ಆಕಾರ : ತಾವೋ ಧ್ಯಾನ ~ 12

ಬದುಕಿನ ಎಲ್ಲ ಪರಿಸ್ಥಿತಿಗಳಿಗೆ ನಾವು ಆಕಾರ ಕೊಡುವುದು ಹೀಗೆಯೇ. ಪರಿಸ್ಥಿತಿಗೊಂದು ಕಚ್ಚಾ ರೂಪ ಕೊಟ್ಟು ಬದುಕಿನ ಚಕ್ರದ ನಡುವೆ ನಿಲ್ಲಿಸಿ ಕೊಂಚ ಹೊತ್ತು ಹಿಗ್ಗಿಸಿ, ಕುಗ್ಗಿಸಿ ಪರಿಸ್ಥಿತಿಯ ಮೂಲ ಸ್ವಭಾವವನ್ನು ಪರೀಕ್ಷೆ ಮಾಡುವುದು. ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao 12

ಚಕ್ರದ ಸುತ್ತ ಕುಂಬಾರ,
ಶುರುವಿನಿಂದ ಕೊನೆಯವರೆಗೂ.
ಆಯ್ಕೆಗಳು ಕಡಿಮೆಯಾಗುತ್ತಿದ್ದಂತಯೇ
ಆಕಾರವೂ ಪೂರ್ಣ;
ಸುಟ್ಟು ಗಟ್ಟಿಯಾದ ಆಕಾರ.

~

ಮಡಿಕೆ ನಿರ್ಮಿಸಲು ತೀರ್ಮಾನಿಸಿದ ಕೂಡಲೆ ಅವಳು ಮಣ್ಣಿನ ಮುದ್ದೆಯೊಂದನ್ನು ಕೈಗೆತ್ತಿಕೊಂಡು ಸರಿ ಸುಮಾರು ದುಂಡಗೆ ಮಾಡಿ ಕುಂಬಾರನ ಚಕ್ರದ ಮೇಲೆ ಎಸೆಯುತ್ತಾಳೆ. ಅಕಸ್ಮಾತ್ ಆ ಮುದ್ದೆ ಸರಿಯಾಗಿ ಚಕ್ರದ ಕೇಂದ್ರದ ಮೇಲೆ ಬೀಳದಿದ್ದರೆ, ಆಕೆ ಜಾಗರೂಕತೆಯಿಂದ ಆ ಮಣ್ಣಿನ ಮುದ್ದೆಯ ಮೇಲೆ ಕೈಯಾಡಿಸುತ್ತ ಅದಕ್ಕೊಂದು ಪೂರ್ಣ ರೂಪ ಕೊಡುತ್ತಾಳೆ. ಆಮೇಲೆ ಚಕ್ರ ತಿರುಗಿದಂತೆಲ್ಲ ಆ ಮುದ್ದೆಯನ್ನು ಹಿಗ್ಗಿಸುತ್ತಾಳೆ ಕುಗ್ಗಿಸುತ್ತಾಳೆ ಗೋಪುರ ಕಟ್ಟುತ್ತಾಳೆ. ಹಲವಾರು ಬಾರಿ, ಮೇಲೆ-ಕೆಳಗೆ ಮುದ್ದೆಯನ್ನು ಎತ್ತಿ, ಒತ್ತಿ ಕೊನೆಗೆ ನಾಜೂಕಾಗಿ ಮುದ್ದೆಯನ್ನು ಹಿಚುಕಿ ಪೊಳ್ಳು ಮಾಡುತ್ತಾಳೆ. ಹೆಚ್ಚು ಸಮಯ ವ್ಯರ್ಥ ಮಾಡದೆ ಮಣ್ಣು ಬಿರುಸಾಗುವ ಮುನ್ನವೇ ಮುದ್ದೆಗೊಂದು ಮನಸಿನ ರೂಪ ಕೊಟ್ಟು ಚಕ್ರದಿಂದ ಕೆಳಗೆ ಇಳಿಸುತ್ತಾಳೆ. ಮರುದಿನ ಮಡಿಕೆ ಬಿರುಸಾದ ಮೇಲೆ ತನಗೆ ಬೇಕಾದ ಅಲಂಕಾರದ ಚಿತ್ರ ಕೊರೆದು ಕುಲುಮೆಗೆ ಹಾಕುತ್ತಾಳೆ. ಇನ್ನು ಬಣ್ಣ ಹಚ್ಚುವ ಕೆಲಸವೊಂದು ಮಾತ್ರ ಬಾಕಿ; ಈಗ ಮಡಿಕೆಯ ಆಕಾರವನ್ನು ಬದಲಾಯಿಸಲಾಗುವುದಿಲ್ಲ.

ಮಣ್ಣಿನ ಮುದ್ದೆ ಮಡಿಕೆಯಾಗುವ, ರಕ್ತ, ಮಾಂಸ ಗಳ ಮುದ್ದೆಯೊಂದು ಮನುಷ್ಯನಾಗುವ ಅಪರೂಪದ ಪ್ರಕ್ರಿಯೆಯನ್ನು ಶರೀಫರು ಕಂಡದ್ದು ಹೀಗೆ.

ಕುಂಬಾರಕಿ ಈಕಿ ಕುಂಬಾರಕಿ । ಈ
ಬ್ರಹ್ಮಾಂಡವೆಲ್ಲ ತುಂಬಿಕೊಂಡಿರುವಾಕಿ

ಹೊನ್ನು ಎಂಬ ಮಣ್ಣನು ತರಸಿ
ತನು ಎಂಬ ನೀರನು ಹಣಸಿ
ಮನ ಎಂಬ ಹುದಲನು ಕಲಸಿ
ಗುಣ ಎಂಬ ಸೂರನು ಹಾಕಿ

ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯಾನ ಎಂಬ ಬಡಗಿಯ ಊರಿ
ಮುನ್ನೂರರವತ್ತು ಸುತ್ತನು ತಿರಗಿ
ಗಡಗಿ ತಯಾರು ಮಾಡುವಾಕಿ

ಆಚಾರ ಎಂಬುವ ಆವಿಗೆ ಮುಚ್ಚಿ
ಅರುವ ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗೆ ಒಯ್ದು ಮಾರುವಾಕಿ

ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ವಸುಧಿಯೊಳಗಿರುವ ಶಿಶುನಾಳಧೀಶನ ಮುಂದ
ಧ್ಯಾನದ ಮಗಿಯೊಂದ ಇಡುವಾಕಿ ।

ಯಾವುದನ್ನ ಮಡಿಕೆ ಎನ್ನಬೇಕು? ಲಾವೋತ್ಸೇ ಕೇಳುವ ಪ್ರಶ್ನೆ ಯಲ್ಲೇ ಉತ್ತರವೂ ಇದೆ.

ಮಣ್ಣಿನ ಮುದ್ದೆಯ ಟೊಳ್ಳು ಮಾಡಿ
ಗಡಿಗೆ ಎಂದರು.
ಎಲ್ಲಿ ಗಡಿಗೆಯಿಲ್ಲವೊ
ಅಲ್ಲಿಯೇ ನೀರು ತುಂಬುವರು.

ಬದುಕಿನ ಎಲ್ಲ ಪರಿಸ್ಥಿತಿಗಳಿಗೆ ನಾವು ಆಕಾರ ಕೊಡುವುದು ಹೀಗೆಯೇ. ಪರಿಸ್ಥಿತಿಗೊಂದು ಕಚ್ಚಾ ರೂಪ ಕೊಟ್ಟು ಬದುಕಿನ ಚಕ್ರದ ನಡುವೆ ನಿಲ್ಲಿಸಿ ಕೊಂಚ ಹೊತ್ತು ಹಿಗ್ಗಿಸಿ, ಕುಗ್ಗಿಸಿ ಪರಿಸ್ಥಿತಿಯ ಮೂಲ ಸ್ವಭಾವವನ್ನು ಪರೀಕ್ಷೆ ಮಾಡುವುದು.

ಆದರೆ ಪರಿಸ್ಥಿತಿಗೆ ಆಕಾರ ಕೊಡುತ್ತಿರುವಾಗಲೇ ಯಾವ ರೂಪದಲ್ಲಿ ನಾವು ಪರಿಸ್ಥಿತಿಯನ್ನು ನೋಡಬಯಸುತ್ತೇವೆ ಎನ್ನುವುದರ ಸಂಪೂರ್ಣ ಅರಿವು ನಮಗಿರಬೇಕು.

ಕೊನೆಯಾಗುತ್ತ ಬಂದಂತೆ ಆಕಾರ ಪೂರ್ಣವಾಗುತ್ತ ಬರುತ್ತದೆ ಬದಲಾಯಿಸುವ ನಮ್ಮ ಆಯ್ಕೆಗಳು ಕಡಿಮೆಯಾಗುತ್ತ ಬರುತ್ತವೆ.
ಕೊನೆಯ ಸಫಲತೆ, ವಿಫಲತೆ ಎಲ್ಲ ನಿರ್ಧಾರವಾಗೋದು ಪರಿಸ್ಥಿತಿಯನ್ನು ನಾವು ನಡೆಸಿಕೊಳ್ಳುವ ನಮ್ಮ ಕುಶಲತೆಯ ಮೇಲೆ, ಪಕ್ವತೆಯ ಮೇಲೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.