ಒಮ್ಮೆ ಒಬ್ಬ ಝೆನ್ ಸನ್ಯಾಸಿ ತನ್ನ ಶಿಷ್ಯನೊಂದಿಗೆ ಕಾಡಿನ ಮೂಲಕ ಹಾದು ಬೇರೆ ಊರಿಗೆ ಹೋಗುತ್ತಿದ್ದ. ಹೀಗೆ ಪ್ರಯಾಣ ಮಾಡುವಾಗ ಸನ್ಯಾಸಿ ತನ್ನ ಬದುಕಿನ ಅನುಭವಗಳನ್ನು , ಅವುಗಳ ನಡುವಿನ ಪರಸ್ಪರ ಸಂಬಂಧಗಳನ್ನೂ, ಮತ್ತು ಹೇಗೆ ಎಲ್ಲ ಬದುಕುಗಳೂ ಒಂದೇ ಎಂದೂ ತನ್ನ ಶಿಷ್ಯನಿಗೆ ತಿಳಿ ಹೇಳುತ್ತಿದ್ದ. ಶಿಷ್ಯ ಅತ್ಯಂತ ಶಿಸ್ತಿನಿಂದ ಸನ್ಯಾಸಿಯ ಮಾತುಗಳನ್ನು ಆಲಿಸುತ್ತಿದ್ದ.
“ಮಾಸ್ಟರ್ ನಿಮ್ಮ ಮಾತಿನ ಅರ್ಥ ಈ ಬದುಕಿನಲ್ಲಿ ಎಲ್ಲವೂ ಒಂದೇ” ಎಂದು ಅಲ್ಲವೇ?
ಶಿಷ್ಯ ಕೇಳಿದ.
“ಹೌದು, ನೀನು ನನ್ನ ಮಾತುಗಳನ್ನ ಸರಿಯಾಗಿ ಅರ್ಥೈಸಿಕೊಂಡಿರುವಿ” ಸನ್ಯಾಸಿ ಮುಗುಳ್ನಗುತ್ತ ಪ್ರಯಾಣ ಮುಂದುವರೆಸಿದ.
ಅವರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ, ಒಂದು ಭಯಂಕರ ಹುಲಿ ಅವರ ದಾರಿಗೆದುರಾಯಿತು.
ಶಿಷ್ಯ, ಶಾಂತ ಚಿತ್ತದಿಂದ ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. “ಮಾಸ್ಟರ್, ನೋಡಿ ನೀವು ಹೇಳಿದ್ದು ನಿಜ, ಆ ಹುಲಿ ಬೇರೆ ಅಲ್ಲ ನಾನು ಬೇರೆ ಅಲ್ಲ” ಹೀಗೆ ಹೇಳುತ್ತ ಶಿಷ್ಯ ತಿರುಗಿ ನೋಡಿದರೆ, ಮಾಸ್ಟರ್ ನಾಪತ್ತೆ. ತಲೆ ಎತ್ತಿ ನೋಡಿದರೆ ಮಾಸ್ಟರ್ ಮರದ ಟೊಂಗೆಯೊಂದರ ಮೇಲೆ ಆಗಲೇ ಹತ್ತಿ ಕುಳಿತಿದ್ದಾನೆ.
“ಯಾಕೆ ಮಾಸ್ಟರ್? ಯಾಕೆ ಭಯ? ನಾವು ಬೇರೆ ಅಲ್ಲ ಈ ಹುಲಿ ಬೇರೆಯಲ್ಲ. ಹಾಗಿದ್ದ ಮೇಲೆ ನಮಗೆ ನಾವೇ ಹೆದರುವುದಾದರೂ ಹೇಗೆ?”
ಶಿಷ್ಯ, ಮಾಸ್ಟರ್’ನನ್ನು ಪ್ರಶ್ನೆ ಮಾಡಿದ.
“ಹೌದು, ನೀನು ಹೇಳೋದು ನಿಜ. ಈ ಸತ್ಯ ನನಗೆ ಗೊತ್ತು, ನಿನಗೆ ಗೊತ್ತು ಆದರೆ ಆ ಹುಲಿಗೆ ಗೊತ್ತಿಲ್ಲ! ಬೇಗ ಬೇಗ ಮರ ಹತ್ತು…!!” ಮಾಸ್ಟರ್ ಕೂಗಿಕೊಂಡ.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)