ಅಧ್ಯಾತ್ಮ ಡೈರಿ : ಉಪ್ಪಿಟ್ಟು ಹೋಟೆಲಿನ ಹುಡುಕಾಟ ಮತ್ತು ವಾರಾಂತ್ಯದ ಗೊಣಗಾಟ

ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು, ಅವನ್ನು ನಮ್ಮದಾಗಿಸಿಕೊಳ್ಳಲು ನಾವು ಅದೆಷ್ಟು ಕಣಿ ಹಾಡುತ್ತೇವೆಂದರೆ, ತೋಳು ತೆರೆಯಲಿಕ್ಕೇ  ನೂರೊಂದು ನೆವ ಹೇಳುತ್ತೇವೆ. ನಮ್ಮದೇನಿದ್ದರೂ ಗುರುತು ಪರಿಚಯ ಇರುವ ಏರಿಯಾದಲ್ಲಷ್ಟೆ ವ್ಯವಹಾರ.

ದೊಂದು ಮಜವಾದ ಸಂಗತಿ. ನಮ್ಮಲ್ಲಿ ಬಹಳಷ್ಟು ಜನ ಹೀಗೆ ಮಾಡುತ್ತೇವೆ. ಕಶ್ಮೀರಕ್ಕೆ ಹೋಗಿ ಇಡ್ಲಿ, ಉಪ್ಪಿಟ್ಟು ಸಿಗುವ ಹೋಟೆಲ್ ಹುಡುಕುತ್ತೇವೆ. ಅಲ್ಲಿನ ಸೌಂದರ್ಯವನ್ನು ಮನಸಾರೆ ಅನುಭವಿಸಿಯೂ ಇನ್ನೇನು ಊರು ತಲುಪಲಿದ್ದೇವೆ ಅನ್ನುವಾಗ “ಎಷ್ಟು ದೇಶ ಸುತ್ತಿದರೂ ನಮ್ಮ ಊರೇ ನಮಗೆ ಚೆಂದ” ಅಂತ ಡೈಲಾಗು ಹೊಡೆಯುತ್ತೇವೆ. ನಾವ್ಯಾಕೆ ಹೀಗೆ ಮಾಡುತ್ತೇವೆ!

ನಾವು ಹೀಗೆ ಮಾಡುವುದರಿಂದ ಪ್ರವಾಸವೊಂದು ನೀಡಬಹುದಾಗಿದ್ದ ಆನಂದವನ್ನು ಕೈಯಾರೆ ಹಾಳು ಮಾಡಿಕೊಂಡಿರುತ್ತೇವೆ. ಪ್ರವಾಸ ಮಾಡುವುದೇ ಹೊಸ ಸ್ಥಳವೊಂದನ್ನು ನೋಡಲು. ಮತ್ತು, ಇಲ್ಲಿ ನೋಡುವುದು ಅಂದರೆ ಬರೀ ಕಣ್ಣಿನ ಕೆಲಸವಲ್ಲ. ಇದು ಸಂಪೂರ್ಣ ತೊಡಗಿಕೊಳ್ಳುವಿಕೆ. ಪ್ರವಾಸ ಹೋದ ಜಾಗದ ಪರಿಸರವನ್ನು ಅನುಭವಿಸುವುದು, ಜನರನ್ನು ತಿಳಿಯುವುದು, ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವುದು, ಇವುಗಳ ಜೊತೆಗೆ ಅಲ್ಲಿಯ ಆಹಾರದ ರುಚಿಯನ್ನು ನೋಡುವುದು. ಆ ಹೊಸ ಜಾಗದ ಆಹಾರ ನಮಗೆ ಇಷ್ಟವಾಗದೆಹೋಗಬಹುದು. ಅದು ನಮಗೆ ಹೊಸತಾಗಿರುವ ಕಾರಣ ಅರುಚಿ ಅನ್ನಿಸುತ್ತದೆ. ಆದರೆ ಯಾವುದೇ ಪ್ರದೇಶದ ಸ್ವಾದ ನಮಗೆ ಸಂಪೂರ್ಣವಾಗಿ ದಕ್ಕಬೇಕೆಂದರೆ, ಆ ಪ್ರದೇಶದ ಆಹಾರದ ರುಚಿಯನ್ನೂ ನೋಡಲೇಬೇಕು.

ನಾವು ನಮ್ಮ ಅಭ್ಯಾಸಗಳಿಗೆ ಅದೆಷ್ಟು ಹೊಂದಿಕೆಯಾಗಿಬಿಟ್ಟಿರುತ್ತೇವೆ ಅಂದರೆ; ಉದಾಹರಣೆಗೆ ಮತ್ತೆ ಕಶ್ಮೀರವನ್ನೇ ತೆಗೆದುಕೊಳ್ಳೋಣ. ಬೆಳಗಿನ ತಿಂಡಿಯೆಂದು ದಪ್ಪನೆ ಬ್ರೆಡ್ ಮತ್ತು ಕುಡಿಯಲು ಬಿಸಿಬಿಸಿ ಕಹ್ವಾ ಕೊಡುತ್ತಾರೆ. ನಮ್ಮ ಜೀವವನ್ನು ಸ್ವಸ್ಥವಾಗಿಯೇ ಹಿಡಿದಿಟ್ಟುಕೊಳ್ಳಲು ಅಷ್ಟು ಆಹಾರ ಬೇಕಾದಷ್ಟಾಯ್ತು. ಮೊದಲ ದಿನ ಅದನ್ನು ಕುತೂಹಲದಿಂದಲೇ ಸವಿಯುತ್ತೇವೆ. ಎರಡನೇ ದಿನ ಬೇರೆ ದಾರಿಯಿಲ್ಲದೆ ತಿಂದು ಸಂಭಾಳಿಸಿಕೊಳ್ತೇವೆ. ಮೂರನೆ ದಿನಕ್ಕೆ ಗೈಡಿನ ಬಳಿ “ಸೌತ್ ಇಂಡಿಯನ್ ಹೋಟೆಲ್ ಹೈ ಕ್ಯಾ” ಅಂತ ವಿಚಾರಿಸಲು ಶುರು ಮಾಡುತ್ತೇವೆ. ಸುತ್ತಮುತ್ತಲಿನ ಚೆಂದದ ಪರಿಸರವನ್ನು ಕಣ್ತುಂಬಿಕೊಳ್ಳುವಾಗಲೂ ಹೊಟ್ಟೆಯ ಮೂಲೆಯಲ್ಲಿ ಒಂದು ಕಪ್ ಕಾಫಿ ಮತ್ತು ಪ್ಲೇಟ್ ಉಪ್ಪಿಟ್ಟಿನ ಬಯಕೆ ಕುಣಿಯುತ್ತ ಇರುತ್ತದೆ.

ನಮ್ಮ ಲೈಫಲ್ಲಿ ಕೂಡಾ ನಾವು ಆಡೋದು ಹೀಗೇ. ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು, ಅವನ್ನು ನಮ್ಮದಾಗಿಸಿಕೊಳ್ಳಲು ಅದೆಷ್ಟು ಕಣಿ ಹಾಡುತ್ತೇವೆಂದರೆ, ತೋಳು ತೆರೆಯಲಿಕ್ಕೇ  ನೂರೊಂದು ನೆವ ಹೇಳುತ್ತೇವೆ. ನಮ್ಮದೇನಿದ್ದರೂ ಗುರುತು ಪರಿಚಯ ಇರುವ ಏರಿಯಾದಲ್ಲಷ್ಟೆ ವ್ಯವಹಾರ. ಹಾಗೊಮ್ಮೆ ಹೊಸತರ ಸಹವಾಸ ಮಾಡಿದರೂ ಅಲ್ಲಿ ಹಳೆಯ ಪರಿಚಿತ ತುಣುಕುಗಳ ಪತ್ತೆ ಕಾರ್ಯ ಜಾರಿಯಲ್ಲಿಟ್ಟಿರುತ್ತೇವೆ. ಈ ಧಾವಂತದಲ್ಲಿ ಹೊಸತರ ಅನುಭವವನ್ನು ಹಾಳು ಮಾಡಿಕೊಳ್ಳುತ್ತೇವೆ.

ಹಾಗೆಂದು ಎಷ್ಟು ದಿನ ಯಾವುದಾದರೂ ಹೊಸತಾಗಿಯೇ ಉಳಿದೀತು? ಉದಾಹರಣೆಗೆ ಉದ್ಯೋಗ. ಅನಿವಾರ್ಯದಿಂದಲೋ, ಆಯ್ಕೆಯೆಂದೋ… ಸಹವಾಸಕ್ಕೆ ಇಳಿದ ಮೇಲೆ ಮುಗಿಯಿತು. ಕಾಲಕಳೆದಂತೆ ಎಲ್ಲ ಹೊಸತುಗಳೂ ಹಳತಾಲೇ ಬೇಕು. ಹಾಗೆಯೇ ನಮಗೆ ಅದರೊಡನೆ ಹೊಂದಾಣಿಕೆಯೂ ಆಗುವುದು. ನಾವು ಸಹಜವಾಗಿಯೇ ಅದರ ಎಲ್ಲ ಆನಂದವನ್ನೂ ಪಡೆಯುತ್ತ ಖುಷಿಯಾಗಿಯೇ ಇರುವೆವು. ಆದರೂ ದಿನದ ಕೆಲಸ ಮುಗಿಸಿ ಮನೆಗೆ ಬಂದಾಗ ಅಥವಾ ವಾರಾಂತ್ಯಗಳಲ್ಲಿ ಆಫೀಸೊಂದು ನರಕವೆಂದೂ ಮನೆಯೇ ಸ್ವರ್ಗವೆಂದೂ ಭಾವಿಸುವೆವು. ಮನೆ ಸ್ವರ್ಗವಾಗಿರಲು ಕಾರಣ ಆಫೀಸಿನಲ್ಲಿ ಮಾಡುವ ದುಡಿಮೆ ಅನ್ನೋದನ್ನು ನೆನಪಿಟ್ಟುಕೊಂಡರೆ ನಮ್ಮಿಂದ ಕೃತಘ್ನ ಮಾತುಗಳು ಹೊರಡುವುದಿಲ್ಲ. ಆದರೆ ನಾವು ಗೊಣಗಾಟದ ಶೂರರು!

ಇರಲಿ. ಇದ್ಯಾವುದೂ ಅಪರಾಧವಲ್ಲ. ನಾವು ಇರುವುದೇ ಹೀಗೆ. ಹೀಗಿಲ್ಲದೆ ಹೋದರೆ, ಆಯಾ ಸಂದರ್ಭವನ್ನು, ಸ್ಥಳವನ್ನು ಸಂತಸದಿಂದ – ಸಂಪೂರ್ಣವಾಗಿ ಅನುಭವಿಸುವ ಹಾಗಾದರೆ ಎಷ್ಟು ಚೆಂದವಿರುತ್ತದೆ ಗೊತ್ತಾ? ಉಪ್ಪಿಟ್ಟು ಹೋಟೆಲಿನ ಹುಡುಕಾಟವನ್ನೂ, ವಾರಾಂತ್ಯದ ಗೊಣಗಾಟವನ್ನೂ ಬಿಟ್ಟು ಪ್ರಯತ್ನಿಸಿ; ಸಿಗುವ ಸಂತಸದ ಲೆಕ್ಕ ತೂಗಿ ಹೇಳಿ.

Leave a Reply