ಮಾತು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 19

Inspirational Quotes Kahlil Gibran Life Kahlil Gibran Quotes | K

ವಿದ್ವಾಂಸನೊಬ್ಬ ಮಾತಿನ ಮಹತ್ವದ ಬಗ್ಗೆ
ಕೇಳಿದ ಪ್ರಶ್ನೆಗೆ ಅವನು ಉತ್ತರಿಸತೊಡಗಿದ.

ನಿಮ್ಮ ವಿಚಾರಗಳ ಜೊತೆ
ಸಮಾಧಾನ ಸಾಧ್ಯವಾಗದೇ ಹೋದಾಗ ಮಾತ್ರ
ನೀವು ಮಾತನಾಡುತ್ತೀರಿ.

ಯಾವಾಗ ನೀವು
ಹೃದಯದ ಏಕಾಂತದಲ್ಲಿ ನೆಲೆ ನಿಲ್ಲಲಾರಿರೋ
ಆಗ ನೀವು ತುಟಿಗಳ ಮೇಲೆ
ವಾಸ ಮಾಡಲು ಆರಂಭ ಮಾಡುತ್ತೀರಿ.

ಶಬ್ದ, ದಾರಿ ತಪ್ಪಿಸುವ ಮತ್ತು
ಕಾಲ ಹರಣದ ಸಾಧನವಾಗುವುದು ಆಗಲೇ.

ಬಹುತೇಕ ನಿಮ್ಮ ಮಾತಿನಲ್ಲಿ
ವಿಚಾರದ ಅರ್ಧ ಕೊಲೆಯಾಗಿರುತ್ತದೆ.
ಏಕೆಂದರೆ ವಿಚಾರ, ಆಕಾಶದ ಹಕ್ಕಿ.
ಶಬ್ದದ ಪಂಜರದಲ್ಲಿ ತನ್ನ ರೆಕ್ಕೆಯನ್ನೇನೋ ಬಿಚ್ಚುತ್ತದೆ
ಆದರೆ ಹಾರಾಟ ಸಾಧ್ಯವಾಗುವುದಿಲ್ಲ.

ಏಕಾಂತದ ಆತಂಕವನ್ನು ಎದುರಿಸಲಾರದೇ
ಮಾತಿಗಿಳಿಯುತ್ತಾರೆ ನಿಮ್ಮಲ್ಲಿ ಕೆಲವರು.
ಏಕಾಂತದ ನೀರವ
ಅವರ ಬೆತ್ತಲನ್ನು ಬಯಲು ಮಾಡಬಹುದೆಂಬ
ಭಯದಿಂದ ಪಾರಾಗಲು ಹವಣಿಸುತ್ತಾರೆ ಅವರು.

ಮತ್ತೆ ಕೆಲವರು ಮಾತನಾಡುತ್ತಾರೆ
ಯಾವುದೇ ಅರಿವಿಲ್ಲದೆಯೇ,
ಯಾವ ದೂರಾಲೋಚನೆಯೂ ಇಲ್ಲದೆಯೇ.
ಹೀಗೆ ಮಾತನಾಡುವಾಗಲೇ ಅವರು
ತಮಗೂ ಅರ್ಥವಾಗದಿರುವ
ಸತ್ಯವೊಂದನ್ನು ಅನಾವರಣ ಮಾಡುತ್ತಾರೆ.

ಇನ್ನೂ ಕೆಲವರ ಒಳಗೆ ಸತ್ಯ ಒಂದಾಗಿದೆ
ಆದರೆ ಅದು, ಮಾತಿನ ಮೂಲಕ ವ್ಯಕ್ತವಾಗುವುದಿಲ್ಲ.
ಇಂಥವರ ಹೃದಯದಲ್ಲಿಯೇ ಚೇತನ
ಲಯಬದ್ಧ ಮೌನದಲ್ಲಿ ನೆಲೆಗೊಂಡಿದೆ.

ರಸ್ತೆ ಬದಿಯಲ್ಲಿ
ಅಥವಾ ಮಾರುಕಟ್ಟೆಯ ಜಾಗದಲ್ಲಿ
ನಿಮ್ಮ ಗೆಳೆಯ ಎದುರಾದಾಗ,
ನಿಮ್ಮೊಳಗಿನ ಚೇತನ
ನಿಮ್ಮ ತುಟಿಗಳನ್ನು ನಿಯಂತ್ರಿಸಲಿ,
ನಿಮ್ಮ ನಾಲಿಗೆಯನ್ನು ನಿರ್ದೇಶಿಸಲಿ.

ನಿಮ್ಮ ದನಿಯೊಳಗಿನ ದನಿ
ಅವನ ಕಿವಿಯೊಳಗಿನ ಕಿವಿಯ ಜೊತೆ
ಮಾತಿಗಿಳಿಯಲಿ.

ಆಗಲೇ,
ಬಣ್ಣ ಮರೆತು ಹೋದಾಗಲೂ,
ಬಟ್ಟಲು ಇಲ್ಲದಿರುವಾಗಲೂ,
ನಿಮ್ಮ ನಾಲಿಗೆ,
ಮದಿರೆಯ ರುಚಿಯನ್ನು ನೆನಪಿಲ್ಲಿಟ್ಟುಕೊಳ್ಳುವಂತೆ
ಅವನ ಆತ್ಮ
ನಿಮ್ಮ ಹೃದಯದ ಸತ್ಯವನ್ನು
ತನ್ನ ನೆನಪಿನಲ್ಲಿ ಕಾಯ್ದಿಟ್ಟುಕೊಳ್ಳುವುದು.

ಮುಂದುವರೆಯುತ್ತದೆ……….

ಹಿಂದಿನ ಭಾಗವನ್ನು ಇಲ್ಲಿ ಓದಿ :  https://aralimara.com/2018/09/23/pravadi-6/

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply