ಕತ್ತರಿಸುವ ಕಿವಿಗಳು, ಹೊಲೆಯುವ ಕಣ್ಣು : ದೃಷ್ಟಾಂತ ಕಥೆ

ಒಂದೂರಿನಲ್ಲಿ ಒಬ್ಬ ಒಕ್ಕಣ್ಣ ದರ್ಜಿಯಿದ್ದ. ಬಟ್ಟೆ ಹೊಲಿದು ಸುಖ ಜೀವನ ನಡೆಸುತ್ತಿದ್ದರೂ ಅವನಿಗೆ ತಾನು ಒಕ್ಕಣ್ಣನೆಂಬ ಕೊರಗು ಸದಾ ಕಾಡುತ್ತಿತ್ತು.

ಹೀಗಿರುತ್ತ, ಒಬ್ಬ ಸಾಧು ಅವನ ಮಳಿಗೆಗೆ ಬಂದ. ಅವನಿಗೆ ಹಾಲು ಹಣ್ಣು ಕೊಟ್ಟ ಸತ್ಕರಿಸಿದ ದರ್ಜಿ, “ನನ್ನ ಆದಾಯ ಚೆನ್ನಾಗಿಯೇ ಇದೆ. ಆದರೂ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಏನಾದರೂ ಉಪಾಯ ಹೇಳಿ” ಅಂದ.

ಸಾಧು, “ಸರಿ. ಹೋಗಿ ಒಂದು ಕತ್ತರಿಯನ್ನೂ, ಸೂಜಿಯನ್ನೂ ತೆಗೆದುಕೊಂಡು ಬಾ” ಎಂದು ಹೇಳಿದ.

ದರ್ಜಿಗೆ ಆಶ್ಚರ್ಯವಾಯಿತು. ಸಮಾಧಾನ ನೀಡಿ ಅಂದರೆ ಕತ್ತರಿ, ಸೂಜಿ ತರಲು ಹೇಳುತ್ತಿದ್ದಾರಲ್ಲ ಅಂದುಕೊಂಡ. ಆದರೂ ತನ್ನ ಭಾವನೆ ತೋರಗೊಡದೆ, ಅವೆರಡನ್ನೂ ತಂದಿಟ್ಟ.

ಸಾಧು, ಅಲ್ಲಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು, ಕತ್ತರಿಯಿಂದ ಕತ್ತರಿಸಿದ. ದರ್ಜಿಗೆ ಕಳವಳವಾಯಿತು. “ಬಟ್ಟೆ ಕತ್ತರಿಸುವುದೂ ಒಂದು ಸಮಾಧಾನವೇ!?” ಎಂದು ಅಚ್ಚರಿಪಡತೊಡಗಿದ.

ಅಷ್ಟರಲ್ಲಿ ಸಾಧು ಸೂಜಿಗೆ ದಾರ ಪೋಣಿಸಿ ಹೊಲಿಯತೊಡಗಿದ. ಇದನ್ನು ನೋಡಿ ದರ್ಜಿ ಬೆಪ್ಪಾಗಿಹೋದ.  

ಸಾಧುವಿಗೆ ಅವನ ಗೊಂದಲ ಅರ್ಥವಾಯಿತು. ನಗುತ್ತಾ ಕೇಳಿದ; “ನಾನು ಕತ್ತರಿಸಿದೆ ಮತ್ತು ಹೊಲೆದೆ. ನಿನಗೆ ಯಾವ ಕ್ರಿಯೆ ಇಷ್ಟವಾಯಿತು?”

“ಹೊಲೆದದ್ದು ಇಷ್ಟವಾಯಿತು” ದರ್ಜಿ ಉತ್ತರಿಸಿದ.

“ಕತ್ತರಿಗೆ ಕಿವಿಗಳೆಷ್ಟು?” ಸಾಧುವಿನ ಪ್ರಶ್ನೆ.

ಇದೊಳ್ಳೇ ಸಹವಾಸವಪ್ಪಾ… ಅಂದುಕೊಳ್ಳುತ್ತಾ ದರ್ಜಿ ಹೇಳಿದ, “ಎರಡು”.

“ಸೂಜಿಗೆ ಕಣ್ಣೆಷ್ಟು?”

“ಒಂದು!”

“ಕತ್ತರಿ ಎರಡು ಕಿವಿಗಳಿದ್ದೂ ಕತ್ತರಿಸುವ ಕೆಲಸವನ್ನೇ ಮಾಡುತ್ತದೆ. ಸೂಜಿಗೆ ಒಂದೇ ಕಣ್ಣಿದ್ದರೂ ಹೊಲಿಯುವ ಕೆಲಸ ಮಾಡುತ್ತದೆ. ಸಂಪನ್ಮೂಲ ಕಡಿಮೆಯಿದ್ದರೂ, ಅನಾನುಕೂಲ ಇದ್ದರೂ ಒಳಿತನ್ನೇ ಮಾಡಬೇಕು ಎಂಬುದನ್ನು ಇದು ಸೂಚಿಸುತ್ತದೆ” ಅಂದ.

ಸಾಧುವಿನ ಮಾತು ದರ್ಜಿಯ ಮನಸ್ಸಿಗೆ ನಾಟಿತು. ಅಂದಿನಿಂದ ಅವನು ತಾನು ಒಕ್ಕಣ್ಣನೆಂಬ ಕೊರಗು ಬಿಟ್ಟುಬಿಟ್ಟ.  

(ಸಂಗ್ರಹ ಮತ್ತು ರೂಪಾಂತರ : ಅಲಾವಿಕಾ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to ಜಗದೀಶ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.