ಮನೆಗಳ ಕುರಿತು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 9

‘ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.

ಮೇಲೆ
ಮನೆಗಳನ್ನು ಕಟ್ಟುವ ಗಾರೆ ಕೆಲಸದವನೊಬ್ಬ
ಮನೆಗಳ ವಿಶೇಷತೆಯ ಬಗ್ಗೆ
ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡತೊಡಗಿದ.

ಶಹರಗಳಲ್ಲಿ ಮನೆಗಳನ್ನು ಕಟ್ಟುವ ಮೊದಲು
ನಿನ್ನ ಕಲ್ಪನೆಗಳಿಗೊಂದಿಷ್ಟು ಸಾಣೆ ಹಿಡಿದು
ಉದ್ವಿಗ್ನತೆಗೊಂದು
ನೆರಳಿನ ಗೂಡು ಕಟ್ಟಿ ಕೊಡಿ.

ಪ್ರತೀ ಮುಸ್ಸಂಜೆ ನೀನು ಮನೆಗೆ ಮರಳುವಂತೆ
ನಿನ್ನೊಳಗಿನ ಅಲೆಮಾರಿ, ಏಕಾಂಗಿ,
ನಿನ್ನೊಳಗಿದ್ದೂ ನಿನ್ನಿಂದ ದೂರ ನಿಂತಿರುವವನೂ
ಮರಳುತ್ತಾನೆ ಮರಳಿ ತನ್ನ ಗೂಡಿಗೆ.

ನಿನ್ನ ಮನೆ, ನಿನ್ನ ದೇಹದ ವಿಸ್ತರಣೆಯಂತೆ

ಸೂರ್ಯನ ಜೊತೆಗೆ ಬೆಳೆಯುತ್ತದೆ
ರಾತ್ರಿಯ ನಿಶಾಂತದಲ್ಲಿ ಹಾಯಾಗುತ್ತದೆ,
ಕನಸು ಕಾಣುತ್ತದೆ.
ಹೌದು, ಮನೆಗೂ ಕನಸುಗಳಿವೆ
ಇವೇ ಕನಸುಗಳಲ್ಲಿ ಅಲ್ಲವೆ
ಮನೆ, ಊರ ತೊರೆದು ಎತ್ತರದ ಬೆಟ್ಟಗಳೆಡೆ
ಆಳದ ಕಣಿವೆಗಳತ್ತ ಹೆಜ್ಜೆ ಹಾಕುವುದು ?

ನಿಮ್ಮ ಮನೆಗಳನ್ನು
ನಾನು ಮುಷ್ಟಿಯಲ್ಲಿ ತುಂಬಿಕೊಳ್ಳುವಂತಿದ್ದರೆ
ತೂರಿಬಿಡುತ್ತಿದ್ದೆ ಅವನ್ನೆಲ್ಲ
ಕಾಡಿನಲ್ಲಿ, ಹುಲ್ಲುಗಾವಲಿನ ಮೇಲೆ
ಪಕ್ಕಾ ರೈತನಂತೆ.

ಕಣಿವೆಗಳು ನಿಮ್ಮ ರಸ್ತೆಗಳಾಗಿದ್ದಲ್ಲಿ,
ನಿಮ್ಮ ಮನೆಯ ಕಾಲುದಾರಿ
ಹಸಿರಿನ ಹಾಸಿನ ಮೂಲಕ ಹಾಯ್ದು ಹೋಗುವಂತಾಗಿದ್ದರೆ,
ದ್ರಾಕ್ಷಿತೋಟದ ಅಂಚಿನಲ್ಲಿ
ಸಂಧಿಸುತ್ತಿದ್ದಿರಿ ನೀವು ಒಬ್ಬರನ್ನೊಬ್ಬರು.
ಮಣ್ಣಿನ ಗಂಧ ನಿಮ್ಮ ಬಟ್ಟೆಗಳಲ್ಲಿ ಧರಿಸಿಕೊಂಡು
ಪರಿಮಳವಾಗುತ್ತಿದ್ದಿರಿ.

ಹೀಗಾಗಲು ಇನ್ನೂ ಸಮಯವಿದೆ.

ಯಾವದೋ ಹೆದರಿಕೆಯಲ್ಲಿ
ನಿಮ್ಮ ಹಿರಿಯರು
ಕಟ್ಟಿಬಿಟ್ಟಿದ್ದಾರೆ ನಿಮ್ಮ ಮನೆಗಳನ್ನೆಲ್ಲ ಒಟ್ಟೊಟ್ಟಾಗಿ.

ಇನ್ನೂ ಕೆಲ ಸಮಯ
ಆ ಭಯ ಹಾಗೇ ಮುಂದುವರೆಯಲಿದೆ.

ಇನ್ನೂ ಕೆಲ ಸಮಯ
ನಿಮ್ಮ ಊರಿನ ಗೋಡೆ ನಿಮ್ಮನ್ನು
ನಿಮ್ಮ ಹೊಲಗಳಿಂದ ದೂರ ಇಡಲಿದೆ.

ಆರ್ಫಲೀಸ್ ನ ಮಹಾಜನರೆ
ದಯವಿಟ್ಟು ಹೇಳಿ

ಏನಿದೆ ನಿಮ್ಮ ಈ ಮನೆಗಳಲ್ಲಿ?
ಮುಚ್ಚಿದ ಬಾಗಿಲುಗಳ ಹಿಂದೆ
ಏನನ್ನು ಕಾಯುತ್ತಿರುವಿರಿ ಕಣ್ಣಲ್ಲಿ ಕಣ್ಣಿಟ್ಟು ?

ಸಮಾಧಾನವಿದೆಯೆ?
ನಿಮ್ಮ ಸಾಮರ್ಥ್ಯವನ್ನು ತಣ್ಣಗೆ
ಕಣ್ಣಲ್ಲಿ ಹೇಳಬಲ್ಲ ಸಮಾಧಾನವಿದೆಯೆ?

ನೆನಪುಗಳಿವೆಯೆ?
ಮನಸ್ಸಿನ ತುದಿಗಳನ್ನು
ಮೌನವಾಗಿ ಬೆಸೆಯವ ಕಮಾನಿನಂತಿರುವ
ನೆನಪುಗಳಿವೆಯೆ?

ಚೆಲುವು ಇದೆಯೆ?
ಕಲ್ಲು ಕಟ್ಟಿಗೆಗಳ ಕಟ್ಟಡದಿಂದ
ಪವಿತ್ರ ಶಿಖರದ ತುದಿಯವರೆಗೆ
ನಿಮ್ಮ ಮನಸ್ಸನ್ನು ಎಳೆದುಕೊಂಡು ಹೋಗಿಬಿಡಬಲ್ಲ
ಚೆಲುವು ಇದೆಯೆ?

ಹೇಳಿ, ಇವೆಯೆ ಇವೆಲ್ಲ ನಿಮ್ಮ ಮನೆಗಳಲ್ಲಿ?

ಅಥವಾ
ಕೇವಲ ಸೌಕರ್ಯಗಳಿವೆಯೆ?
ಹಿಂದಿನ ಬಾಗಿಲಿನಿಂದ ತೂರಿಕೊಂಡು,
ಅತಿಥಿಯಾಗಿ, ಅತಿಥೇಯನಾಗಿ
ಆಮೇಲೆ ಮಾಲಿಕನೇ ಆಗುವ
ಸುಖದ ಲಾಲಸೆಯಿದೆಯೆ?

ಹೌದು,
ದಿನಕಳೆದಂತೆ ಈ ಸುಖಗಳು,
ತನ್ನ ಅಂಕುಶದಿಂದ ತಿವಿಯುತ್ತ ಪಳಗಿಸುವ
ಮಾವುತನಂತೆ
ನಿಮ್ಮ ಮಹತ್ತರ ಉದ್ದೇಶಗಳನ್ನು ಕೈವಶ ಮಾಡಿಕೊಂಡು
ಗೊಂಬೆಯಂತೆ ಆಡಿಸುತ್ತವೆ.

ಇವುಗಳ ಕೈ
ರೇಷ್ಮೆಯಂತೆ ನುಣುಪಾದರೂ
ಮನಸ್ಸು ಮಾತ್ರ ಕಬ್ಬಿಣದಂತೆ ಕಠೋರ.

ನಿಮ್ಮ ದೇಹದ ಘನತೆಯನ್ನು
ಗೇಲಿ ಮಾಡಲೆಂದೇ
ನಿಮ್ಮ ಹಾಸಿಗೆ ಬಳಿ ನಿಂತು
ನಿಮ್ಮನ್ನು ಲಾಲಿ ಹಾಡಿ ಮಲಗಿಸುತ್ತದೆ.

ನಿಮ್ಮ ಆಳ ಪ್ರಜ್ಞೆಯನ್ನೂ , ನಂಬಿಕೆಗಳನ್ನೂ ಅಣಕಿಸುತ್ತಲೇ
ಒಡೆದ ಗಾಜಿನ ಪಾತ್ರೆಗಳನ್ನು ಬಿಸಾಕುವಂತೆ ಬಿಸಾಕುತ್ತದೆ.

ನಿಜ, ಈ ಸುಖದ ಬಯಕೆ
ನಿಮ್ಮ ಆತ್ಮದ ಉತ್ಕಟತೆಯನ್ನು ಖೂನಿ ಮಾಡಿ
ಶವಯಾತ್ರೆಯಲ್ಲಿ ಎಲ್ಲರಿಗಿಂತ ಮುಂದೆ
ಜೋರಾಗಿ ತಮಾಷೆ ಮಾಡುತ್ತಾ ಗದ್ದಲ ಹಾಕುತ್ತದೆ.

ಆದರೆ ನೀವು, ಆಕಾಶದ ಮಕ್ಕಳು
ವಿಶ್ರಾಂತಿಯಲ್ಲೂ ಅಶಾಂತಿಯನ್ನು ಧರಿಸಿದವರು
ಈ ಬಲೆಗೆ ಬೀಳದಿರಿ, ಈ ಹತೋಟಿಗೆ ಸಿಗದಿರಿ.

ಮನೆ, ನಿಮ್ಮ ನೌಕೆಯನ್ನು ತಡೆದು ನಿಲ್ಲಿಸುವ ಲಂಗರಾಗದೇ
ದಿಕ್ಕು ತೋರಿಸುತ್ತ ಮುನ್ನಡೆಸುವ ಚುಕ್ಕಾಣಿಯಾಗಲಿ

ಮನೆ, ನಿಮ್ಮ ಗಾಯಗಳನ್ನು ಮರೆಮಾಚುವ ಪಟ್ಟಿಯಾಗದೆ
ದೃಷ್ಟಿಯನ್ನು ಕಾಪಾಡುವ ಕಣ್ಣೆವೆಯಾಗಲಿ.

ಬಾಗಿಲು ದಾಟಬೇಕೆಂದು ರೆಕ್ಕೆ ಮಡಚದಿರಿ,
ಸೂರು ತಾಕೀತೆಂದು ತಲೆ ಬಗ್ಗಿಸದಿರಿ,
ಗೋಡೆ ಬಿರುಕು ಬಿಡಬಹುದು
ಬಿದ್ದು ಹೋಗಬಹುದೆಂದು
ಉಸಿರಾಡುವುದನ್ನು ನಿಲ್ಲಿಸದಿರಿ.

ಸತ್ತವರು ಇದ್ದವರಿಗಾಗಿ ಕಟ್ಟಿದ ಗೋರಿಗಳಲ್ಲಿ
ನೀವು ವಾಸಿಸುವುದು ಬೇಡ.

ನಿಮ್ಮ ಮನೆ
ಎಷ್ಟೇ ಭವ್ಯವಾಗಿದ್ದರೂ
ಎಷ್ಟೇ ಅದ್ಭುತವಾಗಿದ್ದರೂ
ನಿಮ್ಮ ರಹಸ್ಯಗಳನ್ನು ಕಾಪಾಡಲಾರದು
ನಿಮ್ಮ ತುಡಿತಗಳಿಗೆ ನೆರಳು ನೀಡಲಾರದು.

ನಿಮ್ಮೊಳಗಿರುವ ಅಪಾರ ವಾಸಮಾಡುವುದು
ಆಕಾಶದ ಮಹಲಿನಲ್ಲಿ ಮಾತ್ರ
ಮುಂಜಾನೆಯ ಇಬ್ಬನಿಯೇ ಅದರ ಬಾಗಿಲು
ರಾತ್ರಿಯ ಹಾಡುಗಳು ಮತ್ತು ನೀರವವೇ
ಅದರ ಕಿಟಕಿಗಳು.

ಮುಂದುವರೆಯುತ್ತದೆ……….

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply