ಸರ್ವಶಕ್ತನನ್ನು ಯಾವುದು ಚಲಿಸುವಂತೆ ಮಾಡಬಲ್ಲುದು ಯಾವುದು? ಈ ಪ್ರಪಂಚವನ್ನು ಸೃಷ್ಟಿಸುವಂತೆ ತಾಯಿಗೆ ಯಾರು ಪ್ರೇರೇಪಿಸಿದ್ದು? ಅವಳಿಗೆ ಗುರಿ ಏನೂ ಇಲ್ಲ. ಯಾವುದನ್ನು ಯಾರೂ ಇನ್ನೂ ಮುಟ್ಟಿಲ್ಲವೋ, ಅದೇ ಅವಳ ಗುರಿ.
ತಾಯಿಯಲ್ಲಿ ಅಕಾರಣ ಪ್ರೀತಿಯನ್ನು ನಾವು ನೋಡುತ್ತೇವೆ. ಅವಳ ಪ್ರೀತಿಯಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲ. ಅವಳ ಪ್ರೀತಿ ಎಂದೆಂದಿಗೂ ನಾಶವಾಗುವುದಿಲ್ಲ. ಇಂತಹ ಪ್ರೇಮ ಯಾರಿಗೆ ಸಾಧ್ಯ? ತಾಯಿಗೆ ಮಾತ್ರ… ಅಲ್ಲವೆ?
“ಎಲ್ಲ ಕಡೆಗಳಲ್ಲಿಯೂ ವ್ಯಕ್ತವಾಗುತ್ತಿರುವ ಶಕ್ತಿಯೇ ನಾನು” ಎನ್ನುವಳು ತಾಯಿ. ಈ ಪ್ರಪಂಚವನ್ನು ಸೃಷ್ಟಿಸುವವಳು ಅವಳೇ, ಈ ಪ್ರಪಂಚವನ್ನು ನಾಶ ಮಾಡುವವಳೂ ಅವಳೇ. ವಿನಾಶವು ಸೃಷ್ಟಿಗೆ ಆದಿ
ಎಂಬುದನ್ನು ಹೇಳಬೇಕಾಗಿಲ್ಲ. ಬೆಟ್ಟದ ತುದಿ ಎಂದರೆ ಅದು ಕಣಿವೆಯ ಪ್ರಾರಂಭವೇ ಆಗಿರುತ್ತದೆ.
ಸರ್ವಶಕ್ತನನ್ನು ಯಾವುದು ಚಲಿಸುವಂತೆ ಮಾಡಬಲ್ಲುದು ಯಾವುದು? ಈ ಪ್ರಪಂಚವನ್ನು ಸೃಷ್ಟಿಸುವಂತೆ ತಾಯಿಗೆ ಯಾರು ಪ್ರೇರೇಪಿಸಿದ್ದು? ಅವಳಿಗೆ ಗುರಿ ಏನೂ ಇಲ್ಲ. ಯಾವುದನ್ನು ಯಾರೂ ಇನ್ನೂ ಮುಟ್ಟಿಲ್ಲವೋ, ಅದೇ ಅವಳ ಗುರಿ.
ಈ ಸೃಷ್ಟಿಯೊಂದು ತಮಾಷೆ. ಇದನ್ನು ಮರೆತು ನಾವು ಜಗಳ ಕಾಯುತ್ತೇವೆ, ದುಃಖಪಡುತ್ತೇವೆ. ಮತ್ಸರ ಪಡುತ್ತೇವೆ. ಸ್ಪರ್ಧೆಗೆ ಇಳಿಯುತ್ತೇವೆ.
ನಾವು ಜಗನ್ಮಾತೆಯೊಡನೆ ಆಡುತ್ತಿರುವೆವು. ಕೊನೆಗೆ ಕೈಸೋಲತೊಡಗಿದಾಗ ಶರಣಾಗತಿಯ ಭಾವ ಮೂಡುವುದು. ಆಗ ನಾವು ಜಗನ್ಮಾತೆ ಹೇಳಿದಂತೆ ಕೇಳುವೆವು.
ಈ ಹಂತದಲ್ಲಿ ದುಃಖ ಬಂದರೆ ಸ್ವಾಗತ, ಸುಖ ಬಂದರೆ ಅದಕ್ಕೂ ಸ್ವಾಗತ.
ಪ್ರೀತಿಯ ಮೆಟ್ಟಿಲನ್ನು ಹತ್ತಿದರೆ ಹೃದಯದ ವಕ್ರತೆಯೆಲ್ಲ ನೇರವಾಗುವುದು. ಆಗ ಇವ ನಮ್ಮವ, ಇವ ಪರಕೀಯ ಎಂಬ ಭೇದಗಳನ್ನು ಬಿಟ್ಟು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತೇವೆ. ಸಮದೃಷ್ಟಿಯಿಂದ ಪಕ್ಷಪಾತವಿಲ್ಲದೆ, ಎಂದಿಗೂ ಬತ್ತದ ಪರಮ ಪ್ರೇಮದಿಂದ ಪ್ರಪಂಚವನ್ನು ನೋಡಲು ಸಾಧ್ಯವಾಗುವವರೆಗೆ ಪುನಃ ಪುನಃ ನಾವು ಸೋಲಬೇಕಾಗುವುದು.
ಕೊನೆಗೆ ಭಿನ್ನತೆಗಳೆಲ್ಲ ಅಳಿದು, ಎಲ್ಲರಲ್ಲಿಯೂ ನೆಲೆಸಿಸಿರುವ ಸನಾತನಿಯಾದ ಜಗನ್ಮಾತೆಯನ್ನು ನೋಡುವೆವು.
(ವಿವೇಕಾನಂದರ ಕೃತಿಶ್ರೇಣಿ | ಮಾತೃಪೂಜೆ | ಸಂಪುಟ 7, ಪು.323-24)