ಖೊಟ್ಟಿ ನಾಣ್ಯ : ಒಂದು ಸೂಫಿ ಕಥೆ

sufi 1

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದೂರಿನಲ್ಲಿ ಒಬ್ಬ ಭೋಳೆ ಮನುಷ್ಯ ಇದ್ದ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ. ಸಣ್ಣ ಪುಟ್ಟ ಸಾಮಾನುಗಳನ್ನು ಮಾರಿ ಜೀವನ ನಡೆಸುತ್ತಿದ್ದ.

ಆ ಊರಿನ ಜನ ಅವನನ್ನು ಸಾಮಾನ್ಯ ಜ್ಞಾನ ಇಲ್ಲದ, ಲಾಭ ನಷ್ಟ ಗೊತ್ತಿಲ್ಲದ ಪೆದ್ದ ಎಂದು ತಿಳಿದುಕೊಂಡಿದ್ದರು. ಕೆಲವರು, ಕೊಂಡ ವಸ್ತುಗಳಿಗೆ ಬದಲಾಗಿ ಅವನಿಗೆ ಖೊಟ್ಟಿ ನಾಣ್ಯಗಳನ್ನು ಕೊಡುತ್ತಿದ್ದರು. ಕೆಲವರಂತೂ ದುಡ್ಡು ಕೊಟ್ಟು ಬಿಟ್ಟಿದ್ದೇವೆ ಎಂದು ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು. ಆದರೆ ಈ ಮನುಷ್ಯ ಯಾರೊಂದಿಗೂ ಜಗಳ ಆಡುತ್ತಿರಲಿಲ್ಲ. “ ಆಯ್ತು ಬಿಡಿ” ಎಂದು ಸುಮ್ಮನಾಗಿ ಬಿಡುತ್ತಿದ್ದ.

ಇವನು ಹೀಗೆ ಎಂದು ಗೊತ್ತಾಗಿ ಬೇರೆ ಊರಿನ ಜನ ಕೂಡ ಇವನ ಅಂಗಡಿಗೆ ಬಂದು, ಸಾಮಾನು ಕಂಡು ಖೊಟ್ಟಿ ನಾಣ್ಯ ಕೊಟ್ಟು ಮೋಸ ಮಾಡುತ್ತಿದ್ದರು.

ಸಮಯ ಕಳೆದಂತೆ ಆ ಮನುಷ್ಯನಿಗೆ ವಯಸ್ಸಾಯಿತು. ಕೊನೆಗೊಂದು ದಿನ ಅವನು ಸಾಯುವ ದಿನ ಬಂದೇ ಬಿಟ್ಟಿತು. ಊರಿನ ಜನ ಅವನ ಸುತ್ತ ಸೇರಿದರು. ಸಾಯುವ ಮುನ್ನ ಅವನು ಕೊನೆಯದಾಗಿ ಮಾತಾಡಿದ,

“ ಓ ನನ್ನ ದೇವರೆ, ಯಾವಾಗಲೂ ನಾನು ಎಲ್ಲ ಥರದ ನಾಣ್ಯಗಳನ್ನೂ ಸ್ವೀಕರಿಸಿದೆ, ಖೊಟ್ಟಿ ನಾಣ್ಯಗಳನ್ನೂ ಎರಡು ಮಾತಿಲ್ಲದೆ ತೆಗೆದುಕೊಂಡೆ. ನಾನೂ ಒಂದು ಖೊಟ್ಟಿ ನಾಣ್ಯವೇ… ನನ್ನನ್ನೂ ಪರೀಕ್ಷಿಸದೇ ಸ್ವೀಕರಿಸು. ನಾನು ನಿನ್ನ ಜನರ ನ್ಯಾಯದ ಬಗ್ಗೆ ಮಾತನಾಡಿಲ್ಲ, ನೀನೂ ನನ್ನ ಮೇಲೆ ನಿನ್ನ ನ್ಯಾಯ ಹೇರಬೇಡ.”

 

Leave a Reply