ಒಂದು ದಿನ ಯೆನ್ ರಾಜ್ಯದ ರಾಜ ಝೆನ್ ಮಾಸ್ಟರ್ ಚಾವೋ ಚೌ ನ ಭೇಟಿಗೆ ಬಂದ. ರಾಜ ಬರುತ್ತಿರುವುದನ್ನು ನೋಡಿದರೂ ಮಾಸ್ಟರ್ ನಿರ್ಲಕ್ಷ ಮಾಡಿದ. ರಾಜನನ್ನು ಎದ್ದು ಬಂದು ಸ್ವಾಗತಿಸಲಿಲ್ಲ.
ಸಿಟ್ಟು ಮಾಡಿಕೊಳ್ಳದೆ ರಾಜ ಪ್ರಶ್ನೆ ಮಾಡಿದ.
“ಮಾಸ್ಟರ್, ನೆಲದ ದೊರೆ ದೊಡ್ಡವನೋ ಅಥವಾ ಧರ್ಮದ ದೊರೆ ದೊಡ್ಡವನೋ ?”
“ಮನುಷ್ಯ ದೊರೆಗಳಲ್ಲಿ ನಾನು ದೊಡ್ಡವನು ಮತ್ತು ಧರ್ಮದ ದೊರೆಗಳಲ್ಲೂ ನಾನೇ ದೊಡ್ಡವನು” ಮಾಸ್ಟರ್ ಉತ್ತರಿಸಿದ.
ಈ ಉತ್ತರ ಕೇಳಿ ರಾಜನಿಗೆ ಬಹಳ ಖುಷಿಯಾಯಿತು.
ಮರುದಿನ ರಾಜನ ಸೇನಾಧಿಪತಿ ಮಾಸ್ಟರ್ ನ ಭೇಟಿಗೆ ಬಂದ. ಚಾವೋ ಚೌ ಸೇನಾಧಿಪತಿಯನ್ನು ಎದ್ದು ಹೋಗಿ ಸ್ವಾಗತಿಸಿದ್ದೂ ಅಲ್ಲದೆ ಅವನಿಗೆ ಬಹಳ ಉಪಚಾರ ಮಾಡಿದ.
ಸೇನಾಧಿಪತಿ ಹೊರಟು ಹೋದ ಮೇಲೆ ಮಾಸ್ಟರ್ ನ ಸಹಾಯಕ ಚಾವೋ ಚೌ ನನ್ನು ಪ್ರಶ್ನಿಸಿದ.
“ನೀವು ರಾಜ ಬಂದಾಗ ಎದ್ದು ನಿಲ್ಲಲಿಲ್ಲ ಆದರೆ ಅವನ ಕೈಕೆಳಗಿನ ಅಧಿಕಾರಿ ಬಂದಾಗ ಎದ್ದು ಹೋಗಿ ಸ್ವಾಗತಿಸಿದಿರಿ, ಎಲ್ಲ ಆದರೋಪಚಾರ ಮಾಡಿದಿರಿ. ಯಾಕೆ ಅಂತ ಕೇಳಬಹುದೆ?”
ಮಾಸ್ಟರ್ ಉತ್ತರಿಸಿದ
“ನಿನಗೆ ಎಷ್ಟು ಅರ್ಥ ಆಗುತ್ತದೋ ಗೊತ್ತಿಲ್ಲ ಆದರೆ ಕೇಳು, ಶ್ರೇಷ್ಠ ಗುಣಮಟ್ಟದ ವ್ಯಕ್ತಿ ಬಂದಾಗ, ನಾನು ಜಾಗ ಬಿಟ್ಟು ಏಳುವುದಿಲ್ಲ. ಮಧ್ಯಮ ಗುಣಮಟ್ಟದ ವ್ಯಕ್ತಿ ಬಂದಾಗ ಎದ್ದು ನಿಂತು ಸ್ವಾಗತಿಸುತ್ತೇನೆ ಆದರೆ ಕೆಳ ಗುಣಮಟ್ಟದ ವ್ಯಕ್ತಿ ಬಂದರೆ ಬಾಗಿಲವರೆಗೆ ಹೋಗಿ ಸ್ವಾಗತಿಸುತ್ತೇನೆ”
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ