ಆಶಾವಾದ : ತಾವೋ ಧ್ಯಾನ ~ 8

ಜನ ಪಕ್ಕಾ ಆಶಾವಾದಿಗಳು: ಚಳಿಗಾಲಕ್ಕೂ ಒಂದು ಕೊನೆಯಿರುವುದನ್ನು ಚೆನ್ನಾಗಿ ಬಲ್ಲರು ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao7

ತೆರೆದುಕೊಂಡ ನೀಲೀ ಆಕಾಶ
ಖಾಲಿ ಟೊಂಗೆಗಳ ಭರವಸೆ
ಚಳಿಗಾಲದಲ್ಲೂ ಬಿಸಿಲಿನ ದಿನಗಳು
ನಡು ವಯಸ್ಸಿನಲ್ಲಿ ಮರಳಿದ ಬಾಲ್ಯ.

ಚಳಿಗಾಲ ಬಂದಾಯ್ತು.
ಯಾವುದು ಸತ್ತ ಗಿಡ,
ಯಾವುದು ಜೀವಂತ ಗಿಡ
ಒಂದೂ ಗೊತ್ತಾಗುತ್ತಿಲ್ಲ.

~ Misuhashi Takajo

ಚಳಿಗಾಲದಲ್ಲಿ ಎಲ್ಲವೂ, ಸತ್ತ ಹಾಗೆ ಅಥವಾ ಸುಪ್ತವಾಗಿ ಯಾವುದೋ ಸಂಚು ಮಾಡುತ್ತಿರುವ ಹಾಗೆ ಕಾಣಿಸಿಕೊಳ್ಳುತ್ತವೆ. ಮಳೆ ಮತ್ತು ಹಿಮ ಒಂದೇ ಸವನೆ ಹಾಗು ರಾತ್ರಿಗಳು ಸುದೀರ್ಘ.

ಆಮೇಲೆ ಒಂದು ದಿನ ಆಕಾಶ, ತಿಳಿ ನೀಲೀ ಬಣ್ಣಕ್ಕೆ ತೆರೆದುಕೊಳ್ಳುತ್ತದೆ. ಗಾಳಿ ಬೆಚ್ಚಗಾಗುತ್ತದೆ. ಮಂಜು, ನೆಲದಿಂದ ಮೇಲೇರುತ್ತದೆ. ನೀರು ಮತ್ತು ಮಣ್ಣಿನ ಗಂಧ, ಗಾಳಿಯಲ್ಲಿ ಒಂದಾಗುತ್ತದೆ. ಉದ್ಯಾನಗಳ ಖಾಲಿ ಟೊಂಗೆಗಳ ನಡುವೆ ತೋಟದ ಮಾಲಿ ಸಡಗರದಿಂದ ಓಡಾಡುತ್ತಾನೆ.

ಚಳಿಯಾಕೆ ತನ್ನ ಎದೆಯಲ್ಲಿ
ವಸಂತ ಅವಿತಿದ್ದಾನೆ ಎಂದರೆ
ಯಾರು ತಾನೆ ನಂಬುತ್ತಾರೆ ಅವಳನ್ನ ? ~ ಖಲೀಲ್ ಗಿಬ್ರಾನ್

ಜನ ಪಕ್ಕಾ ಆಶಾವಾದಿಗಳು: ಚಳಿಗಾಲಕ್ಕೂ ಒಂದು ಕೊನೆಯಿರುವುದನ್ನು ಚೆನ್ನಾಗಿ ಬಲ್ಲರು.

ವಯಸ್ಕ ಬದುಕಿನಲ್ಲಿ ಜವಾಬ್ದಾರಿಗಳು ಭಯಂಕರ ಎನ್ನುವಂತೆ ಭಾಸವಾಗುತ್ತವೆ. ಅವಶ್ಯಕತೆ ಇಲ್ಲದಿರುವಾಗ ನೆಲ ಅಗೆದು ಏನು ಪ್ರಯೋಜನ? ಎನ್ನುವ ಪ್ರಶ್ನೆ. ಎಲ್ಲ ಕ್ರಿಯೆಗಳು ಕಟ್ಟುಪಾಡು ಅನ್ನಿಸುವ ಭಾವ. ಹೀಗಾದಾಗಲೆಲ್ಲ ವಿಧಿಯ ಎದುರು ಬಳಲಿ ಬೆಂಡಾಗುತ್ತೇವೆ. ಆದರೆ ಸಧ್ಯ ಅಗತ್ಯ ಇರದಿದ್ದರೂ ಅವಕಾಶವಿರುವಾಗ ಸೂಕ್ತ ಸಮಯದ ಜೊತೆ ಕ್ರಿಯೆಗಿಳಿಯುವುದು ಒಂದು ಅದ್ಭುತ ಸಂತೋಷದ ವಿಷಯ. ಮುಂದೊಮ್ಮೆ ಆ ಕ್ರಿಯೆ ಫಲ ಕೊಟ್ಟಾಗ ಸಿಗುವ ತೃಪ್ತಿ ಅಪಾರ.

ಒಬ್ಬ ಪ್ರಯಾಣಿಕ ಬೆಟ್ಟ ಗುಡ್ಡಗಳ ಮೂಲಕ ಹಾಯ್ದು ಹೋಗುವಾಗ, ವೃದ್ಧ ಸನ್ಯಾಸಿಯೊಬ್ಬ ಬಾದಾಮಿ ಗಿಡದ ಸಸಿ ನೆಡುತ್ತಿರುವುದನ್ನು ಗಮನಿಸಿದ. ಬಾದಾಮಿ ಸಸಿ ಬೆಳೆದು ಫಲ ನೀಡಲು ಸಾಕಷ್ಟು ವರ್ಷಗಳಾಗುತ್ತದೆ ಎನ್ನುವುದನ್ನು ಬಲ್ಲ ಪ್ರಯಾಣಿಕ, ವೃದ್ಧನನ್ನು ಪ್ರಶ್ನಿಸಿದ.

ಇಷ್ಟು ನಿಧಾನವಾಗಿ ಬೆಳೆಯುವ ಮರವನ್ನು ಯಾಕೆ ಬೆಳೆಸುತ್ತಿದ್ದೀಯಾ? ನಿನ್ನ ಆಯಸ್ಸು ಇನ್ನು ಎರಡು ಮೂರು ವರ್ಷವೂ ಇದ್ದ ಹಾಗಿಲ್ಲ.

ವೃದ್ಧ ಸನ್ಯಾಸಿ ಉತ್ತರಿಸಿದ.
ಬದುಕಲು ನನಗೆ ಎರಡು ಸಿದ್ಧಾಂತಗಳಿವೆ.
ಒಂದು, ನನ್ನ ಬದುಕು ಶಾಶ್ವತ. ಮತ್ತು
ಎರಡನೇಯದು, ಇವತ್ತು ನನ್ನ ಬದುಕಿನ ಕೊನೆಯ ದಿನ.

Leave a Reply