ಖಯಾಮರು ಸೊಳ್ಳೆಗೆ ಹೆದರಿದ್ದೇಕೆ!? : Tea time story

ಉಮರ್ ಖಯಾಮರು ಒಮ್ಮೆ ತಮ್ಮ ಶಿಷ್ಯನೊಡನೆ ದಟ್ಟ ಅಡವಿಯಲ್ಲಿ ಹೋಗುತ್ತಿದ್ದರು. ಹೋಗುತ್ತಾ ಸಂಜೆಯಾಯಿತು.

ಖಯ್ಯಾಮರು ತಮ್ಮ ಬಗಲಲ್ಲಿದ್ದ ಚಾಪೆ ಹಾಸಿಕೊಂಡು ನಮಾಜ್ ಮಾಡಲು ಕುಳಿತರು.
ಅದೇ ಸಮಯಕ್ಕೆ ಸ್ವಲ್ಪ ದೂರದಲ್ಲಿ ಸಿಂಹ ಘರ್ಜಿಸುವುದು ಕೇಳಿಸಿತು. ಹೆದರಿದ ಶಿಷ್ಯ ಕೂಡಲೇ ಸಮೀಪವಿದ್ದ ಮರವೇರಿ ಕುಳಿತುಕೊಂಡ.

ಮನುಷ್ಯವಾಸನೆ ಹಿಡಿದು ಬಂದ ಸಿಂಹ ಖಯಾಮರು ಇದ್ದಲ್ಲಿಗೆ ಬಂತು. ಅವರ ಮುಂದೆಯೇ ನಿಂತಿತು. ಖಯಾಮರು ಚೂರೂ ಕದಲಿಲ್ಲ. ತಮ್ಮ ಪ್ರಾರ್ಥನಾವಿಧಿಗಳನ್ನು ಮುಂದುವರೆಸಿದರು. ಸಿಂಹ ಒಂದೆರಡು ಘಳಿಗೆ ನಿಂತಿದ್ದು ಹೊರಟುಹೋಯಿತು.

ಆಮೇಲೆ ಶಿಷ್ಯ ಕೆಳಗಿಳಿದ. ಖಯಾಮರ ನಮಾಜ್ ಕೂಡಾ ಪೂರೈಸಿತು. ಅವರಿಬ್ಬರೂ ಪ್ರಯಾಣ ಮುಂದುವರೆಸಿದರು.

ದಾರಿಯಲ್ಲಿ ಒಂದಷ್ಟು ಪೊದೆಗಳನ್ನು ಹಾದುಹೋಗಬೇಕಾಗಿ ಬಂತು. ಅವರು ಕಾಲಿಟ್ಟಲ್ಲೆಲ್ಲ ಸೊಳ್ಳೆಗಳು ಗೊಂಯ್ಯನೆ ಎದ್ದೆದ್ದು ಬರತೊಡಗಿದವು.

“ಈ ಸೊಳ್ಳೆಗಳು ಕಡಿದರೆ ತುರಿಕೆ ಸಹಿಸಲಸಾಧ್ಯ. ಅದನ್ನು ನೆನೆದರೇ ನನಗೆ ಭಯವಾಗುತ್ತೆ. ಬಾ ಬೇಗ ಹೆಜ್ಜೆ ಹಾಕು” ಎಂದು ಶಿಷ್ಯನಿಗೆ ಆತುರಪಡಿಸಿದರು.

ಶಿಷ್ಯ ಕೇಳಿದ; “ಭಯಂಕರ ಸಿಂಹ ಬಂದಾಗ ಚೂರೂ ಕದಲದ ನೀವು ಸೊಳ್ಳೆ ಕಡಿತಕ್ಕೆ ವಿಚಲಿತರಾಗುವುದೆ?”
ಖಯಾಮರು ನಕ್ಕರು, “ಹುಡುಗಾ! ಸಿಂಹ ಎದುರಾದಾಗ ನಾನು ದೇವರೊಡನೆ ಇದ್ದೆ. ಈಗ ನಿನ್ನೊಡನೆ ಇದ್ದೇನೆ”.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply