“ಅತಿಯಾದ ಪರಿಚಯವು ಅವಜ್ಞೆಗೆ ಕಾರಣವಾಗುತ್ತದೆ. ಹೆಚ್ಚು ಬಳಕೆಯಲ್ಲಿರುವ ವಸ್ತುವಿನ ಬೆಲೆ ತಿಳಿಯದೆ ಅನಾದರದಿಂದ ನಡೆಸಿಕೊಳ್ಳುತ್ತೇವೆ” ಅನ್ನುತ್ತದೆ ಒಂದು ಸುಭಾಷಿತ.
ಅತಿ ಪರಿಚಯಾದವಜ್ಞಾ ಸಂತತ ಗಮನಾದನಾದರೋ ಭವತಿ|
ಮಲಯೇ ಛಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನ ಕುರುತೇ||
ಪರಿಚಯವು ಅತಿಯಾದರೆ ಅನಾದರಣೆಯುಂಟಾಗುತ್ತದೆ. ಯಾವಾಗಲೂ ಸಂಪರ್ಕದಲ್ಲಿರುವುದರಿಂದ ಸಲುಗೆ ಹೆಚ್ಚಾಗಿ ಅಪರೂಪದ ಆದರವಿರುವುದಿಲ್ಲ. ಹೇಗೆಂದರೆ; ಯಾವಾಗಲೂ ಶ್ರೀಗಂಧದ ಮರಗಳಡಿಯಲ್ಲೇ ವಾಸಮಾಡುವ ಮಲಯ ಪರ್ವತದಲ್ಲಿ ಹಾಗೂ ಗುಡ್ಡಗಾಡುಗಳಲ್ಲಿ ವಾಸಿಸುವ ಜನರಿಗೆ ಅದರ ಬೆಲೆಯೇ ತಿಳಿದಿರುವುದಿಲ್ಲ. ಅವರು ಶ್ರೀಗಂಧದ ಮರವನ್ನೂ ಸೌದೆಯಾಗಿ, ಉರುವಲಾಗಿ ಬಳಸುತ್ತಾರೆ.
ಹಾಗೆಯೇ ಕೆಲವರು ಸಾಧಕರ, ಮಹಾತ್ಮರ ಸಾನ್ನಿಧ್ಯದಲ್ಲೂ ಯಾವಾಗಲೂ ಇರುವ ಜನರಿಗೆ ಅವರ ಮಹತ್ವ ತಿಳಿದಿರುವುದಿಲ್ಲ. ಅವರು ಅಂಥವರನ್ನು ಸಾಧಾರಣವಾಗಿ. ಕೆಲವೊಮ್ಮೆ ಅವಜ್ಞೆಯ ಕಾರಣದಿಂದ ಅಗೌರವವಾಗಿಯೂ ನಡೆಸಿಕೊಳ್ಳುವುದುಂಟು. ಇದು ವಿಫುಲತೆಯ ದೋಷವೇ ಹೊರತು ಮತ್ತೇನಲ್ಲ. ಅಂಥವರನ್ನು ಬೈದುಕೊಳ್ಳುವ ಬದಲು, ಒಂದೋ ತಿಳಿಹೇಳಿ ಸರಿಪಡಿಸಬೇಕು, ಇಲ್ಲವೇ ಉಪೇಕ್ಷೆ ಮಾಡಿ ಸುಮ್ಮನಿದ್ದುಬಿಡಬೇಕು.