ಚಹಾ ಕುಡಿದಾದ ಮೇಲೆ ಲಾಹೋರಿ, ಗೌಸ್ಪೀರ್ ಜೊತೆ ಊರಿನ ಸುದ್ದಿಯೆಲ್ಲಾ ಮಾತಾಡಿ ಮುಗಿಸಿದ. ಆದರೆ ಅವನಿಗೆ ಚಹಾ ಕುಡಿ ಅಂತ ಮಾತ್ರ ಹೇಳಲೇ ಇಲ್ಲ! ~ ಆನಂದಪೂರ್ಣ
ಒಮ್ಮೆ ಮಾಧವ ಲಾಹೋರಿ ತನ್ನ ಮನೆಯ ಜಗಲಿಯಲ್ಲಿ ಹುಕ್ಕಾ ಸೇದುತ್ತ ಕುಳಿತಿದ್ದ. ದಿನಾಲೂ ಹರಟೆ ಹೊಡೆಯಲು ಬರುವ ಪಕ್ಕದ ಮನೆಯ ಗೌಸ್ಪೀರ್ ಅವತ್ತು ಪೆಚ್ಚುಮುಖ ಹಾಕಿಕೊಂಡು ಬಂದ. ಅದೇ ಮುಖ ಹೊತ್ತು ಲಾಹೋರಿಯ ಮುಂದೆ ಕುಳಿತ. ಮಾಧವ ಲಾಹೋರಿ ಅದನ್ನು ನೋಡಿದರೂ ಕ್ಯಾರೇ ಅನ್ನಲಿಲ್ಲ.
ಹಾಗೇ ಸ್ವಲ್ಪ ಹೊತ್ತು ಕಳೆಯಿತು. ಮಾಧವ ಲಾಹೋರಿಯ ಹೆಂಡತಿ ಚಹಾ ತಂದಿಟ್ಟು, ಗಂಡನನ್ನು ತಿವಿದು ಎಚ್ಚರಿಸಿದಳು “ಗೌಸ್ಪೀರ್ ಬಂದಿದ್ದಾನೆ ನೋಡಿ. ಏನೋ ಬೇಜಾರಲ್ಲಿ ಇರೋ ಹಾಗಿದೆ” ಅಂದಳು. ಲಾಹೋರಿ ಏನು ಅನ್ನುವಂತೆ ಹುಬ್ಬು ಏರಿಸಿದ.
ಗೌಸ್ಪೀರ್ ತಾನು ಹೊದ್ದ ಟವೆಲಿನಲ್ಲಿ ಮೂಗು ಒರೆಸಿಕೊಳ್ಳುತ್ತಾ ತನ್ನ ಕಷ್ಟವನ್ನು ವಿವರಿಸಿದ. ಅದು ಅವನ ಸಾಸಿವೆ ಹೊಲಕ್ಕೆ ಸಂಬಂಧಪಟ್ಟ ವ್ಯಾಜ್ಯವಾಗಿತ್ತು. ಅದೊಂದು ಅವನ ಅಪ್ಪನ ಕಾಲದಿಂದಲೂ ದಾಯಾದಿಗಳ ಜೊತೆ ನಡೆದು ಬಂದ ಜಗಳ.
“ಏನಾದರೂ ಉಪಾಯ ಹೇಳು ಮಾಧೋ. ನಾನಂತೂ ಹೈರಾಣಾಗಿಹೋಗಿದ್ದೇನೆ” ಅಂತ ಮತ್ತೆ ಮೂಗೊರೆಸಿಕೊಂಡ ಗೌಸ್ಪೀರ್.
ಲಾಹೋರಿ ಸುಮ್ಮನೆ ಚಹಾ ಲೋಟವನ್ನೆತ್ತಿ ಅವನ ಕೈಲಿಟ್ಟ. “ನಾನು ಹೇಳುವವರೆಗೂ ಕುಡಿಯಬೇಡ” ಅಂತ ತಾಕೀತು ಮಾಡಿದ. ಆಮೇಲೆ ತಾನು ಸುರ್ ಎಂದು ಸದ್ದು ಮಾಡುತ್ತಾ ಚಹಾ ಕುಡಿದು ಮುಗಿಸಿದ.
ಚಹಾ ಕುಡಿದಾದ ಮೇಲೆ ಲಾಹೋರಿ ಗೌಸ್ಪೀರ್ ಜೊತೆ ಊರಿನ ಸುದ್ದಿಯೆಲ್ಲಾ ಮಾತಾಡಿದ. ಆದರೆ ಅವನಿಗೆ ಚಹಾ ಕುಡಿ ಅಂತ ಮಾತ್ರ ಹೇಳಲಿಲ್ಲ! ಮೊದಮೊದಲು ಅರಾಮಾಗೇ ಚಹಾದ ಲೋಟ ಹಿಡಿದುಕೊಂಡಿದ್ದ ಗೌಸ್ಪೀರನಿಗೆ ಈಗ ಕೈ ಸೋಲು ಬರತೊಡಗಿತು.
“ಇನ್ನೂ ಎಷ್ಟು ಹೊತ್ತು ಮಾಧೋ? ಕೈ ಸೋಲುತ್ತಿದೆ. ಹೀಗೇ ಇದ್ದರೆ ಜೋಮುಗಟ್ಟಿ ಚಹಾ ಪೂರ್ತಿ ಚೆಲ್ಲಿಹೋಗುತ್ತೆ ಅಷ್ಟೆ” ಅಂದ.
“ಕೈ ಯಾಕೆ ಸೋಲು ಬರುತ್ತಿದೆ? ಚಹಾ ಲೋಟ ಭಾರವಿದೆಯೇ?” ಕೇಳಿದ ಲಾಹೋರಿ
“ಚಹಾ ಲೋಟ ಭಾರವೇನಿಲ್ಲ. ಬಹಳ ಹೊತ್ತಿನಿಂದ ಹಿಡಿದುಕೊಂಡಿದ್ದೀನಲ್ಲ, ಅದಕ್ಕೆ ಹಾಗನಿಸುತ್ತಿದೆ” ಅಂದ ಗೌಸ್ಪೀರ್.
“ಹೀಗೇ ಇನ್ನೂ ತುಂಬಾ ಹೊತ್ತು ಹಿಡಿದುಕೊಂಡಿದ್ದರೆ ಏನಾಗುತ್ತೆ?”
“ಆಗಲೇ ಹೇಳಿದೆನಲ್ಲ? ಕೈ ಜೋಮು ಹಿಡಿಯುತ್ತೆ, ಚಹವೂ ತಣ್ಣಗಾಗುತ್ತೆ ಮತ್ತು ಚೆಲ್ಲಿ ಹೋಗುತ್ತೆ”
“ಹಾಗಾಗದಂತೆ ತಪ್ಪಿಸಬಹುದಾದ ಉಪಾಯಗಳೇನಿವೆ ಹೇಳು!?”
“ಚಹಾ ಕುಡಿಯಬೇಕು ಅಥವಾ ಲೋಟವನ್ನು ಕೆಳಗಾದರೂ ಇಡಬೇಕು.”
ಗೌಸ್ಪೀರನ ಬೆನ್ನಮೇಲೆ ಮೃದುವಾಗಿ ಗುದ್ದಿದ ಲಾಹೋರಿ, “ಪರಿಹಾರ ನಿನ್ನಲ್ಲೇ ಇದೆ. ಸಾಸಿವೆ ಹೊಲದ ಸಮಸ್ಯೆ ಬಗೆಹರಿಸಿಕೋ ಹೋಗು” ಅಂದ.