ಪ್ರತಿರೋಧ : ತಾವೋ ಧ್ಯಾನ ~ 19

ಸಂತ ಮನಸ್ಥಿತಿಯ ಮನುಷ್ಯ ಯಾವಾಗಲೂ ವಿನೀತನಾಗಿರುತ್ತಾನೆ, ಬೇರೆಯವರ ಆಕ್ರೋಶಕ್ಕೆ ವಿನಾಕಾರಣವಾಗಿ ಕಾರಣನಾಗಲು ನಿರಾಕರಿಸುತ್ತಾನೆ. ಸಾಧ್ಯವಾದಾಗಲೆಲ್ಲ ಬಿಕ್ಕಟ್ಟುಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಆತಂಕ ಎದುರಾದಾಗಲೆಲ್ಲ ಅತಿ ಕಡಿಮೆ ಶಕ್ತಿಯ ಆಯುಧಗಳನ್ನು ಬಳಸಿ ಪ್ರತಿರೋಧ ವ್ಯಕ್ತಪಡಿಸುತ್ತಾನೆ  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ಚತುರ ಕತ್ತಿವರಸೆಗಾರ
ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದೇ ಕಡಿಮೆ.

*

ಹಲವಾರು ಶತಮಾನಗಳ ಹಿಂದೆ ಒಬ್ಬ ಅಲೆಮಾರಿ ಇದ್ದ. ಅವನನ್ನು ಕೊಲ್ಲಲು ಕೊಲೆಗಾರರು ಎಲ್ಲ ಕಡೆಯಲ್ಲೂ ಹುಡುಕುತ್ತಿದ್ದರು. ಆ ಅಲೆಮಾರಿ ಆ ದೇಶದಲ್ಲಿ ಪ್ರಖ್ಯಾತ ಕತ್ತಿ ವರಸೆಗಾರನೆಂದು ಹೆಸರುವಾಸಿಯಾಗಿದ್ದ. ಅವನ ವಿರೋಧಿಗಳು ಅವನನ್ನು ಕೊಂದು ಆ ದೇಶದಲ್ಲಿ ತಮ್ಮ ಅಧಿಕಾರ ಸ್ಥಾಪಿಸಲು ಹೊಂಚು ಹಾಕಿದ್ದರು. ಅಲೆಮಾರಿ ತುಂಬಾ ಹಿಂದೆಯೇ ತಾನು ಮಾಡಿದ ಕೊಲೆಗಳಿಗಾಗಿ ಪಶ್ಚಾತಾಪಪಟ್ಟು ಕತ್ತಿವರಸೆಯನ್ನು ಬಿಟ್ಟು ಬಿಟ್ಟಿದ್ದನಾದರೂ ಜನ ಅವನನ್ನೂ ಈಗಲೂ ಶ್ರೇಷ್ಠ ಕತ್ತಿವರಸೆಯವ ಎಂದೇ ಪರಿಗಣಿಸುತ್ತಿದ್ದರು.

ತನ್ನ ಮೇಲೆ ವಿರೋಧಿಗಳು ಆಕ್ರಮಣ ಮಾಡಿದಾಗಲೆಲ್ಲ ಅಲೆಮಾರಿ, ತನ್ನ ಕೈಗೆ ಸುಲಭವಾಗಿ ಸಿಗುವ ವಸ್ತುಗಳಾದ ಕೋಲು, ಕೊಡೆ, ಜಪ ಮಾಲೆ ಮುಂತಾದವನ್ನು ಆಯುಧದಂತೆ ಉಪಯೋಗ ಮಾಡಿ ಅವರನ್ನು ಸೋಲಿಸಿ ಓಡಿಸುತ್ತಿದ್ದ. ಒಮ್ಮೆಯೂ ತನ್ನ ಪ್ರಖ್ಯಾತಿಗೆ ಕಾರಣವಾಗಿದ್ದ ಖಡ್ಗವನ್ನು ಆತ ಯುದ್ಧಕ್ಕೆ ಬಳಸಿರಲಿಲ್ಲ.

ತಾವೋ ಮಾರ್ಗದಲ್ಲಿ
ಹತೋಟಿಗೆ ಬಲಪ್ರಯೋಗ ,
ಗೆಲುವಿಗೆ ಆಯುಧ, ನಿಷಿದ್ಧ.
ಸೈನಿಕರು ಓಡಾಡಿದಲ್ಲೆಲ್ಲ
ಬೆಳೆದು ನಿಂತಿವೆ ಮುಳ್ಳಿನ ಪೊದೆಗಳು.
ಹಿಂಸೆ ಅಂಟು ರೋಗ
ಉದ್ದೇಶ ಎಷ್ಟೇ ಒಳ್ಳೆಯದಾದರೂ.

ನಿಜದ ನಾಯಕ
ಯುದ್ಧದ ನಂತರ ನೆಲೆಗೊಳ್ಳುವ
ಶಾಂತಿಯ ಬುಡದಲ್ಲಿ ಜ್ವಾಲಾಮುಖಿ ಕಾಣಬಲ್ಲ.
ಅದಕ್ಕೇ ಅವನಿಗೆ ಯುದ್ಧದ ಬಗ್ಗೆ ಹೆಮ್ಮೆಯಿಲ್ಲ.

ಅವನಿಗೆ ತನ್ನ ಬಗ್ಗೆ ನಂಬಿಕೆ
ಆದ್ದರಿಂದ ಬೇರೆಯವರ ಮನ ಒಲಿಸುವುದಿಲ್ಲ,

ಅವನಿಗೆ ತನ್ನ ಬಗ್ಗೆ ಸಮಾಧಾನ
ಆದ್ದರಿಂದ ಬೇರೆಯವರ ಒಪ್ಪಿಗೆ ಬೇಕಿಲ್ಲ,

ಅವನು ತನ್ನನ್ನು ಒಪ್ಪಿಕೊಂಡಿರುವದರಿಂದ
ಜಗತ್ತು ಅವನನ್ನು ಒಪ್ಪಿಕೊಂಡಿದೆ.

~ ಲಾವೋತ್ಸೇ

ಅಂತೆಯೇ ಸಂತ ಮನಸ್ಥಿತಿಯ ಮನುಷ್ಯ ಯಾವಾಗಲೂ ವಿನೀತನಾಗಿರುತ್ತಾನೆ, ಬೇರೆಯವರ ಆಕ್ರೋಶಕ್ಕೆ ವಿನಾಕಾರಣವಾಗಿ ಕಾರಣನಾಗಲು ನಿರಾಕರಿಸುತ್ತಾನೆ. ಸಾಧ್ಯವಾದಾಗಲೆಲ್ಲ ಬಿಕ್ಕಟ್ಟುಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಆತಂಕ ಎದುರಾದಾಗಲೆಲ್ಲ ಅತಿ ಕಡಿಮೆ ಶಕ್ತಿಯ ಆಯುಧಗಳನ್ನು ಬಳಸಿ ಪ್ರತಿರೋಧ ವ್ಯಕ್ತಪಡಿಸುತ್ತಾನೆ.

ಸಂತ, ಅತೀ ಗಂಭೀರನಾಗಿ
ಅಪಾರ ಸಂಕಟ ಮತ್ತು ಮಮತೆಯೊಂದಿಗೆ
ಯುದ್ಧರಂಗಕ್ಕೆ ಕಾಲಿಡುತ್ತಾನೆ,
ಮಗನ ಅಂತ್ಯಕ್ರೀಯೆಗಾಗಿ, ಸ್ಮಶಾನಕ್ಕೆ ಕಾಲಿಟ್ಟ
ಹಿರಿಯಜ್ಜನಂತೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.