ಮನೋಚಿಕಿತ್ಸಕ ಭಗವದ್ಗೀತೆ ~ ಗೀತಾಜಯಂತಿ ವಿಶೇಷ

ಭಗವದ್ಗೀತೆಯ ಆಯಾಮಗಳು ಹಲವು. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಅದನ್ನು ಬೋಧಿಸಿದ ಉದ್ದೇಶ, ಆತನನ್ನು ಕರ್ಮಫಲದ ಚಿಂತೆ ಬಿಟ್ಟು, ನಿರ್ಲಿಪ್ತನಾಗಿ ಯುದ್ಧ ಮಾಡಲು ಪ್ರೇರೇಪಿಸುವುದಾಗಿತ್ತು. ಆದರೆ ಕಾಲಕ್ರಮದಲ್ಲಿ ಭಗವದ್ಗೀತೆ ಆಧ್ಯಾತ್ಮಿಕ ಸಾಧನೆಗೆ ಕಂದೀಲಾಗಿ, ವ್ಯಕ್ತಿತ್ವವಿಕಸನಕ್ಕೆ ಮಾರ್ಗದರ್ಶಿಯಾಗಿ, ಮ್ಯಾನೇಜ್’ಮೆಂಟ್ ಕೈಪಿಡಿಯಾಗಿ, ಮನೋಚಿಕಿತ್ಸೆಯ ಸೂತ್ರವಾಗಿ ಇತ್ಯಾದಿ ಹಲವು ಉದ್ದೇಶಗಳಿಗೂ ಬಳಕೆಯಾಗುತ್ತ ಬಂತು. ಇಂಥಾ ಅಸಂಖ್ಯ ಸಾಧ್ಯತೆಯ ಭಗವದ್ಗೀತೆ ಮನೋಚಿಕಿತ್ಸಕ ಆಯಾಮವನ್ನು ಇಲ್ಲಿ ನೀಡಿದ್ದೇವೆ  ~ ಆನಂದಪೂರ್ಣ

ಗೀತಾಚಾರ್ಯ ಕೃಷ್ಣನನ್ನು ಮನೋವಿಜ್ಞಾನಿ ಎಂದು ಧಾರಾಳವಾಗಿ ಕರೆಯಬಹುದು. ಈತ ಸಮರ ಸಮ್ಮುಖದಲ್ಲಿ ನಿಂತು, ಸಮಾಧಾನಚಿತ್ತನಾಗಿ ತನ್ನ ದೀರ್ಘ ಕಾಲದ ಗೆಳೆಯನ ಮನೋವ್ಯಥೆಯನ್ನು ಹೋಗಲಾಡಿಸುತ್ತಾನೆ. ಆ ಅವಧಿಯಲ್ಲಿ ಯಾವುದನ್ನು ಮಾಡಲೇಬೇಕಿತ್ತೋ ಆ ಕೆಲಸವನ್ನು ಮಾಡುವಂತೆ ಆತನ ಮನಸ್ಸನ್ನು ಅಣಿಗೊಳಿಸುತ್ತಾನೆ. ನನ್ನಿಂದ ಇದು ಸಾಧ್ಯವಿಲ್ಲ ಅನ್ನುವ ಕೀಳರಿಮೆಯಿಂದಲೂ; ಎತ್ತಿ ಆಡಿಸಿದ ಅಜ್ಜ, ದೊಡ್ಡಪ್ಪ ಮೊದಲಾದವರೊಡನೆ ಹೋರಾಡಲು ಹೊರಟಿದ್ದೇನೆ ಅನ್ನುವ ತಪ್ಪಿತಸ್ಥ ಭಾವನೆಯಿಂದಲೂ ದುರ್ಬಲನಾಗುವ ಅರ್ಜುನನಿಗೆ ಆತನ ನಿಜ ಸಾಮರ್ಥ್ಯವನ್ನು ತೋರಿಸಿಕೊಡುತ್ತಾನೆ ಕೃಷ್ಣ. 
ಇಲ್ಲಿ ಆತ ಮಾಡುವುದು ಅಪ್ಪಟ ಕೌನ್ಸೆಲಿಂಗ್. ಈ ನಿಟ್ಟಿನಲ್ಲಿ ಗೀತೆ ಒಂದು ಆಪ್ತಸಲಹೆ ಸೆಷನ್ನಿನ ಸಂಭಾಷಣೆ. ಕೃಷ್ಣ ಹಂತಹಂತವಾಗಿ ಅರ್ಜುನನ ಸಮಸ್ಯೆಯನ್ನು ತಿಳಿಯಾಗಿಸುತ್ತಾ ಅವನಲ್ಲಿ ಆತ್ಮವಿಶ್ವಾಸ ತುಂಬುತ್ತಾನೆ. ಮುಖ್ಯವಾಗಿ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸುತ್ತಾನೆ. ಎಲ್ಲ ಹೇಳಿಯಾದ ಮೇಲೆ ತನ್ನ ಕೌನ್ಸೆಲಿಂಗ್ ಆತನ ಮೇಲೆ ಪ್ರಭಾವ ಬೀರಿದೆಯೋ ಇಲ್ಲವೋ ಪರೀಕ್ಷಿಸಲು, “ಇಷ್ಟೆಲ್ಲ ಹೇಳಿದ್ದೇನೆ. ನೀನು ನಿನಗೆ ಯಾವುದು ಸರಿಯೆಂದು ತೋಚುತ್ತದೆಯೋ ಅದನ್ನು ಮಾಡು” ಎನ್ನುತ್ತಾನೆ! 
ಕೊನೆಯಲ್ಲಿ ಅರ್ಜುನ ಗಾಂಡೀವ ಮೇಲೆತ್ತಿ ಯುದ್ಧ ಸನ್ನದ್ಧನಾಗುವ ಮೂಲಕ ಕೃಷ್ಣನ ಆಪ್ತಸಲಹೆಗಳು ಪ್ರಭಾವ ಬೀರಿದ್ದನ್ನು ಖಾತ್ರಿ ಪಡಿಸುತ್ತಾನೆ.

ಅರ್ಜುನ ವಿಷಾದ ಯೋಗದಲ್ಲಿ ಅಸ್ವಸ್ಥನ ತೊಳಲಾಟಗಳ ವಿವರವಿದೆ. ಇಲ್ಲಿ ಅರ್ಜುನ ತನ್ನ ದೃಷ್ಟಿಯಿಂದ ಸಂದರ್ಭವನ್ನು ಅವಲೋಕಿಸಿ ಅದನ್ನೊಂದು ಸಮಸ್ಯೆ ಎಂಬಂತೆ ನೋಡುತ್ತಾನೆ. ಆದರೆ ಸಮಸ್ಯೆ ಇರುವುದು ಸಂದರ್ಭದಲ್ಲಿ ಅಲ್ಲ, ನಿನ್ನ ಗ್ರಹಿಕೆಯಲ್ಲಿ ಎಂದು ಮನದಟ್ಟು ಮಾಡುವ ಮೂಲಕ ಅರ್ಜುನನನ್ನು ಸಮಸ್ಯೆಯ ಊಹೆಯಿಂದ ಬಿಡಿಸುತ್ತಾನೆ ಕೃಷ್ಣ. ಗೊಂದಲಕ್ಕೆ ಸಿಲುಕಿ ವಿಷಾದ ಪಡುವ ಅರ್ಜುನನಿಗೆ ಸರಿಯಾದ ಆಯ್ಕೆಯನ್ನು ತೋರಿಸಿಕೊಡುತ್ತಾನೆ. ಇದು ಸೈಕಾಲಜಿಸ್ಟರ ಕೆಲಸ ಅಲ್ಲವೆ?

ಒಬ್ಬ ಸೈಕೋಥೆರಪಿ ವಿದ್ಯಾರ್ಥಿಗೆ ಈ ಕೃಷ್ಣಾರ್ಜುನ ಸಂವಾದ ಒಂದು ಅತ್ಯುಪಯುಕ್ತ ಕೇಸ್ ಸ್ಟಡಿಯಾಗಬಲ್ಲದು. ಮಾನಸಿಕ ಸ್ವಾಸ್ಥ್ಯ ಕದಡಿದ ವ್ಯಕ್ತಿಯ ಹಿನ್ನೆಲೆ, ಸಂದರ್ಭದ ಹಿನ್ನೆಲೆ ಮೊದಲಾದವುಗಳನ್ನು ಗುರುತಿಸಿ, ಅವನು ವಿಶ್ಲೇಷಿಸಿ, ಗುರುವಿನಂತೆ, ಗೆಳೆಯನಂತೆ, ಸರ್ವಶಕ್ತನಂತೆ – ಹೀಗೆ ನಾನಾ ವಿಧಾನಗಳಿಂದ ಆತನಲ್ಲಿ ಸ್ಥೈರ್ಯ ತುಂಬುವ ಪ್ರಕ್ರಿಯೆ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಹರಡಿಕೊಂಡಿದೆ.

ರ್ಜುನ ಅಂದು ಎದುರಿಸಿದ ಸಮಸ್ಯೆಯನ್ನೇ ನಾವು ಇಂದು ಅನುಭವಿಸುತ್ತಿದ್ದೇವೆ. ನಾವು ಬಹಳ ಬೇಗ ಗೊಂದಲಗೊಳ್ಳುತ್ತೇವೆ. ದುಡುಕಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಸಮಸ್ಯೆಗಳು ಎದುರಾದೊಡನೆ ಅದರೊಡನೆ ಹೋರಾಡುವ ಬದಲು, ಅವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಏನೆಲ್ಲ ಕಳೆದುಕೊಳ್ಳಬೇಕಾಗುತ್ತದೆ ಎಂಬ ಚಿಂತೆಗೆ ಬೀಳುತ್ತೇವೆ. ಅತ್ತ ಸಮಸ್ಯೆಯೂ ಬೆಳೆಯುತ್ತ ಹೋಗುತ್ತದೆ, ಇತ್ತ ಚಿಂತೆಯೂ. ನಾವೂ ಅರ್ಜುನನಂತೆಯೇ ನಮ್ಮ ದೃಷ್ಟಿಯಲ್ಲಿ ಸಂದರ್ಭಗಳನ್ನು ಅವಲೋಕಿಸುವುದರಿಂದ, ಅವೆಲ್ಲವನ್ನೂ ನಮ್ಮ ಶತ್ರುಗಳಂತೆ, ಆ ಶತ್ರುಗಳಾದರೂ ನಮ್ಮ ಆಪ್ತ ಸಂಗತಿಗಳೇ ಆಗಿರುವಂತೆ, ಹೋರಾಡುವಂತೆ – ಹೋರಾಡಲಾಗದಂತೆ, ಹೀಗೆ ಹಲವು ಸಂಕಟಗಳಲ್ಲಿ ತೊಳಲಾಡುತ್ತ ಬದುಕಿನ ಕ್ಷಣಕ್ಷಣದ ನೆಮ್ಮದಿ ಕಳೆದುಕೊಳ್ಳುತ್ತೇವೆ.

‘ಕ್ಷುದ್ರಮ್ ಹೃದಯ ದೌರ್ಬಲ್ಯಮ್’ – ಆರಂಭದಲ್ಲೇ ಈ ಮಾತನ್ನು ಹೇಳುತ್ತಾನೆ ಶ್ರೀಕೃಷ್ಣ. ಯಾಕೆಂದರೆ ಆಪ್ತಸಲಹೆಗಾರನಿಗೆ ಗೊತ್ತಿದೆ, ಸಮಸ್ಯೆ ಅಂದೊಡನೆ ಅನುಕಂಪ ತೋರಿದರೆ ಆತ ಮತ್ತಷ್ಟು ಕುಗ್ಗುತ್ತಾನೆ, ಆಸರೆ ಬಯಸತೊಡಗುತ್ತಾನೆಂದು. ಆದ್ದರಿಂದಲೇ ಅವನು ಅರ್ಜುನನಿಗೆ ‘ಹೇಡಿಯಂತೆ ಆಡಬೇಡ’ ಎಂದು ಗದರುವುದು. ಈ ಮೂಲಕ ನಿನ್ನಲ್ಲಿ ನನಗೆ ಅನುಕಂಪವಿಲ್ಲ, ಆದರೆ ಸಹಾನುಭೂತಿಯಿಂದ ಒಂದಷ್ಟು ಸಲಹೆ ನೀಡಬಲ್ಲೆ ಎಂದು ಮೊದಲೇ ಖಾತ್ರಿಪಡಿಸುತ್ತಾನೆ. 
ಏಕೆಂದರೆ, ಗೊಂದಲದಲ್ಲಿ ಇರುವ ವ್ಯಕ್ತಿ ತನ್ನ ಸುಪ್ತ ಪ್ರಜ್ಞೆಯಲ್ಲಿ ಯಾವುದನ್ನು ಬಯಸುತ್ತ ಇರುತ್ತಾನೋ ಅದನ್ನೆ ಸಲಹೆ ನೀಡುವವರೂ ತನಗಗಾಗಿ ಆಯ್ದುಕೊಡಲೆಂದು ಬಯಸುತ್ತಿರುತ್ತಾನೆ. ಆದ್ದರಿಂದಲೇ ಆತನಿಗೆ ಅದೊಂದರ ಹೊರತಾಗಿ ಮತ್ತೆಷ್ಟು ಸಲಹೆಗಳನ್ನು ನೀಡಿದರೂ ತೃಪ್ತಿಯಾಗದೆ ಹೋಗುತ್ತದೆ. ತನ್ನ ಮನಸ್ಸಿನಲ್ಲಿರುವುದು ಸಲಹೆಗಾರರ ಬಾಯಿಂದ ಬರುವವರೆಗೂ ಆತ ಪ್ರತಿಯೊಂದನ್ನೂ ನಿರಾಕರಿಸುತ್ತಲೇ ಸಾಗುತ್ತಾನೆ.

ಕೃಷ್ಣನೂ ಅರ್ಜುನ ನಾನು ಬಂಧುಗಳೊಡನೆ ಯುದ್ಧ ಮಾಡಲಾರೆ ಅಂದಾಗ ಅಯ್ಯೋ ಪಾಪ ಅಂದುಬಿಟ್ಟಿದ್ದರೆ ಧರ್ಮಯುದ್ಧ ನಡೆಯುತ್ತಲೇ ಇರಲಿಲ್ಲ. ಅಂದಮಾತ್ರಕ್ಕೆ ಅರ್ಜುನನ ಸಮಸ್ಯೆಗಳೆಲ್ಲವೂ ನಿವಾರಣೆಯಾಗಿಬಿಡುತ್ತಲೂ ಇರಲಿಲ್ಲ. ಅರ್ಜುನನ ಪರಿಸ್ಥಿತಿಯ ಅಧ್ಯಯನ ನಡೆಸಿದ್ದ ಕೃಷ್ಣ£ಗೆ ಗೊತ್ತಿತ್ತು, ಈ ಕ್ಷಣ ಆತ ಅನುಭವಿಸುತ್ತಿರುವ ದುಃಖಕ್ಕಿಂತ ನೂರು ಪಾಲು ಹೆಚ್ಚು ದುಃಖವನ್ನು ಯುದ್ಧ ವಿಮುಖನಾಗುವುದರಿಂದ ಆತ ಅನುಭವಿಸುತ್ತಾನೆ ಎಂದು. ಆದ್ದರಿಂದಲೇ ಆತ ಅರ್ಜುನನ ಅನ್ನಿಸಿಕೆಯ ಟೊಳ್ಳನ್ನು ತೋರಿಸಿಕೊಡುವ ಪ್ರಯತ್ನಕ್ಕೆ ಮುಂದಾಗುವುದು.

ಪ್ರಯತ್ನದಲ್ಲಿ ಕೃಷ್ಣನ ಯಶಸ್ಸನ್ನು ತೋರಿಸಿಕೊಡುವ ಎರಡು ಶ್ಲೋಕಗಳನ್ನು ಗಮನಿಸಿ:
• ಶಿಷ್ಯಾಸ್ತೇ ಅಹಮ್ ಸಾಧಿ ಮಾಮ್ ತ್ವಮ್ ಪ್ರಪನ್ನಮ್
– ನಾನು ನಿನ್ನ ಶಿಷ್ಯನಾಗಿದ್ದೇನೆ. ಸಹಾಯ ಮಾಡು, ಮಾರ್ಗದರ್ಶನ ನೀಡು – ಎಂದು ಅರ್ಜುನ ಕೇಳಿಕೊಳ್ಳುವುದು ಎರಡನೇ ಅಧ್ಯಾಯದ ಮೂರನೇ ಶ್ಲೋಕದಲ್ಲಿ ಕಂಡುಬರುತ್ತದೆ. 
• ನಾಸ್ತೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ ಪ್ರಸಾದಾನ್ ಮಯಾಚ್ಯುತ 
ಸ್ಥಿತೋಸ್ಮಿ ಗತ ಸಂದೇಹಃ ಕರಿಷ್ಯೇ ವಚನಮ್ ತವ
– (ದುಗುಡದ) ಮೋಡಗಳು ತಿಳಿಯಾದವು. ನನ್ನ ಪ್ರಜ್ಞೆಯು ಮರಳಿತು. ನಿನ್ನ ಕಾರಣದಿಂದಾಗಿ ನನ್ನೆಲ್ಲ ಸಂಶಯಗಳೂ ನಿವಾರಣೆಯಾದವು. ನೀನು ಹೇಳಿದಂತೆ ಮಾಡಲು ನಾನೀಗ ಸಿದ್ಧನಿದ್ದೇನೆ – ಎಂದು ಅದೇ ಅರ್ಜುನ ಹೇಳುವುದು 18ನೇ ಅಧ್ಯಾಯದ 73ನೇ ಶ್ಲೋಕದಲ್ಲಿ ದಾಖಲಾಗಿದೆ.

ಈ ಮಹಾಪಲ್ಲಟಕ್ಕೆ ಕಾರಣವೇನು? ಶರಣಾಗತನಾಗಿ, ನನ್ನನ್ನು ಕಾಪಾಡು ಎಂದು ಕೇಳಿಕೊಂಡ ಅರ್ಜುನ ಧೈರ್ಯ ವಹಿಸಿ, ನೀನು ಹೇಳಿದಂತೆ ಮಾಡಲು ತಯಾರಾಗಿದ್ದೇನೆ ಎಂದು ಹೇಳುತ್ತಾನೆಂದರೆ ಅಲ್ಲಿ ಯಾವ ಜಾದೂ ಘಟಿಸಿತು?
ಅಲ್ಲಿ ಫಲಿಸಿದ್ದು ಕೃಷ್ಣನ ಚಿಕಿತ್ಸಕ ಮಾತುಗಳು. ಎರಡರಿಂದ ಹದಿನೆಂಟನೇ ಅಧ್ಯಾಯಗಳ ನಡುವೆ ಕೃಷ್ಣ ಹಲವು ಬಗೆಯ ತತ್ತ್ವಗಳನ್ನು ಬಳಸಿ ವಸ್ತು ಸ್ಥಿತಿಯನ್ನು ಅರ್ಥಮಾಡಿಸುತ್ತಾನೆ. ಪರಿಣಾಮರೂಪವಾಗಿ ಅರ್ಜುನ ವಾಸ್ತವವನ್ನು ಅರಿಯುವ ಸಾಮರ್ಥ್ಯ ಹೊಂದುತ್ತಾನೆ.

 

Leave a Reply