ಅಧ್ಯಾತ್ಮ ಡೈರಿ : ನನಗೇ ಏಕೆ ಹೀಗಾಗುತ್ತದೆ?

ನಿಮ್ಮ ಬದುಕು ಸುಂದರವಾಗಿರಬೇಕು ಎಂದಾದಲ್ಲಿ, ನೀವು ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಅದು, “ಹೋಲಿಕೆಗಿಂತ ಕುರೂಪವಾದುದು ಸೃಷ್ಟಿಯಲ್ಲಿ ಯಾವುದೂ ಇಲ್ಲ” ಅನ್ನೋದು. ಈ ಕುರೂಪ ನಮ್ಮ ಅಂತರಂಗ ಹೊಕ್ಕಿತೆಂದರೆ, ನಮ್ಮ ಜೀವನ ಸೌಂದರ್ವೇ ನಾಶವಾಗಿ ಹೋಗುತ್ತದೆ. ಸದಾ ಅತೃಪ್ತಿ ನಮ್ಮಲ್ಲಿ ಮನೆ ಮಾಡುತ್ತದೆ. ಈ ಅತೃಪ್ತಿಯೇ ಬಹಳ ಬಾರಿ ನಮ್ಮ ಯಶಸ್ಸಿಗೆ ಅಡ್ಡಿಯಾಗೋದು ~ ಅಲಾವಿಕಾ

“ನಾನು ಯಾವ ಕೆಲಸ ಮಾಡಲು ಹೋದರೂ ಸುಸೂತ್ರ ಆಗೋದಿಲ್ಲ. ನನಗಿಂತ ಕಡಿಮೆ ಎಫರ್ಟ್ ಹಾಕಿದ್ರೂ ಅವರದು ಆಗಿಬಿಡತ್ತೆ. ಯಾಕೆ ಯಾವಾಗ್ಲೂ ನನಗೇ ಹೀಗಾಗತ್ತೆ!”

“ನಾನು ಏನು ಹೇಳಿದೆನೋ ಅದನ್ನೇ ಅವರೂ ಹೇಳಿದ್ದರು. ಬಟ್ ಜನ ಸಿಟ್ಟುಗೊಂಡಿದ್ದು ನನ್ನ ಮೇಲೆ ಮಾತ್ರ. ನಂಗೆ ಮಾತ್ರ ಯಾಕೆ ಹೀಗೆ!?”

ಇಂಥಾ ಪ್ರಶ್ನೆಗಳು ಕೆಲವೊಮ್ಮೆ ಅದೆಷ್ಟು ಕಾಡುತ್ತವೆ ಅಂದರೆ…. ನಮಗೆ ನಮ್ಮ ಮೇಲೇ ವಿಶ್ವಾಸ ಹೋಗಿಬಿಡುವಷ್ಟು! ನಮಗೆ ನಾವೇ ಶಾಪ ಹಾಕಿಕೊಳ್ಳುವಷ್ಟು. ನಮ್ಮಿಂದ ಏನೂ ಸಾಧ್ಯವಿಲ್ಲ ಅಂತಲೋ, ನನಗೆ ನಿಭಾಯಿಸಲಿಕ್ಕೇ ಬರುವುದಿಲ್ಲ ಅಂತಲೋ ಕೀಳರಿಮೆ ಕೂಪವಾಗಿ ಕುಳಿತುಬಿಡುವಷ್ಟು!!

Inspirational Quotes Kahlil Gibran Life Kahlil Gibran Quotes | K

ಸಮಸ್ಯೆ ಏನು ಗೊತ್ತ? ಈ ಪ್ರಶ್ನೆಗಳ ಹುಟ್ಟಿಗೆ ಬೇರೆ ಯಾರೋ ಕಾರಣ ಅಲ್ಲವೇ ಅಲ್ಲ. ನಮ್ಮದೇ ಅಹಂಕಾರದ ಜೊತೆ, ನಮ್ಮ ಅಸ್ತಿತ್ವ ಸಂಯೋಜನೆಗೊಂಡಾಗ ಹೊಮ್ಮುವ ಭಾವನೆ ಇದು.

ಇಲ್ಲಿ ಎರಡು ಅಂಶಗಳನ್ನು ಸ್ಪಷ್ಟವಾಗಿ ನಾವು ಗುರುತಿಸಬೇಕು. ನಮಗೆ ನಮ್ಮ ಕೆಲಸ ಆಗುತ್ತಿಲ್ಲ, ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ / ನಮ್ಮನ್ನು ಮಾತ್ರ ಅಪಾರ್ಥ ಮಾಡಿಕೊಳ್ಳಲಾಗಿದೆ ಅನ್ನುವ ಚಿಂತೆಯಷ್ಟೆ ಮುಖ್ಯವೋ; ಇನ್ಯಾರದೋ ಕೆಲಸ ಸುಸೂತ್ರ ಆಗುತ್ತಿದೆ, ಅವರು ಯಾವ ರಗಳೆಯೂ ಇಲ್ಲದೆ ಅರಾಮಿದ್ದಾರೆ ಅನ್ನುವ ತುಲನೆ ಮುಖ್ಯವೋ!

ಅದು, ನೀವು ಯಶ ಕಾಣದ ನೋವಷ್ಟೇ ಆಗಿದ್ದರೆ ಪರಿಹಾರ ಬೇರೆ ಇದೆ. ತುಲನೆಯೇ ನಿಮ್ಮ ಸಮಸ್ಯೆಯಾದರೆ, ಪರಿಹಾರ ಬೇರೆ…! ಈ ಎರಡನೆಯದು ಕೊಂಚ ಸಂಕೀರ್ಣ. ಇಲ್ಲಿ ನೀವು ಎರಡೆರಡು ಸಂಗತಿಗಳ ಜೊತೆ ಡೀಲ್ ಮಾಡಬೇಕು. ನಿಮ್ಮ ವೈಫಲ್ಯ ಮತ್ತು ಮತ್ತೊಬ್ಬರ ಯಶಸ್ಸು!

ನಿಮ್ಮ ಬದುಕು ಸುಂದರವಾಗಿರಬೇಕು ಎಂದಾದಲ್ಲಿ, ನೀವು ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಅದು, “ಹೋಲಿಕೆಗಿಂತ ಕುರೂಪವಾದುದು ಸೃಷ್ಟಿಯಲ್ಲಿ ಯಾವುದೂ ಇಲ್ಲ” ಅನ್ನೋದು. ಈ ಕುರೂಪ ನಮ್ಮ ಅಂತರಂಗ ಹೊಕ್ಕಿತೆಂದರೆ, ನಮ್ಮ ಜೀವನ ಸೌಂದರ್ವೇ ನಾಶವಾಗಿ ಹೋಗುತ್ತದೆ. ಸದಾ ಅತೃಪ್ತಿ ನಮ್ಮಲ್ಲಿ ಮನೆ ಮಾಡುತ್ತದೆ. ಈ ಅತೃಪ್ತಿಯೇ ಬಹಳ ಬಾರಿ ನಮ್ಮ ಯಶಸ್ಸಿಗೆ ಅಡ್ಡಿಯಾಗೋದು.

ಬದುಕು ಸ್ಪರ್ಧೆಯ ಮೈದಾನವಲ್ಲ, ಸಹಜೀವನದ ಬಯಲು ಅನ್ನೋದನ್ನ ನಾವು ಮರೆಯಬಾರದು. ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸಾಧ್ಯವಿರೋದು ಒಂದೇ ಒಂದು ಸ್ಪರ್ಧೆ. ಅದು, ಭ್ರೂಣ ಕಟ್ಟುವ ಮೊದಲು ನಡೆಯುವ ವೀರ್ಯ ಕಣಗಳ ಓಟದ ಸ್ಪರ್ಧೆ. ಅದು ಆತ್ಯಂತಿಕ ಸ್ಪರ್ಧೆ. ಅದರಲ್ಲಿ ಗೆದ್ದವರು ಮತ್ತೆ ಯಾವುದರಲ್ಲೂ ಭಾಗವಹಿಸುವ ಪ್ರಮೇಯವೇ ಇಲ್ಲ. ಉಳಿಯುವುದು ಏನಿದ್ದರೂ, ನಮ್ಮಂತೆಯೇ ಗೆದ್ದು ಬಂದವರೊಡನೆ ಸಾಮರಸ್ಯದಿಂದ ಬದುಕುವುದು; ಅಷ್ಟೇ.

ಆದ್ದರಿಂದ, “ನನಗೇ ಯಾಕೆ ಹೀಗಾಗುತ್ತೆ?” ಅನ್ನುವ ನಿಮ್ಮ ಪ್ರಶ್ನೆಗೆ ಕಾರಣ ಈ ಹೋಲಿಕೆ ಅಥವಾ ಪೈಪೋಟಿಯಾಗಿದ್ದರೆ, ಮೊದಲು ಅದನ್ನು ತಿದ್ದಿಕೊಳ್ಳಿ.

ಹಾಗಿಲ್ಲದೆ, ಅದು ಕೇವಲ ನಿಮ್ಮ ಕುರಿತಾಗಿಯೇ ಉಂಟಾದ ನೋವಾಗಿದ್ದರೆ, ನೀವು ಬಹಳ ಮುಖ್ಯವಾಗಿ ತಿಳಿಯಬೇಕಾದ ವಿಷಯ ಇದು : “ಯಾವಾಗಲೂ ನಿಮಗೇ ಹೀಗೆ ಆಗಲಿಕ್ಕೆ ಸ್ವತಃ ನೀವೇ ಕಾರಣ”.

ಇದು ಹೌದೇಹೌದು. ದಾರಿ ನಿಮ್ಮದು ಪ್ರಯಾಣ ನಿಮ್ಮದು. ಗುರಿ ತಲುಪಲಾಗಲಿಲ್ಲ ಅಂದರೆ ಅದಕ್ಕೆ ಹೊರಗಿನ ಕಾರಣ ಹೇಗಿರಲು ಸಾಧ್ಯ? ಒಂದೋ ನೀವು ಸುತ್ತುಬಳಸಿನ ದಾರಿ ಆಯ್ದುಕೊಂಡಿದ್ದೀರಿ. ಅಥವಾ ಸುದೀರ್ಘವಾದುದನ್ನು. ಅಥವಾ ನಿಮ್ಮ ಸಾಮರ್ಥ್ಯಕ್ಕೆ ಒಗ್ಗದ ದಾರಿ ಆಯ್ಕೆ ಮಾಡಿದ್ದೀರಿ… ಒಟ್ಟಾರೆಯಾಗಿ, ನಿಮ್ಮ ಆಯ್ಕೆಯಂತೆ ನಿಮ್ಮ ಫಲಿತಾಂಶವಿದೆ.

ಹಾಗೇ; ನೀವೂ ಮತ್ತೊಬ್ಬರೂ ಒಂದೇ ಮಾತುಗಳನ್ನಾಡಿ ನೀವು ಬೇರೆಯದೇ ಪ್ರತಿಕ್ರಿಯೆ ಪಡೆಯಲು ಕಾರಣವೂ ನಿಮ್ಮ ಆಯ್ಕೆಯೇ.

ಏಕೆಂದರೆ ಪ್ರತಿಕ್ರಿಯೆ ದೊರೆಯುವುದು ಮಾತು ಅಥವಾ ಕೃತಿಗಲ್ಲ, ವ್ಯಕ್ತಿಗೆ.  ನಿಮ್ಮ ಆಯ್ಕೆಗಳ ಮೂಲಕ ನಿಮ್ಮ ವ್ಯಕ್ತಿತ್ವ ರೂಪಿಸಿಕೊಂಡಿರುತ್ತೀರಿ. ಆ ವ್ಯಕ್ತಿತ್ವ ಸಮಾಜದ ಸ್ಪೇಸ್’ನಲ್ಲಿ ಯಾವ ರೀತಿ ಪರಿಗಣಿಸಲ್ಪಡುತ್ತದೆ ಅನ್ನುವುದರ ಮೇಲೆ ಜನರ ಪ್ರತಿಕ್ರಿಯೆ ಇರುತ್ತದೆ. ಸಮಾಜದಿಂದ ನಿಮಗೆ ಏನೆಲ್ಲ ನಿರಾಕರಿಸಲ್ಪಟ್ಟಿದೆ, ಏನೆಲ್ಲ ಪ್ರಿವಿಲೇಜ್ ಪಡೆದಿದ್ದೀರಿ… ಇತ್ಯಾದಿಗಳೂ ಅಲ್ಲಿ ಮುಖ್ಯವಾಗುತ್ತವೆ.

ನಿರುದ್ಯೋಗಿಯೊಬ್ಬ “ಈ ದೇಶ ಸರಿ ಇಲ್ಲ” ಅನ್ನುವುದಕ್ಕೂ ವೈಟ್ ಕಾಲರಿನ ನೆಮ್ಮದಿಯ ಮನುಷ್ಯ “ಈ ದೇಶ ಸರಿಯಿಲ್ಲ” ಅನ್ನುವುದಕ್ಕೂ ವ್ಯತ್ಯಾಸ, ಅವರಿಗೆ ಬರುವ ಪ್ರತಿಕ್ರಿಯೆಗಳಲ್ಲಿ ಕಾಣುತ್ತವೆ. ಹಾಗೆಂದ ಮಾತ್ರಕ್ಕೆ ವೈಟ್ ಕಾಲರಿನವರು ದೇಶವನ್ನು ವಿಮರ್ಶೆ ಮಾಡಲೇಬಾರದು ಎಂದಲ್ಲ… ಖಂಡಿತವಾಗಿಯೂ ಅದು ಅವರ ಹಕ್ಕು. ಆದರೆ, ಅವರು ಪಡೆದಿರುವ ಪ್ರಿವಿಲೇಜ್’ಗಳು, ಈ ‘ಸರಿ ಇಲ್ಲದ ದೇಶದಲ್ಲಿ’ ಅವರು ಪಡೆದಿರುವ ಸ್ಥಾನಮಾನಗಳು ಅವರ ಮಾತಿಗೆ ತಕ್ಕ ಪ್ರತಿಕ್ರಿಯೆಗಳನ್ನು ಮರಳಿ ತರುತ್ತವೆ. ತಾವು ಪ್ರಿವಿಲೇಜ್ ಪಡೆದು ಮತ್ತೊಬ್ಬರಿಗಾಗಿ ಹೋರಾಟ ನಡೆಸುತ್ತಿದ್ದರೆ, ಅಲ್ಲಿ ಪ್ರತಿಕ್ರಿಯೆಯ ಬಗೆ ಮತ್ತಷ್ಟು ಬೇರೆ ರೀತಿ ಇರುತ್ತದೆ. ಹೀಗೆ, ಅವರವರ ಕರ್ಮಾನುಸಾರ ಪ್ರತಿಕ್ರಿಯೆಗಳು ಹೊಮ್ಮುತ್ತವೆ. ಈ ಪ್ರತಿಕ್ರಿಯೆಗಳು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. 

ಇದೊಂದು ಉದಾಹರಣೆಯಷ್ಟೆ. ನೀವು ಅನುಭವಿಸುವ ಪ್ರತಿಯೊಂದೂ, ನಿಮ್ಮ ಆಯ್ಕೆಯ ಪರಿಣಾಮವೇ ಆಗಿರುತ್ತದೆ. ಕರ್ಮದಂತೆ ಕರ್ಮಫಲ. ನೀವು ಬೆಳೆಯುವುದು ಭತ್ತವನ್ನೇ ಆದರೂ ಯಾವ ಭೂಮಿಯಲ್ಲಿ, ಯಾವ ಬೇಸಾಯ ಪದ್ಧತಿಯಲ್ಲಿ, ಯಾವ ಸಮಯದಲ್ಲಿ ಬಿತ್ತನೆ ಮಾಡಿದಿರಿ ಅನ್ನುವುದು ಮುಖ್ಯ ಆಗುವುದಿಲ್ಲವೆ? ಪಕ್ಕದ ಗದ್ದೆಯವರ ಫಸಲು ನೋಡಿ “ನನಗೆ ಮಾತ್ರ ಯಾಕೆ ಹೀಗೆ” ಎಂದು ಯಾಕೆ ಯೋಚಿಸುತ್ತೀರಿ! ಅದರ ಬದಲು, ಅಂಥ ಫಲಿತಾಂಶ ಬರದೆ ಇರಲು ನನ್ನ ಯಾವ ತಪ್ಪು ಆಯ್ಕೆಗಳು ಕಾರಣವಾದವು ಎಂದು ಆಲೋಚನೆ ಮಾಡಿ. ಇದರಿಂದ ಮತ್ತೆ ಅವೇ ತಪ್ಪು ಆಯ್ಕೆ ಮಾಡಿಕೊಳ್ಳುವುದಾದರೂ ತಪ್ಪುತ್ತದೆ.

ಮತ್ತು, ನಾವು ಅನುಭವಿಸುವ ಫಲಿತಾಂಶಗಳು ಆಯಾ ಕ್ರಿಯೆಗಳಿಂದಷ್ಟೆ ದೊರಕಿರುವುದಿಲ್ಲ. ಅದು ನಮ್ಮ ಹಿಂದಿನ ಹಲವು ಕರ್ಮ / ಕ್ರಿಯೆಗಳು ಹಾಗೂ ಈಗಿನ ಪರಿಣಾಮವಾಗಿ ಒದಗಬಹುದಾದ ಮುಂದಿನ ಹಲವು ಕರ್ಮ/ ಕ್ರಿಯೆಗಳ ಒಟ್ಟು ಮೊತ್ತವಾಗಿರುತ್ತದೆ. ಇದೊಂದು ತಪ್ಪಿಸಿಕೊಳ್ಳಲಾಗದ ಘಟನಾ ಚಕ್ರ. ಇದು ನಮ್ಮ ಬದುಕಿನ ಪ್ರತಿಯೊಂದು ಆಯ್ಕೆಯೂ ಒಂದು ಚಕ್ರಕ್ಕೆ ಕಾರಣವಾಗುತ್ತದೆ. ನಡುವಲ್ಲಿ ಬೇಸರ ಬಂದಿತೆಂದೋ ನಿಭಾಯಿಸಲು ಸಾಧ್ಯವಿಲ್ಲ ಎಂದೋ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ! ಅದಕ್ಕೊಂದು ತಾರ್ಕಿಕ ಅಂತ್ಯ ದೊರೆತ ಮೇಲಷ್ಟೆ, ಮತ್ತೊಂದು ಹೊಸ ಆಯ್ಕೆ, ಹೊಸ ಚಕ್ರದ ಆರಂಭ.

ನಮ್ಮ ನಿರ್ದಿಷ್ಟ ಪ್ರಯತ್ನ ವಿಫಲವಾಯಿತು ಅಂದರೆ, ಅಸ್ತಿತ್ವ ನಮ್ಮ ಮೇಲೆ ಮಾತ್ರ ಪಿತೂರಿ ನಡೆಸಿದೆ ಎಂದಲ್ಲ. ನಮ್ಮ ಮತ್ಯಾವುದೋ ಕರ್ಮದ ಫಲ ನಾವು ಅನುಭವಿಸುತ್ತಿದ್ದೇವೆ, ಯಾವುದೋ ಆಯ್ಕೆಯ ಪರಿಣಾಮವಾಗಿ ಈ ಫಲಿತಾಂಶ ದೊರಕಿದೆ ಎಂದರ್ಥ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. ಹಿಂದಿನವರು ಮಾಡಿರುವ ಕರ್ಮಫಲವಿದೆಂದು ಕೂತರೆ ಹೊಟ್ಟೆ ತುಂಬಿತೀ ?1
    ಕರ್ಮ ಫಲ ಸೇರಿಸದಿದ್ದರೆ ಚನ್ನಾಗಿರುತಿತ್ತು

Leave a Reply