ಖಾಲಿಯಾಗದ ಖಜಾನೆಯ ಮಹಿಳೆ ಮತ್ತು ಯಾತ್ರಿಕ : Tea time story

scholar_smಫ್ಘಾನಿಸ್ತಾನದ ಬೆಟ್ಟಗಳಲ್ಲಿ ಒಬ್ಬ ಸೂಫಿ ಮಹಿಳೆ ವಾಸಿಸುತ್ತಿದ್ದಳು. ಬೆಟ್ಟ ಗುಡ್ಡಗಳ ನಡುವೆ ಕುರಿ ಮೇಯಿಸುತ್ತಾ ತನ್ನ ಪಾಡಿಗೆ ತಾನು ಖುಷಿಯಾಗಿದ್ದ ಅವಳಿಗೆ, ಒಮ್ಮೆ ಒಂದು ಕೊಳದ ಬಳಿ ಅಮೂಲ್ಯ ಹರಳು ಸಿಕ್ಕಿತು. ಅವಳು ಅದನ್ನು ತನ್ನ ಬುತ್ತಿ ಚೀಲದಲ್ಲಿಟ್ಟುಕೊಂಡು ಕುರಿಗಳಿಗೆ ನೀರು ಕುಡಿಸಿ, ತನ್ನ ಪಾಡಿಗೆ ತಾನುಳಿದಳು.

ದಿನಗಳು ಕಳೆದವು. ಸೂಫಿ ಮಹಿಳೆ ದಿನವೂ ಕುರಿ ಮೇಯಿಸಲು ಹೋಗುತ್ತಿದ್ದಳು. ಅವಳು ಬೆಟ್ಟದ ತಪ್ಪಲಿನಲ್ಲಿ ಕುಳಿತಿದ್ದಾಗ ಯಾತ್ರಿಕನೊಬ್ಬ ಬಂದ. ಬಹಳ ಆಯಾಸಗೊಂಡಿದ್ದ ಆತ, “ಹಸಿವಾಗಿದೆ… ತಿನ್ನಲು ಏನಾದರೂ ಸಿಗಬಹುದೇ?” ಎಂದು ಕೇಳಿದ.

ಆ ಮಹಿಳೆ ಖುಷಿಯಿಂದ ತನ್ನ ಬುತ್ತಿ ಚೀಲ ಬಿಚ್ಚಿದಳು. ತಿನ್ನಲು ರೊಟ್ಟಿಗಳನ್ನು ಕೊಟ್ಟಳು. ಅವಳ ಚೀಲದಲ್ಲಿನ್ನೂ ಅಮೂಲ್ಯ ಹರಳು ಹಾಗೇ ಇತ್ತು. ಅದನ್ನು ನೋಡುತ್ತಲೇ ಯಾತ್ರಿಕನ ಕಣ್ಣು ಕೋರೈಸಿತು. ಆ ಹರಳು ನನ್ನದಾದರೆ ಜೀವಮಾನವಿಡೀ ಸುಖವಾಗಿ ತಿರುಗಾಡಿಕೊಂಡಿರಬಹುದು ಅಂದುಕೊಂಡ.

ಹಿಂಜರಿಯುತ್ತಲೇ ಅವಳ ಬಳಿ, “ನನಗೆ ಆ ಹರಳು ಕೊಡಬಹುದೆ?” ಎಂದು ಕೇಳಿದ.
ಆಕೆ ರೊಟ್ಟಿ ಕೊಟ್ಟಷ್ಟೇ ಖುಷಿಯಿಂದ ಹರಳನ್ನೂ ಅವನಿಗೆ ಕೊಟ್ಟಳು. ಅವನು ಸ್ವರ್ಗವೇ ಕೈಗೆ ಸಿಕ್ಕಂತೆ ಕುಣಿದಾಡುತ್ತಾ ಹೊರಟುಹೋದ.

ಸೂಫಿ ಮಹಿಳೆ ಎಂದಿನಂತೆ ತನ್ನ ಕಾಯಕ ಮುಂದುವರೆಸಿದ್ದಳು. ದಿನಗಳು ಉರುಳುತ್ತಿದ್ದವು. ಅವಳು ಬೆಟ್ಟದ ತಪ್ಪಲಿನಲ್ಲಿ ತನ್ನ ಮಾಮೂಲು ಜಾಗದಲ್ಲಿ ಕುಳಿತಿದ್ದಾಗ, ಆ ಯಾತ್ರೆ ಪುನಃ ಬಂದ. ಅವನ ಮುಖದಲ್ಲಿ ವಿನಮ್ರತೆ ಇತ್ತು. ಬಂದವನೇ ಅವಳೆದುರು ತಲೆ ಬಾಗಿ ನಿಂತು “ಈ ಹರಳು ಮರಳಿ ತೆಗೆದುಕೊಳ್ಳಿ” ಅಂದ.

“ಯಾಕೆ?” ಅವಳು ಕೇಳಿದಳು.
“ನಿಮ್ಮ ಬಳಿ ಕೊಡಲು ಈ ಹರಳಿಗಿಂತಲೂ ಅಮೂಲ್ಯವಾದ ನಿಧಿಯಿದೆ. ನನಗೆ ಅದನ್ನು ದಯಪಾಲಿಸಿ” ಅಂದ.
“ನಿನಗೆ ಹೇಗೆ ತಿಳಿಯಿತು?”
“ನಗುನಗುತ್ತಾ ಹರಳನ್ನು ಕೊಟ್ಟು ಕಳಿಸಿದಾಗಲೇ ನಾನು ನಿಮ್ಮ ಹೃದಯ ಶ್ರೀಮಂತಿಕೆಯನ್ನು ಅರಿಯಬೇಕಿತ್ತು. ಅದು ತಿಳಿಯಲು ಇಷ್ಟು ಕಾಲ ಹಿಡಿಯಿತು. ಈಗಲೂ ತಡವಾಗಿಲ್ಲ. ನಿಮ್ಮಲ್ಲಿ ಮೊಗೆದಷ್ಟೂ ಖಾಲಿಯಾಗದ ಜ್ಞಾನದ ಖಜಾನೆಯಿದೆ. ನನಗೆ ಅದನ್ನು ನೀಡಿ”

ಅಂದಿನಿಂದ ಆ ಯಾತ್ರಿಕ ಕುರಿಕಾಯುವ ಸೂಫಿ ಮಹಿಳೆಯ ಶಿಷ್ಯನಾದ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

1 Comment

Leave a Reply