ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ

ಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. ಯಾವುದು ದಿನನಿತ್ಯ ನಮ್ಮ ಬದುಕಲ್ಲಿ ಹಾಸುಹೊಕ್ಕಾಗಿದೆಯೋ, ಯಾವುದು ನಮಗೆ ಸುಸ್ಪಷ್ಟವೋ, ಸದಾ ನಮ್ಮ ಅನುಭವಕ್ಕೆ ದಕ್ಕುವುದೋ ಆ ಸಂಗತಿಯ ಬಗ್ಗೆ ಹೇಳಿರೆಂದರೆ ಏನು ಹೇಳುವುದು? ಬಣ್ಣ ಅಂದರೆ ಬಣ್ಣ – ಅಷ್ಟೇ. ಒಂದೊಂದು ವಸ್ತುವಿಗೆ ಒಂದೊಂದು ಬಣ್ಣವಿರುತ್ತದೆ. ಎಲ್ಲ ಬಗೆಯ ಘನ ವಸ್ತುವಿಗೂ ಒಂದಲ್ಲ ಒಂದು ಬಣ್ಣ ಇದ್ದೇ ಇರುತ್ತದೆ. ಹಾಗಂತ ಬಣ್ಣ ಒಂದು ವಸ್ತುವಲ್ಲ. ಅದು ಯಾವ ಆಧಾರ ಇಲ್ಲದೆಯೂ ಅಸ್ತಿತ್ವದಲ್ಲಿರುತ್ತದೆ. ಬಣ್ಣ ಒಂದು ಮಿಥ್ಯೆ. ಹಾಗೆಯೇ ಬಣ್ಣ ಪರಮ ಸತ್ಯವೂ!
ಎಂಥ ವಿರೋಧಾಬಾಸ!!

ವಾಸ್ತವದಲ್ಲಿ ಬಣ್ಣ ಒಂದು ಅನುಭೂತಿ. ಆದರೆ ಅದೊಂದು ಊಹೆಯಲ್ಲ. ಬಣ್ಣ, ಮನುಷ್ಯನ ಇಂದ್ರಿಯವು ಬೆಳಕಿನ ವರ್ಣಪಂಕ್ತಿಯ ಒಂದು ಸಣ್ಣ ಭಾಗವನ್ನು ಗ್ರಹಿಸುವ ವಿಧಿಯಷ್ಟೆ. ಇತರ ಪ್ರಾಣಿಗಳಿಗೆ ಇದನ್ನು ಗ್ರಹಿಸುವ ಸಾಮರ್ಥ್ಯ ಇಲ್ಲವಾಗಿ ಬಹಳಷ್ಟು ಪ್ರಾಣಿಗಳು ಬಣ್ಣವನ್ನು ಗುರುತಿಸಲಾರವು. ಅಥವಾ ಕೆಲವು ಬಣ್ಣಗಳನ್ನು ಮಾತ್ರ ಗುರುತಿಸಬಲ್ಲವು.

ಒಂದು ನಿರ್ದಿಷ್ಟ ತರಂಗಾಂತರದಲ್ಲಿ ಮಾನವನ ಕಣ್ಣು ಬೆಳಕಿನ ಯಾವ ತರಂಗವನ್ನು ಗ್ರಹಿಸುತ್ತದೆಯೋ ಅದು ಆತನಿಗೆ ಕಾಣುವ ಬಣ್ಣವಾಗುತ್ತದೆ. ಉದಾಹರಣೆಗೆ, ಸರಿಸುಮಾರು 630 – 740 ನ್ಯಾನೋ ಮೀಟರ್’ಗಳಷ್ಟು ತರಂಗಾಂತರದಲ್ಲಿ ಪ್ರಧಾನವಾಗಿ ಮಾನವನ ಕಣ್ಣು ಗ್ರಹಿಸಬಲ್ಲ – ದೀರ್ಘ ತರಂಗದೂರಗಳಲ್ಲಿರುವ ಬೆಳಕಿನಲ್ಲಿರುವ ಬಹುಸಂಖ್ಯೆಯ ಸದೃಶ ಬಣ್ಣ ಯಾವಾಗಲೂ ಕೆಂಪೇ ಆಗಿರುತ್ತದೆ. ಇದಕ್ಕಿಂತ ಉದ್ದವಾದ ತರಂಗಾಂತರಗಳನ್ನು ಅತಿಕೆಂಪು ಎಂದು ಕರೆಯಲಾಗುತ್ತದೆ. ಆದರೆ ಇದು ಮಾನವನ ಕಣ್ಣಿಗೆ ಗೋಚರಿಸುವುದಿಲ್ಲ.
ಹಾಗೆಯೇ, ಬೆಳಕಿನ ಸುಮಾರು 400 – 460 ನ್ಯಾನೋ ಮೀಟರ್ ತರಂಗಾಂತರ ವ್ಯಾಪ್ತಿಯ ತರಂಗಗಳನ್ನು ಕಂಡಾಗ ಅನುಭವಿಸುವ ಬಣ್ಣ ನೀಲಿಯಾಗಿರುತ್ತದೆ. – ಇದು ಭೌತ ಶಾಸ್ತ್ರದ ವಿವರಣೆ.

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!!

ಬಣ್ಣಗಳ ಇರುವಿಕೆ ಮತ್ತು ಗ್ರಹಿಕೆಯ ತತ್ತ್ವವನ್ನೇ ಪರಮ ಅಸ್ತಿತ್ವದ ಇರುವಿಕೆ ಮತ್ತು ಗ್ರಹಿಕೆಗೆ ಅನ್ವಯಿಸಿದರೆ, ಭಗವಂತನ ಕುರಿತು ಇರುವ ಅನೇಕ ವ್ಯಾಖ್ಯಾನ – ನಿರ್ವಚನೆಗಳ ಹಿನ್ನೆಲೆ ಮತ್ತು ವೈವಿಧ್ಯಗಳು ಅರ್ಥವಾಗಬಹುದು. ಪರಮ ಅಸ್ತಿತ್ವ ಬೆಳಕಿನಂತೆ. ಅದನ್ನು ಬಿಳಿ ಎಂದು ಕರೆಯೋಣ. ಹೇಗೆ ನಿರ್ದಿಷ್ಟ ತರಂಗಾಂತರದಲ್ಲಿ ರೂಪಾಕಾರಗಳಿಲ್ಲದ ಬೆಳಕಿನ ತರಂಗವು ಒಂದು ಬಣ್ಣವಾಗಿ ನಮ್ಮ ಅನುಭವಕ್ಕೆ ಬರುತ್ತದೆಯೋ ಹಾಗೆಯೇ ನಿರಾಕಾರಿಯಾದ ಪರಮ ಅಸ್ತಿತ್ವವು ನಮಗೆ ಒಂದು ರೂಪವಾಗಿ ಕಂಡುಬರುತ್ತದೆ.  ನಮ್ಮ ನಮ್ಮ ಸಾಧನೆ ಹಾಗೂ ಗ್ರಹಿಕೆಯ ಮಿತಿಯಲ್ಲಿ ನಾವು ಆ ರೂಪವನ್ನು ನಿರ್ದಿಷ್ಟ ಭಗವಂತನೆಂದು ಕರೆದುಕೊಳ್ಳುತ್ತೇವೆ. ಹೇಗೆ ಕೇವಲ ಗ್ರಹಿಕೆ ಮಾತ್ರದಿಂದಲೇ ಬಣ್ಣವು ಅಸ್ತಿತ್ವ ಪಡೆಯುತ್ತದೆಯೋ ಹಾಗೆಯೇ ಭಗವಂತನೂ ಗ್ರಹಿಸುವವರ ಪಾಲಿಗೆ ಮಾತ್ರ ಅಸ್ತಿತ್ವ ಪಡೆಯುತ್ತಾನೆ. ಹಾಗೆಯೇ ಮಾನವ ಇಂದ್ರಿಯವು ಗ್ರಹಿಸದೆ ಉಳಿದಿದ್ದರೂ ಬಣ್ಣವು ಬೆಳಕಿನಲ್ಲಿ ಸುಪ್ತಅಸ್ತಿತ್ವವನ್ನು ಹೊಂದಿರುತ್ತದೆಯೋ ಹಾಗೆಯೇ ಭಗವಂತನೂ ಪರಮ ಅಸ್ತಿತ್ವವೆಂಬ ವ್ಯವಸ್ಥೆಯಲ್ಲಿ ಹುದುಗಿಕೊಂಡಿರುತ್ತಾನೆ.

ಪಟ್ಟಕದ ಮೂಲಕ ಬೆಳಕನ್ನು ಹಾಯಿಸಿದಾಗ ಬೆಳಕು ಏಳು ಬಣ್ಣಗಳಾಗಿ ಹೊರಹೊಮ್ಮುತ್ತದೆಯಷ್ಟೆ? ಹಾಗೆಯೇ ಪರಮ ಅಸ್ತಿತ್ವವನ್ನು ದಿವ್ಯ ಜ್ಞಾನ ಚಕ್ಷುವಿನಿಂದ ಕಾಣುವ ಯತ್ನ ನಡೆಸಿದಾಗ ಅದರ ನಾನಾ ಶಕ್ತಿಗಳು, ಗುಣ ವಿಶೇಷಗಳು ಆಕಾರ ತಳೆದು ಭಗವಂತನ ವಿವಿಧ ರೂಪಗಳಾಗಿ ಸಾಧಕನೆದುರು ಕಾಣಿಸಿಕೊಳ್ಳುತ್ತವೆ. ಯಾರು ನೋಡುತ್ತಾರೋ, ಯಾರಿಂದ ನೋಡಲು ಸಾಧ್ಯವೋ ಅವರಿಗೆ ಮಾತ್ರ ಬಣ್ಣವು ಕಾಣಿಸುವಂತೆ, ಭಗವಂತನೂ ಕಾಣಬಯಸುವವರಿಗಷ್ಟೆ ತನ್ನನ್ನು ತೋರ್ಪಡಿಸಿಕೊಳ್ಳುತ್ತಾನೆ.
ಕೆಲವು ಪ್ರಾಣಿಗಳು ಬಣ್ಣಗಳನ್ನೆ ಕಾಣಲಾರವು. ಕೆಲವು ಕಾರ್ಗತ್ತಲಲ್ಲೂ ಬಣ್ಣ ಗುರುತಿಸಬಲ್ಲವು. ಹಾಗೆಯೇ ನಾವು `ಇಂತಿಷ್ಟಿವೆ’ ಅಂದುಕೊಂಡಿರುವುದಕ್ಕಿಂತ ನೂರಾರು ಪಾಲು ಹೆಚ್ಚು ಬಣ್ಣಗಳಿದ್ದು, ಕೆಲವರು ಸಾಮಾನ್ಯರಿಗಿಂತ ಹೆಚ್ಚಿನ ಬಣ್ಣಗಳನ್ನು ಕಾಣಬಲ್ಲರು. ಹಾಗೆಯೇ ಭಗವಂತನನ್ನು ಕಾಣುವ ಬಗೆಯೂ.

ಹೇಗೆ ಬಣ್ಣದ ಬಗೆ ಹಾಗೂ ಅಸ್ತಿತ್ವವು ನಮ್ಮ ಗ್ರಹಿಕೆಗೆ ಅಂತಿಮವಾಗಿರುವುದಿಲ್ಲವೋ ಹಾಗೆಯೇ ಭಗವಂತನೂ. ಕೆಲವೊಮ್ಮೆ ನಾವು ಕಾಣುವ ಬಣ್ಣವನ್ನು ಮತ್ತೊಬ್ಬರಿಗೆ ತೋರಿಸಲಾರೆವು. ಉದಾಹರಣೆಗೆ: ಕೆಲವೊಮ್ಮೆ ಬಿಸಿಲು ಕಾಲದಲ್ಲಿ ಕಣ್ಣ ರೆಪ್ಪೆಯ ಬಳಿ ಬಣ್ಣ ಬಣ್ಣದ ಗಾಳಿಯ ಗುಳ್ಳೆಗಳು ಹಾರಾಡುವುದು ನಮ್ಮ ಗಮನಕ್ಕೆ ಬರುತ್ತದೆ. ಅದನ್ನು ನಾವು ಮತ್ತೊಬ್ಬರಿಗೆ ತೋರಿಸಲಾರೆವು. ಬಣ್ಣದ ವಸ್ತುವನ್ನು ತೋರಿಸುವುದು ಬೇರೆ, ಬಣ್ಣವನ್ನೇ ತೋರಿಸುವುದು ಬೇರೆ. ನಾವು ಬೆಳಕನ್ನು ಪ್ರತಿಫಲಿಸುವ ಆ ಬಣ್ಣದ ಗಾಳಿಗುಳ್ಳೆಗಳನ್ನು ಸ್ಪಷ್ಟವಾಗಿ ಅನುಭವಿಸಬಲ್ಲೆವು. ಅದನ್ನು ಹಿಡಿಯಲಾರೆವು ಹಾಗೂ ಮತ್ತೊಬ್ಬರಿಗೆ ತೋರಿಸಲಾರೆವು. ಭಗವಂತನನ್ನೂ ಹಾಗೆಯೇ. ನಾವು ಕಾಣಬಹುದು. ನಾವು ಆತನ ಅಸ್ತಿತ್ವದ ಪ್ರಭಾವವನ್ನು ಅನುಭವಿಸಬಹುದು. ಆದರೆ ಮತ್ತೊಬ್ಬರಿಗೆ ತೋರಿಸಲಾರೆವು.

ಹೇಗೆ ಬಣ್ಣವು ನಮ್ಮ ಸಾಮರ್ಥ್ಯದಲ್ಲಿ ಘಟಿಸುತ್ತದೆಯೋ ಹಾಗೆಯೇ ಭಗವಂತನೂ ನಮ್ಮ ಧ್ಯಾನದ, ಏಕಾಗ್ರತೆಯ, ವ್ಯಾಕುಲತೆಯ, ಸಾಧನೆಯ ಸಾಮರ್ಥ್ಯದಲ್ಲಿ ಘಟಿಸುತ್ತಾನೆ. ಅದನ್ನು ನಾವು ಮತ್ತೊಬ್ಬರಿಗೆ ತೋರಿಸಲಾರೆವು. ಹಾಗೂ ನಮ್ಮಲ್ಲಿ ಘಟಿಸುವ ಭಗವಂತನನ್ನು ಮತ್ತೊಬ್ಬರು ಕಾಣಲಾರರು. ಆದ್ದರಿಂದ ನಾಸ್ತಿಕವಾದಿಗಳು ತಮಗೆ ಕಾಣುವುದಿಲ್ಲ ಅನ್ನುವ ಕಾರಣಕ್ಕಾಗಿಯೇ ಭಗವಂತನ ಅಸ್ತಿತ್ವವನ್ನು ನಿರಾಕರಿಸಿದರೆ, ಅದು ಕೆಂಪು ಬಣ್ಣವನ್ನು ಗ್ರಹಿಸುವ ಸಾಮರ್ಥ್ಯವಿಲ್ಲದ ಪ್ರಾಣಿಯು ಆ ಬಣ್ಣವೇ ಇಲ್ಲ ಎಂದು ಘೋಷಿಸಿದಂತೆ ಆಗುತ್ತದೆ. ನಮಗೆ ಭಗವಂತ ಕಾಣುತ್ತಿಲ್ಲ ಎಂದರೆ ನಮಗೆ ಆತನನನ್ನು ಗ್ರಹಿಸುವ ಸಾಮರ್ಥ್ಯ ಇಲ್ಲವೆಂದು ಅರ್ಥ.

ಒಬ್ಬರಿಗೆ ಕಂಡ ಹಾಗಯೇ ಮತ್ತೊಬ್ಬರಿಗೆ ಅದೇ ಬಣ್ಣವು ಕಾಣುವುದಿಲ್ಲ. ಅದು ಅವರ ದೃಷ್ಟಿಯನ್ನು ಅವಲಂಬಿಸಿರುತ್ತದೆ. ಒಬ್ಬರನ್ನು ಆಕರ್ಷಿಸಿದಂತೆ ಬಣ್ಣವು ಮತ್ತೊಬ್ಬರನ್ನು ಆಕರ್ಷಿಸುವುದಿಲ್ಲ. ಅದು ಅವರ ಮನಸ್ಸನ್ನು ಅವಲಂಬಿಸಿರುತ್ತದೆ. ಭಗವಂತನೂ ಹಾಗೆಯೇ.

ನಮ್ಮ ಮಿತಿಯಲ್ಲಿ ನಾವು ಈವರೆಗೆ ಏಳು ಪ್ರಾಥಮಿಕ ಬಣ್ಣಗಳನ್ನಷ್ಟೆ ಗ್ರಹಿಸಲು ಸಮರ್ಥವಾಗಿದ್ದೇವೆ. ಮಿಕ್ಕೆಲ್ಲ ಬಣ್ಣಗಳನ್ನು ಈ ಏಳು ಬಣ್ಣಗಳ ಗಾಢ – ತಿಳಿ ಬಣ್ಣವಾಗಿ ಹೆಸರಿಸುತ್ತೇವೆ. ನಮ್ಮಿಂದ ಎಂಟನೆಯ ಪ್ರಾಥಮಿಕ ಬಣ್ಣವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಂಥದೊಂದನ್ನು ಸೃಷ್ಟಿಸಲೂ ನಮ್ಮಿಂದ ಸಾಧ್ಯವಾಗಿಲ್ಲ. ನಮ್ಮ ಅನುಭವದ ಮಿತಿಯೇ ನಮ್ಮ ಕಲ್ಪನೆಯ ಮಿತಿಯನ್ನು ನಿರ್ಧರಿಸುತ್ತದೆ.
ಹಾಗೆಯೇ ನಮಗೆ ಕಾಣಿಸಿಕೊಳ್ಳುವ ಭಗವಂತನೂ ನಮ್ಮ ಗುರುತಿನ ಚಿತ್ರದ ಮಿತಿಯಲ್ಲೇ ಇರುತ್ತಾನೆ. ಭಗವಂತ ನಮಗಿಂತ ಶಕ್ತಿವಂತನೆಂಬ ನಮ್ಮ ಕಲ್ಪನೆಗೆ ತಕ್ಕಂತೆ ಆತನಿಗೆ ಹೆಚ್ಚುವರಿ ಕೈಗಳಿರುತ್ತವೆ ಹೊರತು, ನಾವು ನೋಡಿರುವ ರೂಪಗಳಿಗಿಂತ ಭಿನ್ನವಾದ ಒಂದು ಆಕೃತಿಯನ್ನು ಭಗವಂತನೆಂದು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೆಷ್ಟೇ ವಿಭಿನ್ನವಾಗಿ ಭಗವಂತನ ರೂಪವನ್ನು ಗ್ರಹಿಸಲು ಯತ್ನಿಸಿದರೂ ಆ ರೂಪದ ಎಲ್ಲ ಅವಯವಗಳು ನಾವು ಕಂಡಿರುವ ವಸ್ತುಗಳಿಂದಲೇ ಮೂಡಿದ್ದಾಗಿರುತ್ತವೆ.

ಹೇಗೆ ಬಗೆ ಬಣ್ಣಗಳು ಸೇರಿ ಬಿಳಿಯ ಬಣ್ಣವಾಗುತ್ತದೆಯೋ, ಬಿಳಿಯೇ ಚದುರಿ, ಬಗೆಬಣ್ಣಗಳಾಗಿ ಹರಡಿಕೊಳ್ಳುತ್ತದೆಯೋ; ಹಾಗೆಯೇ ಅನೇಕ ಶಕ್ತಿಗಳ ಮೊತ್ತವೇ ಭಗವಂತನಾಗುತ್ತದೆ, ಭಗವಂತನೇ ಚದುರಿ ಅನೇಕ ಶಕ್ತಿಗಳಾಗಿ ವಿಶ್ವವನ್ನು ವ್ಯಾಪಿಸಿಕೊಂಡಿದ್ದಾನೆ. 

 

Leave a Reply