ದಾಸಿಯಿಂದ ದಾರ್ಶನಿಕ ಹಂತಕ್ಕೇರಿದ ಉಶಿಜಾ

ಉಶಿಜಳ ಅಧ್ಯಾತ್ಮ ಸಾಹಿತ್ಯಸೃಷ್ಟಿಯಲ್ಲಿ ಬಹಳ ಮುಖ್ಯವಾದುದು ಋಗ್ವೇದದ ಪ್ರಥಮ ಮಂಡಲದ 116 ರಿಂದ 121ರವರೆಗೆ ಇರುವ ಆರು ಮಂತ್ರಗಳು. ಉಶಿಜಾ ಈ ಮಂತ್ರಗಳ ದ್ರಷ್ಟಾರಳಾಗಿದ್ದಾಳೆ. ಈಕೆಯಿಂದ ಸಂಕಲಿತ ಈ ಮಂತ್ರಗಳು ಋಗ್ವೇದದಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಸಾಧಾರಣ ದಾಸಿಯಾಗಿದ್ದ ಉಶಿಜಾ, ಋಗ್ವೇದದ ಪುಟಗಳಲ್ಲಿ ಶಾಮೀಲಾದ ಬಗೆಯೇ ಒಂದು ಬೋಧನೆಯಾಗಿದೆ ~ ಚೇತನಾ ತೀರ್ಥಹಳ್ಳಿ

ಅಂಗದೇಶ ಸಮೀಪೇ ತು ತಂ ನದ್ಯಾಃ ಸಮುದಕ್ಷಿಪನ್ |
ಅಂಗರಾಜ ಗೃಹೇ ಯುಕ್ತಾಮ್ ಉಶಿಜಂ ಪುತ್ರಕಾಮ್ಯಯಾ ||
ರಾಜ್ಞಾ ಚ ಪ್ರಹಿತಾಂ ದಾಸೀಂ ಭಕ್ತಾಂ ಮತ್ವಾ ಮಹಾತಪಾಃ |
ಜನಯಾಮಾಸ ಚೋತ್ಯಾಯ ಕಕ್ಷೀವಾತ್ ಪ್ರಮುಖಾನ್ ನೃಷೀನ್ ||

ಶ್ಲೋಕದಲ್ಲಿ ಕಕ್ಷೀವತನೇ ಮೊದಲಾದ ಪ್ರಮುಖ ಋಷಿಗಳಿಗೆ ಜನ್ಮ ನೀಡಿದ, ಅಂಗದೇಶದ, ಅಂಗರಾಜನ ರಾಜ್ಞಿಯ ದಾಸಿಯಾಗಿದ್ದ ಉಶಿಜಳ ಬಗ್ಗೆ ಹೇಳಲಾಗಿದೆ. ಎಲ್ಲಿಯ ದಾಸಿ? ಎಲ್ಲಿಯ ಮಹರ್ಷಿಗಳು? ಎಲ್ಲಿಯ ಋಚೆ!? ಎಂದು ಅಚ್ಚರಿಯಾಗುತ್ತದೆಯಲ್ಲವೆ? ಜ್ಞಾನದಾಹದ ಜೊತೆಗೆ ಸೇವಾಪಾರಾಯಣತೆ ಹಾಗೂ ವಿನಯವಂತಿಕೆಗಳೂ ಇದ್ದರೆ, ವ್ಯಕ್ತಿತಃ ಪ್ರೇಮಭಾವವನ್ನೂ ಹೊಂದಿದ್ದರೆ, ಯಾರು ಬೇಕಿದ್ದರೂ ಯಾವ ಉನ್ನತಿಯನ್ನಾದರೂ ಹೊಂದಬಹುದು ಎನ್ನುವುದಕ್ಕೆ ಉಶಿಜೆಯ ಕಥೆಯೊಂದು ಅತ್ಯುತ್ತಮ ನಿದರ್ಶನ.

ಉಶಿಜಾ ಎಂಬ ಸ್ತ್ರೀ ರತ್ನವೊಂದು ಇಲ್ಲದೆ ಹೋಗಿದ್ದರೆ ಬಹುಶಃ ಆಂಗೀರಸ ಕುಲ ತನ್ನ ವಂಶದ ಸಕಲ ಜ್ಞಾನಭಂಡಾರದೊಂದಿಗೆ ಮುಂದುವರೆಯುತ್ತಿರಲಿಲ್ಲ. ಅಷ್ಟೇಲ್ಲ, ಘೋಷಾಳಂತಹ ಬ್ರಹ್ಮವಾದಿನಿಯರೂ ದಕ್ಕುತ್ತಿರಲಿಲ್ಲ. ಉಶಿಜಾ ಪ್ರತ್ಯೇಕವಾಗಿ ಏನೂ ಮಾಡಲಿಲ್ಲ, ತನ್ನ ಕರ್ತವ್ಯವನ್ನೆ ಬಹಳ ಶ್ರದ್ಧೆಯಿಂದ, ಸಮಾಧಾನವಾಗಿ ನಡೆಸಿದಳಷ್ಟೆ. ಅದರ ಜೊತೆಗೆ ಆಕೆಗೆ ಇದ್ದ ಜ್ಞಾನ ಹಾಗೂ ಮತ್ತಷ್ಟು ತಿಳಿಯಬೇಕು ಅನ್ನುವ ಹಂಬಲಗಳು ಚಿನ್ನಕ್ಕೆ ವಜ್ರದ ಹರಳು ಕೂರಿಸದಂತಾಯ್ತು. ಅದರ ಫಲವಾಗಿಯೇ ದೀರ್ಘತಮಸ ಋಷಿಯ ಪರಂಪರೆ ಮುಂದುವರೆದಿದ್ದು.

ದೀರ್ಘತಮಸನ ವೃತ್ತಾಂತ
ಉಚಥ್ಯ ಮಹರ್ಷಿ ಆಂಗೀರಸ ಮಹರ್ಷಿಯ ಮಗ. ದೇವಗುರು ಬೃಹಸ್ಪತಿ ಈತನ ತಮ್ಮ. ಒಮ್ಮೆ ಬೃಹಸ್ಪತಿಯು ತನ್ನ ಅತ್ತಿಗೆಯಾದ (ಉಚಥ್ಯನ ಪತ್ನಿ) ಮಮತೆಯನ್ನು ಬಲಾತ್ಕರಿಸಲು ಪ್ರಯತ್ನಿಸಿದ. ಆಗ ಮಮತೆಯು ಗರ್ಭವತಿಯಾಗಿದ್ದಳು. ಬೃಹಸ್ಪತಿಯನ್ನು ಅವನು ಮಾಡುತ್ತಿರುವ ಅತ್ಯಾಚಾರಕ್ಕಾಗಿ ಗರ್ಭವು ಗದರಿಸಿತು. ಇದರಿಂದ ಕೃದ್ಧನಾದ ಬೃಹಸ್ಪತಿಯು ಆ ಶಿಶುವನ್ನು ಹುಟ್ಟಿನಿಂದಲೂ ಕುರುಡನಾಗುವಂತೆ ಶಪಿಸಿದನು. ಇದರಿಂದ ಅಂಧನಾಗಿಯೇ ಹುಟ್ಟಿದ ಮಗುವಿಗೆ `ದೀರ್ಘ ತಮಸ್’ (ದೀರ್ಘವಾದ ಕತ್ತಲು) ಎನ್ನುವ ಹೆಸರು ಇಡಲಾಯಿತು. ದೀರ್ಘತಮಸನು ಮುಂದೆ ತಂದೆಯ ಅನುಗ್ರಹ ಬಲದಿಂದ ಸರ್ವಜ್ಞತ್ವವನ್ನು ಪಡೆದು, ಮಹರ್ಷಿಯೂ ಆದನು.
ಈತನು ಪ್ರದ್ವೇಷಿಣೀ ಎಂಬವಳನ್ನು ಮದುವೆಯಾಗಿ, ಗೌತಮನೇ ಮೊದಲಾದ ಅನೇಕ ಮಂದಿ ಪುತ್ರರನ್ನು ಪಡೆದ. ಪ್ರದ್ವೇಷಿಣಿ ತೃಪ್ತಿಯೇ ಇಲ್ಲದ ಹೆಣ್ಣು. ಯಾವಾಗಲೂ ಗಂಡನ ಮೇಲೆ ಸಿಡಿಮಿಡಿಗುಟ್ಟುತ್ತಾ, ಅವನನ್ನು ಸದಾ ಬಯ್ಯುತ್ತಿದ್ದಳು. ಅವಳಲ್ಲಿ ಸಮಾಧಾನದ ಮಾತೇ ಇಲ್ಲ!
ಒಮ್ಮೆ ದೀರ್ಘತಮಸ ಋಷಿಯು `ಮಕ್ಕಳಾದ ನಂತರವೂ ನೀನು ನನ್ನೊಡನೆ ಹೀಗೆ ವಕ್ರವಾಗಿ ವರ್ತಿಸುವುದು ಸರಿಯಲ್ಲ’ ಎಂದು ಪ್ರದ್ವೇಷಿಣಿಗೆ ಹೇಳಿದ. ಅದಕ್ಕೆ ಅವಳು `ಪತ್ನಿ, ಪುತ್ರರನ್ನು ಕಾಪಾಡುವ ಹೊಣೆ ನಿನ್ನದಾಗಿರುವಾಗ, ನಾನು ಅದಕ್ಕಾಗಿ ತಲೆ ಕೊಡಬೇಕಾಗಿರುವುದು ಯಾವ ನ್ಯಾಯ? ನೀನು ಕಣ್ಣಿಲ್ಲದ ಕುರುಡ. ನಿನ್ನಿಂದ ಹೇಗೆ ತಾನೆ ಮನೆವಾಳ್ತೆ ಸಾಧ್ಯವಾದೀತು? ಇವೆಲ್ಲವೂ ನಾನು ಪಡೆದು ಬಂದವಷ್ಟೆ. ನನ್ನ ಕರ್ಮ’ ಎಂದು ಹೀಯಾಳಿಸಿ, ಚೆನ್ನಾಗಿ ಬೈದುಬಿಟ್ಟಳು. ಅವಳಿಗೆ ತನ್ನ ಕುರುಡ ಗಂಡನನ್ನೂ ತಾನೇ ನೋಡಿಕೊಳ್ಳಬೇಕು ಅನ್ನುವ ಬೇಸರ. ಅವಳು ಐಹಿಕ ಸುಖಭೋಗಗಳ ಲಾಲಸೆಗೆ ಬಿದ್ದ ಹೆಣ್ಣಾಗಿದ್ದಳು. ದೀರ್ಘತಮಸನೊಂದಿಗೆ ಶುರುವಾದ ಜಗಳ ದೊಡ್ಡದಾಗಿ, ಪ್ರದ್ವೇಷಿಣಿಯು ತನ್ನ ಮಕ್ಕಳಿಂದ ಅವನನ್ನು ಗಂಗೆಯಲ್ಲಿ ತಳ್ಳಿಸಿಬಿಟ್ಟಳು.

ಮಂತ್ರ ದ್ರಷ್ಟಾರಳಾದಳು ಉಶಿಜಾ
ದೀರ್ಘತಮಸನು ಗಂಗೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಾಗ ಅಂಗರಾಜ್ಯದ ರಾಜನಾದ ಚಂದ್ರವಂಶದ ಬಲಿ ಎಂಬವನು ಅವನನ್ನು ಮೇಲಕ್ಕೆತ್ತಿ, ಹುಟ್ಟು ಕುರುಡನೆಂಬ ಸಂಗತಿಯನ್ನು ತಿಳಿದು ಅರಮನೆಗೆ ಕರೆದುತಂದನು. ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದನು. ಆತನು ಮಹಾಜ್ಞಾನಿಯೂ ಅಂಗೀರಸ ಪೌತ್ರನೂ ಆಗಿರುವನೆಂದು ತಿಳಿದಮೇಲಂತೂ ಅವನ ಆನಂದಕ್ಕೆ ಪಾರವೇ ಇಲ್ಲ. ಬಲಿಯು ಮಕ್ಕಳಿಲ್ಲದ ಚಿಂತೆಯ ಕೊರಗಿನಲ್ಲಿದ್ದಾಗಲೇ ಈ ಮಹಾತ್ಮನ ದರ್ಶನ ಭರವಸೆದಾಯಕವಾಗಿ ಕಂಡಿತು. ನಿಯೋಗದ ಉದ್ದೇಶದಿಂದ ತನ್ನ ಪಟ್ಟದರಸಿಯಾದ ಸುಧೇಷ್ಣೆಯನ್ನು ದೀರ್ಘತಮಸನ ಸೇವೆಗೆ ಕಳುಹಿಸಿದನು. ಆ ಮಹರ್ಷಿಯ ಮೂಲಕ ಆಕೆಯು ಅಂಗ, ವಂಗ, ಕಳಿಂಗ, ಸುಹ್ಮ, ಪುಂಡ್ರ, ಆಂಧ್ರರೆಂಬ ಮಕ್ಕಳನ್ನು ಪಡೆದಳು. ಈ ಮಕ್ಕಳೆಲ್ಲರೂ ಮುಂದೆ ಶೂರಾದಿವೀರರಾಗಿ ರಾಜ್ಯವನ್ನು ವಿಸ್ತರಿಸಿ ಬಲಿಯ ವಂಶಪರಂಪರೆಯನ್ನು ಮುಂದುವರೆಸಿದರು.

ಮಕ್ಕಳಾದ ನಂತರದಲ್ಲೂ ಬಲಿಯು ತನ್ನ ಹೆಂಡತಿಯನ್ನು ಕುರಿತು ಮಹರ್ಷಿಯ ಸೇವೆಗೆ ಹೋಗು ಎಂದಾಗ ಸುಧೇಷ್ಣೆಯು ಬೇಸರಗೊಂಡು ತನ್ನ ದಾಸಿಯಾದ ಉಶಿಜಳನ್ನು ಋಷಿಯ ಸೇವೆಗೆ ಕಳುಹಿಸಿದಳು. ಅವಳ ಕಾರ್ಯೋದ್ದೇಶ ಮುಗಿದಿತ್ತು. ಅವಳಿಗೀಗ ದೀರ್ಘತಮಸನಿಂದ ಆಗಬೇಕಾದ್ದೇನೂ ಇರಲಿಲ್ಲ. ಅವನ ಸೇವೆಯಲ್ಲೂ ಆಕೆಗೆ ಶ್ರದ್ಧೆ ಇರಲಿಲ್ಲ.
ಉಶಿಜಳು ತಂದೆತಾಯಿಯಿಲ್ಲದ ಅನಾಥೆಯಾದುದರಿಂದ ಅರಮನೆಯಲ್ಲಿ ಸೇವೆ ಮಾಡಿಕೊಂಡಿದ್ದಳು. ತುಂಬಾ ವಿಧೇಯತೆಯಿಂದ ತನ್ನ ಪಾಲಿನ ಕರ್ತವ್ಯವನ್ನು ಮಾಡಿಕೊಂಡಿರುತ್ತಿದ್ದ ಉಶಿಜಾ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ಬುದ್ಧಿವಂತಳೂ ಆಗಿದ್ದ ಇವಳು ತತ್ತ್ವ, ಧರ್ಮಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದವಳು. ತನ್ನ ಯಜಮಾನಿಯಾದ ಸುಧೇಷ್ಣೆಯ ಆದೇಶದಂತೆ ಉಶಿಜೆಯು ದೀರ್ಘತಮಸನ ಸೇವೆ ಮಾಡಲು ಪ್ರಾರಂಭಿಸಿದಳು.

ದೀರ್ಘತಮಸನು ಬ್ರಹ್ಮರ್ಷಿಯಾದರೂ ಸ್ತ್ರೀಯರ ವಿಷಯದಲ್ಲಿ ವ್ಯಾಕುಲನಾಗಿದ್ದ. ಪ್ರದ್ವೇಷಿಣಿಯು ತನ್ನನ್ನು ಕೊಲ್ಲಿಸಲು ಸಂಚು ಹೂಡಿದ್ದು ಅವನು ಮರೆತಿರಲಿಲ್ಲ. ಇದೀಗ ಸುಧೇಷ್ಣೆಯೂ ತನಗೆ ಮಕ್ಕಳಾದ ಮೇಲೆ ಆತನ ಬಳಿ ಬರುವುದು ನಿಲ್ಲಿಸಿದ್ದಳು. ಆದ್ದರಿಂದ ಕೊಂಚ ಅನುಮಾನದಿಂದಲೇ, ನಿರಾಕರಣೆಯೊಂದಿಗೆ ಉಶಿಜಳ ಸೇವೆಯನ್ನು ಸ್ವೀಕರಿಸತೊಡಗಿದ.

ಆದರೆ ಉಶಿಜಳ ಸೇವಾತತ್ಪರತೆ ಅವನನ್ನು ತನ್ಮಯಗೊಳಿಸಿತು. ಅನೇಕ ವರ್ಷಗಳವರೆಗೆ ಅವನ ಸೇವೆಯನ್ನು ಮಾಡುತ್ತಿದ್ದವಳು, ಅನಂತರ ಆತನ ಆಶ್ರಮದಲ್ಲಿಯೇ ಶಾಶ್ವತವಾಗಿ ನೆಲೆಸಿ, ದೀರ್ಘತಮಸನ ಪ್ರೇಮವನ್ನು ಪಡೆದು, ಮದುವೆಯೂ ಆದಳು. ದೀರ್ಘತಮಸನು ಕೂಡ ಉಶಿಜಳಲ್ಲಿನ ಜ್ಞಾನದಾಹವನ್ನು ತಿಳಿದುಕೊಂಡು, ಅವಳಿಗೆ ಧರ್ಮೋಪದೇಶ ಮಾಡಿದ. ತತ್ತ್ವಜ್ಞಾನದ ಬಗೆಗೆ ವಿಶೇಷ ಉಪದೇಶಗಳನ್ನು ನೀಡಿದ. ತನ್ನ ನಂತರದಲ್ಲಿ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬಲ್ಲವಳು ಉಶಿಜಳೇ ಎಂಬುದನ್ನು ಅವನು ಕಂಡುಕೊಂಡ.

ಉಶಿಜಳು ಕಕ್ಷೀವನ್ತ ಮತ್ತಿತರ ಹನ್ನೊಂದು ಪುತ್ರರನ್ನು ಪಡೆದಳು. ಮಹಾಜ್ಞಾನಿಯಾಗಿ ಹೆಸರುಪಡೆದ ಕಕ್ಷೀವನ್ತನ ಮಗಳೇ ಸುಪ್ರಸಿದ್ಧ ಬ್ರಹ್ಮವಾದಿನಿಯಾದ ಘೋಷಾ ಎನ್ನುವವಳು. ಈಕೆಯ ಮತ್ತೊಬ್ಬ ಮಗ ದೀರ್ಘಶ್ರವ. ಈತನೂ ಸುಪ್ರಸಿದ್ಧ ಋಷಿಯಾದ. ಹೀಗಾಗಿ ಈ ಕುಟುಂಬವೇ ಬ್ರಹ್ಮಪರಾಯಣರ ಕುಟುಂಬವಾಯಿತು.

ಉಶಿಜಳ ಅಧ್ಯಾತ್ಮ ಸಾಹಿತ್ಯಸೃಷ್ಟಿಯಲ್ಲಿ ಬಹಳ ಮುಖ್ಯವಾದುದು ಋಗ್ವೇದದ ಪ್ರಥಮ ಮಂಡಲದ 116 ರಿಂದ 121ರವರೆಗೆ ಇರುವ ಆರು ಮಂತ್ರಗಳು. ಉಶಿಜಾ ಈ ಮಂತ್ರಗಳ ದ್ರಷ್ಟಾರಳಾಗಿದ್ದಾಳೆ. ಈಕೆಯಿಂದ ಸಂಕಲಿತ ಈ ಮಂತ್ರಗಳು ಋಗ್ವೇದದಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಸಾಧಾರಣ ದಾಸಿಯಾಗಿದ್ದ ಉಶಿಜಾ, ಋಗ್ವೇದದ ಪುಟಗಳಲ್ಲಿ ಶಾಮೀಲಾದ ಬಗೆಯೇ ಒಂದು ಬೋಧನೆಯಾಗಿದೆ. ಶ್ರದ್ಧೆ ಹಾಗೂ ನಿಸ್ವಾರ್ಥ ಮನೋಭಾವದ ಸಮರ್ಪಣೆಗಳಿಂದ ಯಾವ ಎತ್ತರವನ್ನಾದರೂ ತಲುಪಬಹುದು ಅನ್ನುವುದಕ್ಕೆ ಬ್ರಹ್ಮವಾದಿನಿ ಉಶಿಜಾ ಉತ್ತಮ ನಿದರ್ಶನವಾಗಿದ್ದಾಳೆ.

 

Leave a Reply