ಮಹಾ ಪ್ರಳಯ ಮತ್ತು ಮಹಾನೌಕೆಯ ನಿರ್ಮಾಣ : ಭಾರತೀಯ ಪುರಾಣ ಸರಣಿ | ದಶಾವತಾರ

ಸೃಷ್ಟಿ ಕಥನಗಳಲ್ಲಿ ಸಾಮ್ಯತೆ ಇರುವಂತೆ ವಿವಿಧ ಜನಪದ – ನಾಗರಿಕತೆಗಳ ಪ್ರಳಯ ಕಥನಗಳಲ್ಲೂ ಸಾಮ್ಯತೆಯಿದೆ. ಒಂದೇ ಭಾವ – ಬೀಜದಲ್ಲಿ ಆಯಾ ನೆಲಮಣ್ಣಿನ ಸೊಗಡು, ಸಾಹಿತ್ಯ, ಸಂಸ್ಕೃತಿಗಳು ಹದಬೆರೆತು ಕಥನವೃಕ್ಷಗಳು ಬೆಳೆದು ನಿಂತಿವೆ. ~ ಅರಳಿಬಳಗ

ಹಿಂದಿನ ಲೇಖನವನ್ನು ಇಲ್ಲಿ ಓದಿ : https://aralimara.com/2018/07/23/avatara1/

noahs-ark

ಸೃಷ್ಟಿಯ ಕಲ್ಪನೆಯ ಜೊತೆಗೇ ಪ್ರಳಯದ ಪರಿಕಲ್ಪನೆಯೂ ಹುಟ್ಟಿಕೊಂಡಿತು. ಹಿರಣ್ಯ ಗರ್ಭದಿಂದ (ಚಿನ್ನದ ಮೊಟ್ಟೆ) ಸೃಷ್ಟಿ ಕ್ರಿಯೆ ಆರಂಭವಾಯಿತು ಅನ್ನುವ ಚಿಂತನೆ ನಮ್ಮಲ್ಲಿ ಇರುವಂತೆಯೇ, ಮೊಟ್ಟೆಯೊಡೆದು ಮೇಲ್ಭಾಗ ಆಕಾಶವೂ ಕೆಳಭಾಗ ಭೂಮಿಯೂ ಆಯಿತು ಅನ್ನುವ ತಿರುಳನ್ನುಳ್ಳ ಸಾಕಷ್ಟು ಕಥನಗಳು ವಿಶ್ವಾದ್ಯಂತ ಪುರಾಣ – ಜನಪದಗಳಲ್ಲಿ ಸಿಗುತ್ತವೆ. ಹಾಗೆಯೇ ಪ್ರಳಯದ ಕಥನಗಳೂ.

ಪ್ರಳಯ ಕಾಲದಲ್ಲಿ ಚುನಾಯಿತ ಪ್ರತಿನಿಧಿಯೊಬ್ಬ ಜೀವಸಂಕುಲದ ಒಂದೊಂದು ಜೋಡಿಯನ್ನು (ಅಥವಾ ಆಯ್ದ ಕೆಲವರನ್ನು) ಹಡಗಿನಲ್ಲಿ ಕಾಪಾಡಿ ಮನ್ವಂತರದಲ್ಲಿ ಸೃಷ್ಟಿ ಕಾರ್ಯ ಮುಂದುವರಿಸುತ್ತಾನೆ ಅನ್ನುವ ಕಥನವು ಪೂರ್ವ – ಪಶ್ಚಿಮ ನಾಗರಿಕತೆಗಳ ಪುರಾಣಗಳಲ್ಲಿ ಕಂಡುಬರುತ್ತವೆ. ನಮ್ಮಲ್ಲಿ ಪ್ರಳಯದಿಂದ ಪಾರಾಗಲು ಮನು ಮಹಾನೌಕೆಯ ನಿರ್ಮಾಣ ಮಾಡುತ್ತಾನೆ. ಬೈಬಲ್, ನೋವಾ ಅಂಥದೊಂದು ನೌಕೆಯನ್ನು ನಿರ್ಮಿಸುವ ಕಥೆ ಹೇಳಿದರೆ, ಕುರಾನ್ ನುಹ್’ನ ಕಥೆ ಹೇಳುತ್ತದೆ. ಹೀಗೆ ಮಹಾನೌಕೆ ನಿರ್ಮಿಸಿದ ಕುರಿತು ಗ್ರೀಕರು ಡ್ಯೂಕಾಲಿಯಸ್’ನ ಕಥೆಯನ್ನೂ ಸುಮೇರಿಯನ್ನರು ಝೀಯೂಸುದ್ರನ ಕಥೆಯನ್ನೂ, ಅಕ್ಕಾಡಿಯನ್ನರು ಅತ್ರಾಹಸೀಸನ ಕಥೆಯನ್ನೂ, ಬ್ಯಾಬಿಲೋನಿಯನ್ನರು ಉತ್ನಾಪಿಷ್ತಿಮನ ಕಥೆಯನ್ನೂ, ಚೀನೀಯರು ಫುಹಿ ಕುಟುಂಬದ ಕಥೆಯನ್ನೂ, ಹವಾಯಿಯನ್ನರು ನೂ ಎಂಬುವವನ ಕಥೆಯನ್ನೂ ಹೇಳುತ್ತಾರೆ.

ಭಾರತೀಯ ಪುರಾಣ ಕಥನವು ಹೇಳುವಂತೆ, ಪ್ರಳಯ ಕಾಲದಲ್ಲಿ ಮಹಾನೌಕೆಯನ್ನು ನಿರ್ಮಿಸುವುದು ಮನು. ಅವನ ರಕ್ಷಣಾ ಕಾರ್ಯಕ್ಕೆ ನೆರವಾಗಿವುದು ಸ್ವಯಂ ಮಹಾವಿಷ್ಣು, ಮತ್ಸ್ಯಾವತಾರದಲ್ಲಿ.

ಮತ್ಸ್ಯಾವತಾರ ಮಹಾವಿಷ್ಣುವನ ಮೊಟ್ಟ ಮೊದಲ ಅವತಾರ ಎಂದು ಪುರಾಣಗಳು ಹೇಳುತ್ತವೆ. ಮುಖದಲ್ಲಿ ಕೊಂಬನ್ನು ಹೊಂದಿದ ಬೃಹದಾಕಾರದ ಮೀನಿನ ರೂಪದಲ್ಲಿ ಭಗವಂತ ಪ್ರಕಟಗೊಳ್ಳುತ್ತಾನೆ. ಮನು ನಿರ್ಮಿಸಿದ ನೌಕೆಯನ್ನು ಸುರಕ್ಷಿತ ಸ್ಥಳ ತಲುಪಿಸುವ ಹೊಣೆ ಹೊತ್ತು, ಅದನ್ನು ನೆರವೇರಿಸುತ್ತಾನೆ. ಹೀಗೆ ಸೃಷ್ಟಿ – ಸ್ಥಿತಿ – ಲಯಗಳ ಜವಾಬ್ದಾರಿ ಹೊಂದಿದ ತ್ರಿಮೂರ್ತಿಗಳಲ್ಲಿ ವಿಷ್ಣು ತನ್ನ ಸ್ಥಿತಿಕಾರ್ಯವನ್ನು ನಿರ್ವಹಿಸುತ್ತಾನೆ.

ವಿಷ್ಣು ಮತ್ಸ್ಯಾವತಾರ ತಾಳುವ ಮತ್ತು ಮನು ಮಹಾನೌಕೆ ನಿರ್ಮಿಸುವ ಕಥೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಅವತಾರಗಳ ಪೌರಾಣಿಕ ಕಥನಗಳು ಬಹುಶಃ ಪ್ರಾಚೀನದಲ್ಲಿ ನಡೆದ ಘಟನೆಗಳ ಉತ್ಪ್ರೇಕ್ಷಿತ ಕಥನಗಳೂ ಇರಬಹುದು. ಅಥವಾ ನಿರ್ದಿಷ್ಟ ಮೌಲ್ಯ ಅಥವಾ ಜ್ಞಾನವನ್ನು ಸಾರುವ ಸಂಕೇತಗಳೂ ಇರಬಹುದು. ಧರ್ಮಭೀರುಗಳ ಪಾಲಿಗೆ ಯಥಾವತ್ತಾಗಿ ನಡೆದಿರಬಹುದಾದ ಘಟನೆಗಳು ಅನ್ನುವುದಂತೂ ಸರಿಯೇ. ಈ ಕಥನಗಳು ಬೇರೆ ಯಾವ ಉದ್ದೇಶಗಳೂ ಇಲ್ಲದ ಶುದ್ಧ ಸಾಹಿತ್ಯವೂ ಇರಬಹುದು, ಸಂಪೂರ್ಣವಾಗಿ ಕವಿಕಲ್ಪಿತ ಘಟನೆಗಳಾಗಿಯೂ ಇರಬಹುದು. ಅದೇನೇ ಇದ್ದರೂ, ಯಾವುದೇ ಕಥನದ ಅರ್ಥ ಘಟಿಸುವುದು ನಮ್ಮೊಳಗೆ…. ಅರಳಿಬಳಗ | ಕಥಾ ನಿರೂಪಣೆ  : ಚೇತನಾ ತೀರ್ಥಹಳ್ಳಿ

Leave a Reply