ಭರ್ತೃಹರಿಯ ನೀತಿಶತಕ #1 : ಬೆಳಗಿನ ಹೊಳಹು

ವಾಂಛಾ ಸಜ್ಜನಸಂಗಮೇ, ಪರಗುಣೇ, ಪ್ರೀತಿರ್ಗುರೌ ನಮ್ರತಾ
ವಿದ್ಯಾಯಾಂ ವ್ಯಸನಂ, ಸ್ವಯೀಷಿತಿ ರತಿರ್ಲೋಕಾಪವಾದಾದ್ಭಯಮ್ |
ಭಕ್ತಿಃ ಶೂಲಿನಿ, ಶಕ್ತಿರಾತ್ಮದಮನೇ, ಸಂಸರ್ಗಮುಕ್ತಿಃ ಖಲೇ
ಏತೇ ಯೇಷು ವಸಂತಿ ನಿರ್ಮಲಗುಣಾಸ್ತೇಭ್ಯೋ ನರೇಭ್ಯೋ ನಮಃ || ಭರ್ತೃಹರಿಯ ನೀತಿ ಶತಕ | 2 ||

ಸಜ್ಜನರ ಸಹವಾಸದಲ್ಲಿ ಬಯಕೆ, ಬೇರೆಯವರ ಗುಣಗಳಲ್ಲಿ ಸಂತೋಷ, ಹಿರಿಯರಲ್ಲಿ ವಿನಯ, ಜ್ಞಾನದಲ್ಲಿ ಆಸಕ್ತಿ, ತನ್ನ ಪತ್ನಿಯಲ್ಲಿ ಮಾತ್ರ ಪ್ರೀತಿ, ಜನನಿಂದೆಯಿಂದ ಹೆದರಿಕೆ, ಈಶ್ವರನಲ್ಲಿ ಭಕ್ತಿ, ತನ್ನ ಇಂದ್ರಿಯಗಳನ್ನು ನಿಯಂತ್ರಿಸುವುದರಲ್ಲಿ ಸಾಮರ್ಥ್ಯ ಹಾಗೂ ದುಷ್ಟರಿಂದ ದೂರ ಇರುವುದು. ಈ ಶ್ರೇಷ್ಠವಾದ ಗುಣಗಳುಳ್ಳ ಮಹಾನುಭಾವರಿಗೆ ವಂದನೆಗಳು.

ಮೇಲ್ಕಾಣಿಸಿದ ಗುಣ ಇದ್ದವರು ಯಾರೇ ಆಗಲಿ, ಅವರಿಗೆ ನಮಸ್ಕಾರ ಸಲ್ಲಬೇಕೆಂದು ರಾಜಾ ಭರ್ತೃಹರಿ ಹೇಳುತ್ತಾನೆ. “ಜೀನವದಲ್ಲಿ ಉತ್ತಮ ಗುಣಗಳಿಗೆ ಮಹತ್ವ ನೀಡಬೇಕೇ ಹೊರತು, ವಯಸ್ಸು, ಜಾತಿ, ಅಂತಸ್ತು ಅಥವಾ ಅಧಿಕಾರಗಳಿಗಲ್ಲ” ಎಂಬುದು ಇದರ ತಾತ್ಪರ್ಯ.

ಇತರರ ಗುಣಗಳ ಬಗ್ಗೆ ಮತ್ಸರ ಪಡುವ ವ್ಯಕ್ತಿ ಎಂದಿಗೂ ಬೆಳೆಯುವುದಿಲ್ಲ. ಮನುಷ್ಯನಿಗೆ ವಿನಯ ಬೇಕು. ಒಳಿತನ್ನು ಪ್ರಶಂಸೆ ಮಾಡುವ ಗುಣವೂ ಬೇಕು.

ಮನುಷ್ಯನಿಗೆ ಐದು ಜ್ಞಾನೇಂದ್ರಿಯಗಳಿವೆ. ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚೆ ಇವು ತಮ್ಮ ಭೋಗಗಳಾದ ರೂಪ, ಶಬ್ದ, ವಾಸನೆ, ರುಚಿ ಹಾಗೂ ಸ್ಪರ್ಶ ಇವುಗಳ ಕಡೆಗೆ ಸದಾ ಧಾವಿಸುತ್ತಾ ಇರುತ್ತಾರೆ. ಈ ಇಂದ್ರಿಯಗಳನ್ನು ಕಡಿವಾಣ ಹಾಕಿ ನಿಯಂತ್ರಿಸಬೇಕು. ಇಲ್ಲವಾದರೆ ದುರಂತ ತಪ್ಪಿದ್ದಲ್ಲ ಹಾಗೂ ದುಷ್ಟರ ಸಹವಾಸ ಮಾಡಬಾರದು. ಅವರು ದುಷ್ಟರೆಂದು ಮನಸ್ಸು ಹೇಳಿದರೆ, ಅಂಥವರಿಂದ ದೂರ ಇರಬೇಕು. ವ್ಯಕ್ತಿಯ ಗುಣ ಹೇಗೆ ಎನ್ನುವುದು ಅವರವರ ಆತ್ಮಕ್ಕೆ ತಿಳಿಯುತ್ತದೆ. ಈ ಆತ್ಮದ ಆಣತಿಯಂತೆ ಮನುಷ್ಯನು ನಡೆದಾಗ ಎಲ್ಲವೂ ಸುರಕ್ಷಿತ.

Leave a Reply