ಕರ್ಮಸಿದ್ಧಾಂತ ನಿಜವೇ ಆಗಿದ್ದರೆ, ಕೆಲವು ರೈತರಿಗೆ ಫಲವೇಕೆ ಸಿಗುವುದಿಲ್ಲ? : ಅರಳಿಮರ ಸಂವಾದ

ಸತ್ಕರ್ಮ ಅಥವಾ ದುಷ್ಕರ್ಮ ಅಂದರೆ ಟೇಬಲ್ ಎತ್ತಿಟ್ಟ ಹಾಗೆ ಟಕ್ ಅಂತ ಮಾಡಿದ ಕೆಲಸವಲ್ಲ. ಕಾಯಾ ವಾಚಾ ಮನಸಾ ತೊಡಗಿ ಮಾಡಿದ ಕೆಲಸ. ಅಲ್ಲಿ ನಿಮ್ಮ ಬುದ್ಧಿ ಸರಿಯಾಗಿ ಬಳಕೆಯಾಗಿರಬೇಕು. ಒಬ್ಬ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದ್ದರೂ ಆತ ಮೂರ್ಖನಾಗಿದ್ದರೆ, ಫಲಿತಾಂಶ ಹೇಗೆ ಒಳ್ಳೆಯದಾಗಿರಲು ಸಾಧ್ಯ ? ನಾವು ಒಳ್ಳೆಯದು ಎಂಬಂತೆ ಕಾಣುವ ಕರ್ಮವನ್ನು ಪ್ರಜ್ಞಾಪೂರ್ವಕವಾಗಿ ನಡೆಸಿದಾಗ ಮಾತ್ರ, ಅದು ಒಳಿತಿನ ಖಾತೆಗೆ ಸೇರಬೇಕೋ ಕೆಡುಕಿನ ಖಾತೆಗೆ ಸೇರಬೇಕೋ ಅನ್ನುವ ನಿರ್ಧಾರವಾಗುತ್ತದೆ ~ ಚಿತ್ಕಲಾ

samvada

ಕರ್ಮಸಿದ್ಧಾಂತದ ಪ್ರಕಾರ ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟ ಕೆಲಸಕ್ಕೆ ಕೆಟ್ಟ ಫಲ ಎನ್ನುವುದಾದರೆ; ಕೆಲವರು ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯ ಫಲ ಏಕೆ ಸಿಗುವುದಿಲ್ಲ? ಉದಾ: ರೈತರ ಪರಿಸ್ಥಿತಿ | ಅರಳಿಬಳಗ ಓದುಗರು; ಮೊಬೈಲ್ ಕೊನೆಯ ಸಂಖ್ಯೆಗಳು : 5097

ಮೊದಲನೆಯದಾಗಿ ಕರ್ಮ ಸಿದ್ಧಾಂತ ಎಂದರೆ, “ಅಲ್ಲೇ ಲಾಟರಿ, ಅಲ್ಲೇ ಡ್ರಾ” ಥರದ್ದಲ್ಲ. ಅದೊಂದು ಸಂಪೂರ್ಣ ಘಟನಾಚಕ್ರ. ಇಲ್ಲಿ ಸ್ಟ್ರೈಕ್ ಮಾಡಿದರೆ, ಕೇರಮ್ ಬೋರ್ಡಿನ ಅಂಚುಗಳನ್ನೆಲ್ಲ ತಾಕಿ ಎಲ್ಲಿಯದೋ ಪಾನ್’ಗೆ ತಗುಲಿ, ಅದು ಕದಲುವಂತೆ; ಇದೂ ಕೂಡಾ. ನೀವು ಆ ಪಾನ್’ಗೆ ಸ್ಟ್ರೈಕ್ ಆಗುತ್ತದೆ ಅಂದುಕೊಂಡಿರುವುದಿಲ್ಲ. ಅದು ಆಕಸ್ಮಿಕ ಅಂತಲೇ ಭಾವಿಸುತ್ತೀರಿ. ಆದರೆ, ನಿಮ್ಮ ಬಲ ಪ್ರಯೋಗ, ಶೈಲಿ, ಏಕಾಗ್ರತೆ, ಉದ್ದೇಶ ಎಲ್ಲವೂ ಒಟ್ಟಾಗಿಯೇ ಅಲ್ಲಿ ಕೆಲಸ ಮಾಡಿರುತ್ತವೆ ಮತ್ತು ಪಾನ್ ಚಲಿಸುವಂತೆ ಮಾಡಿರುತ್ತವೆ. ಈ ಗಲಾಟೆಯಲ್ಲಿ ಉಳಿದ ಪಾನ್’ಗಳು ಅಲ್ಪಸ್ವಲ್ಪ ಚದುರಿ, ಮುಂದೆ ಅವು ಒಂದು ಅಂತ್ಯ ಕಾಣುತ್ತವಲ್ಲ, ಈ ಒಟ್ಟು ಸಂಗತಿಗಳು ಸೇರಿ ಒಂದು ಘಟನಾಚಕ್ರ. ಕೇರಮ್ ಆಟದ ನಿಮ್ಮ ರಿಸಲ್ಟಿನಲ್ಲಿ ನಿಮ್ಮ ಮೊದಲ ಸ್ಟ್ರೈಕ್ ಈ ಚಕ್ರವನ್ನು ಆರಂಭಿಸುತ್ತದೆ. ಈ ಸ್ಟ್ರೈಕ್ ನಿಮ್ಮ ಕರ್ಮ, ಅಂತಿಮ ರಿಸಲ್ಟ್ ಕರ್ಮಫಲ.

ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದಕ್ಕೆ ಕೆಟ್ಟ ಫಲ ಅನ್ನುವುದನ್ನು ನೀವು ಸರಳ ರೇಖೆಯಲ್ಲಿ ಓದಿಕೊಳ್ಳಬಾರದು. ಮೇಲೆ ಉದಾಹರಣೆ ನೀಡಿದಂತೆ, ಇದೊಂದು ಚಕ್ರ. ಒಂದು ಒಳ್ಳೆಯ ಕೆಲಸ ಮಾಡುತ್ತೀರೆಂದರೆ; ಅಲ್ಲಿ ನೀವು ಬಳಸುವ ಶಕ್ತಿ, ಶ್ರಮ, ಯಾರಿಗಾಗಿ ಮಾಡುತ್ತಿದ್ದೀರಿ, ಫಲಾನುಭವಿಗಳು ಸತ್ಪಾತ್ರರೋ ಅಪಾತ್ರರೋ, ನೀವು ಪ್ರಾಮಾಣಿಕವಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೀರೋ ಒಳ ಉದ್ದೇಶವಿದೆಯೋ – ಇತ್ಯಾದಿ ಅಂಶಗಳೆಲ್ಲ ಅಲ್ಲಿ ಕೌಂಟ್ ಆಗುತ್ತವೆ. ಹೀಗಾಗಿಯೇ ಅತ್ಯಂತ ಸಜ್ಜನ ವ್ಯಕ್ತಿಗಳೂ ಕೆಲವೊಮ್ಮೆ ವಂಚನೆಗೆ ಒಳಗಾಗುತ್ತಾರೆ.

ಸತ್ಕರ್ಮ ಅಥವಾ ದುಷ್ಕರ್ಮ ಅಂದರೆ ಟೇಬಲ್ ಎತ್ತಿಟ್ಟ ಹಾಗೆ ಟಕ್ ಅಂತ ಮಾಡಿದ ಕೆಲಸವಲ್ಲ. ಕಾಯಾ ವಾಚಾ ಮನಸಾ ತೊಡಗಿ ಮಾಡಿದ ಕೆಲಸ. ಅಲ್ಲಿ ನಿಮ್ಮ ಬುದ್ಧಿ ಸರಿಯಾಗಿ ಬಳಕೆಯಾಗಿರಬೇಕು. ಒಬ್ಬ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದ್ದರೂ ಆತ ಮೂರ್ಖನಾಗಿದ್ದರೆ, ಫಲಿತಾಂಶ ಹೇಗೆ ಒಳ್ಳೆಯದಾಗಿರಲು ಸಾಧ್ಯ ? ನಿತ್ರಾಣವಾಗಿ ಏದುಸಿರು ಬಿಡುವ ಹುಚ್ಚುನಾಯಿಗೆ ಪಾಪ ಅಂತ ನೀರು ಕುಡಿಸಿ ಅದು ಕಚ್ಚಿತು ಅಂತ ಬೇಜಾರು ಮಾಡಿಕೊಂಡರೆ ಹೇಗೆ? ನಿತ್ರಾಣರಾದವರಿಗೆ ನೀರು ಕುಡಿಸುವುದು ಒಳ್ಳೆಯದೇ. ಆದರೆ ಆ ನಿತ್ರಾಣಗೊಂಡಿರುವ ವ್ಯಕ್ತಿ / ಪ್ರಾಣಿಯ ಹಿನ್ನೆಲೆ ಏನು ಅನ್ನುವುದನ್ನು ಯೋಚಿಸಿ ಕರ್ಮ ನಡೆಸಿದಾಗ ಮಾತ್ರ ಅದು ಒಳಿತಿನ ಖಾತೆಗೆ ಸೇರಬೇಕೋ ಕೆಡುಕಿನ ಖಾತೆಗೆ ಸೇರಬೇಕೋ ಅನ್ನುವ ನಿರ್ಧಾರವಾಗುತ್ತದೆ.

ಇನ್ನು ರೈತರ ವಿಷಯ. ಬಂಜರು ನೆಲದಲ್ಲಿ ಬಂಗಾರ ಬೆಳೆದ ರೈತರ ಕಥೆ ಕೇಳಿದ್ದೀರಿ. ಅವರಿಗೆ ಸಾಧ್ಯವಾಯಿತು ಎಂದಾದರೆ, ಇವರಿಗೆ ಏಕೆ ಸಾಧ್ಯವಾಗಲಿಲ್ಲ? ಬದ್ಧತೆಯಿಂದ, ಮಾಡಿಯೇ ತೀರುವ ಹಠದಿಂದ ನಡೆಸಿದ ಯಾವ ಕರ್ಮವೂ ವ್ಯರ್ಥವಾಗುವುದಿಲ್ಲ. ಹಾಗೂ ಫಸಲು ಬರಲಿಲ್ಲ ಎಂದರೆ, ಪ್ರಯತ್ನದ ಕೊರತೆ ಅಥವಾ ತಿಳುವಳಿಕೆಯ ಕೊರತೆ ಅಲ್ಲವೆ? ಅಥವಾ ಮಾರುಕಟ್ಟೆಯಲ್ಲಿ ಮೋಸವಾಯಿತು ಅಂದರೆ, ಚಾಣಾಕ್ಷತೆಯ ಕೊರತೆಯಿಂದ ಕೆಲಸ ಮಾಡಿದ್ದಾರೆ ಎಂದಾಗುವುದಿಲ್ಲವೆ? ರೈತ ಹೇಗೆ ತನ್ನ ಕರ್ಮ ನಡೆಸುತ್ತಿರುತ್ತಾನೋ, ಮಾರುಕಟ್ಟೆಯ ದಲ್ಲಾಳಿಯೂ ತನ್ನ ಕರ್ಮ ನಡೆಸುತ್ತ ಇರುತ್ತಾನೆ. ಅವನ ಕರ್ಮದಲ್ಲಿ ವಂಚನೆಯೇ ಧರ್ಮ. ಅವನು ಅದರ ಫಲವನ್ನು ಇನ್ಯಾವುದೋ ಬಗೆಯಲ್ಲಿ ಅನುಭವಿಸುತ್ತ ಇರುತ್ತಾನೆ. ಕರ್ಮ ವೈಯಕ್ತಿಕವಾಗಿದ್ದಾಗ ವೈಯಕ್ತಿಕ ಫಲ ದೊರೆಯುತ್ತದೆ. ಸಾಮುದಾಯಿಕ ಸಂಪರ್ಕಕ್ಕೆ ಬಂದಾಗ; ಸಮುದಾಯದ ಕರ್ಮಚಕ್ರದೊಡನೆ ಸ್ಪಂದಿಸಿ, ಅದಕ್ಕೆ ತಕ್ಕಂತೆ ಫಲ ಹೊಮ್ಮುತ್ತದೆ.

ಕರ್ಮ ನಡೆಸುವುದು ಅಂದರೆ, ಬಟ್ಟೆ ಒಗೆದಂತಲ್ಲ. ಹಿಂಡಿ ಹರವಿದರೆ ಮುಗಿಯುವುದಿಲ್ಲ. ಪ್ರಜ್ಞಾಪೂರ್ವಕವಾಗಿ ಅದರಲ್ಲಿ ತೊಡಗಿಕೊಳ್ಳಬೇಕು. ಅಧ್ಯಯನಪೂರ್ಣವಾಗಿ ಮಾಡಿದಾಗ ಮಾತ್ರ ಅದರ ಫಲ ಗೋಚರಿಸಲು ಸಾಧ್ಯ.

ಒಬ್ಬ ರೈತನ ಪರಿಸ್ಥಿತಿ ದುಃಸ್ಥಿತಿಗೆ ಇಳಿಯಲು ಹಲವು ಕಾರಣಗಳು. ಸಾಮಾಜಿಕ ಮತ್ತು ರಾಜಕೀಯ ಕಾರಣಗಳನ್ನು ಕೈಬಿಡೋಣ. ರೈತನ ಕರ್ಮವನ್ನೇ ಉದಾಹರಣೆ ತೆಗೆದುಕೊಂಡರೆ, ಉಳುಮೆಯ ಹೊರತಾದ ದಿನಗಳಲ್ಲಿ ಅವನು ಭೂಮಿಯನ್ನು ಹೇಗೆ ನಡೆಸಿಕೊಂಡಿದ್ದಾನೆ, ಅದಕ್ಕೆ ರಾಸಾಯನಿಕಗಳನ್ನು ಎಷ್ಟು ಪ್ರಮಾಣದಲ್ಲಿ ಹಾಕಿದ್ದಾನೆ, ಎಷ್ಟು ವೈಜ್ಞಾನಿಕವಾಗಿ ಕೆಲಸ ಮಾಡಿದ್ದಾನೆ, ಎಷ್ಟು ಶ್ರದ್ಧೆಯಿಂದ ಮಾಡಿದ್ದಾನೆ – ಈ ಎಲ್ಲಾ ಅಂಶಗಳೂ ಕರ್ಮದಲ್ಲಿ ಸೇರಿಕೊಳ್ಳುತ್ತವೆ. ಮತ್ತು ಕರ್ಮ ನಿಷ್ಕಾಮವಾಗಿರಬೇಕು. ಕರ್ಮಕ್ಕೆ ಪ್ರತಿಫಲ ನಿಶ್ಚಿತ. ಅದು ಕರ್ಮದ ಪರಿಣಾಮವಾಗಿ ಎಷ್ಟು ಮತ್ತು ಯಾವ ರೂಪದಲ್ಲಿ ಬರುತ್ತದೆಯೋ ಅದೇ ರೂಪ ಮತ್ತು ಪರಿಣಾಮಗಳಲ್ಲಿ ಬರುತ್ತವೆ.

ಸಾಲವೇ ಮೊದಲಾದ ಸಂಕಷ್ಟಗಳು, ಆತ್ಮಹತ್ಯೆಯ ಕರುಣಾಜನಕ ಕಥೆಗಳನ್ನು ನೀವು ಸಂಕಷ್ಟ ಅನ್ನುವುದಾದರೆ, ಇವೇ ಸಂಕಟಗಳನ್ನು ಇನ್ನೂ ಹಲವು ವಲಯಗಳ ಜನರು ಅನುಭವಿಸುತ್ತಿದ್ದಾರೆ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಾವು ಕರ್ಮದ ವಿಷಯ ಮಾತಾಡುತ್ತಿದ್ದೇವೆ ಆದ್ದರಿಂದ ಆಧ್ಯಾತ್ಮಿಕವಾಗಿಯೇ ಮಾತಾಡೋಣ. ಒಬ್ಬ ಮನುಷ್ಯನಿಗೆ  ತೃಪ್ತಿಯ ಜೀವನ ನಡೆಸಲು ಏನು ಬೇಕು? ವಾರಕ್ಕೊಂದು ಬಳ್ಳ ಭತ್ತ ಸಾಕು ! ರೈತನ ಪರಿಶ್ರಮ ಅವನಿಗೆ ಈ ಜೀವಿತವನ್ನು ಅಗತ್ಯವಾಗಿ ಕೊಡುವುದು. ನಾವು ಸುಖವನ್ನು ಐಹಿಕ ವಸ್ತುಗಳಿಂದ ಅಳೆಯುವುದಾದರೆ, ಇಲ್ಲಿ ಕರ್ಮ ಮತ್ತು ಫಲದ ಚರ್ಚೆಗೆ ಆಸ್ಪದವಿಲ್ಲ. ಏಕೆಂದರೆ ಕರ್ಮ ಎಂದರೆ ಖರೀದಿಯಲ್ಲ, ಫಲ ನಿಮ್ಮ ಹಣಕ್ಕೆ ದೊರೆಯುವ ವಸ್ತುವೂ ಅಲ್ಲ. 

ಕೊನೆಯದಾಗಿ, ರೈತನ ಕೆಲಸಕ್ಕೆ ಒಳ್ಳೆಯ ಕೆಲಸ ಎನ್ನುವ ಪ್ರತ್ಯೇಕ ಹಣೆಪಟ್ಟಿ ಏಕೆ? ಉತ್ತುವುದು ಬಿತ್ತುವುದು ರೈತನ ಕರ್ಮ. ಅವನ ಬಳಿ ಭೂಮಿ ಇರುವುದರಿಂದ ಅವನು ಅದನ್ನು ಮಾಡುತ್ತಿದ್ದಾನೆ. ಅವನು ಕುಂಬಾರನಾಗಿದ್ದರೆ ಮಡಿಕೆ ಮಾಡುತ್ತಿದ್ದ. ಸೈನಿಕನಾಗಿದ್ದರೆ ಗಡಿ ಕಾಯುತ್ತಿದ್ದ. ಇಂಜಿನಿಯರ್ ಆಗಿದ್ದರೆ ಆಫೀಸಲ್ಲಿ ಕುಳಿತು ಕೆಲಸ ಮಾಡುತ್ತಿದ್ದ. ಅವನು ತನ್ನ ಕೃಷಿ ಕರ್ಮವನ್ನು ಹೇಗೆ ನಡೆಸುತ್ತಾನೋ ಅದರಂತೆಯೇ ಫಲ ಸಿಗುತ್ತದೆ. ಇಷ್ಟಕ್ಕೂ ಈ ಕರ್ಮ ಫಲವನ್ನು ಅಳೆಯುವ ಮಾಪನ ನಮ್ಮಲ್ಲಿ – ನಿಮ್ಮಲ್ಲಿ ಇರುವುದಿಲ್ಲ. ಏಕೆಂದರೆ, ಫಲಗಳು ಯಾವತ್ತೂ ಪರಿಣಾಮ ರೂಪಿ.

ಅಕಸ್ಮಾತ್ ಅವನು ಅದನ್ನು ಫಲಾಪೇಕ್ಷೆ ಇಲ್ಲದೆ, ತಾನು ತನ್ನ ಊಟಕ್ಕೆ ಮಾತ್ರ ಇರಿಸಿಕೊಂಡು ಉಳಿದೆಲ್ಲ ಫಸಲನ್ನೂ ಅಗತ್ಯದಲ್ಲಿರುವವರಿಗೆ ದಾನ ಮಾಡಿಬಿಟ್ಟಿದ್ದರೆ, ಅದು ಆತನ ‘ಒಳ್ಳೆಯ ಕೆಲಸ’ ಆಗುತ್ತಿತ್ತು. ಈಗ ಅವನು ಕೆಲಸ ಮಾಡುತ್ತಿದ್ದಾನೆ ಅಷ್ಟೆ. ಎಷ್ಟು ಉತ್ತಮ ರೀತಿಯಲ್ಲಿ ಮಾಡುತ್ತಾನೋ ಅದಕ್ಕೆ ತಕ್ಕ ಫಲ ಪಡೆಯುತ್ತಾನೆ. ಆದ್ದರಿಂದ, ಕರ್ಮಫಲ ಕೇಳುವ ಮೊದಲು, ಕರ್ಮವನ್ನು ಸರಿಯಾಗಿ ಗ್ರಹಿಸುವುದು ಅತ್ಯವಶ್ಯಕ. 

 

 

1 Comment

Leave a Reply