಚಾರ #1

ಈ ವಚನದಲ್ಲಿ ಅಲ್ಲಮ, ಕಲ್ಲಿನ ಕಿಚ್ಚು ಮತ್ತು ಬೀಜ – ವೃಕ್ಷಗಳ ಉದಾಹರಣೆ ಕೊಟ್ಟು, “ಗುಹೇಶ್ವರ, ನಿಮ್ಮ ನಿಲವನ್ನು ಅನುಭವಸುಖಿ ಬಲ್ಲ”ನೆಂದು ಹೇಳುತ್ತಿದ್ದಾನೆ. ಇದರ ಅರ್ಥ ನೇರ ಮತ್ತು ಸ್ಪಷ್ಟ. ಯಾರು ಅಸ್ತಿತ್ವದ (ಅಲ್ಲಮನ ವಚನದಂತೆ ಗುಹೇಶ್ವರ – ಪರಮ ಅಸ್ತಿತ್ವದ) ಅನುಭವವನ್ನು ದಕ್ಕಿಸಿಕೊಳ್ಳಬಲ್ಲರೋ, ಅವರಿಗೆ ಮಾತ್ರ ಅದರ ಇರುವು ಸ್ಪಷ್ಟವಾಗುತ್ತದೆ  ~ ಸಾ.ಹಿರಣ್ಮಯಿ

ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು
ಗುಹೇಶ್ವರ, ನಿಮ್ಮ ನಿಲವನನುಭವಸುಖಿ ಬಲ್ಲ || ಅಲ್ಲಮನ ವಚನ ||

ಕಲ್ಲಿನೊಳಗೆ ಕಿಚ್ಚು ಅಡಗಿರುತ್ತದೆ. ಎರಡು ಕಲ್ಲುಗಳನ್ನು ಪರಸ್ಪರ  ಜೋರಾಗಿ ಉಜ್ಜಿದರೆ ಕಿಡಿಯಾಗಿ ಅದು ಹೊಮ್ಮುತ್ತದೆ ಹೊರತು. ತಾನೇ ತಾನಾಗಿ ಕಲ್ಲು ಹೊತ್ತಿ ಉರಿಯುವುದಿಲ್ಲ. ಹಾಗೆಯೇ ಬೀಜವೊಂದರಲ್ಲಿ, ಮುಂದೆ ಬೆಳೆದು ಮರವಾಗಲು ಬೇಕಾದ ಎಲ್ಲ ಸತ್ವಗಳೂ ಅಡಗಿರುತ್ತವೆ. ಹಾಗೆಂದು ಬೀಜವನ್ನೇ ವೃಕ್ಷವೆಂದು ಕರೆಯಲಾಗದು.

ಆದರೆ ಕಲ್ಲಿನೊಳಗೆ ಕಿಚ್ಚು ಇರುವುದಂತೂ ಖಾತ್ರಿ. ಬೀಜದೊಳಗೆ ವೃಕ್ಷ ಇರುವುದಂತೂ ಖಾತ್ರಿ. ಬೆಂಕಿಯ ಕಿಡಿಯಾಗಲೀ ಮರದ ರಚನೆಯಾಗಲೀ ನಮಗೆ ಕಾಣಲಿಲ್ಲ ಎಂದ ಮಾತ್ರಕ್ಕೆ ಅವುಗಳು ಇಲ್ಲ ಎಂದಾಗುವುದಿಲ್ಲ. ಯಾರು ಪ್ರಯೋಗದಿಂದ, ತಾಳ್ಮೆಯ ನಿರೀಕ್ಷೆಯಿಂದ ಅದನ್ನು ಕಂಡುಕೊಂಡಿರುತ್ತಾರೋ ಅವರು ಮಾತ್ರವೇ ಅವುಗಳ ಇರುವಿಕೆಯನ್ನು ಅರಿತಿರುತ್ತಾರೆ.

ಹಾಗೆಯೇ ಸ್ವತಃ ಪ್ರಯೋಗ ಮಾಡಲಾಗದ ಕೆಲವರು ಅದಾಗಲೇ ಅವುಗಳ ಅಸ್ತಿತ್ವವನ್ನು ಕಂಡುಕೊಂಡವರಲ್ಲಿ ಶ್ರದ್ಧೆಯಿಟ್ಟು ಅದನ್ನು ನಂಬುತ್ತಾರೆ.

ಇನ್ನು ಕೆಲವರು ಯಾರದೋ ಕಾಣ್ಕೆಯನ್ನು ತಮ್ಮ ನಂಬಿಕೆಯಾಗಿ ಮಾಡಿಕೊಳ್ಳಲು ಸಿದ್ಧವಿರುವುದಿಲ್ಲ. ಅಂಥವರು ತಮ್ಮದೇ ವಿಧಾನದಲ್ಲಿ ಒರೆಹಚ್ಚಿ, ಪರೀಕ್ಷಿಸಿ, ಅದನ್ನು ಕಂಡುಕೊಳ್ಳುತ್ತಾರೆ.

ಇನ್ನು ಕೆಲವರಿದ್ದಾರೆ. ಅವರಿಗೆ ಸಿದ್ಧರಲ್ಲಿ (ಸಾಧನೆಯ ಮೂಲಕ ಕಂಡುಕೊಂಡವರಲ್ಲಿ) ನಂಬಿಕೆಯೂ ಇರುವುದಿಲ್ಲ, ಸ್ವತಃ ತಾವೂ ಪ್ರಯೋಗ ನಡೆಸಿ ಕಂಡುಕೊಳ್ಳಲು ಆಸಕ್ತಿ ಅಥವಾ ಪರಿಶ್ರಮವೂ ಇಲ್ಲ. ಅಂಥವರು ಸುಮ್ಮನೆ ಸಿದ್ಧರನ್ನೂ, ಶ್ರದ್ಧಾವಂತರನ್ನೂ ದೂರುತ್ತಾ, “ಕಲ್ಲಿನಲ್ಲಿ ಕಿಚ್ಚು ಎಲ್ಲಿದೆ? ಅದು ಕಾಣುತ್ತಿಲ್ಲವೆಂದರೆ ಕಿಚ್ಚು ಇಲ್ಲವೆಂದೇ ಅರ್ಥ. ಬೀಜದಲ್ಲಿ ಮರ ಎಲ್ಲಿದೆ? ಅವೆಲ್ಲ ಬರೀ ಕಣ್ಕಟ್ಟು” ಎಂದು ದೂಷಿಸುತ್ತಾರೆ.

ಯಾವುದೇ ಸಂಗತಿಯನ್ನು ನಿರಾಕರಿಸುವ, ಪ್ರಶ್ನಿಸುವ, ಆಕ್ಷೇಪಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಮತ್ತು, ಈ ಹಕ್ಕನ್ನು ಪ್ರತಿಯೊಬ್ಬರೂ ಬಳಸಬೇಕು ಕೂಡಾ. ಆದರೆ ಅದರ ಬಳಕೆಯನ್ನೇ ಮಾಡದೆ, ಅಥವಾ ಪ್ರಯತ್ನ ಮಾಡಿಯೂ ಪ್ರಯೋಗದಲ್ಲಿ ವಿಫಲರಾದ ಮಾತ್ರಕ್ಕೆ ಆ ನಿರ್ದಿಷ್ಟ ಸಂಗತಿಯನ್ನೇ “ಅದು ಇಲ್ಲ” ಎಂದು ಘೋಷಿಸಿಬಿಟ್ಟರೆ ಹೇಗೆ?

ಈ ವಚನದಲ್ಲಿ ಅಲ್ಲಮ, ಕಲ್ಲಿನ ಕಿಚ್ಚು ಮತ್ತು ಬೀಜ – ವೃಕ್ಷಗಳ ಉದಾಹರಣೆ ಕೊಟ್ಟು, “ಗುಹೇಶ್ವರ, ನಿಮ್ಮ ನಿಲವನ್ನು ಅನುಭವಸುಖಿ ಬಲ್ಲ”ನೆಂದು ಹೇಳುತ್ತಿದ್ದಾನೆ. ಇದರ ಅರ್ಥ ನೇರ ಮತ್ತು ಸ್ಪಷ್ಟ. ಯಾರು ಅಸ್ತಿತ್ವದ (ಅಲ್ಲಮನ ವಚನದಂತೆ ಗುಹೇಶ್ವರ – ಪರಮ ಅಸ್ತಿತ್ವದ) ಅನುಭವವನ್ನು ದಕ್ಕಿಸಿಕೊಳ್ಳಬಲ್ಲರೋ, ಅವರಿಗೆ ಮಾತ್ರ ಅದರ ಇರುವು ಸ್ಪಷ್ಟವಾಗುತ್ತದೆ.

ಆದ್ದರಿಂದ ಯಾವುದನ್ನಾದರೂ ನಿರಾಕರಿಸಿ ತೀರ್ಮಾನ ನೀಡುವ ಮೊದಲು; ಪ್ರಶ್ನೆ, ಪರೀಕ್ಷೆ, ಪ್ರಯೋಗ, ಜಿಜ್ಞಾಸೆ, ಸಾಧನೆ – ಇತ್ಯಾದಿ ಸಾಧ್ಯವಿರುವ ಎಲ್ಲ ಮಾರ್ಗಗಳ ಮೂಲಕ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಲೇಬೇಕಾಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.