ಸಾವಿರ ನಾಣ್ಯಗಳು ಮತ್ತು ಒಂದು ಕ್ಷಣ : ಒಂದು ನಸ್ರುದ್ದೀನ್ ಕಥೆ

Mullaಮುಲ್ಲಾ ನಸ್ರುದ್ದೀನ ತೀಕ್ಷ್ಣ ಬುದ್ಧಿಯವನಾದ್ದರಿಂದ ಸುತ್ತ ಮುತ್ತಲಿನ ಜನರಿಗೆ ತನ್ನ ಸಲಹೆ, ತಿಳಿವು ಹಂಚುತ್ತ ಬದುಕು ಸಾಗಿಸುತ್ತಿದ್ದ. ಜನ ಅವನನನ್ನು ಸೂಫಿಯೆಂದೂ, ಭಗವಂತನೊಂದಿಗೆ ಹತ್ತಿರದ ಸಂಬಂಧವನ್ನಿಟ್ಟುಕೊಂಡವನೆಂದೂ ತಿಳಿದು ತಮ್ಮ ಸಮಸ್ಯೆ, ಪ್ರಶ್ನೆಗಳೊಂದಿಗೆ ಅವನನ್ನು ನೋಡಲು ಬರುತ್ತಿದ್ದರು.

ಒಂದು ದಿನ ಒಬ್ಬ ಧಾರ್ಮಿಕ ಮನುಷ್ಯ ಅವನನ್ನು ಪರೀಕ್ಷಿಸಲು ಬಂದ.
“ನಸ್ರುದ್ದೀನ್, ಜನ ನಿನ್ನ ಸಂತ ಎಂದು ಹೇಳುತ್ತಾರೆ, ಅಲ್ಲಾಹ್ ನ ಜೊತೆ ಮಾತನಾಡುವವ ಎಂದು ಹೇಳುತ್ತಾರೆ. ಅಲ್ಲಾಹ್ ನ ದೃಷ್ಟಿಯಲ್ಲಿ 1000 ಸಾವಿರ ವರ್ಷ ಎಂದರೆ ಎಷ್ಟು ? ಕೇಳಿ ಹೇಳುವೆಯಾ?”

ಉತ್ತರ ಕೊಡುವ ಮೊದಲು, ಮುಲ್ಲಾ ತಲೆ ಎತ್ತಿ ಆಕಾಶವನ್ನೊಮ್ಮೆ ನೋಡಿದ, ಅಲ್ಲಾಹ್ ನ ಜೊತೆ ಯಾವದೋ ಭಾಷೆಯಲ್ಲಿ ಮಾತನಾಡಿದ. ಅನಂತರ, 
“ಒಂದು ಕ್ಷಣ” ಎಂದು ಮುಲ್ಲಾ ಉತ್ತರಿಸಿದ.

“ಅಲ್ಲಾಹ್ ನ ಪ್ರಕಾರ ಒಂದು ಸಾವಿರ ಬಂಗಾರದ ನಾಣ್ಯಗಳ ಮೌಲ್ಯ ಎಷ್ಟು?” ಆ ಮನುಷ್ಯ ತಿರುಗಿ ಪ್ರಶ್ನೆ ಮಾಡಿದ.
ಈ ಬಾರಿ ಮುಲ್ಲಾ ತಕ್ಷಣ ಉತ್ತರಿಸಿದ, “ ಒಂದು ತಾಮ್ರದ ನಾಣ್ಯದಷ್ಟು”

“ಹಾಗಾದರೆ ಓ ಸಂತ ಶ್ರೇಷ್ಠ , ಆ ಒಂದು ತಾಮ್ರದ ನಾಣ್ಯವನ್ನು ನನಗೆ ಕೊಡಲು ಅಲ್ಲಾಹ್ ನಿಗೆ ಹೇಳುವೆಯಾ” ಆ ಮನುಷ್ಯ ಕುಹಕದಿಂದ ಕೇಳಿದ.

ನಸ್ರುದ್ದೀನ ಮತ್ತೊಮ್ಮೆ ಆಕಾಶ ದಿಟ್ಟಿಸಿ ನಂತರ ಉತ್ತರಿಸಿದ.
“ಒಂದು ತಾಮ್ರದ ನಾಣ್ಯ ನಿಮಗೆ ಕೊಡಲು ಅಲ್ಲಾಹ್ ನಿಗೆ ಯಾವ ತೊಂದರೆಯೂ ಇಲ್ಲವಂತೆ, ಆದರೆ ಒಂದು ಕ್ಷಣ ಕಾಯಬೇಕಂತೆ”

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply