ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಮಾಧವ ಲಾಹೋರಿಗೆ ಬದುಕಿಡೀ ತಾನು ಬೇರೆ ಯಾರೋ ಆಗಲು ಯತ್ನಿಸುತ್ತಿದ್ದೆನೆಂದೂ, ನಾನು ನಾನೇ ಆಗುವಲ್ಲಿ ಸೋತಿದ್ದೇನೆಂದೂ ಅರಿವಾಯಿತು. ಈ ಅರಿವನ್ನು ಪಡೆಯಲು ನಾವೂ ಕೊನೆ ಕ್ಷಣದವರೆಗೆ ಕಾಯಬೇಕೆ? ಮಾಧೋ ಹೇಳಿಹೋದ ಪಾಠ ಸಾಲದೇ? ~ ಆನಂದಪೂರ್ಣ
ಮಾಧವ ಲಾಹೋರಿ ಮರಣಶಯ್ಯೆಯಲ್ಲಿದ್ದನು. ಹೆಚ್ಚೂಕಡಿಮೆ ಕೊನೆಯುಸಿರಿನ ಕ್ಷಣಗಣನೆ ಸಾಗಿತ್ತು. ಹೀಗಿರುವಾಗ ಮಾಧವ ಲಾಹೋರಿ ಮಣಮಣ ಎಂದು ಏನೋ ಮಂತ್ರ ಹೇಳತೊಡಗಿದ. ಕಣ್ಣೀರು ದಳದಳನೆ ಇಳಿಯತೊಡಗಿತು. ಮೈ ಅದುರತೊಡಗಿತು.
ಹಾಸಿಗೆಯ ಪಕ್ಕದಲ್ಲೆ ಕುಳಿತಿದ್ದವನೊಬ್ಬ ಲಾಹೋರಿಯ ಕೈಗಳನ್ನು ಅದುಮುತ್ತಾ “ಏನಾಯಿತು ಮಾಧೋ? ಯಾಕೆ ಕಂಪಿಸ್ತಿದ್ದೀಯ? ನಿನಗೇನು ಚಿಂತೆ?” ಎಂದು ವಿಚಾರಿಸಿದ.
ಮಾಧವ ಲಾಹೋರಿ ತನ್ನ ಮೆಲು ದನಿಯಲ್ಲೇ ಕಷ್ಟಪಟ್ಟು ಉತ್ತರಿಸಿದ; “ಹೌದು ನನಗೆ ಚಿಂತೆ ಕಾಡುತ್ತಿದೆ. ನಾನು ಸತ್ತಮೇಲೆ ಭಗವಂತನ ಬಳಿಗೆ ಹೋಗ್ತೀನಲ್ಲ, ಆಗ ಅವನಂತೂ ನನ್ನನ್ನು ನೀನು ‘ರಮಾನಂದನಂತೆ ಯಾಕೆ ಆಗಲಿಲ್ಲ?” ಅಂತ ಕೇಳೋದಿಲ್ಲ. ಹಾಗೇನಾದರೂ ಕೇಳಿದರೆ ನಾನು “ದೇವಾ! ನೀನು ನನಗೆ ರಮಾನಂದನ ಗುಣಗಳನ್ನು ಕೊಡಲಿಲ್ಲ, ಅದಕ್ಕೇ…” ಅಂತ ಹೇಳಬಹುದು. ಅವನು “ನೀನೇಕೆ ಕಬೀರನಂತೆ ಆಗಲಿಲ್ಲ?” ಅಂತಲೂ ಕೇಳೋದಿಲ್ಲ. ಹಾಗೇನಾದರೂ ಕೇಳಿದರೆ “ದೇವಾ! ನೀನು ನನಗೆ ಕಬೀರನ ಗುಣಗಳನ್ನು ಕೊಡಲಿಲ್ಲ, ಅದಕ್ಕೇ…” ಅಂದುಬಿಡಬಹುದು. ಆದರೆ ನನ್ನ ಭಯ ಏನೆಂದರೆ, ದೇವರೇನಾದರೂ “ಮಾಧವ ಲಾಹೋರಿ, ನೀನು ಮಾಧವ ಲಾಹೋರಿಯಂತೆ ಯಾಕೆ ಆಗಲಿಲ್ಲ?” ಅಂತ ಕೇಳಿದರೆ ಏನು ಹೇಳೋದು?
ಲಾಹೋರಿ ಒಂದು ಕ್ಷಣ ಮಾತು ನಿಲ್ಲಿಸಿದ. “ಭಗವಂತ ಹಾಗೇನಾದರೂ ಕೇಳಿದರೆ ಕೊಡಲು ನನ್ನಲ್ಲಿ ಯಾವ ಉತ್ತರವೂ ಇಲ್ಲ. ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ ಅಷ್ಟೆ. ಬದುಕಿಡೀ ನಾನು ರಮಾನಂದರಂತೆ ಆಗಲು, ಕಬೀರನಂತೆ ಆಗಲು ಯತ್ನಿಸುತ್ತಿದ್ದೆ. ನನಗೆ ಮಾಧವ ಲಾಹೋರಿಯೇ ಆಗುವ ಗುಣಗಳನ್ನು ಕೊಡಲ್ಪಟ್ಟಿದೆ, ನಾನು ಮಾಧವ ಲಾಹೋರಿಯೇ ಆಗಬೇಕು ಅನ್ನುವುದನ್ನು ಮರೆತುಹೋದೆ. ನಾನು ನಾನಾಗದೇ ಉಳಿದೆ. ಭಗವಂತನ ಪ್ರಶ್ನೆಗೆ ನಾನು ಏನಂತ ಉತ್ತರಿಸಲಿ?”
ಮಾಧವ ಲಾಹೋರಿಯ ಪ್ರಶ್ನೆಯೇ ತನ್ನ ಅನುಯಾಯಿಗಳಿಗೆ ನೀಡಿದ ಕೊನೆಯ ಪಾಠವಾಯಿತು.