ಸಾವು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 25

Inspirational Quotes Kahlil Gibran Life Kahlil Gibran Quotes | K

ಅಲ್’ಮಿತ್ರ ಸಾವಿನ ಬಗ್ಗೆ ಪ್ರಶ್ನೆ ಮಾಡಿದಳು.
ಅವನು ಸಾವಿನ ಕುರಿತು ಮಾತನಾಡತೊಡಗಿದ.

ಸಾವಿನ ಬಗ್ಗೆ
ನಿಮಗೆ ಗೊತ್ತಾಗುತ್ತದೆ.
ಆದರೆ,
ಬದುಕಿನ ಹೃದಯದಲ್ಲಿಯೇ
ಸಾವನ್ನು ಹುಡುಕದ ಹೊರತು
ಅದನ್ನು ಗುರುತಿಸುವಿರಾದರೂ ಹೇಗೆ?

ಹಗಲಿಗೆ ಕುರುಡಾದ ರಾತ್ರಿಗಣ್ಣಿನ ಗೂಬೆಗೆ
ಬೆಳಕಿನ ರಹಸ್ಯಗಳ ಅನಾವರಣ ಸಾಧ್ಯವಿಲ್ಲ.

ಸಾವಿನ ಚೈತನ್ಯವನ್ನು
ಸೂಕ್ಷ್ಮವಾಗಿ ಗಮನಿಸಬಯಸುವಿರಾದರೆ
ಬದುಕಿನ ದೇಹಕ್ಕೆ ನಿಮ್ಮ ಹೃದಯವನ್ನು ತೆರೆದಿಡಿ.

ನದಿ ಮತ್ತು ಸಾಗರ ಹೇಗೆ ಒಂದೋ
ಹಾಗೆಯೇ ಸಾವು ಮತ್ತು ಬದುಕು ಕೂಡ.

ನಿಮ್ಮ ನಿರೀಕ್ಷೆ ಮತ್ತು
ಬಯಕೆಗಳ ಆಳದಲ್ಲಿಯೇ ಜಾಗ ಮಾಡಿಕೊಂಡಿದೆ
ಅತೀತದ ಬಗೆಗಿನ ನಿಮ್ಮ ಶಾಂತ ತಿಳುವಳಿಕೆ.
ಮತ್ತು
ಹಿಮದ ಕೆಳಗಿನ ಬೀಜ ಕನಸುವಂತೆ
ನಿಮ್ಮ ಹೃದಯ ವಸಂತದ ಕನಸು ಕಾಣುತ್ತಿದೆ.

ಕನಸುಗಳನ್ನು ನಂಬಿ;
ಕನಸುಗಳಲ್ಲೇ ಅಡಗಿಕೊಂಡಿದೆ
ಅನಂತತೆಯ ವಿಳಾಸ.

ತನ್ನನ್ನು ಕೈಯ್ಯಾರೆ ಗೌರವಿಸಲು ಬಯಸಿರುವ
ರಾಜನ ಎದುರು
ನಡುಗುತ್ತ ನಿಂತಿರುವ ಕುರುಬನಂತೆ
ನೀವು ಸಾವಿಗೆ ಹೆದರುತ್ತೀರಿ.
ಕುರುಬನ ಆ ನಡುಕದ ಒಳಗೆ
ತಾನು, ರಾಜ ಮುದ್ರೆಯನ್ನು ಧರಿಸುತ್ತಿರುವ
ಬಗೆಗಿನ ಖುಶಿ ಇಲ್ಲವೆ?
ಆದರೂ ಯಾಕೆ ಅವನ ಗಮನವೆಲ್ಲ
ತನ್ನ ನಡುಕದ ಬಗ್ಗೆಯೇ?

ಅಷ್ಚಕ್ಕೂ ಸಾವು ಎಂದರೆ
ಬೆತ್ತಲೆಯಾಗಿ ಗಾಳಿಯಲ್ಲಿ ನಿಂತು
ಬಿಸಿಲಿನೊಳಗೆ ಕರಗಿ ಹೋಗುವುದೇ ಅಲ್ಲವೆ?

ಮತ್ತು ಈ ಉಸಿರು ನಿಲ್ಲುವುದೆಂದರೆ,
ಉಸಿರನ್ನು ಅದರ ಉದ್ವಿಗ್ನ
ಉಬ್ಬರವಿಳಿತಗಳಿಂದ ಮುಕ್ತಗೊಳಿಸಿ
ಎತ್ತರಕ್ಕೇರುವಂತೆ, ವ್ಯಾಪಕವಾಗುವಂತೆ ಮಾಡಿ
ಭಗವಂತನನ್ನು ಮುಕ್ತವಾಗಿ ಕಂಡುಕೊಳ್ಳುವುದೇ ಅಲ್ಲವೆ?

ಮೌನ ನದಿಯ ನೀರಿಗೆ ಬೊಗಸೆಯೊಡ್ಡಿದಾಗಲೇ
ಹಾಡು ನಿಮಗೆ ಸಾಧ್ಯವಾಗುವುದು.
ಪರ್ವತ ಶಿಖರವನ್ನು ಮುಟ್ಟಿದಾಗಲೇ
ನಿಮ್ಮ ಆರೋಹಣ ಆರಂಭವಾಗುವುದು.
ನಿಮ್ಮ ಅಂಗಾಂಗಗಳ ಮೇಲೆ
ಭೂಮಿಯ ಸ್ವಾಮಿತ್ವ ಸಾಬೀತಾದಾಗಲೇ
ನಿಜವಾಗಿಯೂ ನಿಮ್ಮ ಕುಣಿತ ಶುರುವಾಗುವುದು.

ಮುಂದುವರೆಯುತ್ತದೆ…..

Leave a Reply