ವಿದ್ಯುತ್ ಇದೆಯೆಂದಾದಾಗ ಯಾವುದೇ ಉಪಕರಣವು ಚಾಲಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಉಪಕರಣ ಯಾವುದೇ ಆಗಿದ್ದರೂ ಅದು ಸಕ್ರಿಯಗೊಳ್ಳುತ್ತದೆ. ಹಾಗೆಯೇ ಚೇತನದ ಉಪಸ್ಥಿತಿಯಲ್ಲಿ ಯಾವುದೇ ಬಗೆಯ ದೇಹವಾದರೂ ಸಜೀವಗೊಂಡು ಚಲನಶೀಲವಾಗುತ್ತದೆ. ವಿದ್ಯುತ್ತಿನ ಅಸ್ತಿತ್ವ ಪ್ರಕಟಗೊಳ್ಳಲು ಏನಾದರೊಂದು ಉಪಕರಣ ಬೇಕಿರುವಂತೆಯೇ ಚೇತನ ಪ್ರಕಟಗೊಳ್ಳಲು ದೇಹದ ಇರುವಿಕೆ ಅಗತ್ಯವಾಗುತ್ತದೆ ~ Whosoever JI
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/08/07/whosoever-10/
ದೇಹವು ಜಡ ವಸ್ತು. ಅದನ್ನು ಸಕ್ರಿಯಗೊಳಿಸವುದು ಚೇತನ. ಚೇತನವು ದೇಹದಲ್ಲಿ ಪ್ರವಹಿಸತೊಡಗಿದಾಗ ಅದು ಸಚೇತನಗೊಳ್ಳುವುದು. ಕಣ್ಣುಗಳು ಮೃತ ದೇಹದಲ್ಲೂ ಇರುತ್ತವೆ. ಆದರೆ ಮೃತ ದೇಹವು ನೋಡಬಲ್ಲದೇನು? ಅದು ಚೇತನದ ಉಪಸ್ಥಿತಿಯಲ್ಲಿ ಮಾತ್ರ ಸಾಧ್ಯವಾಗುವಂಥದ್ದು. ಚೇತನದ ಉಪಸ್ಥಿತಿಯಲ್ಲಿ ದೇಹದ ಮೆಕಾನಿಸಮ್ – ತಂತ್ರವು ಸಕ್ರಿಯವಾಗುತ್ತದೆ. ಯಾವುದೇ ಮೆಕಾನಿಸಮ್, ಯಾವುದೇ ತಂತ್ರವು ಸಕ್ರಿಯಗೊಳ್ಳಲು ವಿದ್ಯುಚ್ಛಕ್ತಿಯ ಅವಶ್ಯಕತೆ ಇರುತ್ತದೆ. ಹೇಗೆ ವಿದ್ಯುತ್ತಿನ ಚಾಲಕ ಶಕ್ತಿ ಇಲ್ಲದೆ ಎಲೆಕ್ಟ್ರಾನಿಕ್ ವಸ್ತುವು ಜಡವಾಗುತ್ತದೆಯೋ ಹಾಗೆಯೇ ಚೇತನವಿಲ್ಲದ ದೇಹವೂ ಜಡವೇ. ಈ ದೇಹವು ಚೇತನವು ಪ್ರಕಟಗೊಳ್ಳುವ, ಕಾರ್ಯನಿರ್ವಹಿಸುವ ಒಂದು ಮಾಧ್ಯಮವಾಗಿದೆ, ವ್ಯವಸ್ಥಾ ತಂತ್ರವಾಗಿದೆ.
ಕಂಪ್ಯೂಟರನ್ನೇ ನೋಡಿ…. ಅಲ್ಲಿ ಎಲ್ಲವೂ ಮೊದಲೇ ನಿಯುಕ್ತವಾಗಿರುತ್ತದೆ. ಯಾವ ಕಂಪ್ಯೂಟರಿನಲ್ಲಿ ಯಾವ ಬಗೆಯ ಇನ್‍ಪುಟ್ ಇರುತ್ತದೆಯೋ ಅದರ ಔಟ್‍ಪುಟ್ ಕೂಡ ಹಾಗೆಯೇ ಇರುತ್ತದೆ. ಅದರದರ ಸಾಫ್ಟ್’ವೇರಿನ ಅನುಸಾರವಾಗಿ ಆಯಾ ಕಂಪ್ಯೂಟರ್ ಕೆಲಸ ಮಾಡುತ್ತದೆ.
ಮನುಷ್ಯನ ಮೆದುಳು ಹಾರ್ಡ್‍ವೇರ್’ನಂತೆ. ವ್ಯಕ್ತಿಯು ತನ್ನೊಳಗೆ ಇಂಜಿನಿಯರಿಂಗಿನ ಸಾಫ್ಟ್’ವೇರ್ ವಿಕಾಸಪಡಿಸಿಕೊಂಡಿದ್ದರೆ, ಮತ್ತೊಬ್ಬ ಡಾಕ್ಟರ್, ಮತ್ತೊಬ್ಬರು ಲಾಯರ್ ಹಾಗೇ ಇನ್ಯಾರೋ ಪ್ರೊಫೆಸರಿಕೆಯ ಸಾಫ್ಟ್’ವೇರ್ ವಿಕಾಸ ಪಡಿಸಿಕೊಂಡಿರುವರು. ಆ ಮೊದಲೇ ಯಾರು ಏನನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೋ ಅದರಿಂದ ಅದು ಮಾತ್ರವೇ ಹೊರಹೊಮ್ಮುವುದು.
ಮಗು ಹುಟ್ಟುವಾಗ ಹಾರ್ಡ್‍ವೇರಿನ ಜೊತೆ ಹುಟ್ಟುತ್ತದೆ. ಮುಂದೆ ಅದು ಶಿಕ್ಷಣ ಪಡೆದು ಸಾಫ್ಟ್’ವೇರ್ ನ ಕೆಲಸ ಮಾಡಲಾರಂಭಿಸುತ್ತದೆ. ಮಕ್ಕಳಿಗೆ ಯಾವ ಬಗೆಯ ಸಂಸ್ಕಾರ ಲಭಿಸುತ್ತದೆಯೋ ಅದರಂತೆಯೇ ಅದರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯಾವುದೇ ಸಂಗತಿಯು ಗಂಡಸಿಗೆ ತೋರುವ ಹಾಗೆ ಹೆಣ್ಣಿಗೆ ತೋರುವುದಿಲ್ಲ. ಏಕೆಂದರೆ ಪುರುಷ ಬುದ್ಧಿ ಮತ್ತು ಸ್ತ್ರೀ ಬುದ್ಧಿಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿರುತ್ತದೆ. ಪುರುಷರದ್ದು ಬುದ್ಧಿಪ್ರಧಾನ ದೃಷ್ಟಿಕೋನವಾದರೆ, ಸ್ತ್ರೀಯರದ್ದು ಹೃದಯಪ್ರಧಾನ ದೃಷ್ಟಿಕೋನ. ಈ ಭಿನ್ನತೆಯೇ ಈ ಇಬ್ಬರ ನಡುವಿನ ಆಕರ್ಷಣೆಗೆ ಕಾರಣವೂ ಆಗಿರುತ್ತದೆ.
ಈಗ ಮೂಲ ವಿಷಯಕ್ಕೆ ಮರಳೋಣ. ವಿದ್ಯುತ್ ಇದೆಯೆಂದಾದಾಗ ಯಾವುದೇ ಉಪಕರಣವು ಚಾಲಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಉಪಕರಣ ಯಾವುದೇ ಆಗಿದ್ದರೂ ಅದು ಸಕ್ರಿಯಗೊಳ್ಳುತ್ತದೆ. ಹಾಗೆಯೇ ಚೇತನದ ಉಪಸ್ಥಿತಿಯಲ್ಲಿ ಯಾವುದೇ ಬಗೆಯ ದೇಹವಾದರೂ ಸಜೀವಗೊಂಡು ಚಲನಶೀಲವಾಗುತ್ತದೆ. ವಿದ್ಯುತ್ತಿನ ಅಸ್ತಿತ್ವ ಪ್ರಕಟಗೊಳ್ಳಲು ಏನಾದರೊಂದು ಉಪಕರಣ ಬೇಕಿರುವಂತೆಯೇ ಚೇತನ ಪ್ರಕಟಗೊಳ್ಳಲು ದೇಹದ ಇರುವಿಕೆ ಅಗತ್ಯವಾಗುತ್ತದೆ. ಆದರೆ ಇಲ್ಲಿ ವ್ಯತ್ಯಾಸವಿಷ್ಟೇ. ವಿದ್ಯುತ್ ಒಂದು ನಿರ್ದಿಷ್ಟ ಜಾಲದ ಮೂಲಕ ಪಸರಿಸುತ್ತದೆ, ಆದರೆ ಚೇತನವು ಸರ್ವವ್ಯಾಪಿಯಾಗಿದೆ.
ಈಗ ಆಗ್ತಿರೋದೇನು? ವ್ಯಕ್ತಿಯು ಮೂಲತಃ ಏನಾಗಿದ್ದಾನೆ? ಮನುಷ್ಯನ ಒಟ್ಟು ಸ್ವರೂಪವೇನು? ಮನುಷ್ಯನ ಸಾರ ಸರ್ವವೇನಿದೆ? ಚೇತನೋದಯದ ನಂತರ ಮೊಟ್ಟಮೊದಲು ಹುಟ್ಟಿಕೊಳ್ಳುವುದು ‘ನಾನು ಇದ್ದೇನೆ’ ಅನ್ನುವ ಅರಿವು. ಇದು ದೇಹಬೋಧೆಯ ದ್ಯೋತಕ. ಚೇತನವು ದೇಹದೊಂದಿಗೆ ಬೆರೆತು ಉತ್ಪಾದಿಸುವ ಒಂದು ಭಾವ. ಈ ‘ನಾನು ಇದ್ದೇನೆ’ ಎನ್ನುವ ಭಾವವು ಚೇತನದ ಕಾರಣದಿಂದ, ಚೇತನದಲ್ಲಿ, ಚೇತನದ ಮೂಲಕ ಉತ್ಪನ್ನಗೊಳ್ಳುತ್ತದೆ. ಮತ್ತು ಈ ಭಾವವು ಸ್ವತಃ ಚೇತನವನ್ನೆ ಆವರಿಸಿಕೊಂಡುಬಿಡುತ್ತದೆ. ಆದರೆ ಈ ‘ನಾನು ಇದ್ದೇನೆ’ ಎನ್ನುವ ಭಾವವು ಚೇತನದ ಮೇಲೆ ಹುಟ್ಟಿಕೊಂಡ ಅಲೆಯ ಹೊರತಾಗಿ ಮತ್ತೇನೂ ಅಲ್ಲ.
ಆದ್ದರಿಂದ, ನೀವು ‘ನಾನು ಧ್ಯಾನ ಮಾಡುತ್ತೇನೆ’ ಎನ್ನುವಾಗ ಅಲ್ಲೊಂದು ದೋಷ ಕಾಣುತ್ತದೆ. ಅದೆಂದರೆ, ‘ನಾನು’ ಅನ್ನುವ ಕ್ಷಣಿಕ ಅಲೆಯ ಅಸ್ತಿತ್ವ. ಅಲೆಯು ಹೇಗೆ ಸಾಗರದ ಒಂದು ಅಂಗಭಾಗವೇ ಆಗಿದ್ದು, ಸಾಗರಕ್ಕಿಂತ ಬೇರೆಯಲ್ಲವೋ ಹಾಗೆಯೇ ಇದು ಕೂಡ. ಆದ್ದರಿಂದ ಧ್ಯಾನವು ‘ನಾನು’ವಿನ ಮೂಲಕ ನಡೆಯುವುದಿಲ್ಲ, ಬದಲಿಗೆ ‘ಚೇತನ’ದ ಮೂಲಕ ನಡೆಯುತ್ತದೆ.