ನೀವು ಬದುಕುವುದು ನಿಮಗಾಗಿ : ಅರಳಿಮರ POSTER

“ಜಗತ್ತು ವಿಪರೀತವಾಗಿ ಭಯಪಡುವುದು ಮತ್ತೊಬ್ಬರು ಏನೆಂದುಕೊಂಡಾರು ಅನ್ನುವ ಯೋಚನೆಯಿಂದ. ಒಂದು ಸಲ ನೀವು ಈ ಭಯಭೀತ ಮಂದೆಯಿಂದ ಹೊರಬನ್ನಿ, ಮತ್ತೆಂದೂ ನೀವು ಕುರಿಗಳ ಹಾಗೆ ತಲೆ ತಗ್ಗಿಸಿ ನಡೆಯಲಾರಿರಿ. ನೆನಪಿರಲಿ… ನೀವು ಬದುಕುವುದು ನಿಮಗಾಗಿ” ಅನ್ನುತ್ತಾರೆ ಓಶೋ ರಜನೀಶ್.

osho

ಶೋ ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ! ನಾವು ನಮ್ಮ ಜೀವಮಾನ ಸವೆಸುವುದೇ ಮತ್ತೊಬ್ಬರು ಏನೆಂದುಕೊಳ್ಳುತ್ತಾರೋ ಅನ್ನುವ ಆಲೋಚನೆಯಲ್ಲಿ. 

ನಮ್ಮ ವಿದ್ಯಾಭ್ಯಾಸ, ಉದ್ಯೋಗ, ಉಡುಗೆತೊಡುಗೆ – ಇವೆಲ್ಲವೂ ಬಹುತೇಕ ಮತ್ತೊಬ್ಬರನ್ನು ಮೆಚ್ಚಿಸಲೆಂದೇ ಇರುತ್ತವೆ. ನಾನು ಕಡಿಮೆ ಅಂಕ ತೆಗೆದರು ಅವರು ಏನೆಂದುಕೊಳ್ಳುತ್ತಾರೋ ಅನ್ನುವ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಮೇಲ್ನೋಟಕ್ಕೆ ನಾವು ಇದನ್ನು ನಿರಾಕರಿಸಬಹುದು. ಆದರೆ ವಾಸ್ತವ ಅದೇ ಆಗಿದೆ. ನಮ್ಮಂತೆಯೇ, ನಾವು ಯಾವ ‘ಮತ್ತೊಬ್ಬರ’ ಬಗ್ಗೆ ಭಯಪಡುತ್ತಾ ಇರುತ್ತೇವೆಯೋ ಅವರು ಕೂಡಾ ಭಯದಲ್ಲಿರುತ್ತಾರೆ. ಅವರು ನಮ್ಮ ಬಗ್ಗೆ, ನಾವು ಏನೆಂದುಕೊಳ್ಳುತ್ತೇವೋ ಅನ್ನುವ ಆಲೋಚನೆಯಲ್ಲಿ ಜೀವನ ತಳ್ಳುತ್ತಾ ಇರುತ್ತಾರೆ. 

ಹೀಗೆ ನಾವೂ ಅವರೂ ಸೇರಿಕೊಂಡು ಒಂದು ಭಯಗ್ರಸ್ತ ಕುರಿ ಮಂದೆಯನ್ನು ನಿರ್ಮಾಣ ಮಾಡಿಕೊಂಡಿರುತ್ತೇವೆ. ಒಮ್ಮೆ ಈ ಮಂದೆಯಿಂದ ಹೊರಗೆ ಬಂದು, “ನನ್ನಿಷ್ಟದಂತೆ ನಾನು ನಡೆಯುತ್ತೇನೆ. ನನ್ನ ನಂಬಿಕೆಗಳಿಗೆ, ಮೌಲ್ಯಗಳಿಗೆ ಮಾತ್ರ ನಾನು ಭಯಪಡುವುದು. ನಾನು ಸಮಾಜಕ್ಕೆ ಸಮಸ್ಯೆ ಉಂಟುಮಾಡದಂತೆ ನನ್ನ ಇಷ್ಟದಂತೆ, ನನ್ನ ಆಯ್ಕೆಯ ಬದುಕನ್ನು ಬಾಳಲು ಸ್ವತಂತ್ರನಾಗಿದ್ದೇನೆ. ನಾನು ಬದುಕುವುದು ನನಗಾಗಿಯೇ ಹೊರತು ಮತ್ತೊಬ್ಬರನ್ನು ಮೆಚ್ಚಿಸಲು ಅಲ್ಲ” ಎಂದು ಆಲೋಚಿಸಿ. ಬದುಕು ಅದೆಷ್ಟು ಸರಳವಾಗಿದೆ ಎಂದು ನೀವೇ ಕಂಡುಕೊಳ್ಳುತ್ತೀರಿ. 

Leave a Reply