ಮೊದಲು ಅದ್ವೈತ ಜ್ಞಾನ, ನಂತರ ಆತ್ಮಜಾಗೃತಿ. ಅದರ ನಂತರ ಆನಂದವೇ ಆನಂದ… ನಿತ್ಯಾನಂದ! ~ ರಾಮಕೃಷ್ಣ ಪರಮಹಂಸ
ಎಲ್ಲರಿಗೂ ಬ್ರಹ್ಮಜ್ಞಾನ ಸಾಧ್ಯ. ಜೀವಾತ್ಮ ಪರಮಾತ್ಮ ಎಂಬ ಎರಡು ವಸ್ತುಗಳು ಇವೆ. ಪ್ರಾರ್ಥನೆಯಿಂದ ಜೀವಾತ್ಮ ಪರಮಾತ್ಮನೊಡನೆ ಐಕ್ಯವಾಗಲು ಸಾಧ್ಯ. ಕೆಲವರಲ್ಲಿ ಬಹಳ ಬೇಗ ಆತ್ಮಜಾಗೃತಿ ಉಂಟಾಗಿಬಿಟ್ಟಿರುತ್ತದೆ. ಅವರಲ್ಲಿ ಒಂದು ವಿಶೇಷ ಗುಣ ನೋಡಬಹುದು. ಭಗವತ್ಸಂಬಂಧವಾದ ಮಾತುಕತೆ ಹೊರತು ಬೇರೇನೂ ಅವರಿಗೆ ರುಚಿಸದು. ಅವರು ಚಾತಕ ಪಕ್ಷಿಯ ಹಾಗೆ. ಮಳೆ ನೀರಿನ ಹೊರತು ಯಾವ ನದಿಯ ನೀರನ್ನೂ ಅದು ಕುಡಿಯದು. ಹಾಗೆಯೇ ಆತ್ಮಜಾಗೃತಿ ಹೊಂದಿದ ಮುಮುಕ್ಷುಗಳಿಗೆ ಆಧ್ಯಾತ್ಮಿಕ ಸಂಭಾಷಣೆಯ ವಿನಾ ಬೇರೇನೂ ರುಚಿಸದು.
ಮತ್ತೆ ಕೆಲವರು ನಿತ್ಯಸಿದ್ಧರಿದ್ದಾರೆ. ಅವರು ಆತ್ಮಜಾಗೃತಿಯನ್ನು ಹೊಂದಿಯೇ ಪ್ರತಿಯೊಂದ ಸಲವೂ ಜನ್ಮವೆತ್ತುತ್ತಾರೆ. ಇವರನ್ನು ಗುಪ್ತವಾಗಿ ಹುದುಗಿರುವ ನೀರಿನ ಒರತೆಗಳಿಗೆ ಹೋಲಿಸಬಹುದು. ಏನಾದರೊಂದು ಕಾರಣಕ್ಕೆ ಭೂಮಿ ಅಗೆಯುವಾಗ ಈ ಒರತೆಯ ನೀರು ಚಿಮ್ಮುವಂತೆ, ಅವರ ಜ್ಞಾನವೂ ಹೊರಹೊಮ್ಮುವುದು.
ಅದ್ವೈತ ಜ್ಞಾನ ಪಡೆದ ಕೂಡಲೇ ಆತ್ಮಜಾಗೃತಿ ಉಂಟಾಗಿಬಿಡುತ್ತದೆ. ಅದನ್ನು ಹೊಂದಿದವರಿಗೆ ಸರ್ವಭೂತಗಳಲ್ಲೂ ಚೈತನ್ಯರೂಪಿ ಭಗವಂತ ಕಾಣಿಸುತ್ತಾನೆ. ಈ ಅನುಭವವೇ ಆನಂದಾನುಭೂತಿ. ಎಲ್ಲರಲ್ಲೂ ಭಗವಂತನನ್ನು ಕಾಣುವ ಆನಂದವೇ ದಿವ್ಯಾನಂದ. ಮೊದಲು ಅದ್ವೈತ ಜ್ಞಾನ, ನಂತರ ಆತ್ಮಜಾಗೃತಿ. ಅದರ ನಂತರ ಆನಂದವೇ ಆನಂದ… ನಿತ್ಯಾನಂದ!
ಜೀವ ಮೊದಲು ಅಜ್ಞಾನಾವಸ್ಥೆಯಲ್ಲಿ ಮುಳುಗಿರುತ್ತದೆ. ಅದಕ್ಕೆ ಭಗವಂತನ ಜ್ಞಾನವಿರದು. ಜ್ಞಾನ ದೊರೆತ ಕೂಡಲೇ ಅದಕ್ಕೆ ಆತ್ಮಬೋಧೆಯಾಗುತ್ತದೆ.
ಒಬ್ಬರ ಕಾಲಿಗೆ ಮುಳ್ಳು ಚುಚ್ಚಿದಾಗ, ಅದನ್ನು ತೆಗೆಯಲು ಮತ್ತೊಂದು ಮುಳ್ಳನ್ನು (ಚೂಪಾದ ವಸ್ತು) ಬಳಸಲಾಗುತ್ತದೆ. ಹಾಗೆಯೇ ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮುಳ್ಳಿನಿಂದ ತೆಗೆಯಬೇಕು. ಅನಂತರ ಮುಳ್ಳನ್ನು ಬಿಸಾಡುವಂತೆ, ಜ್ಞಾನವನ್ನೂ ಬದಿಗಿಟ್ಟು ಕೇವಲ ಆನಂದಾಭೂತಿಯಲ್ಲಿ ಒಂದಾಗಬೇಕು.
(ಆಕರ : ರಾಮಕೃಷ್ಣ ವಚನವೇದ)