ಮಹಿಪತಿ ದಾಸರು ಮತ್ತು ಸೂಫಿ ನಂಗೇ ಶಾಹ್ ವಲಿ

ದಿವಾನರಾಗಿದ್ದ ಮಹಿಪತಿ, ಲೌಕಿಕ ಬದುಕಿನಿಂದ ಅಲೌಕಿಕ ಬದುಕಿಗೆ ಪ್ರವೇಶಿಸಿ ‘ಮಹಿಪತಿ ದಾಸ’ರಾಗಲು ದಾರಿ ತೋರಿದ್ದು ಸೂಫಿ  ನಂಗೇ ಶಾಹ್ ವಲಿ. ಮುಂದೆ ಮಹಿಪತಿ ದಾಸರು ದಾಸ ಪರಂಪರೆಗೆ ಅನನ್ಯ ಕೊಡುಗೆ ನೀಡಿದರು  ~ ನಾರಾಯಣ ಬಾಬಾನಗರ | ವಿಜಯಪುರ

mahipati dasaruಒಮ್ಮೆ ದಿವಾನರು ರಾಜನ ದರಬಾರಕ್ಕೆ ಹೋಗುತ್ತಿದ್ದರು. ‘ಏ, ಒಂದು ಕ್ಷಣ ಇಲ್ಲಿ ಬಾ…!’ ಯಾರೋ ಕರೆದಂತಾಯಿತು. ಹೊರಟಿದ್ದ ದಿವಾನರು ನಿಂತರು.

ಹಾಗೆ ಕರೆದವನು ಒಬ್ಬ ಸೂಫಿ ಸಂತ, ಹೆಸರು ಶಾಹ ನಂಗೀ ಮಜ್ಝೂಬ ಬರಹನಾ. ರೂಢಿಯಲ್ಲಿ ನಂಗೆ ಶಾಹ ವಲಿ ಎನ್ನುತ್ತಿದ್ದರು. ದಿವಾನರು ಫಕೀರನ ಹತ್ತಿರ ಬಂದರು. ದೃಷ್ಟಿ ಸೇರಿದವು. ದಿವಾನರು ಒಂದು ಕ್ಷಣ ಫಕೀರನ ಹತ್ತಿರ ಕುಳಿತರು. ಇಬ್ಬರ ನಡುವೆ ಮಾತುಗಳಿಲ್ಲ. ಎದ್ದು ದರಬಾರಕ್ಕೆ ಹೊರಟುಹೋದರು.

ಅವತ್ತಿನ ದರಬಾರದ ಕಾರ್ಯಕಲಾಪ ಮುಗಿಸಿ ಸಂಜೆ ಮನೆಗೆ ಹೊರಟಿದ್ದರು. ಬೆಳಗ್ಗೆ ಭೇಟಿಯಾಗಿದ್ದ ಫಕೀರ ಅದೇ ಸ್ಥಳದಲ್ಲಿದ್ದ. ಮತ್ತೆ ಕರೆದ. ದಿವಾನರು ಹೋದರು. ಈ ಸಲ ಫಕೀರ ದಿವಾನರ ಕೈಯಲ್ಲಿದ್ದ ರಾಜಮುದ್ರೆ ಇದ್ದ ಉಂಗುರ ಬೇಡಿದ. ದಿವಾನರು ಉಂಗುರ ಬಿಚ್ಚಿ ಫಕೀರನಿಗೆ ನೀಡಿದರು. ಫಕೀರ ಅದನ್ನು ತಿರುಗಿಸಿ ಒಂದು ಸಲ ನೋಡಿ ಬದಿಯಲ್ಲಿದ್ದ ನೀರು ತುಂಬಿದ ಕಂದಕದಲ್ಲಿ ಎಸೆದುಬಿಟ್ಟರು. ದಿವಾನರಿಗೆ ಹೆದರಿಕೆ. ರಾಜಮುದ್ರೆ ಹೀಗೆ ನೀರಿನ ಕಂದಕದಲ್ಲಿ ಎಸೆದಿದ್ದಕ್ಕೆ ಕಳವಳ. ತಮ್ಮೊಳಗಿನ ತಳಮಳವನ್ನು ಫಕೀರನಿಗೆ ಅರಹಿದರು.

ನಸುನಕ್ಕ ಫಕೀರ ಕಂದಕದಲ್ಲಿ ಮುಳುಗಿ ಬೊಗಸೆಯಲ್ಲಿ ಹಲವು ರಾಜಮುದ್ರೆಯನ್ನು ಹಿಡಿದುಕೊಂಡು ಎದ್ದ. ‘ನಿನ್ನ ರಾಜಮುದ್ರೆಯನ್ನು ಆಯ್ದುಕೊ’ ಎಂದು ದಿವಾನರ ಮುಂದೆ ಆಯ್ಕೆ ಇಟ್ಟ. ದಿವಾನರಿಗೆ ತೊಳಲಾಟ. ಕೊನೆಗೆ ದಿವಾನರು ಸೋತು, ‘ಈ ಅವಿದ್ಯೆ ಸಾಕು. ಭವ ನೀಗುವ ಭವ್ಯವಿದ್ಯೆ ಬೇಕು’ ಎಂಬ ಬೇಡಿಕೆ ಇಟ್ಟರು. ‘ಅಂಥ ವಿದ್ಯೆಯನ್ನು ಸಂಪಾದಿಸುವ ಮಾರ್ಗವನ್ನು ತೋರುವ ಗುರು ನಿನಗೆ ಬೇರೆಯೆ ಇದ್ದಾನೆ’ ಎಂದು ಉಸುರಿದ ಫಕೀರ.

ದಿವಾನರಿಗೆ ಜ್ಞಾನೋದಯವಾಯಿತು. ಅವರ ಹೆಸರು ಮಹಿಪತಿ. ದಿವಾನ ಮಹಿಪತಿ ದಾಸಶ್ರೇಷ್ಠ ಮಹಿಪತಿದಾಸ ಆಗಲು ತಿರುವು ನೀಡಿದ ಘಟನೆ ಇದು. ಮಹಿಪತಿರಾಯರು ವಿಜಯಪುರದ ಆದಿಲಷಾಹಿ ಅರಸರ ಕಾಲದಲ್ಲಿ ಅರಮನೆಯ ಹತ್ತಿರದ ನರಸಿಂಹ ದೇವಾಲಯದಲ್ಲಿ ಪುರಾಣ, ಪ್ರವಚನ ಹೇಳುತ್ತಿದ್ದರು. ಮಹಿಪತಿರಾಯರ ಪಾಂಡಿತ್ಯದ ಪ್ರಖರತೆಯನ್ನು ಖವಾಸಖಾನ ಗುರುತಿಸಿದ. ದಿವಾನ ಹುದ್ದೆ ಒಲಿದುಬಂದಿತ್ತು. ಲೌಕಿಕ ಬದುಕಿನಿಂದ ಅಲೌಕಿಕ ಬದುಕಿಗೆ ಪ್ರವೇಶದ್ವಾರ ತೋರಿದ್ದು ನಂಗೆ ಶಾಹ ವಲಿ. ಆತ ಮಹಿಪತಿರಾಯರಿಗೆ ಕೈತೋರಿದ್ದು ಸಾರವಾಡ ಗ್ರಾಮದತ್ತ.

ವಿಜಯಪುರ ಬಳಿಯ ಆ ಗ್ರಾಮದಲ್ಲಿ ಭಾಸ್ಕರಸ್ವಾಮಿಗಳು ನೆಲೆಸಿದ್ದರು. ಅವರ ಸಂಪರ್ಕಕ್ಕೆ ಬಂದ ಮಹಿಪತಿರಾಯರ ಬದುಕು ಬದಲಾಯಿತು. ಭಾಸ್ಕರಸ್ವಾಮಿ ಪಾರಮಾರ್ಥಿಕ ಬದುಕಿನ ಮಾರ್ಗ ತೋರಿದರು. ಮಹಿಪತಿರಾಯರು ಸಾಧನೆ ಮಾಡಿದರು. ಗುರೂಪದೇಶವಾದ ಮೇಲೆ ದಿವಾನ ಪದವಿ ತ್ಯಜಿಸಿದರು. ಸಂಪತ್ತನ್ನೆಲ್ಲ ದಾನ ಮಾಡಿದರು. ಶ್ರೀಹರಿಯನ್ನು ಕಾಣುವ ಅಪರೋಕ್ಷತೆಯ ಬದುಕಿಗೆ ತಮ್ಮನ್ನು ಒಡ್ಡಿಕೊಂಡರು.

ಸಾರವಾಡದಿಂದ ಬಂದು ನೆಲೆಸಿದ್ದು ಕಾಖಂಡಕಿ ಗ್ರಾಮದಲ್ಲಿ. ಬದುಕಿನ ಉಳಿದ ಕಾಲವನ್ನು ಕಾಖಂಡಕಿಯಲ್ಲಿಯೇ ಅನುಷ್ಠಾನಗೈಯುತ್ತ ಕಳೆದರು. ಅಪರೋಕ್ಷ ಜ್ಞಾನಿಗಳೆನಿಸಿಕೊಂಡರು.
ದಾಸಸಾಹಿತ್ಯಕ್ಕೆ ಮಹಿಪತಿದಾಸರ ಕೊಡುಗೆ ಅನನ್ಯ. ಇವರು ಆರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಹೆಚ್ಚಿನ ಕೃತಿಗಳು ಕನ್ನಡದಲ್ಲಿವೆ. ಅನೇಕ ಮಿಶ್ರಭಾಷಾ ರಚನೆಗಳನ್ನೂ ಮಾಡಿದ್ದಾರೆ. ಸಮಾಜದ ಅಂಕುಡೊಂಕನ್ನು ತಿದ್ದುವ ಉಪದೇಶಪರ ಕೃತಿಗಳೂ ಇವೆ. ದಾಸಸಾಹಿತ್ಯ ಶೈಲಿಯ ಬಹುತೇಕ ಪ್ರಕಾರಗಳನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.