ಹುಟ್ಟುವಾಗ ಎಲ್ಲರೂ ಬೆತ್ತಲಾಗೇ ಹುಟ್ಟುತ್ತಾರೆ. ಸಾಯುವಾಗ ಯಾರೂ ತಮ್ಮ ಗುರುತನ್ನು ಬಿಟ್ಟುಹೋಗುವುದಿಲ್ಲ. ತಮ್ಮ ಮುಂದಿನ ವಿಳಾಸವನ್ನು ನೀಡುವುದಿಲ್. ಹೀಗಿರುವಾಗ ವ್ಯಕ್ತಿಗಳು (ಜೀವಿಗಳು) ಅದು ಹೇಗೆ ಭಿನ್ನ? ಎನ್ನುತ್ತದೆ ಅಥರ್ವ ವೇದ.
ನಾವೆಲ್ಲರೂ ಅವೇ ಪಂಚಭೂತಗಳಿಂದಾದ ಶರೀರವನ್ನು ಹೊಂದಿದ್ದೇವೆ. ನಮ್ಮೆಲ್ಲರ ಮೂಲಧಾತುಗಳೂ ಸಮಾನವಾಗಿವೆ. ಹುಟ್ಟುವಾಗ ನಾವು ಏನನ್ನೂ ತಂದಿರುವುದಿಲ್ಲ. ಕೊನೆಯ ಪಕ್ಷ ಬಟ್ಟೆಯನ್ನೂ ತೊಟ್ಟಿರುವುದಿಲ್ಲ. ಸಾಯುವಾಗ ನಾವು ಏನನ್ನೂ ಹೊತ್ತೊಯ್ಯುವುದಿಲ್ಲ. ನಾವು ಎಲ್ಲಿ ಹೋದೆವು, ಏನಾದೆವು ಎಂಬ ಸುಳಿವನ್ನೂ ನೀಡುವುದಿಲ್ಲ. ವ್ಯತ್ಯಾಸವೇನಿದ್ದರೂ ನಡುವಿನ ಬದುಕಿನಲ್ಲಷ್ಟೆ. ರಾಜನಾದರೂ ಭಿಕ್ಷುಕನಾದರೂ ತಮ್ಮ ತಮ್ಮ ಕರ್ಮಾನುಸಾರ ಜೀವನ ನಡೆಸುತ್ತಾರೆ. ಅಷ್ಟು ಮಾತ್ರಕ್ಕೆ ಅವರು ಭಿನ್ನರಾಗುವುದಿಲ್ಲ. ತಮ್ಮ ಸಂಪತ್ತಿನ ಕಾರಣದಿಂದಾಗಲೀ ಅಧಿಕಾರದಿಂದಾಗಲೀ ಯಾರೂ ಶ್ರೇಷ್ಠರೂ ಕನಿಷ್ಠರೂ ಆಗುವುದಿಲ್ಲ.
ಅಥರ್ವ ವೇದ ಹೇಳುವುದೂ ಅದನ್ನೇ. ಅದು ಹೇಳುವಂತೆ,
ಹುಟ್ಟು – ಸಾವುಗಳಲ್ಲಿ ಎಲ್ಲರೂ ಒಂದೇ.
ಭಿಕಾರಿಯಾದರೂ ರಾಜನಾದರೂ
ಬೆತ್ತಲೆಯಾಗೇ ಹುಟ್ಟುವುದು.
ಎಲ್ಲರೂ ನಿದ್ರಿಸುವಾಗ ಮೌನವಾಗೇ ಇರುವರು.
ಸತ್ತ ಮೇಲೆ ವಿಳಾಸ ಸಿಗೋದಿಲ್ಲ ಯಾರದ್ದೂ.
ಮತ್ತೆ ಹೇಗೆ ಅವರಿಬ್ಬರೂ ಬೇರೆ ಬೇರೆ?
ಮೂಲಭೂತವಾಗಿ ಜೀವಿಗಳೆಲ್ಲರೂ ಒಂದೇ.