ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ!
ಏನದೆಂಬುದನರಿವರಾರೊಬ್ಬರೂ ಇಲ್ಲ!
ಕರಿದಿಲ್ಲ; ಬಿಳಿದಿಲ್ಲ; ದಿನವಿಲ್ಲ; ನಿಶೆಯಿಲ್ಲ
ಅರಿವಿಲ್ಲ; ಮನವಿಲ್ಲ; ಅಳಿವಿಲ್ಲ; ಉಳಿವಿಲ್ಲ;
ಶೂನ್ಯಮಲ್ಲವು! ಸರ್ವವೂ ‘ನೇತಿ.. ನೇತಿ’!
ಕಾಲದೇಶಗಳಿಲ್ಲ! ಸಾವು ಬಾಳುಗಳಿಲ್ಲ!
ನಾನಿಲ್ಲ; ನೀನಿಲ್ಲ; ಸರ್ವವೂ ಮೌನ!
ತಿಮಿರ ಬೆಳಕಿನೊಳಡಗಿ, ಬೆಳಕು ತಿಮಿರದೊಳವಿತು,
ಭಾವ ಶೂನ್ಯವ ಸೇರಿದುದು ಐಕ್ಯಮಾಗಿ!
ರವಿಯಿಲ್ಲ; ಶಶಿಯಿಲ್ಲ; ನಭವಿಲ್ಲ; ಧರೆಯಿಲ್ಲ;
ತುದಿಯಿಲ್ಲ; ಮೊದಲಿಲ್ಲ; ಒಂದಿಲ್ಲ; ಎರಡಿಲ್ಲ;
ಏನು ಏನಾಗಿರ್ದುದೋ ಬಲ್ಲವರಾರು?
ಭಾವದೊಳಭಾವವೋ? ಶೂನ್ಯದೊಳಶೂನ್ಯವೋ?
ಅರಿವಿನಾಚೆಯ ತೀರ ಬರಿ ಮೌನ, ಮೌನ!
ಜ್ಞಾನತಾನಲ್ಲಿಲ್ಲ; ಜ್ಞೇಯಮದುಮಿಲ್ಲ;
ಜ್ಞಾನಜ್ಞೇಯಗಳೆಲ್ಲ ಜ್ಞಾತನೊಳು ಸೇರೆ
ಏನು ಏನಾಗಿರ್ದುದೋ ಬಲ್ಲವರದಾರು?
ಮೂಲ : ಸ್ವಾಮಿ ವಿವೇಕಾನಂದ | ಕನ್ನಡಕ್ಕೆ : ಕುವೆಂಪು