ಪ್ರತಿಬಿಂಬ ಸ್ಷಷ್ಟವಾಗುವಲ್ಲಿ ಚಂದ್ರನ ಶ್ರಮವೂ ಇಲ್ಲ ನೀರಿನ ಪ್ರಯತ್ನವೂ ಇಲ್ಲ. ಹಾಗೆಯೇ ಧ್ಯಾನ, ಸಹಜ ಮತ್ತು ತಕ್ಷಣದ ಲೀಲೆ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ
ನೀರ ಮೇಲೆ ಚಂದ್ರ
ಉಸಿರ ಗಮನಿಸುತ್ತ ಕೂಡು
ಸರೋವರ ಪ್ರಶಾಂತವಾಗಿದ್ದಾಗ ಚಂದ್ರನ ಬಿಂಬವೂ ಪರಿಪೂರ್ಣ. ಹಾಗೆಯೇ ಪ್ರಶಾಂತ ಮನುಷ್ಯ, ದಿವ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. ನಮ್ಮ ಉದ್ವಿಗ್ನತೆ, ಪ್ರಕೃತಿಯ ಸಹಜ ವ್ಯವಹಾರಗಳಲ್ಲಿ ನಿರಂತರ ಹಸ್ತಕ್ಷೇಪ, ಅಷ್ಟೇ ಅಲ್ಲ ಅಂತರಂಗದ ವಹಿವಾಟುಗಳಲ್ಲೂ ‘ನಾನು’ ಮುಂದಾಳಾಗಿ ಎಲ್ಲವನ್ನೂ ನಿಯಂತ್ರಿಸುವುದು ನಮ್ಮ ಪ್ರಶಾಂತತೆಯನ್ನು ಸದಾ ಪ್ರಭಾವಿಸುತ್ತಿರುತ್ತದೆ. ಆಗ ತಾವೋ ವನ್ನು ಪ್ರತಿಬಿಂಬಿಸುವುದು ದೂರದ ಮಾತು.
ಪರಿಶ್ರಮದಿಂದ ಪ್ರಶಾಂತತೆ ಸಾಧ್ಯವಾಗುವುದಿಲ್ಲ, ಬದಲಾಗಿ ಏಕಾಂತ ಸಾಧ್ಯವಾದಾಗ, ಮನಸ್ಸಿನ ಹೊಯ್ದಾಟಕ್ಕೆ ಏಕಾಂತ, ತಲೆಚಿಟ್ಟು ಹಿಡಿಸಿದಾಗ, ಪ್ರಶಾಂತತೆ ತಾನೇ ತಾನಾಗಿ, ಸಹಜವಾಗಿ ಆಳಕ್ಕಿಳಿಯುತ್ತದೆ. ಆಗ ನೀರು ಹೇಗೆ ಗುರುತ್ವಾಕರ್ಷಣೆಯಿಂದಾಗಿ ಸಹಜವಾಗಿ ತನ್ನ ಮಟ್ಟವನ್ನು
ಕಾಯ್ದುಕೊಳ್ಳುತ್ತದೆಯೋ ಹಾಗೆಯೇ ಮನಸ್ಸು ದೈವಿಕದತ್ತ ಎಳೆಯಲ್ಪಡುತ್ತದೆ. ಬಗ್ಗಡದ ನೀರು ನಿಂತು ನಿಂತು ತಿಳಿಯಾದಂತೆ, ಏಕಾಂತ ಆಳವಾಗುತ್ತವಾಗುತ್ತ ಹೋದಂತೆ ಮನಸ್ಸು ತಿಳಿಯಾಗುತ್ತ ಹೋಗುತ್ತದೆ.
ಪ್ರತಿಬಿಂಬ ಸ್ಷಷ್ಟವಾಗುವಲ್ಲಿ ಚಂದ್ರನ ಶ್ರಮವೂ ಇಲ್ಲ ನೀರಿನ ಪ್ರಯತ್ನವೂ ಇಲ್ಲ. ಹಾಗೆಯೇ ಧ್ಯಾನ, ಸಹಜ ಮತ್ತು ತಕ್ಷಣದ ಲೀಲೆ.
ನಿಂತು ನಿಂತು ತಿಳಿಯಾಗುವುದು ಪಕ್ಕಾ ತಾವೋ ಸ್ವಭಾವ. ಈ ಸ್ವಭಾವವನ್ನು ಲಾವೋ ತ್ಸೇ ಹೀಗೆ ಅನನ್ಯವಾಗಿ ಬಣ್ಣಿಸುತ್ತಾನೆ :
ಒಂದಾನೊಂದು ಕಾಲದಲ್ಲಿ
‘ತಾವೋ’ ವನ್ನು ಅರೆದು ಕುಡಿದವರು
ಕಣ್ಣಿಗೆ ಕಾಣಿಸಿಯೂ ಕಾಣಿಸದಷ್ಟು
ಕೈಗೆ ಸಿಕ್ಕೂ ಸಿಗದಷ್ಟು
ಸೂಕ್ಷ್ಮರೂ, ನಿಗೂಢರೂ,
ಹರಿತ ಜಗಳಗಂಟರೂ ಆಗಿದ್ದರು.
ಅವರ ಆಳ, ಅಗಲಗಳನ್ನು
ಬಲ್ಲವರಿಲ್ಲವಾದ್ದರಿಂದ
ಅವರು ಹೇಗಿದ್ದಿರಬಹುದು ಎಂದು
ಊಹೆ ಮಾತ್ರ ಮಾಡಬಲ್ಲೆ.
ಚಳಿಗಾಲದ ನದಿಯಲ್ಲಿ ನಡೆಯುವವರಂತೆ
ಹೆಜ್ಜೆ ಮೇಲೆ ಹೆಜ್ಜೆ ಇಡುವವರು,
ಪಕ್ಕದ ಮನೆಯ ಕಿಟಕಿಯ ಬಗ್ಗೆ
ಮೈಯೆಲ್ಲ ಕಣ್ಣಾದವರು,
ಮನೆಗೆ ಬಂದ ದೂರದ ನೆಂಟರಂತೆ
ವಿನಮ್ರರು ಮತ್ತು ಭಿಡೇ ಸ್ವಭಾವದವರು,
ಕರಗುವ ಮಂಜಿನಂತೆ ಜಾರಿಕೊಳ್ಳುವವರು,
ಕೆತ್ತಲು ಸಿದ್ಧವಾಗಿರುವ ಮರದ ತುಂಡಿನಂತೆ
ಮುಗ್ಧರು, ಸುಲಭ ಸಾಧ್ಯರು,
ಆಳ ಕಣಿವೆಗಳಂತೆ
ಖಾಲಿ ತೆರೆದುಕೊಳ್ಳುವವರು,
ಬಗ್ಗಡದ ನೀರಿನಂತೆ
ಕೃದ್ಧರು, ದಂಗೆ ಎದ್ದವರು.
ನಿಂತು ನಿಂತು ತಿಳಿಯಾಗುವ
ಕಲೆಯ ತಿಳಿದವರು.
ಚಲನೆಗೊಂದು ಅರ್ಥ ಬರುವತನಕ
ಜಪ್ಪಯ್ಯ ಅಂದರೂ ಏಳದವರು
ತುಂಬಿಕೊಳ್ಳಲೊಲ್ಲದ ಉಡಾಳರು,
ಖಾಲಿತನ ಸೃಷ್ಟಿಸುವ ಅವಕಾಶಗಳ
ಮಹತ್ವ ಅರಿತ ಮಹಾತ್ಮರು.