ಆನಂದ – ಸುಖ : ತಾವೋ ಧ್ಯಾನ ~ 21

ತಿಂದುಂಡು ಬದುಕಿನಲ್ಲಿ ಕೊಂಚ ಮಟ್ಟಿನ ಹಣ ಕಂಡ ಬಹುತೇಕ ಜನರಿಗೆ, ಒಂದು ಹಂತದಲ್ಲಿ ಬದುಕು ಎಂದರೆ ಇಷ್ಟೇನಾ ಎನ್ನುವ ಗುಮಾನಿ ಶುರುವಾಗುತ್ತದೆ. ಅವರಲ್ಲಿ ಈ ಸಂಶಯ ಮೂಡಿದ್ದೇ ತಡ ಅವರನ್ನು ಸೆಳೆದುಕೊಳ್ಳಲು ಒಂದು ದೊಡ್ಡ ಖೆಡ್ಡಾ ತೆರೆದುಕೊಳ್ಳುತ್ತದೆ   ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ನಿನ್ನ ದುಃಖಕ್ಕೆ
ಪರಿಹಾರವೇ ಇಲ್ಲ ಎನ್ನುವುದನ್ನ ಕಂಡುಕೊಂಡಾಗಲೇ
ನೀನು ಪರಮ ಸುಖಿ.

~

ಕೆಲವು ಧಾರ್ಮಿಕ ನಾಯಕರು, ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನಾನಾ ಬಗೆಯ ಹೆದರಿಕೆಗಳನ್ನು ಜನರ ಮೇಲೆ ಹೇರುತ್ತಾರೆ. ಸದಾಚಾರವನ್ನು ಬಿತ್ತಲು ಸಾವಿನ ಅಂಜಿಕೆಯನ್ನೂ, ಸ್ವರ್ಗ ನರಕಗಳ ಸುಳ್ಳನ್ನೂ ಪ್ರಚಾರ ಮಾಡುತ್ತಾರೆ.

ಇನ್ನೂ ಕೆಲವರದು ಇನ್ನೂ ದೊಡ್ಡ ದೊಡ್ಡ ಆಮಿಷಗಳು. ನಿಮಗೆ ಬದುಕಿನಲ್ಲಿ ಸಮಾಧಾನವಿರದಿದ್ದರೆ ಆನಂದವನ್ನೂ, ಕೊರತೆಯಿದ್ದರೆ ಸಫಲತೆಯನ್ನೂ ವಾಗ್ದಾನ ಮಾಡುತ್ತಾರೆ.

ತಿಂದುಂಡು ಬದುಕಿನಲ್ಲಿ ಕೊಂಚ ಮಟ್ಟಿನ ಹಣ ಕಂಡ ಬಹುತೇಕ ಜನರಿಗೆ, ಒಂದು ಹಂತದಲ್ಲಿ ಬದುಕು ಎಂದರೆ ಇಷ್ಟೇನಾ ಎನ್ನುವ ಗುಮಾನಿ ಶುರುವಾಗುತ್ತದೆ. ಅವರಲ್ಲಿ ಈ ಸಂಶಯ ಮೂಡಿದ್ದೇ ತಡ ಅವರನ್ನು ಸೆಳೆದುಕೊಳ್ಳಲು ಒಂದು ದೊಡ್ಡ ಖೆಡ್ಡಾ ತೆರೆದುಕೊಳ್ಳುತ್ತದೆ. ಅಧ್ಯಾತ್ಮ ಯಾವ ಲೌಕಿಕ ಬೇಡಿಕೆಗಳನ್ನು ಪೂರೈಸುವ ಮಾರ್ಗವಲ್ಲ. ಬದಲಾಗಿ ಅದು ನಮ್ಮ ಸೋಲುಗಳಿಗೆ, ನಿರಾಸೆಗಳಿಗೆ, ದುಗುಡಕ್ಕೆ ಕಾರಣವಾದ ವಿವರಗಳನ್ನು ನಮಗೆ ಸ್ಪಷ್ಟಪಡಿಸುವ ಪ್ರಕ್ರಿಯೆ ಮಾತ್ರ.

ಖುಶಿಯಾಗಿರುವಾಗ
ನಿಮ್ಮ ಆಳಕ್ಕೊಮ್ಮೆ ಇಳಿದು ನೋಡಿ
ಒಮ್ಮೆ ನಿಮ್ಮ ದುಃಖಕ್ಕೆ ಕಾರಣವಾಗಿದ್ದ ಕಾರಣಗಳೇ
ಇಂದು ನಿಮ್ಮ ಖುಶಿಯ ಕಾರಣಗಳು ಕೂಡ.

ಸಂಕಟದಲ್ಲಿರುವಾಗ
ಮತ್ತೊಮ್ಮೆ ನಿಮ್ಮ ಆಳಕ್ಕೆ ಇಳಿದು ನೋಡಿ.
ಇಂದು ನಿಮ್ಮ ಕಣ್ಣೀರಿಗೆ ಕಾರಣವಾಗಿರುವ ಕಾರಣಗಳೇ
ಒಮ್ಮೆ ನಿಮ್ಮನ್ನು ಏರಿಸಿದ್ದವು
ಖುಶಿಯ ಉತ್ತುಂಗಕ್ಕೆ.

ಸಾವು ಅನಿವಾರ್ಯ ಎಂದು, ನಮ್ಮ ದುಃಖಕ್ಕೆ ಪರಿಹಾರವೇ ಇಲ್ಲ ಎನ್ನುವುದು ನಿಖರವಾಗಿ ಮನವರಿಕೆಯಾದಾಗ ಈ ಧಾರ್ಮಿಕ ನಾಯಕರು ನಮಗೆ ಬೇರೆ ಇನ್ನೇನನ್ನು ತಾನೆ ಆಮಿಷ ಒಡ್ಡಬಲ್ಲರು? ಅಧ್ಯಾತ್ಮ, ನಿತ್ಯದ ಬದುಕಿನ ಸಾವಯವ ಭಾಗ, ಬೇರೆಯವರು ನಮಗಾಗಿ ಧಾರೆ ಎರೆಯುವ ವಿದ್ಯೆಯಲ್ಲ. ಬದುಕಿನ ಭ್ರಮೆಗಳಷ್ಟೇ ಅಲ್ಲ, ಪಾಪ ಪುಣ್ಯಗಳ, ನೀತಿ ಅನೀತಿಗಳ, ಸತ್ಯ ಸುಳ್ಳುಗಳ, ಧರ್ಮ ಅಧರ್ಮಗಳ ಭ್ರಮೆಯಿಂದಲೂ ಬಿಡುಗಡೆ ಹೊಂದುವುದೇ ಅಧ್ಯಾತ್ಮ.

Leave a Reply