ಕೆಂಪು ಜುಟ್ಟಿನ ಹುಂಜ ಮತ್ತು ಅನಾಥ ಅಣ್ಣ ತಂಗಿ : ಒಂದು ರಷ್ಯನ್ ಕಥೆ

ಆಮೇಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ವರಿಬ್ಬರಿದ್ದರು; ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನ ಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.

ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ ಹಾಗೇ ಮಾಡಿದ.

ಮಾರನೆ ದಿನ ಬಾಗಿಲು ತೆರೆದಾಗ ನೋಡುವುದೇನು? ಅಂವ ಬಿತ್ತಿದ ಗೋಧಿಕಾಳು ಮುಗಿಲು ಮೀರಿ ಬೆಳೆದಿತ್ತು. ಅಂಗಳ ತುಂಬ ಹರಡಿತ್ತು ಅದರ ದಪ್ಪ ಕಾಂಡ. ಹುಡುಗನಿಗೆ ಕುತೂಹಲ ತಡೆಯದೆ ಸರಸರನೆ ಕಾಂಡವೇರುತ್ತ ಹೋದ. ಹೋಗುತ್ತ ಹೋಗುತ್ತ ಮೋಡಗಳನ್ನೂ ದಾಟಿ, ಆಕಾಶದ ನೀಲಿಯನ್ನೂ ದಾಟಿ…. ಗೋಧಿ ಗಿಡದ ತುದಿ ಮುಗಿಯುವಲ್ಲಿ ಒಂದು ಮನೆಯ ಎದುರು ಬಂದು ನಿಂತ.

ಆ ಮನೆಯೊಳಗಿಂದ ಘಮಘಮ ವಾಸನೆ…. ಹುಡುಗ ಹೋಗಿ ನೋಡುತ್ತಾನೆ…. ಒಂದು ಮಾಟಾಗಾತಿ ಮುದುಕಿ ಬೀಸೇಕಲ್ಲು ಬೀಸುತ್ತ ಕುಳಿತಿದೆ. ಅದರಿಂದ ದಂಡಿಯಾಗಿ ದೋಸೆಗಳು, ಕಡಬುಗಳು, ಹೋಳಿಗೆ, ಚಕ್ಕುಲಿ, ಕೋಡುಬಳೆ…

ಆಹ್! ಸೊರಸೊರನೆ ಬಾಯಲ್ಲಿ ನೀರೂರಿತು ಹುಡುಗನಿಗೆ!!

ಹಾಗೇ ನೋಡುತ್ತ ನಿಂತವನಿಗೆ ಮುದುಕಿಯ ಎಡಗಣ್ಣು ಕುರುಡು ಅಂತ ಗೊತ್ತಾಯಿತು. ಅದಕ್ಕೇ, ಕಳ್ಳಬೆಕ್ಕಿನ ಹಾಗೆ ಹೆಜ್ಜೆಯಿಡುತ್ತ ಎಡಬದಿಯಿಂದಲೇ ಮೆಲ್ಲನೆ ನುಸುಳಿ ಅಂಗಿಯನ್ನ ಕೊಟ್ಟೆಯ ಹಾಗೆ ಮಾಡಿಕೊಂಡು ಕೈಲಾದಷ್ಟು ತಿಂಡಿಯನ್ನು ಬಾಚಿಬಾಚಿ ತುಂಬಿಕೊಂಡ. ಮತ್ತೆ ಸರಸರನೆ ಕಾಂಡ ಇಳಿದು ಮನೆ ಸೇರಿದ.

ಅಣ್ಣ ತಂಗಿ ಹೊಟ್ಟೆ ತುಂಬ ತಿಂಡಿಗಳನ್ನು ತಿಂದರು. ಕೆಂಪುಜುಟ್ಟಿನ ಹುಂಜವೂ ಕೊಕ್ಕೊಕ್ಕೋ ಅನ್ನುತ್ತ ಕುಕ್ಕಿ ಕುಕ್ಕಿ ತಿಂದಿತು.

ಮತ್ತೆ ಮಾರನೇ ದಿನವೂ ಹುಡುಗ ಕಾಂಡವೇರಿ ಮಾಟಾಗಾತಿಯ ಮನೆಯಿಂದ ತಿಂಡಿ ಹೊತ್ತು ತಂದ. ಹೀಗೇ ನಾಲ್ಕೈದು ದಿನ ಸಾಗಿತು.

ಅದೊಂದು ದಿನ ಒಕ್ಕಣ್ಣಿನ ಮಾಟಗಾತಿ ತನ್ನ ಕುರುಡನ್ನ ಎಡದಿಂದ ಬಲಗಣ್ಣಿಗೆ ಬದಲಿಸಿಕೊಂಡು ಕುಂತಿತ್ತು. ದಿನದಿನವೂ ತಾನು ಬೀಸಿ ಪಡೆದ ತಿಂಡಿಯಲ್ಲಿ ಕಡಿಮೆಯಾಗ್ತಿದೆಯಲ್ಲ ಅಂತ ಅದಕ್ಕೆ ಅನುಮಾನ. ಎಂದಿನಂತೆ ತಿಂಡಿ ಕದಿಯಲು ಹೋದ ಹುಡುಗ ಸಿಕ್ಕಿಬಿದ್ದ!

ಕಟಕಟ ಹಲ್ಲುಕಡಿಯುತ್ತ ಮಾಟಗಾತಿ “ಹುಡುಗಾ! ನೀನೇಯೋ ಇಷ್ಟು ದಿನದಿಂದ ನನ್ನ ತಿಂಡಿಯನ್ನ ಕದೀತಿದ್ದಿದ್ದು? ತಡಿ! ನಿಂಗೆ ತಕ್ಕ ಶಾಸ್ತಿ ಮಾಡ್ತೀನಿ!!” ಅಂತ ಕೂಗಾಡಿತು. ಹಂಡೆಯ ನೀರು ಕಾಯಿಸಲಿಕ್ಕೆ ಹುಡುಗನ್ನೇ ಕಟ್ಟಿಗೆ ಹಾಗೆ ಉರಿಸ್ತೀನಿ ಅಂದುಕೊಂಡಿತು ಮುದುಕಿ. ಸೀದಾ ನೀರೊಲೆ ಹತ್ತಿರ ಕರಕೊಂಡು ಹೋಗಿ ಒಲೆಯೊಳಗೆ ತೂರಲು ಹೇಳಿತು. ಇಷ್ಟೆಲ್ಲ ಅದರೂ ನಮ್ಮ ಹುಡುಗ ಸ್ವಲ್ಪವೂ ಹೆದರಲಿಲ್ಲ. ಒಲೆ ಹತ್ತಿರ ಹೋಗಿ ತಾನು ಅದರಲ್ಲಿ ಹಿಡಿಸೋಲ್ಲ ಅಂತ ನಾಟಕವಾಡಿದ. ಮುದುಕಿ ರೇಗಿ, ಮೈ ಮಡಚಿ ತೂರಿಕೋ ಹುಡುಗಾ ಅಂತು. ಊಹೂಂ. ನಮ್ಮ ಹುಡುಗನ ನಾಟಕವೋ ನಾಟಕ! ಕೊನೆಗೆ, “ನೀನೇ ತೋರಿಸು ಮುದುಕೀ, ಹೇಗೆ ತೂರಬೇಕು ಅಂತ?” ಅಂದ. ಸರಿ. ಮುದುಕಿ ಒಲೆಯೊಳಗೆ ತೂರಿಕೊಂಡಳು. ಹುಡುಗ ಅದೇ ಸಮಯ ಅನ್ನುತ್ತ, ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಮಾಟಗಾತಿಯನ್ನ ಸುಟುಬಿಟ್ಟ. ಆಮೇಲೆ ಸೀದಾ ಮಾಯದ ಬೀಸೇಕಲ್ಲನ್ನ ಹಿಡಿದು ಗೋಧಿ ಗಿಡ ಇಳಿದು ಮನೆ ಸೇರಿದ. ಆಮೇಲೆ ಅಣ್ಣ ತಂಗಿ ಸೇರಿ ಗಿಡದ ಕಾಂಡ ಕತ್ತರಿಸಿ ಹಾಕಿದರು!

ಆಮೇಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!

rooster

ಆ ಊರಲ್ಲೊಬ್ಬ ದುಷ್ಟ ರಾಜ. ಅವನಿಗೆ ಅಣ್ಣ ತಂಗಿಯರ ಹತ್ತಿರ ಮಾಯದ ಬೀಸೇಕಲ್ಲಿರುವ ಸಂಗತಿ ತಿಳಿಯಿತು. ಆ ಮಕ್ಕಳಿಂದ ಅವನು ಅದನ್ನ ಕಿತ್ತುಕೊಳ್ಳಲು ಉಪಾಯ ಮಾಡಿದ. ಬೀಸೇಕಲ್ಲನ್ನು ನೋಡಿಕೊಡುವುದಾಗಿ ಅದನ್ನ ತೆಗೆದುಕೊಂಡು ಬೇರೆಯದೇ ಒಂದನ್ನ ಕಳಿಸಿಕೊಟ್ಟ.

ಎಂದಿನಂತೆ ಮಕ್ಕಳು ತಿಂಡಿಗಾಗಿ ಕಲ್ಲು ಬೀಸುತ್ತಾರೆ, ಅಲ್ಲೇನಿದೆ!? ಧೂರ್ತ ರಾಜ ನ್ಯಾಯ ಕೇಳಲು ಬಂದ ಅಣ್ಣ ತಂಗಿಯನ್ನ ಗಡೀಪಾರು ಮಾಡಿಬಿಟ್ಟ.

ಸರಿ… ನಮ್ಮ ಕೆಂಪುಜುಟ್ಟಿನ ಹುಂಜ ಈಗ ಬೀದಿಗೆ ಬಂತು. ಬಂದು ಬೇಲಿಗಳ ಮೇಲೆ ನಿಂತು ಜೋರಾಗಿ ಕೂಗತೊಡಗಿತು. “ಕೊಕ್ಕೊಕ್ಕೋ ಕೊಕ್ಕೊಕ್ಕೋ… ಈ ದುಷ್ಟ ರಾಜ ಪಾಪದ ಬಡ ಮಕ್ಕಳಿಗೆ ಮೋಸ ಮಾಡಿ ಅವರ ಬೀಸೇಕಲ್ಲು ಕಿತ್ತುಕೊಂಡಿದ್ದಾನೆ…ಅಲ್ಲಿ ಆ ಪಾಪದ ಮಕ್ಕಳು ಉಪವಸವಿದ್ದರೆ, ಇವನಿಲ್ಲಿ ಬಗೆಬಗೆಯ ಭಕ್ಷ್ಯ ತಿನ್ನುತ್ತಿದ್ದಾನೆ! ನಾಚಿಕೆಗೇಡು, ನಾಚಿಕೆಗೇಡು!!”

ಕೆಂಪು ಜುಟ್ಟಿನ ಹುಂಜದ ಕೂಗು ಕೇಳಿ ಜನರು ಆಶ್ಚರ್ಯಪಟ್ಟರು. ಗುಸುಗುಸು ಮಾಡುತ್ತ ಹುಂಜದ ಬಳಿ ಹೋಗಿ ಏನು ಎತ್ತ ತಿಳಿದುಕೊಂಡರು.

ಹೀಗೆ ಕೆಂಪುಜುಟ್ಟಿನ ಹುಂಜ ಗಲ್ಲಿ ಗಲ್ಲಿಯಲ್ಲಿ ಕೊಕ್ಕೊಕ್ಕೋ ಅನ್ನುತ್ತ ರಾಜನ ವಿರುದ್ಧ ಕೂಗುತ್ತ ಕೊನೆಗೆ ರಾಜಬೀದಿಗೂ ಬಂತು. ಅಲ್ಲಿ ರಾಣಿಯ ಅಂತಃಪುರದ ಕಿಟಕಿ ಮೇಲೆ ನಿಂತು, “ಕೊಕ್ಕೊಕ್ಕೋ… ಮಕ್ಕಳ ಕೈಯಿಂದ ಬೀಸೇಕಲ್ಲು ಕಿತ್ತುಕೊಂಡ ರಾಜನ ಹೆಂಡತಿಯೇ…” ಅನ್ನುತ್ತ ರಾಣಿಯನ್ನು ಛೇಡಿಸಿತು. ರಾಣಿಗೆ ನಾಚಿಕೆಯಾಗಿ ರಾಜನೊಟ್ಟಿಗೆ ಜಗಳವಾಡಿದಳು.

ಆ ಹೊತ್ತಿಗೆ ಜನಗಳೂ ರಾಜನ ಬಗ್ಗೆ ಮಂತ್ರಿಯ ಬಳಿ ವಿಚಾರಿಸತೊಡಗಿದ್ದರು. ಅತ್ತ ಕೆಂಪುಜುಟ್ಟಿನ ಹುಂಜ ಮಾತ್ರ ತನ್ನ ಪಾಡಿಗೆ ಕೂಗು ಮುಂದುವರಿಸಿತ್ತು.

ರೇಜಿಗೆ ಬಿದ್ದ ರಾಜ ಹುಂಜವನ್ನ ಹಿಡಿಸಿ ಸೆರೆಮನೆಗೆ ಹಾಕಿಸಿದ. ಅದು ಅಲ್ಲೂ ತನ್ನ ಕೆಲಸ ಮುಂದುವರೆಸಿತು.

ಈಗಂತೂ ರಾಜನ ತಲೆ ಕೆಟ್ಟುಹೋಯ್ತು. ಅದನ್ನ ಕೊಯ್ದು ಸಾರು ಮಾಡಿ ಬಡಿಸುವಂತೆ ಆಜ್ಞೆ ಮಾಡಿದ. ಅಡುಗೆಯವರು ಕೂಗುತ್ತಿದ್ದ ಹುಂಜವನ್ನ ಕೊಯ್ದು ಮಸಾಲೆ ಅರೆದು ಸಾರು ಮಾಡಿದರು.

ಈಗ ರಾಜನಿಗೆ ಸಂತ್ರುಪ್ತಿ. ಖುಶಿಖುಶಿಯಾಗಿ ತಾನೊಬ್ಬನೇ ಅಷ್ಟೂ ಸಾರು ಸುರಿದುಕೊಂಡು ತಿಂದುಬಿಟ್ಟ!

ಊಟ ಮಾಡಿ ಮಲಗುವ ಕೋಣೆಗೆ ಹೋದ ರಾಜನ ಹೊಟ್ಟೆಯಿಂದ ಮತ್ತೆ ಹುಂಜದ ಕೂಗು!

“ಕೊಕ್ಕೊಕ್ಕೋ! ದುಷ್ಟ ರಾಜ ಮಕ್ಕಳಿಂದ ಬೀಸೇಕಲ್ಲು ಕಿತ್ತುಕೊಂಡ. ಕೆಂಪು ಜುಟ್ಟಿನ ಹುಂಜ- ನನ್ನನ್ನು ಸೆರೆಮನೆಗೆ ತಳ್ಳಿದ. ಈಗ ಈ ದುಷ್ಟ ನನ್ನನ್ನು ಬೇಯಿಸಿ ತಿಂದಿದ್ದಾನೆ! ಅಲ್ಲಿ ಬಡ ಮಕ್ಕಳು ಉಪವಾಸ ಬಿದ್ದಿದ್ದರೆ, ಇಲ್ಲಿ ರಾಜ ತಿಂದು ತೇಗುತ್ತಿದ್ದಾನೆ!”

ಈಗಂತೂ ರಾಜನಿಗೆ ಬೊಗಸೆ ನೀರಲ್ಲಿ ಮುಳುಗಿ ಸಾಯುವಷ್ಟು ನಾಚಿಕೆಯಾಯ್ತು. ಅವನು ಹೋದಲ್ಲಿ ಬಂದಲ್ಲೆಲ್ಲ ಕೆಂಪುಜುಟ್ಟಿನ ಹುಂಜದ ಕೊಕ್ಕೊಕ್ಕೋ ನಡೆದೇ ಇತ್ತು! ಕೈಕೈ ಹಿಸುಕಿಕೊಂಡ ರಾಜ, ಅವಮಾನ ತಾಳಲಾರದೆ ತಿಂದಿದ್ದೆಲ್ಲ ಕಕ್ಕಿಕೊಂಡ. ಕೆಂಪುಜುಟ್ಟಿನ ಹುಂಜ ಇಡಿಇಡಿಯಾಗಿ ಹೊರಬಂದು ಅರಮನೆ ಬೇಲಿಯತ್ತ ಹಾರಿಹೋಯ್ತು. ಮತ್ತೆ ತನ್ನ ಕೂಗು ಮುಂದುವರೆಸಿತು.

ಈಗಂತೂ ರಾಣಿ ರಾಜನನ್ನ ತರಾಟೆಗೆ ತೆಗೆದುಕೊಂಡಳು. ಬೀಸೇಕಲ್ಲು ಕೊಟ್ಟುಬಿಡು ಅಂತ ಬುದ್ಧಿ ಹೇಳಿದಳು. ಕೊನೆಗೂ ರಾಜ ಕೆಂಪುಜುಟ್ಟಿನ ಹುಂಜದ ಕಾಟಕ್ಕೆ ಬೇಸತ್ತು ಆ ಮಕ್ಕಳನ್ನು ಕರೆಸಿದ. ಅವರ ಬೀಸೇಕಲ್ಲು ಅವರಿಗೆ ಮರಳಿಸಿದ.

ಆಮೇಲಿಂದ ಅಣ್ಣ ತಂಗಿ ದಿನವೂ ಬೀಸೆಕಲ್ಲು ಬೀಸಿ ಬೀಸಿ ರುಚಿರುಚಿಯಾದ ತಿಂಡಿಗಳನ್ನು ಪಡೆಯುತ್ತ, ಬಡವರಿಗೆಲ್ಲ ಹಂಚುತ್ತ ನೂರು ವರ್ಷ ಸುಖವಾಗಿದ್ದರು.

ಕೆಂಪುಜುಟ್ಟಿನ ಹುಂಜವೂ ರಾಜನ ಪ್ರಾರ್ಥನೆಗೆ ಒಪ್ಪಿ ಮುಂದೆ ಯಾವತ್ತೂ ಅವನ ವಿರುದ್ಧ ಕೂಗಲಿಲ್ಲ. ತಾನೂ ತಿಂಡಿಯಲ್ಲಿ ಪಾಲು ಪಡೆದು ಅಣ್ಣ ತಂಗಿಯರೊಟ್ಟಿಗೆ ಸುಖವಾಗಿ ಇದ್ದುಬಿಟ್ಟಿತು!

 

2 Comments

  1. ಕೆಂಪು ಹುಂಜದಂತೆ ನಮ್ಮ ಅಂತರಾತ್ಮನೂ ನಾವುಗಳು ತಪ್ಪು ಮಾಡಿದಾಗ ಕೂಗಿ ,ಕೂಗಿ ಹೇಳ್ತಾ ಇರುತ್ತದೆ. ನಾವು ಕೇಳುವ ಮನಸು ಮಾಡಬೇಕು ಅಷ್ಟೇ .

Leave a Reply