ದೋಷ ಆತ್ಮಕ್ಕಲ್ಲ, ಅಹಂಭಾವಕ್ಕೆ… | ರಮಣರ ಜೊತೆ ಮಾತುಕತೆ ~ ಭಾಗ 6

ನವೆಂಬರ್ 17, 1936ರಂದು ರಮಣ ಮಹರ್ಷಿಗಳು ತಮ್ಮ ಶಿಷ್ಯರೊಬ್ಬರ ಪ್ರಶ್ನೆಗಳಿಗೆ ಉತ್ತರಿಸಿದ ಚುಟುಕು ಸಂಭಾಷಣೆ ಇಲ್ಲಿದೆ :

RAMANA

ಶಿಷ್ಯ : ಮನುಷ್ಯನು ‘ಜಿತಸಂಗದೋಷ’ನಾಗುವುದು ಹೇಗೆ?

ರಮಣ ಮಹರ್ಷಿ: ಸತ್ಸಂಗದಿಂದ. “ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲ ತತ್ತ್ವಂ, ನಿಶ್ಚಲತತ್ತ್ವೇ ಜೀವನ್ಮುಕ್ತಿಃ”

ಸತ್ಸಂಗವೆಂದರೆ ಸತ್’ನೊಡನೆ ಸಹವಾಸ. ‘ಸತ್’ ಎಂದರೆ ಆತ್ಮವೆಂದೇ. ಆದರೆ ಈಗ, ಆತ್ಮವೆಂದರೆ ‘ಸತ್’ ಎಂದು ತಿಳಿದಿರುವುದರಿಂದ, ಹಾಗೆ ಯಾರಿಗೆ ತಿಳಿದಿದೆಯೋ ಅಂತಹ ಸಂತನ ಸಹವಾಸವನ್ನು ಮಾಡಬೇಕು. ಅದೇ ಸತ್ಸಂಗ. ಅಂತಹ ಸತ್ಸಂಗದಿಂದ ಅಂತರ್ಮುಖತೆ ಸಿದ್ಧಿಸುತ್ತದೆ. ಆಗ ಸತ್ಯ ಸಾಕ್ಷಾತ್ಕಾರವಾಗುತ್ತದೆ.

ಇಲ್ಲಿ ಸಂಗ ಯಾರಿಗೆ? ದೋಷ ಯಾರಿಗೆ?

ಶಿಷ್ಯ : ಆತ್ಮನಿಗೆ?

ರಮಣ ಮಹರ್ಷಿ : ಅಲ್ಲ…. ಆತ್ಮನು ಪರಿಶುದ್ಧ. ಅಬಾಧಿತ, ಕಲ್ಮಶ ಬಾಧಿಸುವುದು ಅಹಂಭಾವಕ್ಕೆ.

ಶಿಷ್ಯ : ದೇಹವಿಲ್ಲದೆ ಆತ್ಮ ಇರಬಲ್ಲದೆ?

ರಮಣ ಮಹರ್ಷಿ : ಕೊಂಚ ಕಾಲ – ಗಾಢ ನಿದ್ರೆಯಲ್ಲಿ – ಹಾಗೆ ಇರಬಲ್ಲದು. ಆತ್ಮನಿಗೆ ದೇಹವಿಲ್ಲ. ಈಗಲೂ ಹಾಗೆಯೇ ಇದೆ.

ಶಿಷ್ಯ : ಸಂನ್ಯಾಸಿಯು ಸಂಸಾರದ ಮಧ್ಯೆ ಇರಬಲ್ಲನೆ?

ರಮಣ ಮಹರ್ಷಿ : ಎಲ್ಲಿಯವರೆಗೆ ನಾನು ಸಂನ್ಯಾಸಿ ಎಂದು ಚಿಂತಿಸುತ್ತಾನೋ ಅಲ್ಲಿಯವರೆಗೆ ಅವನು ಸನ್ಯಾಸಿಯಲ್ಲ. ಸಂಸಾರದ ಬಗ್ಗೆ ಎಲ್ಲಿಯವರೆಗೆ ಚಿಂತಿಸುವುದಿಲ್ಲವೋ, ಅಲ್ಲಿಯವರೆಗೆ ಅವನು ಸಂಸಾರಿಯಲ್ಲ – ಅವನೂ ಸನ್ಯಾಸಿಯೇ.

ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ. 

Leave a Reply