ಸ್ವಾಮಿ ಜಗದಾತ್ಮಾನಂದರ ಸ್ಮರಣೆಯಲ್ಲಿ; ‘ಬದುಕಲು ಕಲಿಯಿರಿ’

‘ಬದುಕಲು ಕಲಿಯಿರಿ’ ಕೃತಿಯ ಮೂಲಕ ಮನೆಮಾತಾಗಿದ್ದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದ ಜೀ ನೆನ್ನೆ (15.11.2018) ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸ್ವಾಮೀಜಿಯವರ ಈ ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಅವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ.

maxresdefault

ಅಧ್ಯಾಯ 1 : ಪ್ರತಿಭೆಯ ಹಿಂದಿದೆ ಪರಿಶ್ರಮ

ಜಗತ್ತಿನ ಇತಿಹಾಸವನ್ನು ನೋಡಿ. ಏನಾದರೂ ಮಹತ್ತನ್ನು ಸಾಧಿಸಿದವರೆಲ್ಲ ಶ್ರಮಪಟ್ಟು ದುಡಿಯುತ್ತಿದ್ದರು. ತಮ್ಮ ಕೆಲಸದಲ್ಲೆ ಮಗ್ನರಾಗುತ್ತಿದ್ದರು. ಈ ದುಡಿಮೆ ಅವರಿಗೆ ಅದ್ಭುತವೆನಿಸುವ ಆನಂದ, ತೃಪ್ತಿ ತಂದಿತು. ಅಪಾರ ಶಕ್ತಿ, ಆತ್ಮವಿಶ್ವಾಸ ನೀಡಿತು.

ಎರಡು ಸಾವಿರಕ್ಕೂ ಹೆಚ್ಚು ಹೊಸ ಯಂತ್ರಗಳನ್ನು ಸೃಷ್ಟಿಸಿ ಅಸಾಧಾರಣ ಪ್ರತಿಭಾಶಾಲಿ ಎನಿಸಿಕೊಂಡ ಥಾಮಸ್ ಆಲ್ವಾ ಎಡಿಸನ್ ಹೇಳಿದಂತೆ, “ಆವಿಷ್ಕಾರಗಳು ಆಕಸ್ಮಿಕಗಳಲ್ಲ; ಅವು ನಿರಂತರ ಶ್ರಮಕ್ಕೆ ಒಲಿದ ವರಗಳು. ಪ್ರತಿಭೆಯಲ್ಲಿ ನಿಜವಾಗಿಯೂ ಸ್ಫೂರ್ತಿಯ ಪಾಲು ಒಂದಾದರೆ, ಉಳಿದ ತೊಂಭತ್ತೊಂಭತ್ತು ಪಾಲು ಸತತ ಪರಿಶ್ರಮದ ಫಲ”.

ನಿಜವಾದ ಸಫಲತೆ ಮತ್ತು ಸತತ ಪರಿಶ್ರಮ – ಇವು ಯಾವಾಗಲೂ ಒಡನಾಡಿಗಳು. ಅವಿರತ ಪರಿಶ್ರಮದಿಂದ ಮಾತ್ರ ಅತ್ಯಮೂಲ್ಯ ವಸ್ತುವನ್ನು ಪಡೆಯಬಹುದು ಎಂಬುದನ್ನು ನಾವು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳಬೇಕು. ಹೌದು. ಶಬ್ದಕೋಶದಲ್ಲಿ ಮಾತ್ರ ‘ಗೆಲುವು’ ‘ಶ್ರಮ’ಕ್ಕೆ ಮೊದಲೇ ಬರುತ್ತದೆ. (Success comes before work only in the dictionary)

“ಒಂದು ಆದರ್ಶವನ್ನೋ ಗುರಿಯನ್ನೋ ಆರಿಸಿಕೊಳ್ಳಿ. ಅದನ್ನು ನಿಮ್ಮ ಬದುಕಿನ ಉಸಿರಾಗಿ ಮಾಡಿಕೊಳ್ಳಿ. ಬೇರೆ ಯೋಚನೆಗಳನ್ನೆಲ್ಲ ದೂರಕ್ಕೆ ತಳ್ಳಿ. ನಿಮ್ಮ ಪೂರ್ಣ ಮನಸ್ಸು, ದೇಹ, ಮಾಂಸಖಂಡಗಳು, ನರವ್ಯೂಹ – ಅದೊಂದೇ ವಿಷಯವನ್ನು ಚಿಂತಿಸಲಿ. ಕನಸು ಕಾಣುತ್ತಿರಲಿ. ಮಹಾತ್ಮರಾಗಲು ಅದೊಂದೇ ದಾರಿ” – ಎಂಬುದು ಮಹಾತ್ಮರೊಬ್ಬರ ವಚನ.

ನಾವು ಮಹಾತ್ಮರೆನಿಸಿಕೊಳ್ಳಲು ಹೆಣಗಬೇಕಿಲ್ಲ.

ಸಂಶೋಧನೆಗಳನ್ನು ಮಾಡಿ ವಿಜ್ಞಾನಿಗಳಾಗಬೇಕಿಲ್ಲ.

ಒಬ್ಬರಂತೆ ಒಬ್ಬರಲ್ಲ, ಒಬ್ಬರಂತೆ ಒಬ್ಬರಿಲ್ಲ.

ನಡೆ – ನುಡಿ, ಅಭಿರುಚಿ, ಆಸಕ್ತಿ, ಸಂಸ್ಕಾರ – ಸಾಮರ್ಥ್ಯಗಳಲ್ಲಿ ವ್ಯತ್ಯಾಸವಿದೆ. ನಿಜ. ನಾವು ಯಾರನ್ನೂ ಅನುಕರಣೆ ಮಾಡಬೇಕಿಲ್ಲ. ಆದರೆ ಹಿಡಿದ ಕೆಲಸದಲ್ಲಿ ಸಫಲತೆಯನ್ನು ಪಡೆಯಬಲ್ಲೆವೇನು? ಉತ್ಸಾಹ ಆನಂದದಿಂದ ಇರಬಲ್ಲೆವೇನು? ನಿಶ್ಚಿಂತೆ ನಿರ್ಭೀತಿಯಿಂದ ಬದುಕಿನ ದಾರಿಯನ್ನು ಕ್ರಮಿಸಬಲ್ಲೆವೇನು? ಅನಾಥ ಪ್ರಜ್ಞೆಯನ್ನು ಮೆಟ್ಟಿ ನಿಲ್ಲಬಲ್ಲೆವೇನು? ದೈನ್ಯ – ದಾಸ್ಯ – ಕೀಳರಿಮೆಯ ಭಾವನೆಗಳಿಂದ ಮೇಲೇರಬಲ್ಲೆವೇನು?

ಧರ್ಮ, ಕಲೆ, ಸಾಹಿತ್ಯ, ಕೃಷಿ, ವಿಜ್ಞಾನ, ಯಾವುದೇ ಕ್ಷೇತ್ರಗಳಲ್ಲಿ ಅತ್ಯುನ್ನತತೆ ಸಿದ್ಧಿಯು ಪ್ರಾಮಾಣಿಕ ಅವಿಶ್ರಾಂತ ಶ್ರಮದಿಂದಲೇ ಸಾಧ್ಯ. ಜನಾಂಗದ ಜ್ಞಾನ ಭಂಡಾರವನ್ನು ಉಳಿಸಿ ಬೆಳೆಸಿದವರೆಲ್ಲ ಕಾಯಕದ ಮಹಿಮೆ, ಮಹಾತ್ಮೆಗಳಿಗೆ ಉಜ್ವಲ ನಿದರ್ಶನರಾಗಿ ರಾರಾಜಿಸುತ್ತಾರೆ. ಅವರ ಅಭೀಪ್ಸೆಯ ತೀವ್ರತೆ, ಅವರು ಪಟ್ಟ ಶ್ರಮ, ಅವರ ಮಾನಸಿಕ ಏಕಾಗ್ರತೆ, ಅವರು ಏರಿದ ಎತ್ತರ – ಬದುಕಿನ ಯಾವ ಕ್ಷೇತ್ರದಲ್ಲಿ ದುಡಿಯುವವರಿಗೂ ನಿತ್ಯಸ್ಫೂರ್ತಿಯ ಸೆಲೆಯಲ್ಲವೆ?

ನಾವೂ ಹಿಡಿದ ಕೆಲಸದಲ್ಲಿ ಸಫಲತೆಯನ್ನು ಪಡೆಯಬೇಕಾದರೆ, ಉತ್ಸಾಹ – ಆನಂದದಿಂದ ಅದನ್ನು ಮಾಡುತ್ತ ಹೋಗಬೇಕು. ಧೈರ್ಯದಿಂದ ಮುನ್ನಡೆಸುತ್ತಾ ಸಾಗಬೇಕು.

51fefvFACuL._AC_US218_

(ಆಕರ : ಬದುಕಲು ಕಲಿಯಿರಿ | ಅಧ್ಯಾಯ 1 – ಪ್ರಯತ್ನದಿಂದ ಪರಮಾತ್ಮ| ಪ್ರಕಾಶಕರು : ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು)

ಹೆಚ್ಚಿನ ಓದಿಗೆ ಸ್ವಾಮಿ ಜಗಾದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕವನ್ನು ರಾಮಕೃಷ್ಣಾಶ್ರಮದ ಮಳಿಗೆಯಲ್ಲಿ ಕೊಳ್ಳಬಹುದು.

Leave a Reply