ಮನಸ್ಸಿನ ಮೂಲಕ ಸುಪ್ರಮಾನಸ ಹಂತದವರೆಗೆ ಆಧ್ಯಾತ್ಮಿಕ ಆರೋಹಣಗೈಯಲು ಮೂರು ರೀತಿಯ ರೂಪಾಂತರ ಅಗತ್ಯ ಇದೆ. ಅವುಗಳನ್ನು ಶ್ರೀ ಅರೋಬಿಂದೊ ಅವರು ತಮ್ಮ ಮಹಾನ್ ಕೃತಿ `ದಿ ಲೈಫ್ ಡಿವೈನ್’ನಲ್ಲಿ ಹೀಗೆ ತಿಳಿಸಿದ್ದಾರೆ :
ಆಧ್ಯಾತ್ಮಿಕ ವ್ಯಕ್ತಿಗಳು ಪ್ರಪಂಚದಲ್ಲಿ ಹುಟ್ಟಿ, ಜೀವನಕ್ಕೆ ಹೊಸ ಬೆಳಕನ್ನು ತೋರಿದರು. ಮುಂದೆ ಸುಪ್ರಮಾನಸದಲ್ಲಿ ನೆಲೆಸುವ ವ್ಯಕ್ತಿಗಳ ಆವಿರ್ಭಾವ ಆಗಬೇಕಾಗಿದೆ. ಈ ಕಾರ್ಯಕ್ಕೆ ಹಿನ್ನೆಲೆಯಾಗಿ ಆಗಬೇಕಾದ ಮೂರು ರೂಪಾಂತರಗಳ ಕಡೆಗೆ ನಮ್ಮ ದೃಷ್ಟಿಯನ್ನು ಹರಿಸೋಣ.
ಪ್ರಪ್ರಥಮವಾಗಿ, ನಮ್ಮಲ್ಲಿರುವ ಚೈತ್ಯಪುರುಷನು ಜಾಗೃತನಾಗಬೇಕು. ಎರಡನೆಯದೆ, ಆಧ್ಯಾತ್ಮಿಕ ಪರಿವರ್ತನೆ. ಈ ಪರಿವರ್ತನೆಯಿಂದ, ಮಹತ್ತರ ಜ್ಯೋತಿ, ಶಕ್ತಿ , ಜ್ಞಾನ, ಬಲ, ಆನಂದ, ನೈರ್ಮಲ್ಯಗಳು ಅವತರಿಸಿ, ಅವಚೇತನದ ಗರ್ಭಕ್ಕೂ ಇಳಿದು ಅಲ್ಲಿಯೂ ಪರಿವರ್ತನೆಯಾಗಬೇಕು. ಚೇತನವು ಸುಪ್ರಮಾನಸದಲ್ಲಿ ನೆಲೆಸುವುದೇ ಮೂರನೆಯ ಪರಿವರ್ತನೆ. ಈ ಮೂರು ರೀತಿಯ ರೂಪಾಂತರಗಳಿಂದ ಚಿನ್ಮಯ ಸಿದ್ಧಿ.
ವಿಕಾಸ ಮುಂದುವರಿದಂತೆ, ನಮ್ಮಲ್ಲಿ ನಿಗೂಢವಾಗಿರುವ ಶಕ್ತಿಗಳು ವ್ಯಕ್ತವಾಗಲು ಆರಂಭಿಸುತ್ತವೆ. ಆಗ ಮನಸ್ಸು ಅಂತರ್ಮುಖವಾಗಿ, ಚೈತ್ಯ ಪುರುಷನ (ಜೀವಾತ್ಮನ) ಶಕ್ತಿ ಸಾಮಥ್ರ್ಯಗಳು ಬೆಳೆಯುತ್ತವೆ. ಚೈತ್ಯಪುರುಷನನ್ನು ಪ್ರಜ್ಞಾಪೂರ್ವಕವಾಗಿ ಅರಿತು, ಅನುಭವಿಸಿದಾಗ, ಅವನು ನಮ್ಮ ಜೀವನದ ಸಾರಥಿಯಾಗುತ್ತಾನೆ. ಆಗ ಹೊಸ ಶಕ್ತಿ ಸಂಚಾಲಿತವಾಗಿ ತೇಜೋಪೂರ್ಣ ರೂಪಾಂತರ ಸಾಧ್ಯವಾಗುತ್ತದೆ.
ಜಿಜ್ಞಾಸೆಯಿಂದ ಮುಂದೆ ಸಾಗುವಾಗ, ಛಾಯಾಪುರುಷನನ್ನೇ ಚೈತ್ಯ ಪುರುಷನೆಂದು ತಿಳಿಯುವ ಸಂಭವವಿದೆ. ನಮ್ಮ ಅಂತರಂಗದಲ್ಲಿ ದೇಹಾತ್ಮ , ಪ್ರಾಣಾತ್ಮ , ಮನೋಆತ್ಮ ಎಂಬ ಸ್ಥಿತಿಗಳಿವೆ. ಈ ಸ್ಥಿತಿಗಳನ್ನೇ ಅಂತಿಮವೆಂದು ತಿಳಿಯಬಾರದು. ಇವೆಲ್ಲ ಆತ್ಮಶಕ್ತಿಯ ಬೇರೆ ಬೇರೆ ಸ್ಥಿತಿಗಳು.
ಪಶುಗಳು ಪ್ರಕೃತಿಯ ಯಾಂತ್ರಿಕ ರೀತಿಗೆ ದಾಸರಾಗಿರುತ್ತವೆ. ಆದರೆ ಮನುಷ್ಯರು ಆತ್ಮ ಪ್ರಜ್ಞೆಯುಳ್ಳವರು. ಆದುದರಿಂದ ಅವರು, ಪಶುಸ್ವಭಾವದಿಂದ ಮೇಲೇರಿ, ಪಶುಸ್ವಭಾವದ ಮೇಲೆ ಪ್ರಭುತ್ವವನ್ನು ಸಾಸಲು ಶಕ್ತರಾಗುವುದು. ದೇಹಾತ್ಮವಾದಿಗಳು ದೇಹಕ್ಕೇ ಹೆಚ್ಚಿನ ಆದ್ಯತೆ ನೀಡಿದರು. ಪ್ರಾಣಾತ್ಮವಾದಿಗಳು, ಜೀವನವೆಂಬ ಕುರುಕ್ಷೇತ್ರದಲ್ಲಿ ವಿಜಯದ ಪ್ರತಿನಿಯಾದ ಆತ್ಮನನ್ನು ಸ್ಥಾಪಿಸಲು ಯತ್ನಿಸುತ್ತಾರೆ. ಮನೋ ಆತ್ಮವಾದಿಗಳು, ದೇಹವನ್ನೂ ಪ್ರಾಣವನ್ನೂ ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಯತ್ನಿಸುತ್ತಾರೆ. ದೇಹಶಕ್ತಿ ಮತ್ತು ಪ್ರಾಣಶಕ್ತಿಗಳು ಮನೋಶಕ್ತಿಗಿಂತ ಮೊದಲೇ ಹುಟ್ಟಿದವುಗಳಾದುದರಿಂದ ಅವುಗಳು ಪ್ರಬಲವಾಗಿರುತ್ತವೆ. ದೇಹ ಮತ್ತು ಪ್ರಾಣಗಳಿಗಿಂತ ಮನಸ್ಸು ಬಲವಾದರೂ ದೇಹ ಮತ್ತು ಪ್ರಾಣಗಳ ಶಕ್ತಿಗೆ ಅೀನವಾಗುವುದುಂಟು. ಮನೋಮಯದಲ್ಲಿ ಸಾಕ್ಷಿ ಯಾಗಿರುವ ಜೀವಾತ್ಮನು ಸೂತ್ರಧಾರನಾಗಿ ಜೀವನದ ಮುಂಭಾಗಕ್ಕೆ ಬಂದರೆ, ಸತ್ಯ ಶಿವ ಸುಂದರಗಳತ್ತ ನಮ್ಮನ್ನು ಮುನ್ನಡೆಸುತ್ತಾನೆ. ಪರಮ ಸತ್ಯ, ಪರಮ ಶಿವ, ಪರಮ ನಿರಂಜನ, ಪರಮಾನಂದ – ಇವುಗಳ ಅನುಭವವಾಗುವುದು ಆಗಲೇ !
ಮನೋರಾಜ್ಯದ ಎತ್ತರದ ಶಿಖರಗಳಲ್ಲಿ ಸಂಚರಿಸುವ ಮುನಿಗಳು ಅಧ್ಯಾತ್ಮಯೋಗಿಗಳು. ಅಪರೋಕ್ಷ ಅನುಭವದ ಉಷಾಲೋಕದಲ್ಲಿ ಅವರು ವಿಹರಿಸುತ್ತಾರೆ. ಆಗ ಅವರ ಮನಸ್ಸು ಬೃಹತ್ ಶಾಂತಿಯಲ್ಲಿ ನೆಲೆಸಿರುತ್ತದೆ. ಅದಕ್ಕಿಂತ ಹೆಚ್ಚಿನ ವಿಕಾಸವಾದಾಗ, ನಾಮರೂಪಗಳ ದ್ವಂದ್ವತೆಯಿಂದ ಮನಸ್ಸು ದೂರವಾಗಿ, ಜೀವಾತ್ಮನು ಅವ್ಯಕ್ತದ ಪ್ರಶಾಂತಿಯಲ್ಲಿ ನೆಲೆಸುತ್ತಾನೆ. ಆಗ ಪರಾಭಕ್ತಿ ಮತ್ತು ಪ್ರೇಮ ಉದಿಸಿ, ವಿಶ್ವಮೈತ್ರಿಯ ಉದಯವಾಗುತ್ತದೆ. ಆಗ ಮಾನವರ ಕರ್ಮವೆಲ್ಲ ಭಗವದರ್ಪಿತವಾಗಿ, ವೈಯಕ್ತಿಕ ಇಚ್ಛೆ, ಪರಮಾತ್ಮನ ಸತ್ಯ ಸಂಕಲ್ಪದೊಡನೆ ಲೀನವಾಗಿ, ಚೈತ್ಯಪುರುಷನ (ಜೀವಾತ್ಮನ) ಜ್ಯೋತಿಯತ್ತ ಉನ್ಮೀಲಿತವಾಗುತ್ತದೆ; ನಿಷ್ಕಾಮ ಕರ್ಮ, ಪರಾಭಕ್ತಿ , ಆಧ್ಯಾತ್ಮಿಕ ಜ್ಞಾನ – ಇವೆಲ್ಲ ಸಮನ್ವಯವಾಗಿ, ಭಗವದ್ ದೃಷ್ಟಿ ಲಭಿಸುತ್ತದೆ. ಶಾಂತಿ, ಜ್ಯೋತಿ, ಶಕ್ತಿ -ಇವುಗಳ ಉದಯವಾಗುವುದು ಆಗಲೆ !
ಸಿದ್ಧಿಶೈಲಕ್ಕೇರುವ ಮೊದಲು ಅನೇಕ ಭಯಂಕರ ಶತ್ರುಗಳು ಸಾಧಕರನ್ನು ವಿಚಲಿತರನ್ನಾಗಿ ಮಾಡಿ, ದಾರಿ ತಪ್ಪಿಸಲು ಯತ್ನಿಸುತ್ತವೆ. ಆಗ ಸಂಯಮ ಮತ್ತು ಚಿತ್ತ ಶುದ್ಧಿ ಅವಶ್ಯಕ. ಜ್ಯೋತಿಷ್ಪಥವು ಸ್ಪಷ್ಟವಾಗಿ ಕಾಣುವುದೇ ಸಿದ್ಧಿಯ ಮೊದಲ ಹಂತ. ಆಗ ಅನ್ನಮಯ, ಪ್ರಾಣಮಯ, ಮನೋಮಯ ಕೋಶಗಳನ್ನು ದಾಟಿ ವಿಜ್ಞಾನಮಯ ಕೋಶಕ್ಕೆ ಪ್ರವೇಶ. ಅಪರಾ ಪ್ರಕೃತಿಯ ಗೋಡೆಗಳು ಬಿದ್ದುಹೋಗಿ, ಋತಜ್ಯೋತಿಯು ಗೋಚರಿಸುತ್ತದೆ. ಅನಂತರ, ಚಿತ್ತದಲ್ಲಿ ಆನಂದದ ದೀಪ್ತಿ , ಹೃದಯದಲ್ಲಿ ನಿರ್ಮಲ ಭಕ್ತಿ ಮತ್ತು ಆಧ್ಯಾತ್ಮಿಕ ಆನಂದದ ಪ್ರವಾಹ ! ಸಂಕುಚಿತತೆ ಮಾಯವಾಗಿ ಮಹಾವೈಶಾಲ್ಯವೂ ಶಾಶ್ವತ ಆನಂದವೂ ಸುಪ್ರಕಟ. ಆ ಸ್ಥಿತಿಯಲ್ಲಿ ಎಲ್ಲೆಲ್ಲಿಯೂ ನಿತ್ಯ ವಸ್ತುವಿನ ಸತ್‍ಸ್ವರೂಪದರ್ಶನ ! ಇದೊಂದು ರೀತಿಯಲ್ಲಿ ಅವ್ಯಕ್ತಕ್ಕೂ ವ್ಯಕ್ತಕ್ಕೂ ನಿರ್ಮಿತವಾಗುವ ಸೇತುವೆ ! ಇದೇ ಸಿದ್ಧಿಯ ಎರಡನೆಯ ಹಂತ. ಅನಂತಶಕ್ತಿಯ ಈ ಅವತರಣವಾಗುತ್ತಿರುವ ಸಮಯದಲ್ಲಿ ಸಾಧಕರು ಅಶುದ್ಧಮನ, ಅಹಂಕಾರಗಳಿಗೆ ವಶರಾಗಿ ದಿವ್ಯಶಕ್ತಿಗಳನ್ನು ಭೋಗಕ್ಕಾಗಿ ಉಪಯೋಗಿಸಿದರೆ, ಪತನ ಆಗುವ ಸಂಭವವಿದೆ. ಆದುದರಿಂದ ಸಾಧಕರು, ಅಂಧಶಕ್ತಿಗಳು ಪ್ರವೇಶಿಸದಂತೆ ಎಚ್ಚರವಾಗಿರಬೇಕು.
ಮೂರನೆಯ ಹಂತದಲ್ಲಿ , ಜೀವಾತ್ಮನು ವಿದ್ಯಾ ಭೂಮಿಯಲ್ಲಿ ನೆಲೆಸುತ್ತಾನೆ. ಆಗ ಸುಪ್ರಮಾನಸದ ಅವತರಣ. ಇದೇ ಪೂರ್ಣಯೋಗದ ಸಿದ್ಧಿ.
ಡಾ|| ದ.ರಾ. ಬೇಂದ್ರೆಯವರು ಪೂರ್ಣಯೋಗವನ್ನು ಸೂತ್ರರೂಪಿಯಾಗಿ ಹೀಗೆ ತಿಳಿಸಿದ್ದಾರೆ :
- ಜೀವನ ತ್ಯಾಗಮಾಡದೆ, ಹಿಂಸೆ ನಡೆಸದೆ, ಜೀವಾನಂದವನ್ನು ಃಕ್ಕರಿಸದೆ, ಪ್ರಾಣಶಕ್ತಿಯನ್ನು ಹಣಿಯದೆ ಈ (ಪೂರ್ಣ) ಯೋಗಸಾಧನೆ ನಡೆಯುವುದು.
- ತನ್ನ ಸಕಲ ಭಾವಗಳಿಂದಲೂ ತನ್ನ ಪರಮೋಚ್ಚವನ್ನು ಪಡೆಯುವುದು – ಇದೇ (ಪೂರ್ಣ) `ಯೋಗ’.
- ದಿವ್ಯ ಪ್ರe್ಞÉಯ ವೃದ್ಧಿಯನ್ನು ಪಡೆಯುವುದೇ ನಮ್ಮ (ಪೂರ್ಣ) ಯೋಗದ ಸಕಲಾರ್ಥ.
- ಮಾನವಹೃದ್ಗತನಾದ ಭಗವಂತನನ್ನು ತನ್ನ ಭಾವದಿಂದಲೂ, ತನ್ನ ಬುದ್ಧಿಯಿಂದಲೂ, ತನ್ನ ಸರ್ವೇಂದ್ರಿಯಗಳಿಂದಲೂ ಆಧ್ಯಾತ್ಮಿಕವಾಗಿ ಆಶ್ರಯಿಸುವುದು – ಇದೇ (ಪೂರ್ಣ) ಯೋಗ.
- ದಿವ್ಯ ಜೀವನದ ಅಭೀಪ್ಸೆ ಜಾಗೃತವಾದರೆ, ಈ ಪ್ರಪಂಚವೇ ಪರಿವರ್ತಿತವಾಗಿ, ದಿವ್ಯ ಸಮಾಜದ ಸೃಷ್ಟಿಯಾಗಿ ಜೀವನವೆಲ್ಲ ಆನಂದಮಯವಾಗುತ್ತದೆ.