ಸ್ತ್ರೀಶಕ್ತಿಯ ಮೂರ್ತ ರೂಪ : ಶ್ರೀಮಾತೆ ಶಾರದಾ ದೇವಿ

ಇಂದು (ಡಿ.22) ಶ್ರೀಮಾತೆ ಶಾರದಾದೇವಿಯವರ ಜಯಂತಿ. ಭಾರತದ ಆಧುನಿಕ ಆಧ್ಯಾತ್ಮಿಕ ಯುಗದ ಪ್ರೇರಕ ಶಕ್ತಿಯಾಗಿ, ಒಂದು ಪರಂಪರೆಗೆ ಮಾರ್ಗದರ್ಶನ ನೀಡಿ ಮುನ್ನಡೆಸಿದ ಧೀಮಂತ ಶಕ್ತಿ, ಶ್ರೀಮಾತೆ. 
~ ಚೇತನಾ ತೀರ್ಥಹಳ್ಳಿ

mother

ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ | ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ಕುರ್ಮೋ ನಮೋನ್ನಮಃ – ಯಾರು ಪವಿತ್ರವಾದ ಚಾರಿತ್ರ್ಯವನ್ನು ಹೊಂದಿರುವಳೋ ಪವಿತ್ರವಾದ ಜೀವನವನ್ನು ನಡೆಸಿರುವಳೋ ಸ್ವತಃ ಪಾವಿತ್ರ್ಯವೇ ಆಗಿದ್ದಾಳೆಯೋ ಆಕೆಗೆ ಶಿರಬಾಗಿ ನಮಿಸೋಣ…

ಶ್ರೀಮಾತೆ ಶಾರದಾ ದೇವಿ ಎಂದ ಕೂಡಲೆ ಕಣ್ಮುಂದೆ ಹಾಯುವುದು ಅವರ ಪರಮಪವಿತ್ರವಾದ ಜೀವನ. ಅಬ್ಬರದ ಪ್ರಚಾರಗಳಾಗಲೀ ತೋರಿಕೆಯ ಅವಕಾಶಗಳಾಗಲೀ ಇಲ್ಲದ ಕಾಲದಲ್ಲಿ, ಯಾವ ಆಡಂಬರವೂ ಇಲ್ಲದೆ, ಲೌಕಿಕ ಶ್ರೀಮಂತಿಕೆಯ ಪ್ರದರ್ಶನವೂ ಇಲ್ಲದೆ ತಮ್ಮ ಆಧ್ಯಾತ್ಮಿಕ ಶಕ್ತಿಯ ಮೂಲಕ, ಸರಳ ಬದುಕಿನ ಮೂಲಕ ಗುರುಮಾತೆಯ ಸ್ಥಾನ ಪಡೆದವರು ಅವರು.
ಶಾರದಾ ದೇವಿಯವರ ಜೀವನ ಕಾಲ ಘಟ್ಟ ಅತ್ಯಂತ ಸಂಕೀರ್ಣವಾಗಿತ್ತು. ಬ್ರಿಟಿಷ್ ಒಡೆದಾಳುವ ನೀತಿ, ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಅವರ ಮೇಲಿನ ದಬ್ಬಾಳಿಕೆಗಳೆಲ್ಲ ಮಿತಿಮೀರುತ್ತಿದ್ದ ಕಾಲ. ಜೊತೆಗೆ ಸಾಂಪ್ರದಾಯಿಕ ಮನೋಭಾವದ ಸಂಕುಚಿತ ಮನಸ್ಸುಗಳು ಸ್ತ್ರೀಶೋಷಣೆ ನಡೆಸುತ್ತಿದ್ದ ಅವಧಿಯದು. ಆ ದಿನಗಳಲ್ಲಿ ಹೆಂಗಸರಿಗೆ ಇತರೆಲ್ಲ ಹಕ್ಕುಗಳಜೊತೆಗೆ ಅಧ್ಯಾತ್ಮದ ಹಕ್ಕನ್ನೂ ನಿರಾಕರಿಸಲಾಗಿತ್ತು. ಶಾರದಾ ದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಮುರಿದು ಬೆಳೆದರು.

ಶ್ರೀಮಾತೆ ಬಾಲ್ಯದಿಂದಲೂ ತಮ್ಮ ಸ್ತ್ರೀತನದೊಳಗಿನ ಶಕ್ತಿಯನ್ನು ಪ್ರದರ್ಶಿಸುತ್ತಲೇ ಬೆಳೆದವರು. ಅವರ ನಿತ್ಯ ಜೀವನದಲ್ಲಿ ಪೂಜೆ ಜಪಕ್ಕಿಂತಲೂ ಹೆಚ್ಚಿನ ಮನ್ನಣೆ ಸೇವಾಕಾರ್ಯಗಳಿಗೆ ಮೀಸಲಾಗಿರುತ್ತಿತ್ತು. ಈ ನಡುವೆಯೂ ತಮ್ಮ ಊಟ ನಿದ್ದೆಗಳ ಸಮಯವನ್ನು ಜಪಕ್ಕೆ ಹೊಂದಿಸಿಕೊಂಡು ಸಾಧನೆಯಲ್ಲಿ ಮುಂದುವರಿಯುತ್ತಿದ್ದರು. ಅವರ ಈ ಸಾಧನೆಯೇ ಮುಂದೆ ಸಾಧಕರ ಮಾರ್ಗದರ್ಶಿಯ ಸ್ಥಾನದಲ್ಲಿ ಅವರನ್ನು ಪ್ರತಿಷ್ಠಾಪಿಸಿತು.

ಲಜ್ಜಾಪಟಾವೃತೇ ದೇವೀ…
ವಾಸ್ತವದಲ್ಲಿ, ಪರಮಹಂಸರೇ ಹೇಳಿಕೊಂಡಿದ್ದಂತೆ, ಅವರ ಸಾಧನೆ ಪರಿಪೂರ್ಣಗೊಂಡದ್ದು ಶಾರದಾ ದೇವಿಯವರ ಸಹಕಾರದಿಂದಲೇ. ರಾಮಕೃಷ್ಣರ ಮನೋಧರ್ಮವನ್ನರಿತು, ಅವರ ಆಧ್ಯಾತ್ಮಿಕ ಜೀವನಕ್ಕೆ ಸಂಪೂರ್ಣ ಸಹಕಾರ ನೀಡಿದರು ಅವರು. ಹಾಗೆಂದು ಅವರದ್ದು ನಿಸ್ಸಾರ ದಾಂಪತ್ಯವಾಗಿರಲಿಲ್ಲ. ರಾಮಕೃಷ್ಣರ ಇಂಗಿತದಂತೆ ಅವರನ್ನು ಸಂಸಾರಕ್ಕೆಳೆಸದ ಶಾರದಾದೇವಿ ಪತಿಯ ಅಕ್ಕರೆ, ಸಾಂತ್ವನಗಳೆಲ್ಲವನ್ನು ಅನುಭವಿಸಿದ್ದರು.

ಪರಮಹಂಸರ ಪತ್ನಿಯಾಗಿ ಅವರ ಭಕ್ತರಿಂದ ಮನ್ನಣೆ ಪಡೆದಿದ್ದ ಶ್ರೀಮಾತೆಯವರಲ್ಲಿ ಮಾತೃಭಾವ ಸದಾ ಜಾಗೃತವಾಗಿರುತ್ತಿತ್ತು. ಜಗತ್ತಿನ ಎಲ್ಲ ಜನರೂ ತಮ್ಮನ್ನು `ಅಮ್ಮ’ ಎಂದೇ ಸಂಬೋಧಿಸಬೇಕು ಎಂದವರು ಬಯಸಿದ್ದರು. ಈ ಕಾರಣದಿಂದಲೇ ಅವರು ಸಂನ್ಯಾಸಿ ಶಿಷ್ಯರಿಗೆ ಅಮ್ಮನಾಗಿದ್ದಂತೆಯೇ ಕಳ್ಳ ಅಂಜದನಿಗೂ ಅಮ್ಮನಾದರು. ಡಕಾಯಿತ ದಂಪತಿಗಳಿಂದ `ಮಗಳೇ’ ಎಂದು ಕರೆಸಿಕೊಂಡರು. ಸಾಮಾಜಿಕ ತಾರತಮ್ಯವನ್ನು ತಮ್ಮ ಆಚರಣೆಯ ಮೂಲಕ ನಯವಾಗಿ ವಿರೋಧಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು.
ಶಾರದಾಮಾತೆಯವರ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಸಾರಲೆಂದೇ ಶ್ರೀ ರಾಮಕೃಷ್ಣರು ಆಕೆಯನ್ನು ಮಾತೃಸ್ಥಾನದಲ್ಲಿ ಕೂರಿಸಿ ಪೂಜಿಸಿದ್ದು. ಶಾರದಾ ದೇವಿಯವರನ್ನು `ಫಲಾಹಾರಿಣಿ ಕಾಳಿ’ಯೆಂದು ಭಾವಿಸಿ, ಪೀಠದಲ್ಲಿ ಕುಳ್ಳಿರಿಸಿ ಆಕೆಗೆ ಷೋಡಶೋಪಚಾರ ಪೂಜೆ ಸಲ್ಲಿಸಿದ್ದರು ಪರಮಹಂಸರು.

ಪರಮಹಂಸರ ಅನಂತರದ ದಿನಗಳಲ್ಲಿ ಶಾರದಾದೇವಿಯವರು ರಾಮಕೃಷ್ಣ ಪರಂಪರೆಯ ಸಕಲ ಸಂನ್ಯಾಸಿ ಗಣಕ್ಕೆ `ಶ್ರೀಮಾತೆ’ಯಾಗಿ ಪೂಜ್ಯರಾದರು. ಪರಮಹಂಸರ ಸೂಚನೆಯಂತೆ ಅವರ ಜೀವಿತ ಕಾಲದಲ್ಲಿಯೇ ಮಂತ್ರ- ಸಂನ್ಯಾಸ ದೀಕ್ಷೆಗಳನ್ನು ನೀಡುತ್ತಿದ್ದ ಶಾರದಾ ದೇವಿಯವರ ಆರಾಧಕರ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿತು. ಸದಾ ಲಜ್ಜಾಪಟದ ಹಿಂದೆ ಇರುತ್ತ, ಪತಿಸೇವೆ, ಧ್ಯಾನ-ಜಪಗಳಲ್ಲಿ ಲೀನವಾಗಿರುತ್ತಿದ್ದ ಶ್ರೀಮಾತೆಯವರು ಪತಿಯ ನಿಧನಾನಂತರ ಶಿಷ್ಯರ ಮಾರ್ಗದರ್ಶನಕ್ಕಾಗಿ ಮುಂಚೂಣಿಯಲ್ಲಿ ನಿಲ್ಲಬೇಕಾಯ್ತು. ತಮ್ಮ ಈ ಪಾತ್ರವನ್ನು ಅವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು.

ಸಾಮಾಜಿಕ ಕೊಡುಗೆ
ಶಾರದಾ ಮಾತೆ ತಮ್ಮ ಆಧ್ಯಾತ್ಮಿಕ ಜಗತ್ತಿನ ಮೂಲಕವೇ ನೀಡಿದ ಸಾಮಾಜಿಕ ಕೊಡುಗೆಗಳು ಅತ್ಯಮೂಲ್ಯವಾದವು. ಸೋದರಿ ನಿವೇದಿತಾ, ಮೇಡಮ್ ಮ್ಯಾಕ್ಲಾಯ್ಡ್ ಮೊದಲಾದ ವಿದೇಶೀ ಹೆಣ್ಣುಮಕ್ಕಳು ಭಾರತಕ್ಕೆ ಸೇವಾಕಾರ್ಯಕ್ಕಾಗಿಯೂ ಅಧ್ಯಾತ್ಮದ ಅನುಭೂತಿಗೂ ಬಂದಿಳಿದಾಗ ಅವರಲ್ಲಿ ಭದ್ರತೆಯ ಭಾವನೆ ಮೂಡಿಸಿದ್ದರು ಶ್ರೀಮಾತೆ. ಅದರೊಂದಿಗೆ, ಆ ಹೆಣ್ಣುಮಕ್ಕಳಲ್ಲಿ ಪರಕೀಯ ಭಾವನೆ ಮೂಡದಂತೆ ನೋಡಿಕೊಂಡರು. ಗುರು ಸ್ಥಾನದಲ್ಲಿದ್ದ ಸ್ವತಃ ಶ್ರೀಮಾತೆಯವರೇ ಅನ್ಯ ಧರ್ಮೀಯ – ಅನ್ಯ ರಾಷ್ಟ್ರೀಯರಾದ ಈ ಹೆಣ್ಣುಮಕ್ಕಳೊಡನೆ ಅನ್ಯೋನ್ಯತೆಯಿಂದ ಇರುತ್ತಿದ್ದುದು, ಅವರಿಗೆ ಮುಟ್ಟಗೊಡುತ್ತಿದ್ದುದು, ಇತರ ಮಹಿಳೆಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿತು.ಅಂದಿನ ಭಾರತೀಯ ಮನಸ್ಥಿತಿಗೆ ಸಮನ್ವಯ ಭಾವ ಸಾರುವ ಇಂತಹದೊಂದು ಜೀವಂತ ನಿದರ್ಶನ ಅತ್ಯಗತ್ಯವಾಗಿತ್ತು.
ಶ್ರೀಮಾತೆ ಈ ವಿದೇಶೀ ಹೆಣ್ಣುಮಕ್ಕಳನ್ನು ಹುರಿದುಂಬಿಸಿ, ಹೆಣ್ಣುಮಕ್ಕಳ ಶಾಲೆಯನ್ನು ತೆರೆಯಲು ಪೆÇ್ರೀತ್ಸಾಹಿಸಿದರು. ವಿವೇಕಾನಂದರ ಬಯಕೆಯಾಗಿದ್ದ ಸಂನ್ಯಾಸಿನೀ ಮಠದ ಸ್ಥಾಪನೆಗೆ ಪ್ರೇರಣೆಯಾದರು.

ಸ್ತ್ರೀ ಸಂವೇದನೆ
ಆಧ್ಯಾತ್ಮಿಕ ಪ್ರಖರತೆಯಿಂದ ಕೂಡಿದ್ದ ಶಾರದಾ ಮಾತೆಯವರ ಸ್ತ್ರೀ ಸಂವೇದನೆ ಅತ್ಯುನ್ನತ ಮಟ್ಟದ್ದಾಗಿತ್ತು. ಅವರು ಸಾಮಾಜಿಕ ವ್ಯವಸ್ಥೆಗೆ ಕುಂದುಂಟಾಗದಂತೆ ಹೆಣ್ಣುಮಕ್ಕಳ ಹಕ್ಕು ಬಾಧ್ಯತೆಗಳನ್ನು ಎತ್ತಿ ಹಿಡಿಯುತ್ತಿದ್ದರು.
ಅವರು ಕೋಲ್ಕತ್ತದ `ಉದ್ಬೋಧನ’ ಗೃಹದಲ್ಲಿದ್ದಾಗ, ಮುಂಭಾಗದಲ್ಲಿಯೇ ಕಾರ್ಮಿಕರ ಗುಡಿಸಲುಗಳಿದ್ದವು. ಅಲ್ಲೊಬ್ಬ ನಿತ್ಯವೂ ಸಂಜೆ ಕುಡಿದು ಬಂದು ಹೆಂಡತಿಯನ್ನು ಪೀಡಿಸುತ್ತಿದ್ದ. ಮಾತೆಯವರಿಗೆ ಆ ಹೆಣ್ಣಿನ ಆಕ್ರಂದನ ಕೇಳಿಸುತ್ತಿತ್ತು. ಆಕೆಗಾಗಿ ಮರುಕಪಟ್ಟ ಮಾತೆಯವರು ಕೊನೆಗೊಂದು ದಿನ ತಾಳಲಾಗದೆ ತಮ್ಮ ಮನೆಯ ಮಹಡಿಯೇರಿ ಅಲ್ಲಿಂದಲೇ ಕೂಗು ಹಾಕಿ ಆತನನ್ನು ಗದರಿಸಿದರು. ಅನಂತರದಲ್ಲಿ ಆ ಮಹಿಳೆಯ ಸಮಸ್ಯೆಗಳನ್ನು ಸರಿದೂಗಿಸುವ ಏರ್ಪಾಟನ್ನೂ ಮಾಡಿದರು.
ಗಂಡನಿಂದ ತ್ಯಜಿಸಲ್ಪಟ್ಟಿದ್ದ ಹುಡುಗಿಯೊಬ್ಬಳಿಗೆ ಹಿತ ವಚನಗಳನ್ನು ಹೇಳಿ, ಆಕೆ ವಿದ್ಯಾಭ್ಯಾಸ ಮುಂದುವರೆಸುವಂತೆ ಮಾಡಿದ್ದರು ಶ್ರೀಮಾತೆ. ಹಿಂಸಿಸುತ್ತಿದ್ದ ಗಂಡನನ್ನು ಬಿಟ್ಟು ಬಂದ ಹುಡುಗಿಯೊಬ್ಬಳನ್ನು ಸಮಾಜ ದೂಷಿಸುತ್ತಿದ್ದಾಗ ಆಕೆಯ ಪರವಾಗಿ ನಿಂತು ಗಂಡ-ಹೆಂಡತಿಯರಿಬ್ಬರ ಕರ್ತವ್ಯಗಳ ಬಗ್ಗೆ ತಿಳಿಹೇಳಿ, ಆ ಹುಡುಗಿಯ ನಿರ್ಧಾರ ತಪ್ಪೆಲ್ಲವೆಂದೂ ಸಾರಿದ್ದರು.

ಜ್ಞಾನ ಗುಣ ಗಣಿ
ಶಾರದಾಮಾತೆ ಪುಸ್ತಕಗಳ ಓದಿನ ಪಂಡಿತೆಯಲ್ಲ. ಪರಮಹಂಸರು ನಿರೂಪಿಸಿದಂತೆ ಆಕೆ ಸ್ವತಃ ಶ್ರೀವಿದ್ಯೆ. ವಿವೇಕಾನಂದರು ಆಕೆಯನ್ನು `ಆದ್ಯಾ ಶಕ್ತಿ’ಎಂದೇ ಕರೆದಿದ್ದರು. `ಪರಮಹಂಸರ ಅಧಿಕೃತತೆಯ ಬಗ್ಗೆ ಯಾರಾದರೂ ಸಂಶಯ ತೋರಿದರೆ ತೋರಿಕೊಳ್ಳಲಿ. ಆದರೆ ಶ್ರೀಮಾತೆಯವರ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ನಾನದನ್ನು ಸಹಿಸಲಾರೆ. ಆಕೆ ಸ್ವಯಂ ವಿದ್ಯೆ. ಆದಿ ಶಕ್ತಿ’ ಎಂದಿದ್ದರು ಸ್ವಾಮೀಜಿ. ಶಾರದಾ ದೇವಿಯವರ ಬಗ್ಗೆ ಅವರ ವಿಶ್ವಾಸ ಅಂತಹದ್ದು. ಹೀಗಾಗಿಯೇ ಅಮೆರಿಕೆಗೆ ತೆರಳುವ ಮುಂಚೆ ಅವರು ಮಾತೆಯವರಲ್ಲಿ ಅನುಮತಿ ಕೋರಿದ್ದು.
ಶ್ರೀಮಾತೆ ಆರು ಮೂಲೆಗಳ ಪುಟ್ಟ ಕೋಣೆಯಲ್ಲಿ, ಗುಡಿಸಲಲ್ಲಿ ಸರಳವಾಗಿ ಬಾಳಿದವರು. ಮಮತೆಯ ಮಾತುಗಳಿಂದ ಆಧ್ಯಾತ್ಮಿಕ ತತ್ತ್ವಗಳನ್ನು ಸರಳವಾಗಿ ಬೋಧಿಸಿದರು. `ಮಗೂ, ಯಾರಲ್ಲಿಯೂ ಕೆಡುಕನ್ನು ನೋಡಬೇಡ. ಕೆಡುಕನ್ನೆ ಹುಡುಕುತ್ತಿದ್ದರೆ ನಿನ್ನ ಮನಸ್ಸು ಮಲಿನವಾಗುವುದು. ಸದಾ ಒಳ್ಳೆಯದನ್ನೆ ನೋಡಲು ಯತ್ನಿಸು, ಒಳಿತನ್ನೆ ಚಿಂತಿಸು…’ ಎಂದು ಬೋಧಿಸಿ ಅದರಂತೆಯೆ ನಡೆದರು.

ನಮ್ಮ ನಡುವೆ ಇಲ್ಲದ ಈ ತಾಯಿಗೆ ಇಂದು ಜಗದ ತುಂಬೆಲ್ಲ ಮಕ್ಕಳು. ಇವರಲ್ಲಿ ಎಲ್ಲ ಜಾತಿ, ಭಾಷೆ, ಅಂತಸ್ತುಗಳವರೂ ಇದ್ದಾರೆ. ಇವತ್ತಿಗೂ ಈ ಮಕ್ಕಳು ತಮ್ಮ ದುಗುಡ- ಸಂಭ್ರಮದ ಘಳಿಗೆಗಳಲ್ಲಿ `ಅಮ್ಮಾ’ ಎಂದು ಶ್ರೀಮಾತೆಯ ಪಟವನ್ನು ತಬ್ಬಿ ಹಿಡಿದು, ಸಾಂತ್ವನ ಪಡೆಯುತ್ತಾರೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.