ಕೃತಜ್ಞತೆ : ಸಕಾರಾತ್ಮಕತೆಯ ದಿವ್ಯೌಷಧ

ನಮ್ಮ ಸುತ್ತಲು ಒಂದು ಜಗತ್ತಿದೆ ಎಂದೇ ನಮಗೂ ಅಸ್ತಿತ್ವ ಇದೆ ಅಲ್ಲವೆ? ಇದೊಂದು ಒಳಹೆಣಿಗೆ. ಒಂದು ಗಂಟು ಬಿಡಿಸಿಕೊಂಡರೆ ಇಡಿಯ ನೇಯ್ಗೆ ಕಿಸಿದುಹೋಗುತ್ತೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿರುವ ಎಲ್ಲ ಎಳೆಗಳಿಗೂ ನಾವು ಕೃತಜ್ಞರಾಗಿರಬೇಕು. ನಮಗೆ ಅವರು ಕೂಡಾ ಆಗಿರುತ್ತಾರೆ… ಆಗಿರಬೇಕು.

ದುಕಿನಲ್ಲಿ ನಮ್ಮನ್ನು ಸಂತೋಷವಾಗಿ ಇರಿಸಬಲ್ಲ ಯಾವುದಾದರೂ ಸಂಗತಿ ಇದೆ ಎಂದರೆ, ಅದು ‘ಕೃತಜ್ಞತೆ’.
ಎಲ್ಲಕ್ಕಿಂತ ಮೊದಲು ನಮಗೆ ನಾವು ಕೃತಜ್ಞರಾಗಿರುವುದು. ದೇಹವು ನಮ್ಮನ್ನು ಹಿಡಿದುಕೊಂಡಿರುವುದಕ್ಕಾಗಿ. ಸ್ವಸ್ಥವಾಗಿರುವುದಕ್ಕಾಗಿ. ಮತ್ತು ನಮ್ಮೆಲ್ಲ ಚಟುವಟಿಕೆಗಳಿಗೆ ಸಹಕರಿಸುತ್ತಿರುವುದಕ್ಕಾಗಿ. ನಮ್ಮಲ್ಲಿ ಕೆಲವರು ವಿಕಲಾಂಗರಿರಬಹುದು. ನಾವು ನಮ್ಮ ದೇಹಕ್ಕೆ ಕೃತಜ್ಞರಾಗಿರಬೇಕೆ? ಯಾಕಾದರೂ ಆಗಿರಬೇಕು? ಎಂದು ಅವರು ಕೇಳಬಹುದು. ವಾಸ್ತವದಲ್ಲಿ ವಿಕಲಾಂಗರು ಹಾಗೆ ಕೇಳುವುದು ಕಡಿಮೆ. ಅವರು ತಮ್ಮ ದೇಹದ ಊನವನ್ನು ಮೀರುವ ಪ್ರಕ್ರಿಯೆಯಲ್ಲಿ ಕೊರತೆಗಳನ್ನು ಮೀರಿ ಬದುಕಲು ಕಲಿತಿರುತ್ತಾರೆ. ಅವರು ಗೊಣಗುವುದು ಕಡಿಮೆ. ನೋಡಿ ಬೇಕಿದ್ದರೆ… ಎಲ್ಲ ಅಂಗಾಂಗಗಳು ಸರಿ ಇರುವವರ ಗೊಣಗಾಟವೇ ಹೆಚ್ಚು. ಈಗ ಗೊತ್ತಾಯಿತಲ್ಲ? ನಾವೇಕೆ ನಮ್ಮ ದೇಹಕ್ಕೆ ಕೃತಜ್ಞರಾಗಿರಬೇಕು ಎಂದು? ಹಾಗೆಯೇ, ಅಕಸ್ಮಾತ್, ತಮ್ಮ ದೇಹದ ಬಗ್ಗೆ ಬೇಸರಪಡುವ ವಿಕಲಾಂಗರು ಕೂಡಾ, ನಮ್ಮ ಜೀವವನ್ನು ಈ ದೇಹ ಹೊತ್ತುಕೊಂಡಿದೆ ಎಂದು ಕೃತಜ್ಞರಾಗಿರಬೇಕು.
ನಂತರದಲ್ಲಿ ನಾವು ನಮ್ಮ ಸುತ್ತಲಿನ ಜಗತ್ತಿಗೆ ಕೃತಜ್ಞತೆ ತೋರಬೇಕು. ಪಕ್ಕದ ಮನೆಯವರು ಗೋಡೆಗೆ ಮೊಳೆ ಹೊಡೆಯುತ್ತಾರೆಂದೋ, ಗದ್ದಲ ಎಬ್ಬಿಸುತ್ತಾರೆಂದೋ, ಗಾಡಿಯನ್ನು ಅಡ್ಡಡ್ಡ ಪಾರ್ಕ್ ಮಾಡುತ್ತಾರೆಂದೋ ಕಿರಿಕಿರಿ ಮಾಡಿಕೊಳ್ಳುವ ನಾವು, ಅಷ್ಟು ಚಿಕ್ಕಪುಟ್ಟ ಕಾರಣಗಳಿಗೇ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವವರೆಗೆ ಹೋಗುತ್ತೇವೆ. ಆಯಾ ಸಂದರ್ಭಗಳ ಕೆಲವು ಕ್ಷಣಗಳನ್ನು ದಾಟಿದರೆ ಎಲ್ಲವೂ ಸುಸೂತ್ರವಾಗಿಯೇ ಇರುತ್ತವೆ. ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ನಾವು ಆ ಕ್ಷಣಗಳನ್ನು ದಾಟುವುದೇ ಇಲ್ಲ. ಅದಕ್ಕೆ ಮೊಳೆ ಹೊಡೆದುಕೊಂಡು ನಿಂತುಬಿಡುತ್ತೇವೆ.
ನಮ್ಮ ಸುತ್ತಲು ಒಂದು ಜಗತ್ತಿದೆ ಎಂದೇ ನಮಗೂ ಅಸ್ತಿತ್ವ ಇದೆ ಅಲ್ಲವೆ? ಇದೊಂದು ಒಳಹೆಣಿಗೆ. ಒಂದು ಗಂಟು ಬಿಡಿಸಿಕೊಂಡರೆ ಇಡಿಯ ನೇಯ್ಗೆ ಕಿಸಿದುಹೋಗುತ್ತೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿರುವ ಎಲ್ಲ ಎಳೆಗಳಿಗೂ ನಾವು ಕೃತಜ್ಞರಾಗಿರಬೇಕು. ನಮಗೆ ಅವರು ಕೂಡಾ ಆಗಿರುತ್ತಾರೆ… ಆಗಿರಬೇಕು.
ಪ್ರತಿ ರಾತ್ರಿ ಮಲಗುವ ಮೊದಲೊಮ್ಮೆ ಹತ್ತು ನಿಮಿಷ ಕುಳಿತು ಯೋಚಿಸಿ. ನಿಮ್ಮ ದೇಹ ನಿಮ್ಮ ಎಷ್ಟೆಲ್ಲ ಭಾರ ಹೊತ್ತುಕೊಂಡಿತು… ನಿಮ್ಮ ಸುತ್ತಲಿನ ಜಗತ್ತು ನಿಮ್ಮ ಜೊತೆಗೆ ಎಷ್ಟೊಂದು ಸಹಾನುಭೂತಿಯಿಂದ ವರ್ತಿಸಿತು… ಒಂದೊಂದೇ ಪಟ್ಟಿ ಮಾಡಿಕೊಳ್ಳಿ. ದುಡಿಮೆ ನಿಮ್ಮದೇ ಆಗಿದ್ದರೂ ನೀವು ತಿಂದ ತಿನಿಸು ಬಂದುದೆಲ್ಲಿಂದ? ಅದು ಬೆಳೆದಿದ್ದು ಎಲ್ಲಿ? ಬೆಳೆದವರು ಯಾರು? ಬೇಯಿಸಿದವರು ಯಾರು? ದುಡಿಮೆಗೆ ಅವಕಾಶ ನೀಡಿದವರು ಯಾರು? ನೀವು ಪ್ರಯಾಣಿಸಿದ ವಾಹನವನ್ನು ಚಲಾಯಿಸಿದವರು ಯಾರು? ಪ್ರಯಾಣ ಕಾಲದಲ್ಲಿ ನಿಮ್ಮ ಸುರಕ್ಷತೆಯನ್ನು ಕಾಪಾಡಿದವರು ಯಾರು? ನೀವು ತೊಟ್ಟ ಬಟ್ಟೆಯ ಹಿಂದೆ ಯಾರೆಲ್ಲರ ಶ್ರಮವಿದೆ? ಉದ್ಯೋಗಸ್ಥಳದಲ್ಲಿ ನಿಮ್ಮೆದುರು ಚಹಾ ತಂದಿಟ್ಟವರು ಯಾರು? ನಿಮ್ಮ ಕೆಲಸಗಳಿಗೆ ಸಹಾಯ ನೀಡಿದವರು ಯಾರು?
ಅಬ್ಬಾ….! ಕೃತಜ್ಞತೆಯಿಂದ ನೆನೆಸಿಕೊಳ್ಳಬೇಕು ಎಂದರೆ ಎಷ್ಟೊಂದು ಜನ, ಎಷ್ಟೊಂದು ಕಾರಣಗಳು ನಮ್ಮೆದುರು ಪೆರೇಡು ಮಾಡುತ್ತವೆ!!
ಆದರೆ ನಮಗೆ ಇವೆಲ್ಲ ಹೊಳೆಯುವುದೇ ಇಲ್ಲ. ಆದರೆ ಗೊಣಗಾಡಲಿಕ್ಕೆ, ದೂರು ಹೇಳಲಿಕ್ಕೆ ನಮಗೆ ಎಷ್ಟೊಂದು ಕಾರಣ ಸಿಗುತ್ತವೆ!! ಅದರಿಂದ ಸಹಜವಾಗಿಯೇ ನಕಾರಾತ್ಮಕತೆ ಸುಳಿಯುತ್ತದೆ. ನಮ್ಮಲ್ಲಿ ಕಹಿ ತುಂಬಲು ಅಷ್ಟು ಸಾಕು.
ಸೋ… ಆಯ್ಕೆ ನಿಮ್ಮದು. ಕೃತಜ್ಞತಾ ಭಾವ ಹೊಂದಿ ಸಕಾರಾತ್ಮಕ ಚಿಂತನೆ ತುಂಬಿಸಿಕೊಳ್ಳುತ್ತೀರೋ… ಗೊಣಗಾಡುತ್ತಾ ಜೀವನ ಸವೆಸುತ್ತೀರೋ… ನೀವೇ ನಿಶ್ಚಯಿಸಿ.

Leave a Reply