ಒಮ್ಮೆ ಬಾಬಾ ಫರೀದ್, ತಮ್ಮ ಶಿಷ್ಯರೊಡನೆ ಸಂತ ಕಬೀರರು ವಾಸಿಸುತ್ತಿದ್ದ ಹಳ್ಳಿಯನ್ನು ಹಾದು ಹೋಗುತ್ತಿದ್ದರು.
ಆ ಸಂಗಡಿಗರು ಫರೀದರ ಬಳಿ, “ಹೇಗೂ ದಾರಿಯಲ್ಲಿ ಕಬೀರರ ಮನೆ ಸಿಗುತ್ತದೆ. ಅವರನ್ನು ಭೇಟಿ ಮಾಡಿ, ಎರಡು ದಿನ ತಂಗಿದ್ದು ಹೊರಡೋಣ” ಅಂದರು. “ನಿಮ್ಮ ನಡುವೆ ನಡೆಯುವ ಮಾತುಕತೆಗಳನ್ನು ಕೇಳಲು ನಾವು ತುಂಬ ಉತ್ಸುಕರಾಗಿದ್ದೇವೆ. ಅದರಿಂದ ನಮಗೂ ಲಾಭವಾಗುತ್ತದೆ” ಎಂದು ತಮ್ಮ ಬೇಡಿಕೆಯ ಉದ್ದೇಶವನ್ನೂ ತಿಳಿಸಿದರು.
ಆಗ ಬಾಬಾ ಫರೀದ್, “ಧಾರಾಳವಾಗಿ ಹೋಗೋಣ. ಆದರೆ ನಮ್ಮಿಬ್ಬರ ನಡುವೆ ಮಾತುಕತೆಯ ನಿರೀಕ್ಷೆ ಇಟ್ಟುಕೊಳ್ಳಬೇಡಿ” ಅಂದರು.
ಫರೀದರು ತಮ್ಮ ಅನುಚರರೊಡನೆ ಬರುತ್ತಿರುವ ವಿಷಯ ತಿಳಿದು, ಕಬೀರರು, ತಾವೇ ಖುದ್ದಾಗಿ ಅವರನ್ನು ಎದುರುಗೊಂಡು ಆತಿಥ್ಯ ಸ್ವೀಕರಿಸಲು ಆಹ್ವಾನ ನೀಡಿದರು.
ಕಬೀರ್ ಮತ್ತು ಫರೀದ್ ಪರಸ್ಪರ ಆಲಿಂಗಿಸಿ, ಆನಂದದಿಂದ ಕಣ್ಣೀರಿಟ್ಟರು. ಈ ದಿವ್ಯ ಮಿಲನ ಕಂಡು ಅನುಚರರಿಗೆ ಆನಂದವೋ ಆನಂದ.
ಆಮೇಲೆ ಎರಡು ದಿನ ಫರೀದ್ ಮತ್ತವರ ಸಂಗಡಿಗರು ಕಬೀರರ ಮನೆಯಲ್ಲಿ ಉಳಿದುಕೊಂಡರು. ಆದರೆ ಎರಡೂ ದಿನಗಳ ಕಾಲ ಅಲ್ಲಿದ್ದುದು ಮಹಾಮೌನ ಮಾತ್ರ. ಫರೀದರ ಅನುಚರರು ನಿರೀಕ್ಷಿಸಿದ್ದಂತೆ, ಅಲ್ಲಿ ಯಾವ ಸಂಭಾಷಣೆಯೂ ನಡೆಯಲಿಲ್ಲ.
ಎರಡು ದಿನಗಳ ಬಳಿಕ ಅವರು ಪರಸ್ಪರ ಬೀಳ್ಕೊಂಡರು.
ದಾರಿಯಲ್ಲಿ ಹೋಗುವಾಗ ಅನುಚರರು ನಿರಾಶೆಯಿಂದ, “ನೀವೇಕೆ ಪರಸ್ಪರ ಮಾತಾಡಲೇ ಇಲ್ಲ?” ಎಂದು ವಿಚಾರಿಸಿದರು.
“ನಾನು ಮೊದಲೇ ನಿಮಗೆ ಹೇಳಿದ್ದೆನಲ್ಲವೆ? ನನ್ನ ಮತ್ತು ಕಬೀರರ ನಡುವೆ ಯಾವ ಬಗೆಯ ಮಾತುಕತೆ ನಡೆಯಲು ಸಾಧ್ಯ? ಅವರಿಗೆ ಗೊತ್ತಿರುವುದೇ ನನಗೂ ಗೊತ್ತಿರುವುದು. ನನಗೆ ಗೊತ್ತಿರುವುದು ಅವರಿಗೂ ಗೊತ್ತಿದೆ. ಅಂದ ಮೇಲೆ ನಾನು ಮತ್ತು ಅವರು – ಇಬ್ಬರು ವ್ಯಕ್ತಿಗಳಾಗಿ ಮಾತಾಡಲು ಹೇಗೆ ಸಾಧ್ಯ!?” ಬಾಬಾ ಫರೀದ್ ನಕ್ಕರು.
ಈಗ ಸಂಗಡಿಗರ ನಡುವೆ ಮಹಾಮೌನ ಆವರಿಸಿತು. ತಿಳಿವಿನ ಒಂದು ಹನಿ ಅವರ ಬುಟ್ಟಿ ಸೇರಿತ್ತು.