ಒಂದು ಸಂಜೆ, ದೇಶಾಂತರದಲ್ಲಿದ್ದ ವಿದ್ವಾಂಸನೊಬ್ಬ ಮುಲ್ಲಾ ನಸ್ರುದ್ದೀನನ ಮನೆ ಬಾಗಿಲು ಬಡಿದ. “ಸ್ವಲ್ಪ ನೀರು ಕೊಡಿ” ಅಂದ.
ಅತಿಥಿ ದೇವೋ ಭವ ಎಂದು ನಂಬಿದ್ದ ನಸ್ರುದ್ದೀನ್, ಅವನನ್ನು ಒಳಗೆ ಕರೆದ. ಕೂಡಿಸಿ ನೀರು, ಶರಬತ್ತು, ಖರ್ಜೂರಗಳನ್ನು ಕೊಟ್ಟ.
ಅವನ್ನೆಲ್ಲ ತಿನ್ನುತ್ತ ಕುಡಿಯುತ್ತ ವಿದ್ವಾಂಸ ತನ್ನ ಜ್ಞಾಣ ಪ್ರದರ್ಶನಕ್ಕಿಳಿದ. ಜಗತ್ತಿನ ತತ್ವಶಾಸ್ತ್ರದ ಬಗೆಗೆಲ್ಲ ಗಂಟೆಗಟ್ಟಲೆ ಕೊರೆಯತೊಡಗಿದ.
ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ನಸ್ರುದ್ದೀನ್ ಅವನಿಗಾಗಿ ಚಹಾ ಮಾಡಿ ಕೊಟ್ಟ. ರಾತ್ರಿಯ ಅಡುಗೆ ಮಾಡಿದ. ಊಟವನ್ನೂ ಹಾಕಿದ. ಕೊನೆಗೆ ಪಾನ್ ಕೂಡ ತಯಾರಿಸಿ ಕೊಟ್ಟ.
ಬಂದ ವಿದ್ವಾಂಸ ಮಾತ್ರ ಮಾತು ನಿಲ್ಲಿಸಲೇ ಇಲ್ಲ. ಮಾತಾಡೀ ಮಾತಾಡೀ ತನ್ನ ತಲೆ ಖಾಲಿಯಾದ ಮೇಲೆ ನಸ್ರುದ್ದೀನನನ್ನು ಬೀಳ್ಕೊಡುತ್ತಾ, “ನಾನು ಹೊರಡುತ್ತೇನೆ. ನನ್ನ ಉಪನ್ಯಾಸಕ್ಕೆ ಸಂಭಾವನೆ ಏನಾದರೂ ಕೊಡುತ್ತೀರಾ?” ಅಂತ ಕೇಳಿದ.
ನಸ್ರುದ್ದೀನನ ತಲೆ ಗಿರ್ರೆಂದಿತು. ಅಷ್ಟೊತ್ತು ಮಾತು ಕೆಳಿದ್ದಲ್ಲದೆ, ತನ್ನ ಚೂರು ಪಾರು ತಿನಿಸು ದಿನಸಿಯನ್ನೂ ಈ ಅನಿರೀಕ್ಷಿತ ಅತಿಥಿಗಾಗಿ ಖರ್ಚು ಮಾಡಿದ್ದ.
“ಓಹೋ! ಅದಕ್ಕೇನಂತೆ… ಅಗತ್ಯವಾಗಿ ಕೊಡುತ್ತೇನೆ. ಆದರೆ ಇವತ್ತಲ್ಲ, ನಾಳೆ. ಸಂಜೆ ಇದೇ ವೇಳೆಗೆ ಬಂದುಬಿಡಿ” ಅಂದ.
ಮಾರನೆ ಸಂಜೆ ವಿದ್ವಾಂಸ ಬಂದ. ಅವನನ್ನು ಆಸನದಲ್ಲಿ ಕುಳ್ಳಿರಿಸಿ ನಸ್ರುದ್ದೀನ್ ಮಾತಾಡಲು ಶುರು ಮಾಡಿದ. ತನ್ನ ಪ್ರವಾಸಗಳು, ಸಾಹಸಗಳು, ತರಲೆಗಳನ್ನೆಲ್ಲ ಹೇಳತೊಡಗಿದ.
ಮುಸ್ಸಂಜೆಯಾಯಿತು. ರಾತ್ರಿಯೂ ಆಯಿತು. ಬಂದಾತನಿಗೆ ತಲೆ ನೋವಿನ ಜೊತೆ ಹೊಟ್ಟೆ ಹಸಿವೂ ಏರುತ್ತಿತ್ತು.
“ಅಲ್ಲಯ್ಯಾ ನಸ್ರುದ್ದೀನ್! ಸಂಭಾವನೆ ಕೊಡುವೆನೆಂದು ಹೇಳಿ ಮಾತಾಡುತ್ತಾ ಕುಳಿತಿದ್ದೀಯ. ನಾನು ಹೊರಡಬೇಕು. ಅದೇನು ಕೊಡುತ್ತೀಯೋ ಕೊಡು” ಅಂದ.
“ಅರೆ! ಇಷ್ಟು ಸಾಲದಾಯಿತೇ? ನೀವು ಮಾತಾಡಿದಷ್ಟೇ ನಾನೂ ಆಡಿದೆ ಅಂದುಕೊಂಡೆನಲ್ಲ! ಸರಿ, ಕುಳಿತುಕೊಳ್ಳಿ. ಮತ್ತಷ್ಟು ಮಾತಾಡುತ್ತೇನೆ” ಅನ್ನುತ್ತಾ ಕೂರಲನುವಾದ.
ಇವನು ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ತಿದ್ದಾನೆಂದು ವಿದ್ವಾಂಸನಿಗೆ ಅರ್ಥವಾಯಿತು. ಸುಮ್ಮನೆ ಅಲ್ಲಿಂದ ಜಾಗ ಖಾಲಿ ಮಾಡಿದ.
( ಆಕರ : ಇದ್ರಿಸ್ ಷಾ ಹೇಳಿದ ಸೂಫಿ ಕಥೆ | ಸಂಗ್ರಹ ಮತ್ತು ಅನುವಾದ : ಅಲಾವಿಕಾ )