ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 1

chiswaನಾನೂ ಕೂಡ 2018 ರ ಅಂತ್ಯ ಅಂದರೆ ಡಿಸೆಂಬರ್ 19 ರಿಂದ 30 ರವರೆಗೆ ಬೆಂಗಳೂರಿನ ಉತ್ತರದಲ್ಲಿರುವ ತುಮಕೂರು ರಸ್ತೆಯಲ್ಲಿ ಬರುವ ದಾಸನಪುರ ಹೋಬಳಿಯ ಆಲೂರಿನಲ್ಲಿರುವ “ಧಮ್ಮ ಪಫುಲ” ಎಂಬ ಧ್ಯಾನ ಕೇಂದ್ರದಲ್ಲಿ ವಿಪಶ್ಯನ ಧ್ಯಾನ ಕಲಿಯಲು ಹೋಗಿ ಬಂದೆ.ನಿಜಕ್ಕೂ ಅಲ್ಲಿ ಕಳೆದ ಹತ್ತು ದಿನಗಳು ನನ್ನ ಪಾಲಿನ ಮಹತ್ವದ ಬಹುಮುಖ್ಯ ಅನುಭವವಾಗಿ ಎಂದಿಗೂ ಮರೆಯಲಾರದಂತೆ ಉಳಿದವು ~ ಚಿನ್ನಸ್ವಾಮಿ ವಡ್ಡಗೆರೆ

ಒತ್ತಡದ ಬದುಕಿನಿಂದ ಪಾರಾಗಲೂ ಎಲ್ಲರೂ ಬಯಸುತ್ತಾರೆ. ಒಂದನ್ನು ಮರೆಯಲು ಮತ್ತೊಂದು, ಮತ್ತೊಂದನ್ನು ಮರೆಯಲು ಇನ್ನೊಂದು ಹೀಗೆ ಅಭ್ಯಾಸ ಅಭಿರುಚಿಗಳ ಸರಣಿ ಮುಂದುವರಿಯುತ್ತಲೇ ಇರುತ್ತದೆ.ಆದರೂ ಎಲ್ಲಿಯೂ ನೆಮ್ಮದಿ ಕಾಣದೆ ಕೊನೆಗೆ ಎಲ್ಲಿಂದ ಹೊರಟಿದ್ದೆವೊ ಅಲ್ಲಿಗೇ ಬಂದು ಸೇರುತ್ತೇವೆ. ಭೂಮಿ ದುಂಡಗಿದೆ ಎಂದು ಸಮಧಾನ ಮಾಡಿಕೊಳ್ಳುತ್ತೇವೆ.
ಹೀಗೆ ಓಡುವ ಜೀವನಚಕ್ರದಲ್ಲಿ ಇತ್ತೀಚಿಗೆ ಒತ್ತಡ ನಿವಾರಣೆಗೆ ಬಹುಜನರು ಧ್ಯಾನದತ್ತ ಮುಖಮಾಡುತ್ತಿದ್ದಾರೆ.ನೂರಾರು ಧ್ಯಾನ ವಿಧಾನಗಳನ್ನು ಕಲಿಸುವ ಧ್ಯಾನಕೇಂದ್ರಗಳೂ ಈಗ ಎಲ್ಲೆಡೆ ಇವೆ.ಅಭಿರುಚಿ, ಆಸಕ್ತಿಗೆ ತಕ್ಕಂತೆ ಜನ ಧ್ಯಾನ ಕೇಂದ್ರಗಳಿಗೂ ಹೋಗುತ್ತಾರೆ.

ನಾನೂ ಕೂಡ 2018 ರ ಅಂತ್ಯ ಅಂದರೆ ಡಿಸೆಂಬರ್ 19 ರಿಂದ 30 ರವರೆಗೆ ಬೆಂಗಳೂರಿನ ಉತ್ತರದಲ್ಲಿರುವ ತುಮಕೂರು ರಸ್ತೆಯಲ್ಲಿ ಬರುವ ದಾಸನಪುರ ಹೋಬಳಿಯ ಆಲೂರಿನಲ್ಲಿರುವ “ಧಮ್ಮ ಪಫುಲ” ಎಂಬ ಧ್ಯಾನ ಕೇಂದ್ರದಲ್ಲಿ ವಿಪಶ್ಯನ ಧ್ಯಾನ ಕಲಿಯಲು ಹೋಗಿ ಬಂದೆ.ನಿಜಕ್ಕೂ ಅಲ್ಲಿ ಕಳೆದ ಹತ್ತು ದಿನಗಳು ನನ್ನ ಪಾಲಿನ ಮಹತ್ವದ ಬಹುಮುಖ್ಯ ಅನುಭವವಾಗಿ ಎಂದಿಗೂ ಮರೆಯಲಾರದಂತೆ ಉಳಿದವು. ಬುದ್ಧನ ಬಗ್ಗೆ ಎಷ್ಟೇ ಕೇಳಿದ್ದರೂ, ಗ್ರಂಥಗಳನ್ನು ಅಧ್ಯಯನ ಮಾಡಿದ್ದರೂ ವಾಣಿ ಮತ್ತು ಅಕ್ಷರಗಳಲ್ಲಿ ಹಿಡಿದಿಡಲಾಗದ ಬುದ್ಧನೊಬ್ಬ ಇದ್ದಾನೆ ಎನ್ನುವುದು ವಿಪಶ್ಯನ ಧ್ಯಾನದ ನಂತರವೆ ಅರಿವಿಗೆ ಬಂತು. 

ಬುದ್ಧನೆಂಬ ಮಹಾ ಬೆಳಗು ತಥಾಗತ ಆಂತರ್ಯಕ್ಕೆ ಇಳಿಯಲು ಆರಂಭವಾದರೆ, ಶ್ರದ್ಧೆಯಿಂದ ವಿಪಶ್ಯನ ಮಾಡಿದರೆ ನಮ್ಮೊಳಗಿನಅಹಂಕಾರ,ಭಯ,ದುರಾಸೆಗಳೆಲ್ಲವೂ ಕರಗುತ್ತಾ ಕರಗುತ್ತಾ ನಿಧಾನವಾಗಿ ನಾಸ್ತಿಯಾಗುವುದಂತು ನಿಶ್ಚಿತ.
ನಿಜಕ್ಕೂ ನೀವು ಈ ಪ್ರಾಪಂಚಿಕ ಜಂಜಡಗಳಿಂದ ಹತ್ತು ದಿನಗಳ ಕಾಲ ಆರಾಮವಾಗಿ ದೂರವಿರಬೇಕು. ಕ್ಷುದ್ರ ದೈನಿಕದಿಂದ ಮುಕ್ತಿ ಪಡೆಯಬೇಕು.ಪೋನಿನ ಕಿರಿಕಿರಿ, ಗೆಳೆಯರ ಸಹವಾಸ ಎಲ್ಲವನ್ನೂ ಮರೆತು ನೆಮ್ಮದಿಯಾಗಿರಬೇಕು. ಹತ್ತು ದಿನ ಏಕಾಂತವಾಗಿರಲು ಒಂದು ರೂಮು.ಬೆಳಗ್ಗೆ, ಮಧ್ಯಾಹ್ನ ಸಂಜೆ ಪೌಷ್ಠಿಕವಾದ ಸಾತ್ವಿಕ ಆಹಾರ,ಸ್ನಾನಕ್ಕೆ ಬಿಸಿನೀರು. ಸಾಧ್ಯವಾದಷ್ಟು ಸೌಕರ್ಯ ಒದಗಿಸಲು ನಿಮ್ಮ ಸೇವೆಮಾಡಲು ಸಹಾಯಕರೂ ಇದ್ದರೆ. ಇಂತಹ ಯಾವ ಸೇವೆಗಳಿಗೂ ನಮ್ಮಿಂದ ಹಣ ಕೇಳದಿದ್ದರೆ. ಆಹಾ ಎಂಥ ಪರಮ ಸುಖಿ ನಾನು ಅಂತ ನಿಮಗೆ ಅನಿಸಬಹುದು ಅಲ್ಲವೆ !?.

ಸ್ವಲ್ಪ ತಾಳಿ ಅದೆಲ್ಲವೂ ಇಲ್ಲಿ ಸಾಧ್ಯ. ಆದರೆ ನೀವು ಪಾಲಿಸಲೇಬೇಕಾದ ಒಂದಷ್ಟು ನಿಯಮಗಳು ಇವೆ. ನೀವು ಇತರರೊಡನೆ ಸಂಪೂರ್ಣ ಸಂಪರ್ಕ ತೊರೆದು ಹತ್ತು ದಿನಗಳ ಕಾಲ ಮೌನಿಯಾಗಿರ ಬೇಕು,ಇದಕ್ಕೆ ಆರ್ಯಮೌನ (ನೋಬಲ್ ಸೈಲೆನ್ಸ್) ಎನ್ನುತ್ತಾರೆ.ಪ್ರತಿ ದಿನ ಹತ್ತು ಗಂಟೆಗಳ ಕಾಲ ಕಣ್ಮುಚ್ಚಿ ಕುಳಿತು ಧ್ಯಾನ ಮಾಡಬೇಕು.

ಇದುವರೆಗೂ ಹೊರಗಡೆಯ ಪ್ರಂಪಂಚವನ್ನು ನೋಡಿ ಬೆಲೆ ಕಟ್ಟಿ ಮೌಲ್ಯ ನಿರ್ಣಯ ಮಾಡುತ್ತಿದ್ದ ನೀವು ಈಗ ನಿಮ್ಮೊಳಗೆ ನಿಮ್ಮ ಆಳಕ್ಕೆ ಇಳಿದು ನೋಡಬೇಕು. ದೇಹದ ಕಣಕಣದಲ್ಲೂ ಏನಾಗುತ್ತಿದೆ ಎಂದು ಅರಿಯಬೇಕು. ಸಮತೆಯಿಂದ ಸಂವೇದನೆಗಳನ್ನು ಅರಿಯಬೇಕು.ಇದನ್ನು ಸ್ವಯಂ ಅನ್ವೇಷಣೆ ಎಂದರೂ ಅಡ್ಡಿ ಇಲ್ಲ. ಬುದ್ಧ ತಾನೆ ಅರಿತು ನಂತರ ಭೋದಿಸಿದ ತಿರುಳನ್ನು ವಿಪಶ್ಯನ ಎಂದು ಕರೆದ.ತನ್ನ ಜೀವಿತದ ಅವಧಿಯಲ್ಲಿ ಲಕ್ಷಾಂತರ ಜನಕ್ಕೆ ದುಃಖದಿಂದ ಮುಕ್ತಿ ಪಡೆಯಲು ಈ ಧ್ಯಾನ ಮಾರ್ಗವನ್ನು ಭೋದಿಸಿದ. ಧ್ಯಾನದ ಅಭ್ಯಾಸದಿಂದ ಈ ಅರಿವನ್ನು ಪಡೆದ ಕಾರಣ ಪ್ರಮುಖವಾಗಿ ಧ್ಯಾನವನ್ನೇ ಭೋದಿಸಿದ.

2500 ವರ್ಷಗಳ ಹಿಂದೆ ಭಾರತದಿಂದ ಕಣ್ಮರೆಯಾಗಿದ್ದ ಈ ವಿಪಶ್ಯನ ಧ್ಯಾನ ಪದ್ಧತಿಯನ್ನು ಮತ್ತು 1959 ರಲ್ಲಿ ಬರ್ಮಾ ದಿಂದ ಭಾರತಕ್ಕೆ ಬಂದ ಎಸ್.ಎನ್,ಗೋಯೆಂಕಾ ಮರಳಿ ಇಲ್ಲಿನ ಜನಕ್ಕೆ ಹಂಚತೊಡಗಿದರು. ಗೋಯೆಂಕಾ ಅವರು ಮೊದಲ ಕರ್ನಾಟಕದ ಕೇಂದ್ರವನ್ನು ಬೆಂಗಳೂರು ಸಮೀಪ ಇರುವ “ಧಮ್ಮ ಪಫುಲ” ಆರಂಭಿಸಿದರು. ಸಂತೋಷದ ಖುಷಿಯ ವಿಚಾರವೆಂದರೆ ಮೈಸೂರಿನ ಕೆ.ಆರ್.ನಗರದ ಸಮೀಪವೂ “ಧಮ್ಮ ಪಫುಲ್ಲ”ದ ಎರಡನೇಯ ಕೇಂದ್ರ “ತಪೋವನ” ಸಧ್ಯದಲ್ಲೇ ಆರಂಭವಾಗಲಿದೆ.

ಯಾವುದೇ ಇಮೇಜ್, ಮೂರ್ತಿ, ವಿಗ್ರಹ, ಭಾವಚಿತ್ರ, ದೀಪ ಧೂಪ ಆರತಿಯ ಹಂಗಿಲ್ಲದೆ “ಉಸಿರು” ಮಾತ್ರ ಗಮನಿಸುವಿಕೆಯ ಮೂಲಕ ಧ್ಯಾನ ಕಲಿಸುವ ವಿಪಶ್ಯನ ವಿಧಾನ ಪ್ರತಿಯೊಬ್ಬ ಮಾನವ ಜೀವಿಯೂ ಅಭ್ಯಾಸ ಮಾಡಬಹುದಾದ ಶುದ್ಧ ಧಮ್ಮವಾಗಿದೆ.
ಲಾ ಆಫ್ ನೇಚರ್. ಪ್ರಕೃತಿ ನಿಯಮ ಅಂತ ಇದನ್ನೇ ಬುದ್ಧ ಕರೆದ.ಪ್ರಂಪಚದಲ್ಲಿ ಯಾವುದೂ ಶಾಶ್ವತ ಅಲ್ಲ.ಪ್ರತಿಯೊಂದು ಪ್ರತಿಕ್ಷಣವೂ ಉದಯಿಸುತ್ತವೆ ವ್ಯಯವಾಗುತ್ತವೆ.ಬರುತ್ತವೆ ಹೋಗುತ್ತವೆ. ಅನಿಚ್ಚ ಅನಿಚ್ಚ ಅನಿಚ್ಚ. ಬದಲಾಗುವುದು ಜಗದ ನಿಯಮ. ಎಲ್ಲವೂ ಅನಿತ್ಯ ಅನಿತ್ಯ,ಅನಿತ್ಯ. ಸುಖ ನೀಡುವ, ದುಃಖ ಕೊಡುವ ಯಾವ ಸಂವೇದನೆಗಳು ಶಾಶ್ವತ ಅಲ್ಲ.ಇದನ್ನು ಮರೆತ ಮನಸ್ಸು ತಾನೇ ಸೃಷ್ಠಿಸಿಕೊಂಡ ಮಾಯಾಜಾಲದಲ್ಲಿ ಸಿಲುಕಿ ನರಳುತ್ತದೆ. ಮನಸ್ಸು ಆಳದಲ್ಲಿ ದುಃಖ, ದುರಾಸೆಯ ಬೀಜಗಳನ್ನು ಬಿತ್ತುತ್ತ ಎಲ್ಲವೂ ದ್ವಿಗುಣಗೊಳ್ಳುವಂತೆ ಮಾಡಿಕೊಳ್ಳುತ್ತಾ ಸಂಖಾರಗಳನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳುತ್ತಾ `ಭವ’ ದಲ್ಲಿ ಸಿಲುಕಿಕೊಳ್ಳುತ್ತದೆ.ಮುಕ್ತಿ ಕಾಣದೆ ಬಳಲುತ್ತದೆ.ಮನಸ್ಸಿನ ಆಳದ ಸಂಖಾರಗಳನ್ನು ಬೇರು ಸಮ್ಮೇತ ಕಿತ್ತು ನಾಶಮಾಡಿ ಪ್ರೀತಿ,ಕರುಣೆ,ಮಮತೆ,ಮೈತ್ರಿ ಎಂಬ ಹೊಸ ಬೀಜಗಳನ್ನು ಬಿತ್ತುವ ಮೊದಲ ಹಂತವೆ ವಿಪಶ್ಯನ ಧ್ಯಾನ ವಿಧಾನ. ಇದನ್ನೇ ಅಲ್ಲವೆ `ಬಿತ್ತಿದಂತೆ ಬೆಳೆ’ `ನೂಲಿನಂತೆ ಸೀರೆ’ `ತಾಯಿಯಂತೆ ಮಗಳು’ `ಮಾಡಿದ್ದುಣ್ಣೊ ಮಹಾರಾಯ’ ಅಂತ ನಾವೆಲ್ಲ ಕರೆಯುವುದು.
“ಆಸೆಯೇ ದುಃಖಕ್ಕೆ ಮೂಲ – ಬುದ್ಧ” ಹಾಗಂತ ಬಾಲ್ಯಕಾಲದಿಂದಲ್ಲೂ ಶಾಲಾ ಕಾಲೇಜುಗಳ ಗೋಡೆಯ ಮೇಲೆ ಬರೆದಿದ್ದ ಬರಹವನ್ನು ಓದಿ ಬಾಯಿಪಾಠ ಮಾಡಿಕೊಂಡಿದ್ದ ನನಗೆ ನಿಜಕ್ಕೂ ಈ ವಾಕ್ಯದ ಅರ್ಥ ಹೊಳೆದಿದ್ದು ಈಗ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಾಲ್ಕು ದಶಕಗಳು ಕಳೆದ ನಂತರ ಈ ವಾಕ್ಯ ಅರ್ಥವಾಯಿತು. ಅದೂ ವಿಪಶ್ಯನ ಧ್ಯಾನ ಮಾಡಿದಾಗ ಎಂದರೆ ಬುದ್ಧ ನಮಗೆ ಇನ್ನೆಷ್ಟು ಅರ್ಥವಾಗಿರಬೇಕು !.

ಇಷ್ಟೆಲ್ಲಾ ಒತ್ತಡ,ಸುಖ, ದುಃಖ,ಆವಾಂತರ, ಗಡಿಬಿಡಿಗಳಿಗೆಲ್ಲ ಕಾರಣ ದೇಹದ ಯಾವುದೆ ಭಾಗದಲ್ಲಿ ಇರಬಹುದಾದ “ಮನಸ್ಸು” . ಆನೆ ಮತ್ತು ಗೂಳಿಯನ್ನು ನಿಯಂತ್ರಿಸಬಹುದು ಮನಸ್ಸನ್ನು ನಿಯಂತ್ರಿಸುವುದು ಕಷ್ಟ ಅಂತ ಬುದ್ಧನೇ ಹೇಳುತ್ತಾನೆ. ಆದರೂ ತಾಳ್ಮೆಯಿಂದ ವಿಪಶ್ಯನ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮನಸ್ಸನ್ನು ನಿಯಂತ್ರಣ ಮಾಡಬಹುದು. ಸಂಖಾರಗಳಿಂದ ಮುಕ್ತಿ ಪಡೆಯಬಹುದು. ನಮ್ಮ ಎಲ್ಲಾ ದುಃಖಗಳಿಂದ ಮುಕ್ತಿ ಪಡೆಯಬಹುದು ಎಂದು ಬುದ್ಧ ಮಹಾಗುರು ತಥಾಗತ 2500 ವರ್ಷಗಳ ಹಿಂದೆಯೇ ಸಾಧಿಸಿ ತೋರಿಸಿಕೊಟ್ಟಿದ್ದಾನೆ. ಅಂತಹ ಪರಿಪೂರ್ಣ ಸಂಬುದ್ಧನಿಗೆ ಕೋಟಿ ಕೋಟಿ ನಮನಗಳು…..ನಮ್ಮ ಎಲ್ಲಾ ದುಃಖಗಳಿಗೆ `ಮನಸ್ಸು’ ಹೇಗೆ ಕಾರಣ ಎನ್ನುವುದನ್ನು ನಂತರ ನೋಡೋಣ.

(ಮುಂದುವರಿಯುವುದು….)

1 Comment

Leave a Reply