ಪೌರವ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #41

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 4ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM  

ಪುರುವು ಪೌಷ್ಟಿಯಲ್ಲಿ ಮೂವರು ಮಹಾರಥಿ ಪುತ್ರರನ್ನು ಪಡೆದನು: ಪ್ರವೀರ, ಈಶ್ವರ, ಮತ್ತು ರೌದ್ರಾಶ್ವ. ಅವರಲ್ಲಿ ಪ್ರವೀರನು ವಂಶವನ್ನು ಮುಂದುವರಿಸಿದನು. ರಾಜನು ಶೇನಿಯಲ್ಲಿ ಮನಸ್ಯು ಎಂಬ ಶೂರ ಮಗನನ್ನು ಪಡೆದನು. ಆ ರಾಜೀವಲೋಚನನು ಭೂಮಿಯ ನಾಲ್ಕೂ ದಿಕ್ಕುಗಳನ್ನು ಆಳಿದನು. ಮನಸ್ಯುವು ಸೌವೀರಿಯಲ್ಲಿ ಮೂರು ಮಕ್ಕಳನ್ನು ಪಡೆದನು: ಸುಭ್ರು, ಸಂಹನನ, ಮತ್ತು ವಾಗ್ಮಿ. ಈ ಎಲ್ಲ ಪುತ್ರರೂ ಮಹಾರಥಿಗಳೂ ಶೂರರೂ ಆಗಿದ್ದರು.

ರೌದ್ರಾಶ್ವನು ಅಪ್ಸರೆಯಿಂದ ಮಹೇಶ್ವಾಸ, ಶೂರ. ಪ್ರಜಾವಂತ, ಬಹುಶೃತ ಹತ್ತು ಮಕ್ಕಳನ್ನು ಪಡೆದನು. ಸರ್ವರೂ ಸರ್ವಾಸ್ತ್ರವಿದ್ವಾಂಸರಾಗಿದ್ದರು. ಸರ್ವರೂ ಧರ್ಮಪರಾಯಣರಾಗಿದ್ದರು. ಋಚೇಪು, ಕಕ್ಷೇಪು, ಕುಕಣೇಪು, ಸ್ಥಂಡಿಲೇಪು, ವನೇಪು, ಮಹಾರಥಿ ಸ್ಥಲೇಪು, ತೇಜೇಪು, ಸತ್ಯೇಪು, ಧರ್ಮೇಪು, ಮತ್ತು ಹತ್ತನೆಯವನು ದೇವವಿಕ್ರಮಿ ಸಂನತೇಪು.

ರಾಜ ಋಚೇಪುವು ಮತಿನಾರನೆಂಬ ವಿದ್ವಾಂಸ ಪುತ್ರನನ್ನು ಪಡೆದನು. ರಾಜ ಮತಿನಾರನು ನಾಲ್ಕು ಅಮಿತವಿಕ್ರಮಿ ಪುತ್ರರನ್ನು ಪಡೆದನು: ತಂಸು, ಮಹತ್, ಅತಿರಥ ಮತ್ತು ಅಪ್ರತಿಮಧ್ಯುತಿ ದ್ರುಹ್ಯು. ಅವರಲ್ಲಿ ಮಹಾವೀರ ತಂಸುವು ಪೌರವ ವಂಶವನ್ನು ಮುಂದುವರೆಸಿ, ದೇದೀಪ್ಯಮಾನ ಕೀರ್ತಿಯನ್ನು ಹೊಂದಿ ಭೂಮಿಯನ್ನು ಗೆದ್ದನು.

ತಂಸುವಿಗೆ ಇಲಿನ ಎನ್ನುವ ವೀರ್ಯವಂತ ಮಗನು ಹುಟ್ಟಿದನು. ಆ ವಿಜಯಿಗಳಲ್ಲಿ ಶ್ರೇಷ್ಠನು ಇಡೀ ಭೂಮಿಯ ಮೇಲೆ ವಿಜಯ ಗಳಿಸಿದನು. ನೃಪ ಇಲಿನನು ರಥಂತರಿಯಲ್ಲಿ ಪಂಚಭೂತಗಳಿಗೆ ಸಮ ದುಃಷಂತನೇ ಮೊದಲಾದ ಐದು ಮಕ್ಕಳನ್ನು ಪಡೆದನು: ದುಃಷಂತ, ಶೂರ, ಭೀಮ, ಪ್ರವಸು ಮತ್ತು ವಸು. ಅವರಲ್ಲಿ ಹಿರಿಯವನು ರಾಜ ದುಃಷಂತ. ನೃಪ ದುಃಷಂತನಿಂದ ಶಕುಂತಲೆಯಲ್ಲಿ ಭರತನು ಹುಟ್ಟಿದನು. ಅವನಿಂದ ಮಹಾಯಶಸ್ವಿ ಭರತವಂಶವು ಪ್ರಾರಂಭವಾಯಿತು.

ಭರತನು ತನ್ನ ಮೂವರು ಪತ್ನಿಯರಲ್ಲಿ ಒಂಭತ್ತು ಪುತ್ರರನ್ನು ಪಡೆದನು. ನನ್ನ ಅನುರೂಪರಾದವರು ಯಾರೂ ಇಲ್ಲ ಎಂದು ಅವರಲ್ಲಿ ಯಾರನ್ನೂ ರಾಜನು ಒಪ್ಪಿಕೊಳ್ಳಲಿಲ್ಲ. ಆಗ ಭರತನು ಒಂದು ಮಹಾ ಕ್ರತುವನ್ನು ನಡೆಸಿ ಅದರಿಂದ ಭರದ್ವಾಜನಿಂದ ಭುಮನ್ಯು ಎಂಬ ಹೆಸರಿನ ಪುತ್ರನನ್ನು ಪಡೆದನು. ಆ ಪೌರವನಂದನನು ಭುಮನ್ಯುವನ್ನು ತನ್ನ ಪುತ್ರನೆಂದೇ ಸ್ವೀಕರಿಸಿ ಅವನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು. ಆಗ ಆ ಮಹೀಂದ್ರನಿಗೆ ವಿತಥನೆಂಬ ಪುತ್ರನು ಜನಿಸಿದನು. ನಂತರ ಆ ವಿತಥನಿಗೆ ಭುಮನ್ಯು ಎಂಬ ಹೆಸರಿನ ಸುತನು ಜನಿಸಿದನು.

ಋಚೀಕ ಭುಮನ್ಯುವು ಪುಷ್ಕರಣಿಯಲ್ಲಿ ಸುಹೋತ್ರ, ಸುಹೋತ, ಸುಹವಿ ಮತ್ತು ಸುಯಜು ಎಂಬ ಮಕ್ಕಳನ್ನು ಪಡೆದನು. ಅವರಲ್ಲಿ ಹಿರಿಯವ ಸುಹೋತ್ರನು ಇಡೀ ಭೂಮಿಯನ್ನೇ ರಾಜ್ಯವಾಗಿ ಪಡೆದು, ರಾಜಸೂಯ-ಅಶ್ವಮೇಧ ಯಜ್ನಗಳಿಂದ ಬಹಳ ರಾಜರನ್ನು ಜಯಿಸಿದನು.

ಸುಹೋತ್ರನಿಗೆ ಐಕ್ಷ್ವಾಕಿಯಲ್ಲಿ ಅಜಮೀಢ, ಸುಮೀಢ, ಮತ್ತು ಪುರುಮೀಢ ಎನ್ನುವ ಮಕ್ಕಳು ಜನಿಸಿದರು. ಅವರಲ್ಲಿ ಶ್ರೇಷ್ಠ ಅಜಮೀಢನಲ್ಲಿ ವಂಶವು ಮುಂದುವರೆಯಿತು.

ಅವನ ಮೂವರು ಪತ್ನಿಯರಲ್ಲಿ ಆರು ಪುತ್ರರು ಜನಿಸಿದರು: ಧೂಮ್ನಿಯಲ್ಲಿ ಋಕ್ಷ, ನೀಲಿಯಲ್ಲಿ ದುಃಷಂತ ಮತ್ತು ಪರಮೇಷ್ಠಿ, ಮತ್ತು ಕೇಶಿನಿಯಲ್ಲಿ ಜಹ್ನು, ಜನ ಮತ್ತು ರೂಪಿನರು ಜನಿಸಿದರು. ದುಃಷಂತ ಮತ್ತು ಪರಮೇಷ್ಠಿಯರಿಂದ ಸರ್ವ ಪಾಂಚಾಲರೂ ಮತ್ತು ಅಮಿತತೇಜಸ ಜಹ್ನುವುನಿಂದ ಕುಶಿಕರೂ ಜನಿಸಿದರು. ಜನ ಮತ್ತು ರೂಪಿನರಿಗಿಂತಲೂ ಹಿರಿಯವ ಋಕ್ಷನು ರಾಜನಾದನು, ಮತ್ತು ಋಕ್ಷನಿಂದ ಹುಟ್ಟಿದ ಸಂವರಣನಿಂದ ಕೌರವ ವಂಶವು ಪ್ರಾರಂಭವಾಯಿತು.

ಆರ್ಕ್ಷ ಸಂವರಣನು ಭೂಮಿಯ ಮೇಲೆ ಪ್ರಶಾಸನ ಮಾಡುತ್ತಿದ್ದಾಗ ಜನರಿಗೆ ಒಂದು ಮಹತ್ತರ ದುಷ್ಕಾಲ ಒದಗಿತು. ಆಗ ರಾಷ್ಟ್ರವು ನಾನಾ ವಿಧದ ಕ್ಷಯಗಳಿಂದಲೂ, ಅಕಾಲ ಮೃತ್ಯು, ಅನಾವೃಷ್ಠಿ, ವ್ಯಾಧಿಗಳಿಂದ ಪೀಡಿತಗೊಂಡಿತ್ತು.  ಪಾಂಚಾಲರು ತಮ್ಮ ಅಕ್ಷೌಹಿಣೀ ಚತುರಂಗ ಬಲದಿಂದ ಭಾರತರನ್ನು ಆಕ್ರಮಿಸಿ, ಇಡೀ ಭೂಮಿಯನ್ನೇ ನಡುಗಿಸುತ್ತಾ ಯುದ್ಧದಲ್ಲಿ ಅವರನ್ನು ಗೆದ್ದರು.

ಸಂವರಣನು ಸೂರ್ಯನ ಪುತ್ರಿ ತಪತಿಯಲ್ಲಿ ಕುರುವನ್ನು ಪಡೆದನು. ಅವನಿಗೆ ಅಶ್ವವಂತ, ಅಭಿಶ್ವಂತ, ಚಿತ್ರರಥ, ಮುನಿ ಮತ್ತು ವಿಖ್ಯಾತ ಜನಮೇಜಯಈ ಐವರು ಪುತ್ರರು ಮನಸ್ವಿನೀ ವಾಹಿನಿಯಲ್ಲಿ ಜನಿಸಿದರು. ಅಭಿಶ್ವಂತನ ಮಕ್ಕಳು ಪರಿಕ್ಷಿತ, ಶಬಲಾಶ್ವ, ಅಭಿರಾಜ, ವಿರಾಜ, ಶಲ್ಮಲ, ಉಚ್ಛೈಶ್ರವ, ಭದ್ರಕಾರ ಮತ್ತು ಎಂಟನೆಯವನು ಜಿತಾರಿ. ಇವರೆಲ್ಲರೂ ತಮ್ಮ ತಮ್ಮ ಕರ್ಮ ಗುಣಗಳಿಂದ ವಿಖ್ಯಾತರಾಗಿದ್ದರು. ಅವರ ವಂಶದಲ್ಲಿ ಜನಮೇಜಯನೇ ಮೊದಲಾದ ಇನ್ನೂ ಏಳು ಬಲಶಾಲಿ ಪುತ್ರರು ಆದರು. ಕಕ್ಷಸೇನ, ಉಗ್ರಸೇನ, ಚಿತ್ರಸೇನ, ಇಂದ್ರಸೇನ, ಸುಷೇಣ, ಮತ್ತು ಭೀಮಸೇನ ಎಂಬ ಹೆಸರಿನ ಪರಿಕ್ಷಿತನ ಪುತ್ರರೆಲ್ಲರೂ ಧರ್ಮಾರ್ಥಕೋವಿದರಾಗಿದ್ದರು.

ಜನಮೇಜಯನ ಮಹಾಬಲಶಾಲಿ ಪುತ್ರರು ಭೂಮಿಯಲ್ಲಿ ವಿಖ್ಯಾತರಾದರು – ಹಿರಿಯವನು ಧೃತರಾಷ್ಟ್ರ, ಪಾಂಡು, ಬಾಹ್ಲೀಕ, ಮಹಾತೇಜಸ್ವಿ ನಿಷಧ, ಬಲಶಾಲಿ ಜಾಂಬೂನದ, ಕುಂಡೋದರ, ಪದಾತಿ, ಮತ್ತು ಎಂಟನೆಯವನು ವಸಾತಿ. ಅವರಲ್ಲಿ ಧೃತರಾಷ್ಟ್ರನು ರಾಜನಾದನು. ಅವನ ಪುತ್ರರು ಕುಂಡಿಕ, ಹಸ್ತಿ, ವಿತರ್ಕ, ಕ್ರಾಥ, ಐದನೆಯವನು ಕುಂಡಲ, ಹವಿಃಶ್ರವ, ಇಂದ್ರಾಭ ಮತ್ತು ಅಪರಾಜಿತ ಸುಮನ್ಯು.

ಪ್ರತೀಪನು ಮೂರು ಮಕ್ಕಳನ್ನು ಪಡೆದನು: ದೇವಾಪಿ, ಶಂತನು, ಮತ್ತು ಮಹಾರಥಿ ಬಾಹ್ಲೀಕ. ಧರ್ಮಮಾರ್ಗವನ್ನು ಅರಸಿ ದೇವಾಪಿಯು ಪರಿವ್ರಾಜಕನಾದನು. ಮಹಾರಥಿ ಬಾಹ್ಲೀಕ ಮತ್ತು ಶಂತನು ರಾಜ್ಯವನ್ನು ಪಡೆದರು.
ಭರತಾನ್ವಯದಲ್ಲಿ ಇನ್ನೂ ಅನೇಕ ಸತ್ವವಂತರೂ, ಮಹಾರಥಿಗಳು, ದೇವರ್ಷಿಸಮಾನರೂ ಆದ ಬಹಳಷ್ಟು ರಾಜಸತ್ತಮರು ಜನಿಸಿದರು. ಇದೇ ರೀತಿಯಲ್ಲಿ ಮನುವಿನ ಅನ್ವಯದಲ್ಲಿ ಇತರ ದೇವಕಲ್ಪ ಮಹಾರಥಿಗಳು ಹುಟ್ಟಿ ಇಲನಿಂದ ಪ್ರಾರಂಭವಾದ ವಂಶವನ್ನು ಮುಂದುವರೆಸಿದರು.

(ಮುಂದಿನ ಸಂಚಿಕೆಯಲ್ಲಿ : ಸಂಪೂರ್ಣ ವಂಶಾವಳಿ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 5ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM  ಹಿಂದಿನ ಭಾಗ ಇಲ್ಲಿ ಓದಿ : https://aralimara.com/2018/11/16/sanatana-3/ […]

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.