ಧ್ವನಿ : ತಾವೋ ಧ್ಯಾನ ~ 3

ಹೊರಗಿವಿ ಕಿವುಡಾಗಿ ಒಳಗಿವಿ ತೆರೆದುಕೊಂಡಾಗ ಮಾತ್ರ ಸೂಕ್ಷ್ಮ ಧ್ವನಿಗಳು ಕೇಳಿಸಲಾರಂಭಿಸುತ್ತವೆ. ಈ ಧ್ವನಿಯೊಳಗೆ ಕಾಲಿಡುವುದೆಂದರೆ ಪರಮ ಸ್ಪಷ್ಟತೆಯೊಂದರೊಳಗೆ ಪ್ರವೇಶ ಮಾಡಿದಂತೆ. ಆದ್ದರಿಂದಲೇ ಅನೇಕ ಧಾರ್ಮಿಕ ಸಂಪ್ರದಾಯಗಳು, ಪ್ರಾರ್ಥನೆ, ಸ್ತುತಿಗಾನ, ಮಂತ್ರ ಮುಂತಾದವನ್ನು ದಿವ್ಯ ಮೌನಕ್ಕೆ ಮುನ್ನುಡಿಯಾಗಿ ಬಳಸುತ್ತವೆ  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

sound

ಗುಹೆಯೊಳಗೆ ಬಿರುಗಾಳಿ :
ಸ್ಥಾವರದೊಳಗೆ ಜಂಗಮನ ಮಿಸುಕಾಟ
ಮೌನ, ಎದ್ದು ನಿಂತ ಮದ್ದಾನೆ.

ಹೊರಗಿನಿಂದ ಗುಹೆಯೊಳಗೆ ಬರುವ ಸದ್ದುಗಳನ್ನ, ಕಲ್ಲು ಬಂಡೆ ಮತ್ತು ಮಣ್ಣು ಸೌಮ್ಯಗೊಳಿಸುತ್ತವೆ ಆಗ ಹೃದಯದ ಬಡಿತ ಮತ್ತು ಉಸಿರು ಕೂಡ ಕೇಳಿಸಲು ಶುರುವಾಗುತ್ತವೆ. ಹಾಗೆಯೇ ಆಳ ಪ್ರಶಾಂತತೆ ಹೊರಗಿನ ಅನುದಿನದ ಕಿರುಚಾಟಗಳಿಂದ ನಮ್ಮ ಗಮನವನ್ನು ಬೇರೆಡೆ ತಿರುಗಿಸಿ ಬದುಕಿನ ಸೂಕ್ಷ್ಮಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಹೊರಗಿವಿ ಕಿವುಡಾಗಿ ಒಳಗಿವಿ ತೆರೆದುಕೊಂಡಾಗ ಮಾತ್ರ ಸೂಕ್ಷ್ಮ ಧ್ವನಿಗಳು ಕೇಳಿಸಲಾರಂಭಿಸುತ್ತವೆ. ಈ ಧ್ವನಿಯೊಳಗೆ ಕಾಲಿಡುವುದೆಂದರೆ ಪರಮ ಸ್ಪಷ್ಟತೆಯೊಂದರೊಳಗೆ ಪ್ರವೇಶ ಮಾಡಿದಂತೆ. ಆದ್ದರಿಂದಲೇ ಅನೇಕ ಧಾರ್ಮಿಕ ಸಂಪ್ರದಾಯಗಳು, ಪ್ರಾರ್ಥನೆ, ಸ್ತುತಿಗಾನ, ಮಂತ್ರ ಮುಂತಾದವನ್ನು ದಿವ್ಯ ಮೌನಕ್ಕೆ ಮುನ್ನುಡಿಯಾಗಿ ಬಳಸುತ್ತವೆ. ಈ ಶಬ್ದಗಳ, ಧ್ವನಿಗಳ ಸತತ ಪಠಣ, ಹೊರಗಿವಿಯನ್ನು ಮುಚ್ಚಿಸಿ ಒಳಗಿವಿಯನ್ನು ತೆರೆಸುತ್ತದೆ. ಪ್ರಾರ್ಥನೆ, ಸ್ತುತಿ, ಮಂತ್ರ ಮೊದಲಾದವುಗಳು ದೈವಿಕತೆಯ ರೂಪ ಧರಿಸಿದ್ದು ಈ ಹಿನ್ನೆಲೆಯಲ್ಲಿ.

ಆಳವಾದ ಧ್ವನಿಯೇ ಮೌನ. ಮೌನವನ್ನ ಬದುಕು ಮತ್ತು ಕಂಪನಗಳ ಗೈರುಹಾಜರಿ ಎಂದು ತಿಳಿದವರಿಗೆ ಮಾತ್ರ ಇದು ದ್ವಂದ್ವಾತ್ಮಕ ಹೇಳಿಕೆ. ಆದರೆ ಧ್ಯಾನಿಗೆ ಮಾತ್ರ, ತನ್ನ ಎಲ್ಲ ವಿರೋಧಿಗಳೊಂದಿಗೆ ಒಂದಾಗಿ ವಿಜೃಂಭಿಸುತ್ತಿರುವ ಧ್ವನಿಯೇ ಮೌನ. ಅಂತೆಯೇ ಮೌನ, ಧ್ವನಿ ಮತ್ತು ಧ್ವನಿ ಅಲ್ಲದ್ದು ಕೂಡ ಮತ್ತು ಈ ಎರಡೂ ವೈರುಧ್ಯಗಳು ಒಂದಾಗುವ ಬಿಂದುವಿನಲ್ಲಿಯೇ ಧ್ಯಾನದ ಅಪರಿಮಿತ ಶಕ್ತಿಯ ಅನಾವರಣ.

“ಮಾತನಾಡದಿರುವುದೇ ಮೌನ ಎಂದು ಜನರು ಸಾಮಾನ್ಯವಾಗಿ ತಿಳಿದುಕೊಂಡರೂ; ಮೌನದ ನೆಲೆಯು ಇನ್ನೂ ಎತ್ತರದಲ್ಲಿದೆ ಎಂಬುದು ಅದರ ಅಭ್ಯಾಸದಿಂದ ತಿಳಿಯುವುದು. ಮೊದಲು ಮಾತಿಗೂ ಮೌನಕ್ಕೂ ವೈರವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ – ಹೌದು. ಆದರೂ ಮೌನದ ಗರ್ಭದ ಸಾಹಿತ್ಯವನ್ನು ಮಾತು ಹೊತ್ತು ಹೊರಗೆ ತರುವದು. ಮಾತಿನ ಸಂತೆಯಲ್ಲಿ ಮೌನದ ಸರಕಿನ ವ್ಯಾಪಾರ ನಡೆಯುವದು. ಹೀಗಿದ್ದೂ ಮಾತೇನು, ಮೌನವೇನು, ಎರಡೂ ಹೊದಿಕೆಗಳೇ. ಒಳಗಿನ ತಿರುಳು ಬೆರೆಯೇ ಇದೆ. ಆ ಒಳಗಿನ ತಿರುಳು ಜೀವಭಾವ. ಮೌನ ಭಿತ್ತಿ , ಮಾತು ಚಿತ್ರ” ಎನ್ನುತ್ತಾರೆ ಬೇಂದ್ರೆ.

ಹಿಂದಿನ ಕಂತು ಇಲ್ಲಿ ಓದಿ : https://aralimara.com/2018/11/09/tao2-2/

Leave a Reply