ಅಗ್ನಿ | ಭಾರತೀಯ ಪೌರಾಣಿಕ ಪಾತ್ರಗಳು ~ 1

ಭಾರತೀಯ ಪೌರಾಣಿಕ ಪಾತ್ರಗಳ ಕಿರುಪರಿಚಯ ಸರಣಿ, ಇಂದಿನಿಂದ….

agni.jpg

ಶಿವ ಭಕ್ತ ವೈಶ್ವಾನರನಿಗೆ ಶುಚಿಷ್ಮತಿ ಎಂಬ ಪತ್ನಿಯಲ್ಲಿ ಜನಿಸಿದ ಪುತ್ರನೇ ಅಗ್ನಿ. ಈತ ಶಿವನ ವರಪ್ರಸಾದವಾಗಿದ್ದರೂ ಬಾಲಾರಿಷ್ಟ ದೋಷದಿಂದ ಕೂಡಿದ್ದ. ಇದರಿಂದ ಪಾರಾಗಲು ಮಹಾದೇವನ ಮೊರೆಯನ್ನೇ ಹೋಗಬೇಕೆಂದು ನಾರದರು ತಿಳಿಸಲಾಗಿ ಸುದೀರ್ಘ ತಪಸ್ಸು ಕೈಗೊಂಡ.

ದೇವರಾಜ ಇಂದ್ರ ವೈಶ್ವಾನರ ಪುತ್ರನ ತಪಸ್ಸಿನಿಂದ ಕನಲಿದ. ಅವನ ಬಳಿ ಬಂದು, “ನಿನಗೇನು ಬೇಕೋ ಕೊಡುತ್ತೇನೆ, ತಪಸ್ಸು ಸಾಕುಮಾಡು” ಎಂದು ಹೇಳಿದ. ಅದಕ್ಕೆ ಅವನು ಒಪ್ಪದಿರಲು, ಕೋಪದಿಂದ ವಜ್ರಾಯುಧ ಪ್ರಹಾರ ಮಾಡಿದ. ಆಗ ಆ ಬಾಲಕನು ಶಿವನನ್ನು ಸಹಾಯಕ್ಕಾಗಿ ಕೂಗಿ ಕರೆದ.

ತತ್ ಕ್ಷಣ ಪ್ರತ್ಯಕ್ಷವಾದ ಮಹಾದೇವ, ಬಾಲಕನ್ನು ಕಾಪಾಡಿ, ಅವನ ಮರಣ ಭಯ ನಿವಾರಣೆ ಮಾಡಿದ. ದೇವತ್ವವನ್ನೂ ಅಗ್ನಿಲೋಕದ ಅಧಿಪತ್ಯವನ್ನೂ ಕರುಣಿಸಿ, ದಿಕ್ಪಾಲಕತ್ವವನ್ನೂ ನೀಡಿದ.

ಅಗ್ನಿಗೆ ಇಬ್ಬರು ಪತ್ನಿಯರು; ಸ್ವಾಹಾ ಮತ್ತು ಸ್ವಧಾ. ಸುದರ್ಶನೆ ಇವನ ಮೂರನೆ ಹೆಂಡತಿ. ಸ್ವಾಹಾಳಲ್ಲಿ ಜನಿಸಿದ ಸ್ಕಂದ, ಸುದರ್ಶನೆಯಲ್ಲಿ ಜನಿಸಿದ ಸುದರ್ಶನ ಈತನ ಮಕ್ಕಳು. ಸ್ಕಾಂದವೆಂಬ ಟಗರು ಈತನ ವಾಹನ.

ಅಗ್ನಿ, ಪಂಚಭೂತಗಳಲ್ಲಿ ಮೂರನೆಯವನು. ತೇಜಸ್ಸಿಗೂ ಅದರ ಅಭಿಮಾನ ದೇವತೆಗೂ ಅಗ್ನಿ ಎಂದೇ ಹೆಸರು. ಋಗ್ವೇದದಲ್ಲಿ ಅಗ್ನಿ ಮೊದಲ ದೇವತೆ.

ಈತ ಭೃಗು ಮಹರ್ಷಿಯಿಂದ ‘ಸರ್ವಭಕ್ಷಕನಾಗು’ ಎಂದು ಶಾಪ ಪಡೆದ. ಹಾಗೂ ಇಂದ್ರ ವೃತ್ರನನ್ನು ಕೊಂದು ಬ್ರಹ್ಮ ಹತ್ಯಾದೋಷಕ್ಕೆ ತುತ್ತಾದಾಗ, ಅವನ ಪಾಪದ ನಾಲ್ಕನೇ ಒಂದು ಭಾಗವನ್ನು ಪಡೆದು, ಇಂದ್ರನನ್ನು ಮುಕ್ತಗೊಳಿಸಲು ಸಹಾಯ ಮಾಡಿದ.

(ಆಕರ: ಪುರಾಣನಾಮ ಚೂಡಾಮಣಿ ಮತ್ತು ಅಂತರ್ಜಾಲ)

Leave a Reply