ಕರ್ನಾಟಕದಲ್ಲಿ ನಾವು ನವರಾತ್ರಿಯನ್ನು ಹೇಗೆ ಆಚರಿಸುತ್ತೇವೆ ಎಂಬುದು ನಮಗೆ ಗೊತ್ತಿದೆ. ಇದು ನಾಡಹಬ್ಬ ಎಂಬ ಸಂಭ್ರಮಕ್ಕೆ ಪಾತ್ರವಾದ ವೈಭವದ ಉತ್ಸವ. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನಾಲ್ಕು ಕಂತುಗಳಲ್ಲಿ ನೀಡಲಿದೆ. ಈ ಕಂತಿನಲ್ಲಿ ಉತ್ತರ ರಾಜ್ಯಗಳ ನವರಾತ್ರಿ ಉತ್ಸವ ಮಾಹಿತಿ ಇದೆ.
ಉತ್ತರ ಭಾರತದಲ್ಲಿ…
ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ‘ದಶ-ಹರ’ (ಹತ್ತು ತಲೆಯವನ ನಿರ್ನಾಮ) ಎಂಬುದು ಶ್ರೀ ರಾಮನ ಗೌರವಾರ್ಥ ಆಚರಣೆ. ಆ ಹತ್ತು ದಿನಗಳಲ್ಲಿ ರಾಮಾಯಣವನ್ನು ಆಧರಿಸಿದ ಅನೇಕ ನಾಟಕಗಳು ಅಭಿನಯಿಸಲ್ಪಡುತ್ತವೆ. ಇವಕ್ಕೆ ‘ರಾಮಲೀಲಾ’ ಎಂದೇ ಹೆಸರು. ದಿಲ್ಲಿಯಲ್ಲಿ ಈ ಹೆಸರಿನ ಒಂದು ದೊಡ್ದ ಮೈದಾನವಿರುವುದು ನಿಮಗೆ ಗೊತ್ತೇ ಇದೇ. ಅಷ್ಟೇ ಅಲ್ಲ, ರಾವಣ, ಕುಂಭಕರ್ಣ ಮತ್ತು ಮೇಘನಾದರ ಬೃಹತ್ ಪ್ರತಿಕೃತಿಗಳನ್ನು ಕೊನೆಯ ದಿನ ಸುಡುತ್ತಾರೆ. ಅದನ್ನು ನೋಡುವುದೇ ಒಂದು ಸಂಭ್ರಮ.
ಉತ್ತರ ಭಾರತದಲ್ಲಿ ದಸರಾ ಎಂದರೆ ಸುಡು ಬೇಸಗೆಯ ಅಂತ್ಯ ; ಚಳಿಗಾಳಿಯ ಆರಂಭ. ಕೆಲವು ಸೋಂಕು ರೋಗಗಳಿಗೆ ಈ ಚಳಿಗಾಳಿ ಪ್ರೇರೇಪಕ ಎಂಬ ಭಾವನೆ ಅಲ್ಲಿದೆ. ರಾವಣಾದಿಗಳ ಪ್ರತಿಕೃತಿಗಳಲ್ಲಿ ತುಂಬಿರುವ ಸುಡುಮದ್ದುಗಳು, ಬಿರುಸು-ಬಾಣಗಳಲ್ಲಿರುವ ಗಂಧಕ ದಹಿಸಿ ವಾತಾವರಣವನ್ನು ಶುದ್ಧಗೊಳಿಸುತ್ತದಂತೆ. ಇದೇ ಉದ್ದೇಶದಿಂದ ಮಂದಿರಗಳಲ್ಲಿ ಚಂಡಿ ಹೋಮ ಅಥವಾ ದುರ್ಗಾ ಹೋಮ ನೆರವೇರಿಸುವುದು.
ಆದರೆ, ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ
ಮತ್ತು ಉತ್ತರಾಖಂಡಗಳಲ್ಲಿ ನವರಾತ್ರಿಯ ಮೊದಲ ದಿನ ಮಣ್ಣು ತುಂಬಿದ ಮಡಕೆಗಳಲ್ಲಿ ಬಾರ್ಲೀ ಬೀಜಗಳನ್ನು ನಡುವುದು ಪರಂಪರಾಗತ ವಾಡಿಕೆ. ಮುಂದಿನ ಒಂಬತ್ತು ರಾತ್ರಿಗಳಲ್ಲಿ ಬೆಳೆದ ಬಾರ್ಲೀ ಸಸಿಗಳನ್ನು ಹತ್ತನೆಯ ದಿನ ಅಂದರೆ ದಸರೆಯಂದು ‘ಭಾಗ್ಯದ ಸಂಕೇತ’ವೆಂದು ಭಾವಿಸಿ, ಪುರುಷರು ತಮ್ಮ ಟೋಪಿ ಇಲ್ಲವೇ ಕಿವಿಗಳ ಮೇಲೆ ಧರಿಸುತ್ತಾರೆ.
‘ಭಾರತದ ನವರಾತ್ರ ರಾಜಧಾನಿ’ ವೈಷ್ಣೋದೇವಿ
ಜಮ್ಮು ನಗರದ ಬಳಿಯ ಕತ್ರಾಕ್ಕೆ ‘ಭಾರತದ ನವರಾತ್ರ ರಾಜಧಾನಿ’ ಎಂದೇ ಪ್ರಸಿದ್ಧಿ. ಇಲ್ಲಿ ಒಂಬತ್ತು ದಿನಗಳ ಕಾಲ ಮಾತಾ ವೈಷ್ಣೋದೇವಿ ಉತ್ಸವ. ಹಗಲಿನ ಸಂಭ್ರಮ ಒಂದು ರೀತಿಯದಾದರೆ, ರಾತ್ರಿ ಇಡೀ ಕ್ಷೇತ್ರವೇ ಜಗಮಗಿಸುತ್ತಿರುತ್ತದೆ.
ಹಗಲಿರುಳೆನ್ನದೆ “ಜೈ ಮಾತಾ ದಿ” ಘೋಷ ಕೇಳುತ್ತಲೇ ಇರುತ್ತದೆ. ಈ ಸಂದರ್ಭಕ್ಕೆಂದೇ ದೂರದೂರದಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಾತಾ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುತ್ತಾರೆ.
ಇನ್ನು, ಉತ್ತರಾಖಂಡದ ಕುಮಾವೋ ಪ್ರದೇಶದ ದಸರಾದ್ದೇ ಒಂದು ವಿಶೇಷ. ‘ರಾಮಲೀಲಾ’ ನೃತ್ಯ ನಾಟಕ ಪ್ರದರ್ಶನದೊಂದಿಗೆ ಇಲ್ಲಿ ದಸರಾ ಶುರು. ಅಲ್ಮೋರಾ ಅಥವಾ ಕುಮಾವೋ ಶೈಲಿಯ ಈ ‘ರಾಮಲೀಲಾ’ ಇದೀಗ ಜಗತ್ಪ್ರಸಿದ್ಧ.
ಹಿಮಾಚಲದ ‘ಕುಲ್ಲು ದಸ್ಸೆಹ್ರಾ’
ಹಿಮಾಚಲ ಪ್ರದೇಶದ ಕುಲ್ಲು ಅಥವಾ ಕುಲೂ ಕಣಿವೆ ಪ್ರದೇಶದಲ್ಲಿ ಆಚರಿಸಲ್ಪಡುವ ‘ಕುಲ್ಲು ದಸ್ಸೆಹ್ರಾ’ ಅಥವಾ ಕುಲ್ಲು ದಸರಾ ನಮ್ಮ ಮೈಸೂರು ದಸರೆಯಷ್ಟೇ ಪ್ರಸಿದ್ಧ. ಈ ಪ್ರದೇಶದ ಧಾಲ್ಪುರ್ ಮೈದಾನದಲ್ಲಿ ‘ವಿಜಯ ದಶಮಿ’ಯಂದು ಆರಂಭವಾಗಿ ಏಳು ದಿನಗಳ ಕಾಲ ಮುಂದುವರಿಯುತ್ತದೆ. 17 ನೆಯ ಶತಮಾನದಲ್ಲಿ ಸ್ಥಾನಿಕ ದೊರೆ ಜಗತ್ ಸಿಂಗ್ ಎಂಬಾತ ತಾನು ಮಾಡಿದ ಯಾವುದೋ ತಪ್ಪಿನ ಅರಿವಾಗಿ, ಪಶ್ಚಾತ್ತಾಪರೂಪವಾಗಿ ಕಾಡಿಗೆ ತೆರಳಲು ನಿರ್ಧರಿಸಿ, ಸಿಂಹಾಸನದ ಮೇಲೆ ರಘುನಾಥ ದೇವರ ಮೂರ್ತಿಯನ್ನು ಇರಿಸಿದ. ಅಂದಿನಿಂದ ರಘುನಾಥ ದೇವರೇ ಆ ಕಣಿವೆಯ ಆರಾಧ್ಯ ದೈವ.
ಕುಲ್ಲು ದಸರಾದ ವಿಶೇಷ ಎಂದರೆ ಇನ್ನೂರಕ್ಕೂ ಹೆಚ್ಚು ದೇವತಾ ಮೂರ್ತಿಗಳು ಈ ಸಂದರ್ಭದಲ್ಲಿ ಒಂದೆಡೆ ಸೇರುವುದು. ರಘುನಾಥ ದೇವರ ಉತ್ಸವ ಮೂರ್ತಿಯನ್ನು ಇರಿಸಿದ ಅಲಂಕೃತ ತೇರು ನೋಡಲು ಎರಡು ಕಣ್ಣುಗಳು ಸಾಲದು. ತೆರಿಗೆ ಕಟ್ಟಿದ ದಪ್ಪ ಹಗ್ಗಗಳನ್ನು ಸಾವಿರಾರು ಭಕ್ತರು ಉತ್ಸಾಹದಿಂದ ಎಳೆಯುತ್ತ ಧಾಲ್ಪುರ್ ಮೈದಾನದಿಂದ ಪಾದಗಟ್ಟೆಯವರೆಗೆ ತರುತ್ತಾರೆ. ಈ ಹಗ್ಗವನ್ನು ಎಳೆಯುವುದರಿಂದ ಅಲ್ಲಿಯವರೆಗಿನ ತಮ್ಮ ಸಂಚಿತ ಪಾಪಗಳೆಲ್ಲ ನಿಶ್ಯೇಷವಾಗುತ್ತವೆ ಎಂಬುದು ಇಲ್ಲಿಯವರ ನಂಬಿಕೆ. ಮಾರ್ಗಮಧ್ಯದಲ್ಲಿ ಅಡಿಗಡಿಗೆ ಎದುರಾಗುತ್ತವೆ ಇನ್ನಿತರ ಸ್ಥಳೀಯ ದೇವತೆಗಳ ಅಲಂಕೃತ ‘ಡೋಲಿ’ಗಳು ಅಥವಾ ‘ಪಾಲಕಿ’ಗಳು. ಹೀಗೆ ಹಿರಿಯ ದೈವವನ್ನು ಕಡ್ಡಾಯವಾಗಿ ಭೇಟಿಯಾಗುವ ಸ್ಥಳೀಯ ದೈವಗಳ ಪಾಲಕಿಗಳು ಇನ್ನೂರಕ್ಕೂ ಹೆಚ್ಚು.
ಕೊನೆಯ ಅಂದರೆ ಏಳನೆಯ ದಿನ ರಘುನಾಥ ದೇವರ ತೇರನ್ನು ಬಿಯಾಸ್ ನದಿಯ ದಡದ ತನಕ ಕೊಂಡೊಯ್ಯಲಾಗುತ್ತದೆ. ನಮ್ಮಲ್ಲಿ ಕಾಮದಹನಕ್ಕೆ ಪೇರಿಸಿರುವಂತೆಯೇ ಇಲ್ಲಿ ಒಟ್ಟಲ್ಪಟ್ಟಿರುವ ಒಣ ಹುಲ್ಲು ಮತ್ತು ಉರುವಲು ಕಟ್ಟಿಗೆಯ ರಾಶಿಗೆ ಬೆಂಕಿ ಹಚ್ಚುತ್ತಿದ್ದಂತೆಯೇ ಜನೋದ್ಗಾರ ಮುಗಿಲು ಮುಟ್ಟುತ್ತದೆ. ಇದು ‘ಲಂಕಾದಹನ’ದ ಸಂಕೇತವಂತೆ.
ಕೋಟಾದ ‘ದಸ್ಸೆಹ್ರಾ ಮೇಳಾ’…
ರಾಜಸ್ಥಾನದ ಕೋಟಾದಲ್ಲಿ ದಸರೆಯ ಸಂದರ್ಭದಲ್ಲಿ ಮೂರು ದಿನಗಳ ದೊಡ್ಡದೊಂದು ಜಾತ್ರೆ ನಡೆಯುತ್ತದೆ. ರಾಜಸ್ಥಾನಿ ಹಸ್ತಕಲಾ ವಸ್ತುಗಳು, ತಿಂಡಿ ತೀರ್ಥಗಳ ಸ್ಟಾಲುಗಳು ಸಾಲುಗಟ್ಟಿರುತ್ತವೆ. ಕೊನೆಯ ದಿನ ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಕೃತಿಗಳನ್ನು ಸುಡುವ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದವರ ಹರ್ಷೋದ್ಗಾರ ಗಗನ ಮುಟ್ಟುತ್ತದೆ.
ವಾರಣಾಸಿ – ರಾಮ ನಗರದ ರಾಮಲೀಲಾ…
ವಾರಣಾಸಿಯಿಂದ 15 ಕಿ.ಮೀ. ದೂರದ ರಾಮನಗರದಲ್ಲಿ ನಡೆಯುವ ‘ರಾಮಲೀಲಾ’ ತನ್ನದೇ ಆದ ವೈಶಿಷ್ಟ್ಯ ಹೊಂದಿರುವಂಥದ್ದು. ಬೇರೆಡೆಯೆಲ್ಲ ನಿಮಗೆ ಒಂದೇ ವೇದಿಕೆಯ ಮೇಲೆ ಆಡಲ್ಪಡುವ ‘ರಾಮಲೀಲಾ’ ಪ್ರದರ್ಶನಗಳು ನೋಡಲು ಸಿಕ್ಕರೆ ಇಲ್ಲಿ ಅದು ಹಲವು ವೇದಿಕೆಗಳ ಮೇಲೆ ಪ್ರದರ್ಶಿಸಲ್ಪಡುವ ‘ಮಹಾ’ ರಾಮಲೀಲಾ ಆಗಿ ಕಾಣುತ್ತದೆ. ಇಂಥ ಪ್ರದರ್ಶನಗಳು ಇಲ್ಲಿ 31 ದಿನಗಳ ವರೆಗೆ ಮುಂದುವರಿಯುತ್ತಲೇ ಇರುತ್ತವೆ.’ರಾಮಾಯಣಿ’ಗಳೆಂದೇ ಕರೆಯಲ್ಪಡುವ, ರಾಮಾಯಣ ಪಠಣ ಮಾಡುವ ಅನೇಕ ಸಾಧುಗಳು ಕಾಣುತ್ತಾರೆ. ಅವರ ‘ಪಠಣ’, ನಟರ ಅಭಿನಯಗಳಿಂದ ಇಡೀ ವಾತಾವರಣ ‘ರಾಮಮಯ’ವಾಗಿರುತ್ತದೆ. ದೇಶಿಗರಂತೂ ಸರಿಯೇ, ಅವರಿಗಿಂತ ಹೆಚ್ಚಾಗಿ ವಿದೇಶಿಗರೇ ಇಲ್ಲಿ ಕಿಕ್ಕಿರಿದು ತುಂಬಿ ರಾಮನಗರದ ರಾಮಲೀಲಾದ ‘ಜಾಗತಿಕ ರಾಯಭಾರಿ’ಗಳೆನಿಸಿಬಿಡುತ್ತಾರೆ.
ಇದೇ ವೇಳೆಗೆ ಅಲ್ಲಿಯ ಕೆಲವು ಮನೆಗಳಲ್ಲೂ ಮಂದಿರಗಳಲ್ಲೂ ‘ಚಂಡಿ ಹೋಮ’ ಅಥವಾ ‘ದುರ್ಗಾ ಹೋಮ’ ನಡೆಯುತ್ತಿರುತ್ತದೆ. ‘ರಾವಣ’ನ ಪ್ರತಿಕೃತಿಯನ್ನು ಸುಡುವುದರ ಹಿಂದೆ ಒಂದು ಮಹತ್ವದ ಅರ್ಥ ಅಡಗಿದೆ. ಆತನ ಹತ್ತು ತಲೆಗಳೆಂದರೆ ಹತ್ತು ಅವಗುಣಗಳು. ನಮ್ಮೆಲ್ಲರಲ್ಲೂ ಅಡಗಿರಬಹುದಾದ ಆ ಹತ್ತು ಅವಗುಣಗಳೆಂದರೆ : ‘ಕಾಮ’, ‘ಕ್ರೋಧ’, ‘ಮೋಹ’, ‘ಲೋಭ’, ‘ಮದ’, ‘ಮತ್ಸರ’, ‘ಮನಸ್’, ‘ಬುದ್ಧಿ’, ‘ಚಿತ್ತ’ ಮತ್ತು ‘ಅಹಂಕಾರ’.