“ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ…. ಓ ನನ್ನ ಚೇತನಾ, ಆಗು ನೀ ಅನಿಕೇತ” ಎನ್ನುತ್ತಾರೆ ರಸಋಷಿ ಕುವೆಂಪು.
ರಸಋಷಿ ಎಂದೇ ಖ್ಯಾತರಾಗಿರುವ ಕುವೆಂಪು, ಕನ್ನಡದ ದಾರ್ಶನಿಕ ಕವಿಯೂ ಹೌದು. ಇವರ “ಓ ನನ್ನ ಚೇತನಾ, ಆಗು ನೀ ಅನಿಕೇತನ” ಎಂದು ಸಾರುವ ವಿಶ್ವಮಾನವ ಗೀತೆಯು ಮನುಷ್ಯನು ಬದುಕಬೇಕಾದ ಬಗೆಯನ್ನು ಅತ್ಯಂತ ಅರ್ಥಪೂರ್ಣವಾಗಿ ನಿರ್ದೇಶಿಸುತ್ತದೆ. “ಚೇತನವು ಸದಾ ಚಲನಶೀಲ. ಅದು ನಿಂತರೆ, ಅದಕ್ಕೆ ಮುಕ್ತಿಯಿಲ್ಲ. ಚೇತನವು ತನ್ನ ಚಲನೆಯನ್ನು ಕಾಯ್ದುಕೊಳ್ಳಬೇಕೆಂದರೆ, ಅದು ಯಾವುದಕ್ಕೂ ಅಂಟಿಕೊಳ್ಳಬಾರದು” – ಇದು ಕುವೆಂಪು ಆಶಯ.
ನಿರ್ದಿಷ್ಟವಾಗಿ ಈ Posterನಲ್ಲಿರುವ ವಿಶ್ವಮಾನವ ಗೀತೆಯ ಸಾಲುಗಳನ್ನು ತೆಗೆದುಕೊಂಡರೆ, ಇಲ್ಲಿ ಕುವೆಂಪು, “ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ” ಅನಂತವಾಗು ಎಂದು ಚೇತನಕ್ಕೆ ಹೇಳುತ್ತಿದ್ದಾರೆ. ಚೇತನವೆಂದರೆ ಜೀವಿಗಳ ಒಳಗಿನ ಚಾಲಕ ಶಕ್ತಿ. ಜೀವಿಯೊಳಗಿನ ಪ್ರಜ್ಞೆ. ಮತ್ತು ಚೇತನವೆಂದರೆ ಯಾವುದೇ ಜೀವದ ಕೇಂದ್ರಬಿಂದು. ಈ ಚೇತನವು ಅನಂತವಾಗಬೇಕೆಂದರೆ, ಅದು ತಾನು ಧರಿಸಿರುವ ದೇಹದ ರೂಪ ಮತ್ತು ಹೆಸರುಗಳಿಂದ ಪಡೆದ ಗುರುತನ್ನು ದಾಟಬೇಕು.
ನಾವು ಸ್ವಯಂವ್ಯಾಮೋಹಿಗಳಾಗಿದ್ದೇವೆ. ನಮ್ಮ ಗುರುತು – ಚಹರೆಗಳಿಗೆ ಅಂಟಿಕೊಂಡಿದ್ದೇವೆ. ನಮ್ಮ ಹೆಸರಿಗೆ ಅಂಟಿಕೊಂಡಿದ್ದೇವೆ. ಒಮ್ಮೆ ನಾವು ಇಂಥವರು ಎಂದು ಮನ್ನಣೆ ಪಡೆದರೆ ಸಾಕು…. ಅಥವಾ ಮನ್ನಣೆಯನ್ನೇನೂ ಪಡೆಯಬೇಕಿಲ್ಲ; ನಾವು ಇಂಥವರೆಂದು ಪರಿಚಿತರಾದರೆ ಸಾಕು… ನಾವು ಅದನ್ನು ಬಿಟ್ಟು ಹೊರಗೆ ಬರಲು ಮನಸ್ಸು ಮಾಡುವುದೇ ಇಲ್ಲ. ನಮ್ಮ ಗುರುತು ಬದಲಾದರೆ, ಚಹರೆ ಬದಲಾದರೆ, ನಮ್ಮ ಹೆಸರು ಬದಲಾದರೆ ನಮ್ಮ ಅಸ್ತಿತ್ವವೇ ಕಳೆದುಹೋಗುತ್ತದೆ ಎಂದು ನಾವು ಭಯಪಡುತ್ತೇವೆ. ನಮ್ಮ ಅನಂತ ಸಾಧ್ಯತೆಗಳ ಅಸ್ತಿತ್ವವನ್ನು ಯಕಶ್ಚಿತ್ ಗುರುತುಗಳಿಗೆ ಸೀಮಿತಗೊಳಿಸಿಬಿಡುತ್ತೇವೆ. ಇದರಿಂದ ನಮ್ಮ ವಿಸ್ತಾರವು ಮೊಟಕುಗೊಳ್ಳುತ್ತದೆ. ಅನಂತರಾದ ನಾವು ಅಲ್ಪರಾಗಿ ಉಳಿದುಹೋಗುತ್ತೇವೆ.
ಆದ್ದರಿಂದ ಕುವೆಂಪು ಹೇಳುತ್ತಾರೆ, “ಓ ನನ್ನ ಚೇತನವೇ, ರೂಪಗಳನ್ನು ದಾಟು, ಹೆಸರುಗಳನ್ನು ಮೀಟು; ಆ ಮೂಲಕ ಸೀಮಿತಿಯ ಗಡಿಗಳನ್ನು ತೊಡೆದು ಅಸೀಮವಾಗು… ಅನಂತವಾಗು” ಎಂದು.
ಸರಳವಾಗಿ ಹೇಳುವುದಾದರೆ, ನಮ್ಮ ಸದ್ಯದ ಪರಿಚಯದಿಂದ ಹೊರಗೆ ಬಂದರೆ ಮಾತ್ರ ನಾವು ಈಗ ಇರುವುದಕ್ಕಿಂತ ಹೆಚ್ಚಿನ ಮತ್ತೊಂದೇನೋ ಆಗಲು ಸಾಧ್ಯ. ಗುರುತು, ಹೆಸರುಗಳ ಮೂಲಕ ನಮಗೆ ನಾವು ಮಿತಿ ಹೇರಿಕೊಳ್ಳುವುದನ್ನು ಬಿಡಬೇಕಷ್ಟೆ.